ADVERTISEMENT

ಕನಿಷ್ಠ ಮಾನದಂಡ ಪಾಲನೆ ಆಗಲೇಬೇಕು

ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ

ಪ್ರಜಾವಾಣಿ ವಿಶೇಷ
Published 15 ಜನವರಿ 2016, 19:31 IST
Last Updated 15 ಜನವರಿ 2016, 19:31 IST
ಕನಿಷ್ಠ ಮಾನದಂಡ ಪಾಲನೆ ಆಗಲೇಬೇಕು
ಕನಿಷ್ಠ ಮಾನದಂಡ ಪಾಲನೆ ಆಗಲೇಬೇಕು   

ಆ್ಯಪ್‌ ಆಧಾರಿತ’ ಸೇವೆ ಒದಗಿಸುವ ಟ್ಯಾಕ್ಸಿಗಳ ಮೇಲೆ ನಿಯಂತ್ರಣ ಹೇರಲು ಹೊಸ ನಿಯಮಗಳ ಜಾರಿಗೆ ಮುಂದಾಗಿರುವ ಸಾರಿಗೆ ಇಲಾಖೆ, ಈ ಸಂಬಂಧ ಈಗಾಗಲೇ ಕರಡನ್ನು ಸಿದ್ಧಪಡಿಸಿ ಕಾನೂನು ಇಲಾಖೆಗೆ ಕಳುಹಿಸಿದೆ. ಸದ್ಯದಲ್ಲೇ ಕರಡು ಅಧಿಸೂಚನೆ ಹೊರಬೀಳಲಿದೆ.

ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುವ ಕಂಪೆನಿಗಳಲ್ಲಿ ನೋಂದಾಯಿಸಿಕೊಂಡು ಬಾಡಿಗೆ ಓಡಿಸುತ್ತಿರುವ ಚಾಲಕರು ಇದಕ್ಕೆ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ‘ಇದು ಪ್ರಯಾಣಿಕರ ಸುರಕ್ಷತೆಯ ವಿಚಾರ. ಕಂಪೆನಿಗಳು ಅಕ್ರಮ ಗಳಿಕೆಗೆ ಕಡಿವಾಣ ಬೀಳುತ್ತದೆಂದು ಆಕ್ಷೇಪ ವ್ಯಕ್ತಪಡಿಸುತ್ತಿರಬಹುದು. ಮೊದಲು ಸುರಕ್ಷತೆ ಬಗ್ಗೆ ಚಿಂತಿಸಿ, ನಂತರ ಸಂಪಾದನೆ ಬಗ್ಗೆ ಯೋಚಿಸಲಿ’ ಎನ್ನುತ್ತಿದೆ ಸಾರಿಗೆ ಇಲಾಖೆ.

‘ಟ್ಯಾಕ್ಸಿ ಸೇವೆ ವಿಚಾರದಲ್ಲಿ ಕನಿಷ್ಠ ಮಾನದಂಡಗಳು ಕಟ್ಟುನಿಟ್ಟಾಗಿ ಪಾಲನೆ­ಯಾಗಲೇಬೇಕು. ಹಗಲಾಗಲಿ, ರಾತ್ರಿ­ಯಾಗಲಿ ಟ್ಯಾಕ್ಸಿಗಳಲ್ಲಿ ಮಹಿಳೆ ನಿರ್ಭಯವಾಗಿ ಸಂಚರಿಸುವ ವ್ಯವಸ್ಥೆ ನಿರ್ಮಾಣವಾಗಬೇಕು ಎಂಬುದು ನಮ್ಮ ಉದ್ದೇಶ’ ಎಂದಿರುವ ಸಾರಿಗೆ ಇಲಾಖೆ ಆಯುಕ್ತ  ಡಾ. ರಾಮೇಗೌಡ, ಹೊಸ ನಿಯಮಗಳನ್ನು ಜಾರಿಗೆ ತರುತ್ತಿರುವ ಉದ್ದೇಶ ಹಾಗೂ ಅದರ ಅನುಕೂಲಗಳ ಬಗ್ಗೆ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.

ಹೊಸ ನಿಯಮ ಜಾರಿ ಯಾವ ಹಂತದಲ್ಲಿದೆ?
ಕರಡನ್ನು ಸಿದ್ಧಪಡಿಸಿ ಕಾನೂನು ಇಲಾಖೆಗೆ ಕಳುಹಿಸಿದ್ದೇವೆ. ವಿಶೇಷ ಕಾರ್ಯದರ್ಶಿ ದ್ವಾರಕಾನಾಥ್‌ ಬಾಬು ಅವರು ಅದನ್ನು ಪರಿಶೀಲಿಸುತ್ತಿದ್ದಾರೆ. ನಂತರ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗುವುದು. ಈ ಕುರಿತು ಸಾರ್ವಜನಿಕರಿಂದ ಬರುವ ಆಕ್ಷೇಪ, ಸಲಹೆಗಳನ್ನು ಸಹ ಸೇರಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು. ಇನ್ನು 15 ದಿನಗಳಲ್ಲಿ ಹೊಸ ನಿಯಮ ಜಾರಿಯಾಗಬಹುದು.

