ADVERTISEMENT

ವಾಚಕರ ವಾಣಿ: ಯಕ್ಷಗಾನ ಪಕ್ಷಗಾನ ಅಲ್ಲ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 0:00 IST
Last Updated 14 ಜೂನ್ 2025, 0:00 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಯಕ್ಷಗಾನ ಪಕ್ಷಗಾನ ಅಲ್ಲ

ಕರಾವಳಿಯ ಕೆಲವು ಯಕ್ಷಗಾನ ಪ್ರದರ್ಶನಗಳಲ್ಲಿ ಬರುವ ಮಾತುಗಾರಿಕೆಯಲ್ಲಿ ಕಾಣುವ ರಾಜಕೀಯ ವಿಚಾರ ಕುರಿತು ನಾರಾಯಣ ಎ. ಅವರು ತಮ್ಮಲೇಖನದಲ್ಲಿ (ಪ್ರ.ವಾ., ಜೂನ್‌ 11) ಪ್ರಸ್ತಾಪಿಸಿದ್ದಾರೆ. ಯಾವುದೇಕಲೆ, ಅಭಿವ್ಯಕ್ತಿ, ಪ್ರದರ್ಶನದಲ್ಲಿ ವ್ಯಕ್ತಿ ಅಥವಾ ನಾಯಕನ ಪರ, ವಿರುದ್ಧ ಟೀಕೆ, ಪ್ರಶಂಸೆ, ಕೀಳು ಮಾತು ಬಳಸುವುದು ಒಳ್ಳೆಯ ಕಲೆ ಅಲ್ಲ. ಒಳ್ಳೆಯ ರಾಜಕೀಯವೂ ಅಲ್ಲ. ಹಾಗೆಂದು ಸಮಕಾಲೀನತೆ ಇಲ್ಲದ್ದು ಸಾರ್ಥಕ ಅಭಿವ್ಯಕ್ತಿಯೂ ಅಲ್ಲ.

ADVERTISEMENT

ಯಕ್ಷಗಾನ ಅರ್ಥಗಾರಿಕೆಯಲ್ಲಿ ಮೋದಿ... ಮೋಡಿ... ನರೇಂದ್ರ... ಕೋಮುವಾದ ಎಲ್ಲವನ್ನೂ ಉದ್ದೇಶಪೂರ್ವಕವಾಗಿ ತರುವುದು ಅನುಚಿತ ಎನ್ನುವುದು ಈ ಕ್ಷೇತ್ರದ ಪ್ರಬುದ್ಧ ಕಲಾವಿದರ ಅನಿಸಿಕೆ. ನಾವು ವೈಯಕ್ತಿಕವಾಗಿ ಒಂದು ಪಕ್ಷದ ಅಥವಾ ಪ್ರಧಾನಿ ಪರವಾಗಿ ಮಾತನಾಡಬಹುದೇ ಹೊರತು, ಅದನ್ನು ರಂಗಸ್ಥಳದಲ್ಲಿ ಹೇಳುವುದು ಉಚಿತವಲ್ಲ ಎನ್ನುವ ಅಭಿಪ್ರಾಯ ಬಹುತೇಕ ಪ್ರೌಢ ಕಲಾವಿದರದ್ದಾಗಿದೆ. ಆದಾಗ್ಯೂ ಕೆಲವೆಡೆ ಇಂತಹ ಅಭಾಸಗಳಾಗುತ್ತಿವೆ ಎನ್ನುವ ಮಾತ್ರಕ್ಕೆ ಇಡೀ ಯಕ್ಷಗಾನ ಕ್ಷೇತ್ರವನ್ನೇ ದೂಷಿಸುವುದು ಸರಿಯಲ್ಲ.

