ADVERTISEMENT

ಪ್ರತಿಭಾ ಪಲಾಯನಕ್ಕೆ ಹೇತು

ಗೌರವ್ ಶೆಟ್ಟಿ, ವಿಟ್ಲ
Published 7 ಏಪ್ರಿಲ್ 2013, 19:59 IST
Last Updated 7 ಏಪ್ರಿಲ್ 2013, 19:59 IST

ಮೀಸಲಾತಿಯೆಂಬುದು ಭಾರತೀಯ ಸಮಾಜದಲ್ಲಿ ಎಷ್ಟು ಆಳವಾಗಿ ಬೇರೂರಿದೆಯೆಂದರೆ `ಶೋಷಿತ' ಎನಿಸುವ ಜಾತಿಯಲ್ಲಿ ಹುಟ್ಟಲು ಪುಣ್ಯ ಮಾಡಿರಬೇಕೆಂಬ ಸ್ಥಿತಿ ನಿರ್ಮಾಣವಾಗಿದೆ. ಹುಟ್ಟಿನಿಂದ ಬರುವಂಥ ಜಾತಿಯೆಂಬ ಮಾನದಂಡವನ್ನು ಇಟ್ಟುಕೊಂಡು ಒಬ್ಬ ವ್ಯಕ್ತಿಯ ಕಾರ್ಯ ಸಾಮರ್ಥ್ಯವನ್ನು ನಿರ್ಧರಿಸುವ ಮೂರ್ಖತನವನ್ನು ನಮ್ಮ ಹಿರಿಯರು ಮಾಡಿದ್ದರು. ಅದನ್ನು ಸರಿಪಡಿಸಲು ನಾವು ಕಾರ್ಯರೂಪಕ್ಕೆ ತಂದ `ಮೀಸಲಾತಿ ನೀತಿ' ಮತ್ತೊಂದು ಬಗೆಯಲ್ಲಿ ನಮ್ಮ ಹಿರಿಯರ ಮೂರ್ಖತನವನ್ನು ಮುಂದುವರಿಸುತ್ತಿದೆ.

ಚಾರಿತ್ರಿಕವಾಗಿ ಕೆಲವು ಜಾತಿ ಮತ್ತು ಸಮುದಾಯಗಳು ಶೋಷಣೆಗೆ ಒಳಗಾಗಿದ್ದದ್ದು ನಿಜ. ಆದರೆ ಆ ಜಾತಿ ಮತ್ತು ಸಮುದಾಯಗಳು ಇಂದು ಸದೃಢವಾಗಿವೆ. ಆದರೆ ಈ ಜಾತಿಗಳಿಗೆ ಸೇರಿದ ಹೊಸ ತಲೆಮಾರು ತಮಗೆ ಮೀಸಲಾತಿ ಸವಲತ್ತು ಇದೆ ಎಂಬ ಕಾರಣದಿಂದ ಎಲ್ಲವನ್ನೂ ಉಡಾಫೆಯಿಂದ ಕಾಣುತ್ತಿದೆ. ಇದು ಮೀಸಲಾತಿ ಸವಲತ್ತಿಲ್ಲದ ವರ್ಗದ ವಿದ್ಯಾರ್ಥಿಗಳು ಕಷ್ಟಪಟ್ಟು ಕಲಿತರೂ ಸಿಗದ ಸ್ಥಾನ ಮೀಸಲಾತಿ ಇರುವ ವಿದ್ಯಾರ್ಥಿಗಳಿಗೆ ಕಷ್ಟಪಡದೆಯೇ ದೊರೆಯುತ್ತದೆ. 

ಜಾತಿ ಎಂಬುದು ವರ್ತಮಾನದಲ್ಲಿ ಹಿಂದಿನಂತೆ ಬಲವಾಗಿಲ್ಲ. ಈಗ ಮೀಸಲಾತಿಯ ಮಾನದಂಡವನ್ನು ಬದಲಾಯಿಸಿಕೊಳ್ಳಬೇಕಾಗಿದೆ. ಆರ್ಥಿಕ ಸ್ಥಿತಿಯನ್ನು ಮೀಸಲಾತಿಯ ಮುಖ್ಯ ಮಾನದಂಡವಾಗಿಸಿಕೊಂಡರೆ ಅದನ್ನು ಯಾರೂ ಬೇಡವೆನ್ನಲಾರರು. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಆಸಕ್ತಿಯಿದ್ದರೂ ಕಲಿಯುವ ಅವಕಾಶದಿಂದ ತಪ್ಪಿಸಿಕೊಳ್ಳುತ್ತಿರುವ ಹೆಚ್ಚಿನವರು ಬಡವರು. ಏಕೆಂದರೆ ಅವರಿಗೆ ದುಬಾರಿ ಶುಲ್ಕ ಪಾವತಿಸಲು ಆಗುತ್ತಿಲ್ಲ. ಇಂಥ ವಿದ್ಯಾರ್ಥಿಗಳಿಗೆ ಮೀಸಲಾತಿಯ ಸೌಲಭ್ಯ ದೊರೆಯಬೇಕು. ಉದ್ಯೋಗ ಕ್ಷೇತ್ರದಲ್ಲಿಯೂ ಇಂಥದ್ದೇ ನಿಯಮವನ್ನು ಅಳವಡಿಸಿಕೊಳ್ಳುವುದು ಉತ್ತಮ. ಇಲ್ಲದಿದ್ದರೆ ನಮ್ಮಲ್ಲಿನ ಪ್ರತಿಭೆಗಳು ಅವಕಾಶ ದೊರೆಯದ ಕಾರಣಕ್ಕಾಗಿ ವಿದೇಶಗಳಿಗೆ ಹೋಗುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.