ಹೊಸ ನಿಯಮ ಜಾರಿಗೆ ತರುತ್ತಿರುವ ಉದ್ದೇಶ?
1998ರ ‘ಸಿಟಿ ಟ್ಯಾಕ್ಸಿ ಯೋಜನೆ’ ಪ್ರಕಾರ, ಬಾಡಿಗೆ ಓಡಿಸುವ ಎಲ್ಲ ಟ್ಯಾಕ್ಸಿಗಳು ಮೋಟಾರು ವಾಹನ ಕಾಯ್ದೆಯಡಿ ನೋಂದಣಿ

ಮಾಡಿಸಿಕೊಳ್ಳಬೇಕು. ಈ ಯೋಜನೆ ಜಾರಿಯಾದ ಸಂದರ್ಭದಲ್ಲಿ  ಆ್ಯಪ್ ಆಧಾರಿತ ಸೇವೆ ಒದಗಿಸುತ್ತಿದ್ದ ಕಂಪೆನಿಗಳು (ಅಗ್ರಿಗೇಟರ್) ಇರಲಿಲ್ಲ. ಇವೆಲ್ಲ ಇತ್ತೀಚೆಗೆ ಬೆಳೆದು ಬಂದವು. ‘ನಾವು ಕೇವಲ ಫೋನ್‌ನಲ್ಲಿ ಮಾತನಾಡಿ ಸೇವೆ ಒದಗಿಸುತ್ತೇವೆ. ಹೀಗಾಗಿ ನಾವು ನೋಂದಣಿ ಮಾಡಿಸುವುದಿಲ್ಲ’ ಎಂಬುದು ಅಗ್ರಿಗೇಟರ್‌ಗಳ ಉತ್ತರವಾಗಿತ್ತು. ಪ್ರಯಾಣಿಕರ ಸುರಕ್ಷೆಗೆ ತಾವು ಹೊಣೆಯಲ್ಲ ಎಂಬುದು ಅದರರ್ಥವಾಗಿತ್ತು. ಹೀಗಾಗಿಯೇ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವಾ ಸಂಸ್ಥೆಗಳನ್ನು ಸಾಮಾನ್ಯ ಟ್ಯಾಕ್ಸಿ ಸಂಸ್ಥೆಗಳ ವ್ಯಾಪ್ತಿಗೆ ತಂದು ಕಡಿವಾಣ ಹೇರಬೇಕಿದೆ.

ಹೊಸ ನಿಯಮದ ಅನುಕೂಲಗಳೇನು?
ಪ್ರಯಾಣಿಕರಿಗೆ ಸುರಕ್ಷತೆ ಸಿಗಲಿದೆ. ಪೂರ್ವಾಪರ ಪರಿಶೀಲಿಸಿಯೇ ಚಾಲಕನನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಟ್ಯಾಕ್ಸಿಯಲ್ಲಿ ಜಿಪಿಎಸ್ ವ್ಯವಸ್ಥೆ ಅಳವಡಿಸುವುದು ಕಡ್ಡಾಯವಾಗುತ್ತದೆ. ಈಗ ಬಹುತೇಕರು ಈ ವ್ಯವಸ್ಥೆಯನ್ನು ಅಳವಡಿಸಿದ್ದರೂ ಸೇವಾದಾತ ಕಂಪೆನಿಗಳು ಈ ವಾಹನಗಳು ತೆರಳುವ ಮಾರ್ಗದ ಬಗ್ಗೆ ನಿಗಾ ಇಡುತ್ತಿಲ್ಲ. ಇನ್ನು ಮುಂದೆ ಕಂಪೆನಿಗಳು ಸ್ವಂತ ನಿಯಂತ್ರಣ ಕೊಠಡಿ ಪ್ರಾರಂಭಿಸಿ, ಟ್ಯಾಕ್ಸಿಗಳು ಸಾಗುತ್ತಿರುವ ಮಾರ್ಗದ ಬಗ್ಗೆ ನಿಗಾ ಇಡಬೇಕಾಗುತ್ತದೆ. ಒಂದು ವೇಳೆ ಟ್ಯಾಕ್ಸಿಗಳಲ್ಲಿ ಅತ್ಯಾಚಾರ, ಲೈಂಗಿಕ ಕಿರುಕುಳದಂಥ ಘಟನೆಗಳು ನಡೆದಾಗ ಜನ ಸೇವಾದಾತರನ್ನು ದೂರುವ ಬದಲು ಇಲಾಖೆಯತ್ತ ಬೊಟ್ಟು ಮಾಡುತ್ತಾರೆ. ಈ ಕಾರಣದಿಂದ ಸಹಜವಾಗಿಯೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದೇವೆ.