ಹೆಚ್ಚು ಶಿಕ್ಷಣ ಇಲ್ಲದವರೂ ಉತ್ತಮ ಶಿಕ್ಷಣ ಇರುವವರೂ ಮುಖಾಮುಖಿ ಯಾಗಬಹುದಾದ ಪ್ರಜಾಸತ್ತಾತ್ಮಕ
ವೇದಿಕೆಯೇ ರಂಗಸ್ಥಳ. ಅಲ್ಲಿ ಆಶುಭಾಷಣದ ಮಾದರಿಯಲ್ಲಿ ಮಾತುಗಳು ಹೊಮ್ಮುತ್ತವೆ. ಅಂಥ ಸಂದರ್ಭ
ಗಳಲ್ಲಿ ತಪ್ಪುಗಳು ನುಸುಳಬಹುದು. ಆದರೆ, ಕರಾವಳಿಯಲ್ಲಿ ಯಕ್ಷಗಾನ ಕಲೆಯು ಪಕ್ಷಗಾನ ಕಲೆಯಾಗಿಲ್ಲ. ಈ ಕ್ಷೇತ್ರದಲ್ಲಿ ಅನೇಕ ಕಲಾವಿದರು, ಆಸಕ್ತರು ರಾಜಕೀಯ ವಿಚಾರಗಳಿಗೆ ಕಿವಿಗೊಡದೆ ಕೆಲಸ ಮಾಡುತ್ತಿದ್ದಾರೆ. ಹಾಗೆಂದು ಯಕ್ಷಗಾನ ದಲ್ಲಿ ಸಮಸ್ಯೆಗಳು ಇಲ್ಲವೆಂದಲ್ಲ. ಅವುಗಳನ್ನು ಪರಿಶೀಲಿಸಿ, ಲೇಖನದಲ್ಲಿ ರಚನಾತ್ಮಕವಾಗಿ ವಿವರಿಸಿದ್ದರೆ ಚೆನ್ನಾಗಿತ್ತು. 

⇒ಎಂ. ಪ್ರಭಾಕರ ಜೋಶಿ, ‌ಮಂಗಳೂರು

ಮುಡಾ ಬೆಳವಣಿಗೆ ಅಯೋಮಯ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆಯುತ್ತಿರುವ ಬೆಳವಣಿಗೆಗಳು ದಿನಕ್ಕೊಂದು ಹೊಸ ತಿರುವು ಪಡೆಯುತ್ತಿವೆ. ಜಾರಿ ನಿರ್ದೇಶನಾಲಯವು (ಇ.ಡಿ) ಇತ್ತೀಚೆಗೆ ₹100 ಕೋಟಿ ಮೌಲ್ಯದ 92
ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದಕ್ಕೂ ಮೊದಲು ₹300 ಕೋಟಿ ಮೌಲ್ಯದ 160
ನಿವೇಶನಗಳನ್ನು ವಶಕ್ಕೆ ಪಡೆದಿತ್ತು. ಈ ನಿವೇಶನಗಳನ್ನು ಮುಡಾದಿಂದ ಖರೀದಿಸಿದವರ ಪಾಡೇನು?

ಈ ಬೆಳವಣಿಗೆ ನಡುವೆಯೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವಾಗಿದ್ದ ಮುಡಾ ಈಗ ಮೈಸೂರು ಅಭಿವೃದ್ಧಿ ಪ್ರಾಧಿಕಾರವಾಗಿದೆ. ಹಗರಣಗಳ ಬಗ್ಗೆ ಒಂದು ಕಡೆ ಲೋಕಾಯುಕ್ತ; ಮತ್ತೊಂದು ಕಡೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಏಕ ಸದಸ್ಯ ಪೀಠದಿಂದ ತನಿಖೆ ನಡೆಯುತ್ತಿದೆ. ಇದರ ಮಧ್ಯೆ, ಇ.ಡಿ. ಕೂಡ ತನಿಖೆ ನಡೆಸುತ್ತಿದೆ. ಮುಡಾದಲ್ಲಿ ಹಲವು ತಿಂಗಳಿನಿಂದ ಸಾರ್ವಜನಿಕ ಕೆಲಸಗಳು ಸ್ಥಗಿತಗೊಂಡಿವೆ. ಒಟ್ಟಿನಲ್ಲಿ ಇಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಅಯೋಮಯವಾಗಿವೆ.

⇒ಕೆ.ವಿ. ವಾಸು, ಮೈಸೂರು

ಕೂಲಂಕಷ ತನಿಖೆ ನಡೆಯಲಿ

ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನವು ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿರುವುದು ಶೋಚನೀಯ. ಈ ದುರಂತವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಮಾಧ್ಯಮಗಳಲ್ಲಿ ತಾಂತ್ರಿಕ ದೋಷದ ಬಗ್ಗೆ ಭಿನ್ನ ವರದಿಗಳು ಪ್ರಕಟವಾಗುತ್ತಿವೆ. ಪಕ್ಷಿ ಡಿಕ್ಕಿಯಿಂದ ಎರಡೂ ಎಂಜಿನ್‌ಗಳು ಏಕಕಾಲದಲ್ಲಿ ಸ್ಥಗಿತಗೊಳ್ಳಲು ಸಾಧ್ಯವಿಲ್ಲ. ಸಂಪೂರ್ಣ ತಪಾಸಣೆ ಇಲ್ಲದೆ ಇಂಥ ವಿಮಾನಗಳಿಗೆ ದೀರ್ಘ ಪ್ರಯಾಣಕ್ಕೆ ಅನುಮತಿ ನೀಡುವುದಿಲ್ಲ. ಪ್ರಕರಣದ ಬಗ್ಗೆ ತನಿಖಾಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿ ದುರಂತದ ಹಿಂದಿರುವ ನೈಜ ಕಾರಣವನ್ನು ದೇಶದ ಮುಂದಿಡಬೇಕಿದೆ. 

⇒ಆಶಾ ಅಪ್ರಮೇಯ, ದಾವಣಗೆರೆ  

ಶಿಕ್ಷಕಿಯ ಕಾರ್ಯ ಅನುಕರಣೀಯ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಸರ್ಕಾರಿ ಉರ್ದು ಹಿರಿಯ ಹೆಣ್ಣುಮಕ್ಕಳ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಎಸ್‌.ಎಂ. ರಾಯಬಾಗಿ ಅವರು, ವಿದ್ಯಾರ್ಥಿಗಳಿಗೆ ಕುಡಿಯುವ ನೀರಿಗಾಗಿ ಸ್ವಂತ ಖರ್ಚಿನಲ್ಲಿ ಕೊಳವೆ ಬಾವಿ ಕೊರೆಯಿಸಿರುವುದು ವರದಿಯಾಗಿದೆ (ಪ್ರ.ವಾ., ಜೂನ್‌ 13). ಈಗಿನ ಕಾಲದಲ್ಲಿ ಸಂಬಳಕ್ಕೆ ಜೋತು ಬೀಳುವವರೇ ಹೆಚ್ಚಿದ್ದಾರೆ. ಇಂತಹವರ ನಡುವೆ ಈ ಶಿಕ್ಷಕಿಯ ಕಾರ್ಯ ಎಲ್ಲರಿಗೂ ಮಾದರಿ.

⇒ಬಿ. ಮೊಹಿದ್ದೀನ್ ಖಾನ್, ಚಿತ್ರದುರ್ಗ.  

ಎಸ್‌ಎಟಿಎಸ್ ತಂತ್ರಾಂಶ: ಒಟಿಪಿ ವ್ಯವಸ್ಥೆ ಬದಲಾಗಲಿ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಎಸ್‌ಎಟಿಎಸ್ (ವಿದ್ಯಾರ್ಥಿಗಳ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆ) ತಂತ್ರಾಂಶದಲ್ಲಿ ಮುಖ್ಯ ಶಿಕ್ಷಕರ ಲಾಗಿನ್‌ಗೆ ಒಟಿಪಿ ವ್ಯವಸ್ಥೆಯನ್ನು ಅಳವಡಿಸಿದೆ. ಜೊತೆಗೆ, ಪ್ರತಿ ವರ್ಗಾವಣೆಯ ಪ್ರಮಾಣ ಪತ್ರದ ಮುದ್ರಣಕ್ಕೂ ಮೊದಲು ಪ್ರತ್ಯೇಕ ಒಟಿಪಿ ನಮೂದಿಸಬೇಕಿದೆ. ಮಕ್ಕಳ ಶೈಕ್ಷಣಿಕ ಮಾಹಿತಿಗಳ ಸುರಕ್ಷತೆ ದೃಷ್ಟಿಯಿಂದ ಸರ್ಕಾರದ ಹೊಸ ಕ್ರಮ ಸರಿಯಾಗಿದೆ. ಆದರೆ, ನೆಟ್‌ವರ್ಕ್ ಅಥವಾ ಇತರೆ ಕಾರಣದಿಂದ ಮುಖ್ಯ ಶಿಕ್ಷಕರ ಮೊಬೈಲ್‌ಗೆ ಒಟಿಪಿ ಬರುವುದು ವಿಳಂಬವಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಪ್ರವೇಶ, ವರ್ಗಾವಣೆ ಪ್ರಮಾಣ ಪತ್ರ ಸೇರಿ ಎಸ್‌ಎಟಿಎಸ್ ಚಟುವಟಿಕೆಗಳು ವಿಳಂಬವಾಗುತ್ತಿವೆ. ಇದಕ್ಕೂ ಮೊದಲು ಬಳಕೆದಾರರ ಹೆಸರು ಹಾಗೂ ಪಾಸ್‌ವರ್ಡ್‌ ಮೂಲಕ ಲಾಗಿನ್ ಆಗುವ ವ್ಯವಸ್ಥೆ ಇತ್ತು. ಇದನ್ನೇ ಮುಂದುವರಿಸುವುದು ಉತ್ತಮ.

⇒ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿ, ಕೊಪ್ಪಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.