ADVERTISEMENT

ಮಾವು: ಬದುಕು... ಭಾವನೆ...

ಕೆ.ಓಂಕಾರ ಮೂರ್ತಿ
Published 21 ಜೂನ್ 2025, 23:52 IST
Last Updated 21 ಜೂನ್ 2025, 23:52 IST
   

ಕೋಲಾರ ಜಿಲ್ಲೆಯಲ್ಲಿ ನೀರಿಗೆ ಕೊರತೆ ಇದ್ದರೂ ರೈತರ ಉತ್ಸಾಹ ಮಾತ್ರ ಅಪರಿಮಿತ. ಕಷ್ಟ ಸಹಿಷ್ಣುಗಳ ಕೃಷಿ ಪ್ರೀತಿ ಅಪಾರ. ಟೊಮೆಟೊ, ಮಾವು, ರೇಷ್ಮೆ ಕೃಷಿ, ಹೈನುಗಾರಿಕೆಯಲ್ಲಿನ ಇವರ ಸಾಧನೆ, ಕೀರ್ತಿ ದೇಶದಾಚೆಗೂ ಹಬ್ಬಿದೆ.

ರಾಜ್ಯದಲ್ಲಿ ಅತಿ ಹೆಚ್ಚು ಮಾವು ಬೆಳೆಯುವ ಜಿಲ್ಲೆಗಳಲ್ಲಿ ಕೋಲಾರ ಮುಂಚೂಣಿಯಲ್ಲಿದೆ. ಅದರಲ್ಲೂ ಶ್ರೀನಿವಾಸಪುರ ಪ್ರಸಿದ್ಧಿ ಪಡೆದುಕೊಂಡಿದೆ. ಪಟ್ಟಣ ಪ್ರವೇಶಿಸುವ ಮುನ್ನವೇ ‘ಮಾವಿನ ಹಣ್ಣಿನ ನಗರಿಗೆ ಸ್ವಾಗತ’ ಎಂಬ ದೊಡ್ಡ ಫಲಕ ಎದುರಾಗುತ್ತದೆ. ಸ್ವಲ್ಪ ದೂರ ಸಾಗಿದರೆ ಏಷ್ಯಾದಲ್ಲೇ ಹೆಸರಾದ ಮಾವಿನ ಮಂಡಿ ಸಿಗುತ್ತದೆ.

ಇಲ್ಲಿನ ಜನರು ಮಾವಿನ ಕೃಷಿಯಲ್ಲೇ ಬದುಕು ಕಟ್ಟಿಕೊಂಡಿದ್ದಾರೆ. ಅವರ ಪಾಲಿಗೆ ಇದು ಬರೀ ಬೆಳೆಯಲ್ಲ; ಭಾವನೆ. ಒಂದೂ ನದಿ ಇಲ್ಲದ, ಯಾವುದೇ ನೀರಾವರಿ ಯೋಜನೆಗಳು ಇಲ್ಲದ ಜಿಲ್ಲೆಯ ರೈತರ ಜೀವನವನ್ನು ಹಸನಾಗಿಸಿದೆ ಈ ಮಾವು. ಇದೇ ಬೆಳೆ ನಂಬಿಕೊಂಡು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದ್ದಾರೆ, ಮದುವೆ ಮಾಡಿಸಿದ್ದಾರೆ, ಮನೆ ಕಟ್ಟಿಕೊಂಡಿದ್ದಾರೆ.
ರೈತರಷ್ಟೇ ಅಲ್ಲ; ಮಂಡಿ ಮಾಲೀಕರು, ವರ್ತಕರು, ಮಧ್ಯವರ್ತಿಗಳು, ಸಾಗಣೆ ವಾಹನಗಳ ಮಾಲೀಕರು, ಚಾಲಕರು, ಕೂಲಿಕಾರರು ಸೇರಿದಂತೆ ಸಾವಿರಾರು ಜನರ ಬದುಕಿಗೆ ಇದು ಆಸರೆಯಾಗಿದೆ.

ADVERTISEMENT

ರಾಜ್ಯದಲ್ಲಿ ಸುಮಾರು ಒಂದೂವರೆ ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಅದರಲ್ಲಿ ಕೋಲಾರ ಜಿಲ್ಲೆಯಲ್ಲಿ 54 ಸಾವಿರ ಹೆಕ್ಟೇರ್ ಪ್ರದೇಶವಿದೆ. ಈ ಪೈಕಿ ಶ್ರೀನಿವಾಸಪುರ ತಾಲ್ಲೂಕಿನಲ್ಲೇ 48 ಸಾವಿರ ಹೆಕ್ಟೇರ್‌ನಲ್ಲಿ ಮಾವಿನ ಕೃಷಿ ನಡೆಯುತ್ತದೆ.

ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಾಗಲೂ, ಜಲಕ್ಷಾಮದ ನಡುವೆಯೂ ಮಾವು ಬೆಳೆಯುತ್ತಿದ್ದಾರೆ. ಇಂಥ ಜಿಲ್ಲೆಯ ಕಷ್ಟ ಸಹಿಷ್ಣುಗಳ ಕೃಷಿ ಪ್ರೀತಿ ಮೇರೆ ಮೀರಿದ್ದು. ಒಂದು ಬೆಳೆಯ ವಹಿವಾಟು ಇಡೀ ಶ್ರೀನಿವಾಸಪುರ ತಾಲ್ಲೂಕಿನ ಚಿತ್ರಣ ಬದಲಾಯಿಸಿದೆ.‌ ಧಾರಣೆಯ ಹಗ್ಗಜಗ್ಗಾಟ, ಕೀಟಬಾಧೆ, ಅಕಾಲಿಕ ಮಳೆ, ವಿಪರೀತ ಬಿಸಿಲಿನಿಂದ ತೊಂದರೆ ಅನುಭವಿಸುತ್ತಿದ್ದರೂ ಮಾವು ಬೆಳೆಯೇ ಇವರ ಜೀವಾಳ, ಬಂಡವಾಳ.

ಸುಗ್ಗಿ ವೇಳೆ ಹೊರ ಜಿಲ್ಲೆ, ಹೊರ ರಾಜ್ಯ ಹಾಗೂ ವಿದೇಶಕ್ಕೆ ಪ್ರತಿನಿತ್ಯ ಮಾವು ರಫ್ತಾಗುತ್ತದೆ. ಮುಖ್ಯವಾಗಿ ರಾಜಸ್ಥಾನ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್‌, ಪಶ್ಚಿಮ ಬಂಗಾಳ, ಮಹಾರಾಷ್ಟ್ರಕ್ಕೆ ಪೂರೈಕೆ
ಯಾಗುತ್ತದೆ. ಹಿಂದೆ ಬಾಂಗ್ಲಾದೇಶ, ಪಾಕಿಸ್ತಾನ ಸೇರಿದಂತೆ ಹಲವು ದೇಶಗಳಿಗೆ ರಫ್ತಾಗು
ತ್ತಿತ್ತು. ಕೋಲಾರ ಜಿಲ್ಲೆಯಲ್ಲಿ ಮೇ ತಿಂಗಳ ಕೊನೆಯ ವಾರದಿಂದ ಜುಲೈ ಅಂತ್ಯದ ಅವಧಿಯು ಮಾವು ಹಂಗಾಮು, ಸುಗ್ಗಿ.

ಈ ಅವಧಿಯಲ್ಲಿ ಶ್ರೀನಿವಾಸಪುರ ಎಪಿಎಂಸಿ ಹಾಗೂ ಮಾವಿನ ಮಂಡಿ ಸದಾ ಗಿಜಿಗುಡುತ್ತಿರುತ್ತದೆ. ನಿತ್ಯ ನೂರಾರು ಲಾರಿಗಳು ದೇಶದ ವಿವಿಧೆಡೆಯಿಂದ ಬಂದು ಹೋಗುತ್ತವೆ. ರೈತರು, ಹಮಾಲಿಗಳು, ವ್ಯಾಪಾರಿಗಳು ಸೇರಿದಂತೆ ಸುಮಾರು ಮೂರು ಸಾವಿರ ಜನ ಬರುತ್ತಾರೆ. ನಿತ್ಯ 900 ಟನ್‌ ಮಾವು ವಹಿವಾಟು ನಡೆಯುತ್ತದೆ. ಬೆಂಗಳೂರಿನ ಲಾಲ್‌ ಬಾಗ್‌ನಲ್ಲಿ ನಡೆಯುವ ಮಾವು ಮೇಳಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ. ಮಾವಿನ ಪ್ಯಾಕಿಂಗ್‌ ಮಾಡಿ ವಿದೇಶಗಳಿಗೆ ವಿಮಾನಗಳಲ್ಲಿ ಕಳಿಸುತ್ತಾರೆ.

ಆಂಧ್ರಪ್ರದೇಶದ ಕೃಷ್ಣಗಿರಿ, ಚಿತ್ತೂರಿನಲ್ಲಿ ಜ್ಯೂಸ್‌ ಫ್ಯಾಕ್ಟರಿಗಳಿದ್ದು ಅಲ್ಲಿಗೂ ಮಾವು ಸಾಗಿಸುತ್ತಾರೆ. ಅಲ್ಲಿ ನೂರಾರು ಕಾರ್ಖಾನೆಗಳು ಇವೆ. ಸಾಮಾನ್ಯವಾಗಿ ಕಳಪೆ ಗುಣಮಟ್ಟದ ಹಣ್ಣುಗಳು, ಹೆಚ್ಚು ಬಾಳಿಕೆ ಬಾರದ ಹಣ್ಣುಗಳನ್ನು ಈ ಉದ್ದೇಶಕ್ಕೆ ಬಳಸುತ್ತಾರೆ. ಆದರೆ, ಈಚೆಗೆ ಆಯಾ ರಾಜ್ಯಗಳಲ್ಲಿಯೇ ಹೆಚ್ಚು ಮಾವು ಬೆಳೆಯುತ್ತಿದ್ದು, ಕೋಲಾರ ಜಿಲ್ಲೆಯ ಮಾವು ಖರೀದಿಗೆ ಬರುತ್ತಿಲ್ಲ. ಆಂಧ್ರದಲ್ಲಿ ಕೋಲಾರ ಜಿಲ್ಲೆಯ ತೋತಾಪುರಿ ಮಾವಿಗೆ ನಿರ್ಬಂಧ ಕೂಡ ಹೇರಿದ್ದಾರೆ. ಶ್ರೀನಿವಾಸಪುರ ಹಾಗೂ ಜಿಲ್ಲೆಯ ವಿವಿಧೆಡೆ ಜ್ಯೂಸ್‌ ಫ್ಯಾಕ್ಟರಿಗಳಿದ್ದು, ಅಲ್ಲಿಗೂ ಸಾಗಿಸಲಾಗುತ್ತಿದೆ. ಒಳ್ಳೆಯ ಗುಣಮಟ್ಟದ ಮಾವಿನ ಹಣ್ಣನ್ನು ಮಾಲೂರಿನ ಇನೋವಾ ಅಗ್ರಿ ಬಯೋಪಾರ್ಕ್‌ (ಫುಡ್‌ ಪಾರ್ಕ್‌) ಮೂಲಕ ಗಾಮಾ ಪ್ರಕ್ರಿಯೆಗೆ ಒಳಪಡಿಸಿ ಅಮೆರಿಕ, ಆಸ್ಟ್ರೇಲಿಯಾಕ್ಕೆ ಸಾಗಿಸಲಾಗುತ್ತದೆ. ಆದರೆ, ಹವಾಮಾನ ವೈಪರೀತ್ಯ ಕಾರಣ ಗುಣಮಟ್ಟದ ಹಣ್ಣು ಈಚೆಗೆ ಸಿಗುತ್ತಿಲ್ಲ.

ಅರವತ್ತು ವರ್ಷಗಳಿಂದ ಶ್ರೀನಿವಾಸಪುರ ರೈತರು ಮಾವಿನ ಕೃಷಿಯಲ್ಲಿ ತೊಡಗಿದ್ದಾರೆ. ಹಿಂದೆ ನಾಲ್ಕೈದು ತಳಿಗಳನ್ನು ಬೆಳೆಯುತ್ತಿದ್ದರು. ಈಗ ಇಪ್ಪತ್ತಕ್ಕೂ ಅಧಿಕ ತಳಿ ಬೆಳೆಯಲಾಗುತ್ತಿದೆ.
ಮಲ್ಲಿಕಾ, ನೀಲಂ, ಬೇನಿಷಾ, ತೋತಾಪುರಿ, ಬಾದಾಮಿ (ಅಲ್ಫೋನ್ಸೊ), ರಸಪುರಿ, ಲಡ್ಡು, ಖುದ್ದೂಸ್‌, ದಿಲ್‌ ಪಸಂದ್‌, ಬಡಾ ಗುಲಾಬ್‌, ಹಿಮಾಮ್‌ ಪಸಂದ್‌, ಕೆಂಟ್‌, ರತ್ನ, ಕಾಲಾಪಾಡ್‌, ಮಲಗೂಬಾ, ಸಕ್ಕರೆ ಗುತ್ತಿ, ರಾಜಗಿರ, ಸೇಂದೂರ ಪ್ರಮುಖ ತಳಿಗಳು. ಆಮ್ಲೆಟ್‌ ಕಾಯಿಯನ್ನು ಉಪ್ಪಿನಕಾಯಿಗೆ ಬಳಸುತ್ತಾರೆ. ತೋತಾಪುರಿ ತಳಿ ಮಾವಿನ ಹಣ್ಣನ್ನು ರಸ ತಯಾರಿಸಲು ಬಳಸುತ್ತಾರೆ. ಮಾವು ಮಳೆಯಾಶ್ರಿತ ಬೆಳೆಯಾಗಿದ್ದು ನೀರಾವರಿ ಲಭಿಸಿದರೆ ಇಳುವರಿ, ಗುಣಮಟ್ಟ, ತೂಕ, ರಸ ಹೆಚ್ಚುತ್ತದೆ. ಶ್ರೀನಿವಾಸಪುರವಲ್ಲದೇ ಕೋಲಾರ, ಮುಳಬಾಗಿಲಿನಲ್ಲೂ ಹೆಚ್ಚು ಮಾವು ಬೆಳೆಯುತ್ತಾರೆ.

ಮಾವು ಅಭಿವೃದ್ಧಿ ಕೇಂದ್ರ

ಶ್ರೀನಿವಾಸಪುರ ತಾಲ್ಲೂಕಿನ ಹೊಗಳಗೆರೆ ಸಮೀಪ ಮಾವು ಅಭಿವೃದ್ಧಿ ಕೇಂದ್ರ ಇದೆ. ಈ ಕೇಂದ್ರವು ಆನ್‌ಲೈನ್‌ ಮಾವು ವಹಿವಾಟಿಗೆ ಸಹಾಯ ಮಾಡುತ್ತದೆ. ಮಾವು ಬೆಳೆಗಾರರಿಗೆ ವಹಿವಾಟು ನಡೆಸಲು ಅಗತ್ಯವಾದ ತರಬೇತಿ, ಮಾರ್ಗದರ್ಶನ ಹಾಗೂ ನೆರವು ನೀಡುತ್ತಿದೆ.

ಈ ಬಾರಿ ಹವಾಮಾನ ವೈಪರೀತ್ಯ ಕಾರಣ ಫಸಲು ತಗ್ಗಿದೆ. ಜೊತೆಗೆ ಧಾರಣೆಯಲ್ಲಿ ತೀವ್ರ ಕುಸಿತವಾಗಿದೆ. ಮಾವಿನ ಗುಣಮಟ್ಟವೂ ಅಷ್ಟಕಷ್ಟೆ. ಹೀಗಾಗಿ, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಂಧ್ರಪ್ರದೇಶ ಮಾದರಿಯಲ್ಲಿ ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹಿಸಿ ಪ್ರತಿಭಟನೆ, ಬಂದ್‌ ಕೂಡ ನಡೆಸಿದ್ದಾರೆ. 

ತೋತಾಪುರಿ ಮಾವಿನ ತಳಿ ಈಗಷ್ಟೇ ಮಾರುಕಟ್ಟೆಗೆ ಬರುತ್ತಿದ್ದು, ಧಾರಣೆ ತೀರಾ ಕುಸಿದಿದೆ. ಟನ್‌ ಮಾವಿಗೆ ₹ 3 ಸಾವಿರವರೆಗೆ ಕುಸಿದಿದೆ. ಕಳೆದ ಬಾರಿ ₹ 25 ಸಾವಿರವರೆಗೆ ಇತ್ತು. ಸೇಂದೂರ, ಬೇನಿಷಾ, ನೀಲಂ, ರಾಜಗಿರಗಳ ದರ ಕೂಡ ತಗ್ಗಿದೆ. ಮಲ್ಲಿಕಾ, ಬಾದಾಮಿ ರುಚಿ ಹೆಚ್ಚು. ಇದಕ್ಕೆ ಟನ್‌ಗೆ ₹ 20 ಸಾವಿರದವರೆಗೆ ಇದೆ. ದರ ಏರಿಳಿತದ ನಡುವೆ ಮಾವು ಬೆಳೆದು ಕೆಲವರು ಲಕ್ಷಾಧಿಪತಿಯಾಗಿರುವವರೂ ಇದ್ದಾರೆ, ಸಾಲ ಮಾಡಿ ಸಂಕಷ್ಟಕ್ಕೆ ಸಿಲುಕಿದವರೂ ಇದ್ದಾರೆ.

ಸಾಗಣೆಗೆ ಮಂಡಿಯಲ್ಲಿ ಮಾವಿನ ಕಾಯಿಗಳನ್ನು ಬಾಕ್ಸ್‌ಗೆ ಜೋಡಿಸಿದ ವರ್ತಕರು

ಬೆಲೆ ಕುಸಿತ ಇಡೀ ವ್ಯವಸ್ಥೆಯನ್ನು ಕುಗ್ಗಿಸುತ್ತದೆ. ಬೆಳೆಗಾರರು ಅಷ್ಟೇ ಅಲ್ಲ; ವ್ಯಾಪಾರಸ್ಥರು, ಮಂಡಿ ಮಾಲೀಕರು, ದಲ್ಲಾಳಿಗಳು, ಕೂಲಿ ಕಾರ್ಮಿಕರು, ಹಮಾಲರು ಸಂಕಷ್ಟಕ್ಕೆ ಸಿಲುಕುತ್ತಾರೆ.

ಶೇಕಡ 60ರಷ್ಟು ರೈತರು ತಮ್ಮ ತೋಟಗಳನ್ನು ಗುತ್ತಿಗೆಗೆ ಕೊಟ್ಟು ಬಿಡುತ್ತಾರೆ. ಮಾವಿನ ಹೂ ಬಿಟ್ಟಾಗಲೇ ವ್ಯಾಪಾರಸ್ಥರು ಬಂದು ಗುತ್ತಿಗೆ ಪಡೆಯುತ್ತಾರೆ. ನಂತರ ಮಾವಿನ ಕಾಯಿ ಕೊಯ್ದು ಮಾರಾಟ ಮಾಡುತ್ತಾರೆ. ಹಲವು ವರ್ತಕರು ರೈತರಿಂದ ಮುಂಗಡವಾಗಿ ಮಾವಿನ ಕಾಯಿ ಖರೀದಿಸುತ್ತಾರೆ.

‘ಮಾವಿನ ಸುಗ್ಗಿ ಮುಗಿದ ಮೇಲೆ ನೀರಾವರಿ ಇರುವವರು ತೋಟದಲ್ಲಿ ಟೊಮೆಟೊ, ಕೋಸು, ತರಕಾರಿ, ಸೊಪ್ಪು ಬೆಳೆಯುತ್ತಾರೆ. ಅವುಗಳಿಗೆ ಔಷಧಿ ಹೊಡೆಯುವ ಕಾರಣ ಮಾವಿನ ಗುಣಮಟ್ಟ ಕಡಿಮೆಯಾಗುತ್ತದೆ. ಇನ್ನು ಕೆಲವರು ರಾಗಿ, ಅವರೆ, ತೊಗರಿ ಬೆಳೆಯುತ್ತಾರೆ. 

ಮಾವಿನ ಗಿಡಗಳ ಮಧ್ಯೆ ಈ ಬೆಳೆ ಬೆಳೆಯುವುದರಿಂದ ಯಾವುದೇ ತೊಂದರೆ ಇಲ್ಲ. ಮಾವಿನ ಕಾಯಿ ಬಿಟ್ಟಾಗ ಸಾಮಾನ್ಯವಾಗಿ ಬೇರೆ ಯಾವುದೇ ಬೆಳೆ ಬೆಳೆಯಲು ಯಾರೂ ಮುಂದಾಗಲ್ಲ. ಡಿಸೆಂಬರ್‌ ವೇಳೆಗೆ ಹೂವು ಬಿಡುತ್ತವೆ. ಕಟಾವು ಮಾಡುವಾಗ ಕಾರ್ಮಿಕರಿಗೆ ಹಾಗೂ ಸಾಗಣೆಗೆ ಹೆಚ್ಚು ವೆಚ್ಚ ತಗುಲುತ್ತದೆ’ ಎಂದು ಹೇಳುತ್ತಾರೆ ಮಾವು ಬೆಳೆಗಾರ ತೊಟ್ಲಿ ಗ್ರಾಮದ ಟಿ.ವಿ.ರಮೇಶ್‌.

‘ನಾವು ಬೆಳೆಯುವ ಮಾವಿಗೆ ಉತ್ತಮ ದರ ಸಿಗಬೇಕಾದರೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಇರಬೇಕು. ಸಂಗ್ರಹ, ಸಂಸ್ಕರಣಾ ಕೇಂದ್ರ ಬೇಕು. ಉತ್ತಮ ಮೂಲಸೌಕರ್ಯ ಒದಗಿಸಬೇಕು. ಸಾಗಣೆ, ಸಂಚಾರ ವ್ಯವಸ್ಥೆ ಸಮರ್ಪಕವಾಗಿರಬೇಕು. ರೈತರ ಆಧಾರಸ್ತಂಭ ಎನಿಸಿರುವ ಶ್ರೀನಿವಾಸಪುರ ಎಪಿಎಂಸಿ ಮಾರುಕಟ್ಟೆಯನ್ನು ಹೈಟೆಕ್‌ ಆಗಿಸಬೇಕು. ವಾಣಿಜ್ಯ ಕೇಂದ್ರವನ್ನಾಗಿ ಪರಿವರ್ತಿಸಬೇಕು’ ಎಂದು ಒತ್ತಾಯಿಸುತ್ತಾರೆ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಸಂಚಾಲಕ ಬಿ.ಎ.ಸೈಯದ್ ಫಾರೂಕ್.

ಶ್ರೀನಿವಾಸಪುರದ ಮಾವಿನ ಮಂಡಿಯಲ್ಲಿ ಬಲು ಜೋರಾಗಿದೆ ಮಾವು ಮಾರಾಟ

ಮೌಲ್ಯವರ್ಧಿತ ಸೇವೆಗಳನ್ನು ಕಲ್ಪಿಸಲು ಸರ್ಕಾರವು ಜ್ಯೂಸ್ ಫ್ಯಾಕ್ಟರಿ, ಕೋಲ್ಡ್ ಸ್ಟೋರೇಜ್, ಸಂಸ್ಕರಣಾ ಘಟಕ ನಿರ್ಮಿಸಬೇಕು ಎಂಬುದು ಈ ಭಾಗದ ಮಾವು ಬೆಳೆಗಾರರ ಒತ್ತಾಯ ಕೂಡ.

ವಿವಿಧ ರಾಜ್ಯಗಳಿಂದ ಬರುವ ವ್ಯಾಪಾರಸ್ಥರು, ಕಾರ್ಮಿಕರು ಸುಗ್ಗಿ ಸಮಯದಲ್ಲಿ ಸುಮಾರು ಮೂರು ತಿಂಗಳು ಎಪಿಎಂಸಿಯಲ್ಲಿಯೇ ವಾಸ್ತವ್ಯ ಹೂಡುತ್ತಾರೆ. ಮಾವು ಬಾಕ್ಸ್ ಪ್ಯಾಕಿಂಗ್, ಲೋಡಿಂಗ್, ಮಾರುಕಟ್ಟೆ ನಿರ್ವಹಣೆ ಸೇರಿದಂತೆ ಹಲವು ಕೆಲಸಗಳಿಗೆ ಕಾರ್ಮಿಕರು ಬರುತ್ತಾರೆ. ಅವರಿಗೆ ವಸತಿ, ಶೌಚಾಲಯ, ಶುದ್ಧ ಕುಡಿಯುವ ನೀರು, ಕ್ಯಾಂಟೀನ್‌, ಎಟಿಎಂ ವ್ಯವಸ್ಥೆ, ಬ್ಯಾಂಕ್‌ ವ್ಯವಸ್ಥೆ ಒದಗಿಸಬೇಕಿದೆ. ಸುಮಾರು 19 ಎಕರೆಯಲ್ಲಿ ಎಪಿಎಂಸಿ ಹರಡಿಕೊಂಡಿದೆ. ಕಳೆದ ವರ್ಷ ಈ ಎಪಿಎಂಸಿಗೆ ಎರಡೂ ಲಕ್ಷಕ್ಕೂ ಅಧಿಕ ಕ್ವಿಂಟಲ್‌ ಮಾವಿನ ಆವಕವಾಗಿ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿ‌ತ್ತು. ಸುಮಾರು ₹ 37 ಲಕ್ಷ ಸೆಸ್‌ ಸಂಗ್ರಹವಾಗಿತ್ತು. ಈ ಬಾರಿ ನಿತ್ಯ 8 ಸಾವಿರ ಕ್ವಿಂಟಲ್‌ವರೆಗೆ ಮಾವಿನ ಆವಕವಾಗುತ್ತಿದೆ. ಕಳೆದ ಹಂಗಾಮಿಗೆ ಹೋಲಿಸಿದರೆ ಕಡಿಮೆ. ಇದಲ್ಲದೇ, ಎಪಿಎಂಸಿ ಹೊರಗಡೆಯೂ ವ್ಯಾಪಾರಿಗಳು ವಹಿವಾಟು ನಡೆಸುತ್ತಾರೆ.  

ಮಾವು ಹಂಗಾಮು ಅವಧಿಯಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚುವುದು ಒಂದುಕಡೆಯಾದರೆ, ಸ್ವಚ್ಛತೆ ಕಾಪಾಡಿಕೊಳ್ಳುವುದೂ ದೊಡ್ಡ ಸವಾಲು. ಮಂಡಿ ಸುತ್ತಲಿನ ನಿವಾಸಿಗಳ ಪಾಡು ಹೇಳತೀರದು. ವ್ಯಾಪಾರಿಗಳು, ರೈತರು ಕೊಳೆತ ಹಣ್ಣುಗಳನ್ನು ಎಲ್ಲಿ ಬೇಕೋ ಅಲ್ಲಿ ಎಸೆದು ಹೋಗುತ್ತಾರೆ, ತ್ಯಾಜ್ಯದ ಬೆಟ್ಟವೇ ನಿರ್ಮಾಣವಾಗುತ್ತದೆ. ಇದರಿಂದ ದುರ್ವಾಸನೆ ಜೊತೆಗೆ ಸೊಳ್ಳೆ, ನೊಣ, ಇಲಿ, ಹೆಗ್ಗಣ ನಾಯಿ ಕಾಟ ಹೆಚ್ಚುತ್ತದೆ. ಇದನ್ನು ನಿಭಾಯಿಸುವುದು ದೊಡ್ಡ ತಲೆನೋವಿನ ಕೆಲಸವಾಗುತ್ತದೆ ಎನ್ನುತ್ತಾರೆ ಪುರಸಭೆ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು.

ಇಲ್ಲಿನ ಬಗೆ ಬಗೆಯ ಮಾವಿನ ಹಣ್ಣಿ ರುಚಿಗೆ ಮನಸೋತವರು ಮಾತ್ರ ಮಾವಿನ ಹಂಗಾಮಿಗಾಗಿ ಕಾಯುತ್ತಿರುತ್ತಾರೆ.

ತೋಟದಿಂದ ಮಾರುಕಟ್ಟೆಗೆ ಸಾಗಿಸಲು ಮಾವಿನ ಕಾಯಿಗಳನ್ನು ಬಾಕ್ಸ್‌ಗಳಲ್ಲಿ ಜೋಡಿಸಿಟ್ಟಿರುವುದು

ಬದುಕು ಬದಲಾಯಿಸಿದ ಮಾವು!

ಶ್ರೀನಿವಾಸಪುರ ತಾಲ್ಲೂಕಿನ ಶೇಕಡ 70ರಷ್ಟು ರೈತರ ಬದುಕು ಮಾವಿನ ಬೆಳೆ ಮೇಲೆ ಅವಲಂಬಿತ
ವಾಗಿದೆ. ರಾಜ್ಯದ ಒಟ್ಟು ಮಾವಿನ ಬೆಳೆ ಪ್ರಮಾಣದ ಮೂರನೇ ಒಂದು ಭಾಗ ಶ್ರೀನಿವಾಸಪುರದಲ್ಲೇ ಇದೆ. 50ಕ್ಕೂ ಅಧಿಕ ವರ್ಷಗಳಿಂದ ಮಾವು ನಂಬಿ ಇಲ್ಲಿನ ಜನರ ಜೀವನ ಸಾಗಿದೆ. ಒಂದು ಎಕರೆಯಿಂದ ಹಿಡಿದು ನೂರು ಎಕರೆಯವರೆಗೆ ಮಾವಿನ ತೋಟ ಹೊಂದಿರುವ ರೈತರು ಇಲ್ಲಿದ್ದಾರೆ ಎಂದು ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಹೇಳುತ್ತಾರೆ.

ಮನೆ ನಿರ್ಮಾಣ ಇರಬಹುದು, ಮಕ್ಕಳ ವಿದ್ಯಾಭ್ಯಾಸ ಆಗಿರಬಹುದು, ಆಸ್ಪತ್ರೆ ಖರ್ಚು, ಮನೆ ಕಾರ್ಯವು ಮಾವಿನ ಋತುವಿನ ಮೇಲೆ ಅವಲಂಬಿತವಾಗಿದೆ. ‘ಚಿಕ್ಕಂದಿನಿಂದಲೂ ಗಮನಿಸಿಕೊಂಡು ಬಂದಿದ್ದೇನೆ. ಮಾವಿನ ಹಂಗಾಮಿನಲ್ಲಿ ಉತ್ತಮ ಧಾರಣೆ ಸಿಕ್ಕರೆ ಮಗಳ ಮದುವೆ ಮಾಡುವುದು, ಮನೆ ಕಟ್ಟುವ ಕಾರ್ಯ ನಡೆಯುತ್ತದೆ.

ನನ್ನ ಬಳಿ ಹತ್ತು ಎಕರೆ ಮಾವಿನ ತೋಟವಿದೆ. ಬೆಂಗಳೂರಿನ ಮಾವಿನ ಮೇಳ, ವಿವಿಧ ಮಾರುಕಟ್ಟೆ, ಆನ್‌ಲೈನ್‌ ಮೂಲಕ ಮಾರಾಟ ಮಾಡುತ್ತೇನೆ. ಈ ಮೂಲಕವೇ ನಮ್ಮ ಸಂಸಾರ ನಡೆಯುತ್ತಿದೆ. ಆದರೆ, ನಾಲ್ಕೈದು ವರ್ಷಗಳಿಂದ ಹಮಾಮಾನ ವೈಪರೀತ್ಯದಿಂದ ಇಳುವರಿ ಬಿದ್ದು ಹೋಗಿದೆ. ಪ್ರಕೃತಿ ಮುನಿಸಿಕೊಂಡಿದೆ, ಧಾರಣೆ ತಗ್ಗಿದ್ದು, ಸಂಕಷ್ಟಕ್ಕೆ ಸಿಲುಕಿದ್ದೇವೆ. ಫಸಲಿಗೆ ಅನುಗುಣವಾಗಿ ಜಿಲ್ಲೆಯಲ್ಲಿ ಕೈಗಾರಿಕೆಗಳು ಇಲ್ಲ. ಹೈಟೆಕ್‌ ಸಂಸ್ಕರಣಾ ಘಟಕ ಒಂದೂ ಇಲ್ಲ. ಖಾಸಗಿ ಫ್ಯಾಕ್ಟರಿಗಳು ಇದ್ದರೂ ಅವುಗಳೇ ಸಮಸ್ಯೆಯಲ್ಲಿವೆ’ ಎನ್ನುತ್ತಾರೆ.

ಮನೆಗಳಲ್ಲೇ ವಾಣಿಜ್ಯ ಚಟುವಟಿಕೆ

ದೇಶ ವಿದೇಶಗಳಿಗೆ, ಕಾರ್ಖಾನೆಗಳಿಗೆ ಮಾವು ಸರಬರಾಜು ಮೂಲಕ ದೊಡ್ಡ ಮಟ್ಟದ ಆರ್ಥಿಕ ವಹಿವಾಟು ಒಂದೆಡೆಯಾದರೆ, ಮತ್ತೊಂದೆಡೆ ಮನೆಗಳಲ್ಲಿ ಗುಡಿ ಕೈಗಾರಿಕೆಗಳಿಂದ ಚಿಕ್ಕಪುಟ್ಟ ವಹಿವಾಟು ನಡೆಸಲಾಗುತ್ತದೆ. ಶ್ರೀನಿವಾಸಪುರದ ಹಲವರು ಮಾವಿನ ಕಾಯಿಯಿಂದ ಉಪ್ಪಿನಕಾಯಿ, ಆಮ್ ಚೂರ್ ಮತ್ತು ಆಮ್ ಪಾಪಡ್ ಮಾಡಿ ಮಾರಾಟ ನಡೆಸುತ್ತಾರೆ. ಆಮ್‌ ಚೂರ್‌ ಅನ್ನು ಬೆಂಗಳೂರು, ಚಿಂತಾಮಣಿ, ಕೋಲಾರ, ಮದನಪಲ್ಲಿ (ಆಂಧ್ರ ಪ್ರದೇಶ) ಸೇರಿದಂತೆ ಹಲವು ಕಡೆಗಳಿಂದ ಬರುವ ಸಣ್ಣ ವ್ಯಾಪಾರಿಗಳು ಕೆ.ಜಿಗೆ ಸರಾಸರಿ ₹ 60 ದರದಲ್ಲಿ ಖರೀದಿಸುತ್ತಾರೆ.

ಈ ಚಟುವಟಿಕೆ ಸ್ಥಳೀಯ ಜನರಿಗೆ ಆರ್ಥಿಕವಾಗಿ ನೆರವಾಗುತ್ತಿದೆ. ಕೆಲವು ಕುಟುಂಬಗಳು ದಿನಕ್ಕೆ
₹ 500ರಿಂದ ₹ 1,000 ವರೆಗೆ ಗಳಿಸುತ್ತಿವೆ. 

ಶ್ರೀನಿವಾಸಪುರ ಮಾವಿನ ಮಂಡಿಯಲ್ಲಿ ಮಾವು ಮಾರಾಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.