ಟ್ಯಾಕ್ಸಿಗಳ ಬಗ್ಗೆ ಜನಾಭಿಪ್ರಾಯ ಚೆನ್ನಾಗಿದೆಯಲ್ಲ?
ಆಟೊಗಳಿಗೆ ಹೋಲಿಸಿದರೆ ಟ್ಯಾಕ್ಸಿಗಳ ಸೇವೆ ಉತ್ತಮ ಎಂದು ಕೆಲವರು ಹೇಳಬಹುದು. ಆದರೆ, ಈ ಕಂಪೆನಿಗಳು ಸಂಚಾರ ದಟ್ಟಣೆ ಇದ್ದಾಗ ಒಂದು ದರ, ಸಂಚಾರ ದಟ್ಟಣೆ ಇಲ್ಲದಾಗ ಒಂದು ದರ, ಮಳೆ ಬಂದಾಗ ಮತ್ತೊಂದು ದರ... ಹೀಗೆ ಯದ್ವಾತದ್ವಾ ದರ ವಿಧಿಸಿ ಜನರಿಗೆ ತೊಂದರೆ ಕೊಡುತ್ತಿವೆ.

ಟ್ಯಾಕ್ಸಿಗಳ ಸಲುವಾಗಿಯೇ ರಾಜ್ಯ ಸರ್ಕಾರ ದರ ಪಟ್ಟಿ ಬಿಡುಗಡೆ ಮಾಡಿದೆ. ಅದರ ಪ್ರಕಾರ, ಸಿಟಿ ಟ್ಯಾಕ್ಸಿಗಳು ಬೆಂಗಳೂರು ನಗರದಲ್ಲಿ ಕಿಲೊ ಮೀಟರ್‌ಗೆ ₹19.5 (ಹವಾನಿಯಂತ್ರಿತ) ಮತ್ತು ₹14.5 (ಸಾಮಾನ್ಯ) ಪಡೆಯಬೇಕು. ಆದರೆ, ಆ್ಯಪ್ ಆಧಾರಿತ ಕ್ಯಾಬ್‌ಗಳು ನೂರಾರು ರೂಪಾಯಿ ಹೆಚ್ಚಿಗೆ ವಸೂಲಿ ಮಾಡುತ್ತಿವೆ. ಈ ರೀತಿ ಪ್ರಯಾಣಿಕರಿಂದ ಸುಲಿಗೆ ಮಾಡಿದ ಹಣವನ್ನು ಕಂಪೆನಿ ಹಾಗೂ ಚಾಲಕ ಹಂಚಿಕೊಳ್ಳುತ್ತಾರೆ. ಕಡಿಮೆ ದರ ಪಡೆಯುತ್ತಿದ್ದರೆ ಧೈರ್ಯವಾಗಿ ನೋಂದಣಿ ಮಾಡಿಸಿಕೊಳ್ಳಲಿ. ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಏಕೆ?

ಚಾಲಕ ಒಂದೇ ಕಂಪೆನಿಗೆ ಕೆಲಸ ಮಾಡಬೇಕೆಂಬ ನಿಯಮವೇಕೆ?
ಒಬ್ಬ ಚಾಲಕ ಒಂದೇ ಕಂಪೆನಿಯಡಿ ಕಾರ್ಯ ನಿರ್ವಹಿಸಬೇಕೆಂಬುದರ ಉದ್ದೇಶ ಆ ಟ್ಯಾಕ್ಸಿ ಹಾಗೂ ಚಾಲಕನ ಹೊಣೆ ಒಂದು ಕಂಪೆನಿಗೆ ಸೀಮಿತವಾಗಬೇಕೆಂಬುದು.  ಪ್ರಯಾಣಿಕರ ಸುರಕ್ಷತೆಗೆ ಧಕ್ಕೆಯಾದರೆ ಆ ಕಂಪೆನಿ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ.

ಹೊಸ ನಿಯಮದಲ್ಲೇನಿದೆ?
ಸಂಬಂಧಪಟ್ಟ ಇಲಾಖೆಯಿಂದ ಬಾಡಿಗೆ ಪರವಾನಗಿ ಕಡ್ಡಾಯ. ವಾಹನಗಳಲ್ಲಿ ‘ಟ್ಯಾಕ್ಸಿ’ ಎಂಬ ನಾಮಫಲಕ, ಚಾಲಕನ ವಿವರವುಳ್ಳ ‘ಡಿಸ್‌ಪ್ಲೇ ಕಾರ್ಡ್‌’ ಅಳವಡಿಸಬೇಕು. ಪರವಾನಗಿ ವ್ಯಾಪ್ತಿ ಮೀರಿ ಬೇರೆ ಪ್ರದೇಶಗಳಿಗೆ ಬಾಡಿಗೆ ಹೋಗುವಂತಿಲ್ಲ.  ತಮ್ಮಲ್ಲಿ ಎಷ್ಟು ವಾಹನಗಳು ಸೇವೆ ಒದಗಿಸುತ್ತಿವೆ ಎಂಬುದನ್ನು ಪ್ರತಿ ಕಂಪೆನಿ ಇಲಾಖೆಗೆ ತಿಳಿಸಬೇಕು. ಡಿಜಿಟಲ್ ಮೀಟರ್ ಅಳವಡಿಸಿ ಪ್ರಯಾಣಿಕರಿಗೆ ಮುದ್ರಿತ ದರ ಚೀಟಿ ನೀಡಬೇಕು ಮುಂತಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT