ADVERTISEMENT

ಚಿತ್ರಪ್ರದರ್ಶನ: ಹಿಮಾಲಯದ ಸನ್ನಿಧಿಯಲ್ಲಿ ರೋರಿಕ್‌ ಬಣ್ಣಗಳ ಧ್ಯಾನ

ಎಸ್.ರಶ್ಮಿ
Published 16 ನವೆಂಬರ್ 2024, 23:30 IST
Last Updated 16 ನವೆಂಬರ್ 2024, 23:30 IST
ಕೋಲಸ್ ರೋರಿಕ್‌ ಅವರ ಕಲಾಕೃತಿ  ಚಿತ್ರಗಳು: ರಂಜು ಪಿ.
ಕೋಲಸ್ ರೋರಿಕ್‌ ಅವರ ಕಲಾಕೃತಿ  ಚಿತ್ರಗಳು: ರಂಜು ಪಿ.   
ನಿಕೊಲಸ್‌ ರೋರಿಕ್‌ ಭಾರತೀಯ ಚಿತ್ರಕಲಾ ಪರಂಪರೆಯ ನವರತ್ನಗಳಲ್ಲಿ ಒಬ್ಬರಾಗಿದ್ದವರು. ಬೆಂಗಳೂರಿನಲ್ಲಿ ತಮ್ಮ ಜೀವ ಸವೆಸಿದ ಈ ಕಲಾವಿದನ 150ನೇ ಜಯಂತಿಯ ಪ್ರಯುಕ್ತ ಚಿತ್ರಕಲಾ ಪರಿಷತ್‌, 2024–25ನೇ ಸಾಲನ್ನು ರೋರಿಕ್‌ ವರ್ಷ ಎಂದು ಆಚರಿಸಲು ನಿರ್ಣಯಿಸಿದೆ. ಮೊದಲ ಹೆಜ್ಜೆಯೇ ಅವರ ಹಿಮಾಲಯ ಸರಣಿಯ ಚಿತ್ರಪ್ರದರ್ಶನ.
ಪರ್ವತಗಳು ಎಲ್ಲೆಡೆಯೂ ಪರ್ವತಗಳೆ; ನೀರು ಎಲ್ಲೆಡೆಯೂ ನೀರು; ಮನುಷ್ಯರೂ ಎಲ್ಲೆಡೆ ಮನುಷ್ಯರೇ, ಆದರೆ ಅಲ್ಫ್‌ ಪರ್ವತ ಸಾಲಿನ ಮುಂದೆ ಕುಳಿತು, ಹಿಮಾಲಯವನ್ನು ಚಿತ್ರಿಸಿದರೆ... ಏನೋ ಕೊರತೆ ಕಾಡತೊಡಗುತ್ತದೆ.
–ನಿಕೋಲಸ್‌ ರೋರಿಕ್‌

ಹಿಮಾಲಯ ಪರ್ವತ ಶ್ರೇಣಿಗಳ ಮುಂದೆಯೇ ಒಂದಿಡೀ ಜನುಮವ ಕಳೆದಂತೆ 36 ಫ್ರೇಮುಗಳು. ಪ್ರತಿ ಫ್ರೇಮೂ ಒಂದೊಂದು ಕಥನ ಹೇಳುವಂತೆ. ಬೆಳಗಿನ ಹೊಂಬಣ್ಣದಲ್ಲಿ ಹೊಳೆಯುವ ಹಿಮಾಲಯ, ಸಂಜೆಯ ಕೆಂಬಣ್ಣದವರೆಗೂ ತಾಳುವ ವೈವಿಧ್ಯಮಯ ರೂಪಗಳು ವರ್ಣಚಿತ್ರದಲ್ಲಿ ಮೈದಳೆದಿವೆ.

ನಿಕೋಲಸ್‌ ರೋರಿಕ್‌ ರಷ್ಯನ್‌ ಮೂಲದ ಕಲಾವಿದ, ಭಾರತೀಯ ನವರತ್ನ ಕಲಾವಿದರ ಸಾಲಿನಲ್ಲಿ ರವೀಂದ್ರನಾಥ್‌ ಟ್ಯಾಗೋರ್‌ ಅವರೊಂದಿಗೆ ಸ್ಥಾನ ಪಡೆದರು. ಭಾರತೀಯ ಅಧ್ಯಾತ್ಮ ದರ್ಶನದ ಸೆಳೆತಕ್ಕೆ ಒಳಗಾದವರು ನೆಲೆ ನಿಂತಿದ್ದು ಬೆಂಗಳೂರಿನ ತಾತಗುಣಿ ಎಸ್ಟೇಟ್‌ನಲ್ಲಿ. 

ಅವರ ಹಿಮಾಲಯದ ಭೇಟಿಯಲ್ಲಿ 1920ರ ಸಾಲಿನಲ್ಲಿ ತಾವು ಕಂಡ ಪರ್ವತಶ್ರೇಣಿಯನ್ನು ತಮ್ಮ ರಟ್ಟಿನ ಡಬ್ಬಿಯ ರಟ್ಟುಗಳನ್ನೇ ಕ್ಯಾನ್ವಾಸ್‌ ಮಾಡಿಕೊಂಡು ಚಿತ್ರಿಸಿದ್ದಾರೆ. 

ADVERTISEMENT

ಶುಭ್ರ ನೀಲಾಕಾಶದಿಂದ ಹಿಡಿದು, ಕಗ್ಗತ್ತಲೆಯ ಆಕಾಶ, ಬಿರುಬಿಸಿಲಿನ ನಡುಮಧ್ಯಾಹ್ನದ ಕಾಂಚನಗಂಗೆ, ಬೆಳ್ಳನೆಯ ಬೆಳದಿಂಗಳಲ್ಲಿ ಕಂಗೊಳಿಸುವ ಎಲ್ಲ ಚಿತ್ರಣವನ್ನೂ ಇಲ್ಲಿ ಚಿತ್ರಿಸಿಕೊಂಡಿದ್ದಾರೆ. ಈ ದೃಶ್ಯ ಮಾದರಿಗಳನ್ನು ಆಧರಿಸಿ, ಮುಂದೆ ದೊಡ್ಡ ದೊಡ್ಡ ಚಿತ್ರಗಳನ್ನು ಸೃಷ್ಟಿಸುವ ಯೋಜನೆ ಅವರದ್ದಾಗಿತ್ತು. 

ಸಣ್ಣ ಸಣ್ಣ ಫ್ರೇಮುಗಳಲ್ಲಿ 3ಡಿ ಮಾದರಿಯಲ್ಲಿ ಕಾಣುವಂತೆ, ಪರ್ವತವೊಂದನ್ನು ಪೂರ್ವಾಭಿಮುಖವಾಗಿ, ಉತ್ತರಾಭಿಮುಖವಾಗಿ ನೋಡಿದಾಗ, ಬೆಳಕಿನ ಆಟವನ್ನೂ ಸಮರ್ಥವಾಗಿ ಹಿಡಿದಿಟ್ಟಿರುವುದು ಕಾಣಿಸುತ್ತದೆ. 

ನೀಲಿ, ಬಿಳಿ ಮತ್ತು ಬೂದು ಬಣ್ಣಗಳಲ್ಲಿಯೇ ತಮ್ಮ ಪ್ರಯೋಗ ಮುಂದುವರಿಸಿದ ರೋರಿಕ್‌ ನಂತರ ಹಳದಿ, ಗುಲಾಬಿ ಹಾಗೂ ನೇರಳೆ ಬಣ್ಣಗಳಲ್ಲಿ ಸಂಜೆಯ ಕೆಂಬಣ್ಣವನ್ನೂ, ಮಂಜುಮುಸುಕಿದ ಮುಂಜಾವಿದ ಬೂದು ಬಣ್ಣದ ಆಗಸವನ್ನೂ ಹಿಡಿದಿಟ್ಟಿದ್ದಾರೆ. ಒಂದಿಡೀ ಋತುಮಾನದಲ್ಲಿ ಕುಳಿತು ಅವಲೋಕಿಸಿದಂತೆ ಈ ಚಿತ್ರ ಸರಣಿ ಮೂಡಿ ಬಂದಿದೆ. 

ಆಗಸದಲ್ಲಿ ಸೂರ್ಯಾಸ್ತದ ಹೊತ್ತಿನಲ್ಲಿ ಚೆಲ್ಲುವ ರಂಗೋಲಿಯ ಚಿತ್ತಾರ ತಿಳಿಗುಲಾಬಿ ಬಣ್ಣದಲ್ಲಿ ಮೂಡಿದ್ದರೆ, ಸೂರ್ಯೋದಯದ ಮುಂಚಿನ ಆಕಾಶ, ನಂತರದ ಬಂಗಾರ ಬಣ್ಣದ ಬಾನು, ಮೋಡ ಮುಸುಕಿದ, ಅಲ್ಲಲ್ಲಿ ಹತ್ತಿ ಹಿಂಜಿ ಬಿಟ್ಟಂತಹ ಮೋಡಗಳ ಚೆಲ್ಲಾಟ, ಬರಿದೇ ಬರಿದಾಗಿರುವ ಗುಡ್ಡಬೆಟ್ಟಗಳ ಸಾಲು, ಪರ್ವತದ ನೆರಳಿನಲ್ಲಿ ಕಾಡುವ ಕಡುಗಪ್ಪು, ಎಲ್ಲವೂ ನೂರು ವರ್ಷ ಹಳತೆನಿಸುವುದೇ ಇಲ್ಲ.

ನಿಕೋಲಸ್ ರೋರಿಕ್‌ ರಚಿಸಿದ ಕಲಾಕೃತಿ

ನೂರು ವರ್ಷಗಳ ಹಿಂದೆಯೇ 3ಡಿ ಆಯಾಮದಲ್ಲಿ ಕಾಣುವಂತೆ ಚಿತ್ರಿಸಿದ ರೋರಿಕ್‌ ಅವರ ನೈಪುಣ್ಯ ಈ ದೃಶ್ಯ ಕಲಾವೈಭವದಲ್ಲಿ ಕಾಣಿಸಿಕೊಳ್ಳುತ್ತಿದೆ. ಅವರು ಒಟ್ಟು ಕಲಾಕೃತಿಗಳಲ್ಲಿ 36 ಕಲಾಕೃತಿಗಳನ್ನು ಅವರ ಪುತ್ರ ಸ್ವೆಟೊಸ್ಲಾವ್‌ ರೋರಿಕ್‌ ತಮ್ಮದೂ 63 ಕಲಾಕೃತಿಗಳನ್ನು ಸೇರಿಸಿ, ಚಿತ್ರಕಲಾ ಪರಿಷತ್‌ನ ಸುಪರ್ದಿಗೆ ಒಪ್ಪಿಸಿದ್ದರು. ಅವೆಲ್ಲವನ್ನೂ ಸಮ ತಾಪಮಾನದ ಪರಿಸ್ಥಿತಿಯಲ್ಲಿ ಸಂರಕ್ಷಿಸಿ ಇಡಲಾಗಿದೆ ಎಂದು ಈ ಪ್ರದರ್ಶನದ ಜವಾಬ್ದಾರಿ ಹೊತ್ತಿರುವ ಡಾ. ವಿಜಯಶ್ರೀ.

ಮೊಟ್ಟೆಯ ಹಳದಿ ಭಾಗದೊಂದಿಗೆ ವರ್ಣವನ್ನು ಬೆರೆಸಿ ಬಳಸುತ್ತಿದ್ದರಿಂದ ಅವರ ಬಣ್ಣ ಮಿಶ್ರಣದ ತಂತ್ರಗಾರಿಕೆಯಿಂದಲೇ ಈಗಲೂ ತಾಜಾ ಎನಿಸುವಂತೆ ಕಾಣುತ್ತವೆ. ರೋರಿಕ್‌ ಅವರು ಬಳಸಿದ ಕೊಬಾಲ್ಟ್‌ ನೀಲಿ ಬಣ್ಣದ ಟಿನ್ನಿನ ಡಬ್ಬಿಯೂ, ಆ ಡಬ್ಬದಲ್ಲಿ ತುಸುವೆನಿಸುವಷ್ಟು ಬಣ್ಣವೂ ಬಾಕಿ ಇದೆ. ಅದನ್ನು, ಸ್ವೆಟೊಸ್ಲಾವ್‌ ತಮ್ಮ ಡೈರಿಯಲ್ಲಿ ತಂದೆ ನಿಕೊಲಾಸ್‌ ರೋರಿಕ್‌ ಅವರ ಚಿತ್ರಗಳ ವಿವರ ಬರೆದಿರುವ ಡೈರಿಯ ಪುಟವೂ, ಅವರ ಬಗ್ಗೆ ಲಿಟರೇಚರ್ ಡೈಜೆಸ್ಟ್‌ನಲ್ಲಿ ಪ್ರಕಟವಾದ ಲೇಖನದ ಮೂಲಪ್ರತಿಯೂ ಮತ್ತು ಪೋಸ್ಟ್‌ಕಾರ್ಡ್‌ಗಳು, ಕ್ಯಾಲೆಂಡರ್‌ಗೆ ಚಿತ್ರಿಸಿದ ಚಿತ್ರಗಳ ಪ್ರತಿಗಳೂ ಈ ಚಿತ್ರ ಪ್ರದರ್ಶನದಲ್ಲಿ ಇರಿಸಲಾಗಿದೆ. 

ಶಾಂತಿ ಇದ್ದಲ್ಲಿ ಸಂಸ್ಕೃತಿಯೂ, ಸಂಸ್ಕೃತಿ ಇದ್ದಲ್ಲಿ ಶಾಂತಿಯೂ ನೆಲೆಸಿರುತ್ತದೆ ಎಂಬುದು ರೋರಿಕ್‌ ಅವರ ವಿಶ್ವಾಸವಾಗಿತ್ತು. ಘೋಷವಾಕ್ಯವಾಗಿತ್ತು. ಪುರಾತತ್ವ ತಜ್ಞ, ತತ್ವಜ್ಞಾನಿಯೂ, ಕಲಾವಿದನೂ ಆಗಿದ್ದ ಅವರು, ವಿಶ್ವ ಶಾಂತಿಯಲ್ಲಿ ನಂಬಿಕೆ ಇರಿಸಿದ್ದರು. ಮೊದಲ ವಿಶ್ವ ಯುದ್ಧದ ನಂತರ ಆದ ಸಾಂಸ್ಕೃತಿಕ ಹಾನಿಯಿಂದಾಗಿ ಅವರು ಕನಲಿ ಹೋಗಿದ್ದರು. ಯುದ್ಧಗಳು ಕೇವಲ ಮನುಷ್ಯರ ಬಲಿ ಕೇಳುವುದಿಲ್ಲ. ಸಾಂಸ್ಕೃತಿಕ ಪರಂಪರೆಯೂ ನಾಶವಾಗುತ್ತದೆ ಎಂಬ ಆತಂಕದಲ್ಲಿದ್ದವರು, 21 ರಾಷ್ಟ್ರಗಳು ರೋರಿಕ್‌ ಒಪ್ಪಂದಕ್ಕೆ ಸಹಿ ಹಾಕುವಂತೆ ಮಾಡಿದ್ದರು. 

ಈ ಒಪ್ಪಂದದ ಪ್ರಕಾರ ಯಾವುದೇ ದೇಶಗಳ ಕಲೆ, ಪರಂಪರೆಗಳು ನಾಶವಾಗಬಾರದು, ನಾಶ ಮಾಡಬಾರದು ಎಂಬ ಮುಖ್ಯ ಧ್ಯೇಯೋದ್ದೇಶವನ್ನಿರಿಸಿಕೊಂಡು ಹಲವಾರು ನಿಯಮಗಳನ್ನು ಅಂತಿಮಗೊಳಿಸಿದ್ದರು. ಜಾರ್ಜ್‌ ಬರ್ನಾರ್ಡ್‌ ಶಾ, ಅಲ್ಬರ್ಟ್‌ ಐನ್‌ಸ್ಟೈನ್‌, ಎಚ್‌.ಜಿ. ವೆಲ್ಸ್‌, ರವೀಂದ್ರನಾಥ್ ಠ್ಯಾಗೋರ್‌ ಇವರೆಲ್ಲರೂ ಈ ಒಪ್ಪಂದಕ್ಕೆ ಅನುಮೋದನೆ ನೀಡಿದ್ದರು. ಶಾಂತಿ ಸಂದೇಶವು ಕಲೆಯ ಮೂಲಕ ಸಾಧಿಸಬೇಕು ಎನ್ನುವುದೂ ಅವರ ವಿಶ್ವಾಸವಾಗಿತ್ತು. 

ರಷ್ಯನ್‌ ಕಲಾವಿದರೊಬ್ಬರು, ಭಾರತದ ಮಣ್ಣಲ್ಲಿ ಮಣ್ಣಾದರು. ನಗ್ಗಾರ್‌ನಲ್ಲಿ ಕೊನೆಯುಸಿರೆಳೆದ ರೋರಿಕ್‌ ಅವರ 150ನೆಯ ಜಯಂತಿಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಅವರ ಕಲಾಕೃತಿಗಳು ಇದ್ದಲ್ಲೆಲ್ಲ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ. ಅವರ ವಿಚಾರಧಾರೆ, ಕಲೆ, ಅಧ್ಯಾತ್ಮಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದವನ್ನೂ ಏರ್ಪಡಿಸಲಾಗುತ್ತಿದೆ. ನಮ್ಮಲ್ಲಿಯೂ ಚಿತ್ರಕಲಾ ಪರಿಷತ್‌ ಈ ನಿಟ್ಟಿನಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. 

ರೋರಿಕ್‌ ಕುರಿತು ಸಂಶೋಧನೆ ಕೈಗೊಂಡು ಡಾಕ್ಟರೇಟ್‌ ಪಡೆದಿರುವ ಪುಷ್ಪಾ ದ್ರಾವಿಡ್‌ (ರಾಹುಲ್‌ ದ್ರಾವಿಡ್‌ ಅವರ ತಾಯಿ) ಈ ನಿಟ್ಟಿನಲ್ಲಿ ಚಿತ್ರಕಲಾ ಪರಿಷತ್‌ನೊಂದಿಗೆ ಕೈ ಜೋಡಿಸಿದ್ದಾರೆ. ಅವರ ಸಂಶೋಧನಾ ಗ್ರಂಥದಲ್ಲಿ ಬಳಸಿರುವ ಮಾಹಿತಿಯನ್ನು ಮಕ್ಕಳೊಟ್ಟಿಗೆ ಹಂಚಿಕೊಂಡಿದ್ದಾರೆ.

ನಿಕೋಲಸ್ ರೋರಿಕ್‌ ಅವರ ಕಲಾ ಪ್ರದರ್ಶನ ವೀಕ್ಷಿಸುತ್ತಿರುವ ಕಲಾಭಿಮಾನಿಗಳು
ಮಕ್ಕಳೇನು ಕಾಣುತ್ತಾರೆ!
ಈ ಪ್ರದರ್ಶನಕ್ಕೆ ಬರುತ್ತಿರುವ ವಿವಿಧ ಶಾಲಾ ಮಕ್ಕಳಿಗೆ ಚಟುವಟಿಕೆಗಳ ಮೂಲಕ ಈ ಅನನ್ಯ ಸಂಗ್ರಹದ ಕುರಿತು ಮಾಹಿತಿ ನೀಡಲಾಗುತ್ತಿದೆ. ಶಾಲಾ ವಿದ್ಯಾರ್ಥಿಗಳಿಗೆ ಗುಂಪುಗಳಾಗಿ ರಚಿಸಿ, ಒಂದೊಂದು ಗುಂಪಿಗೂ ಒಂದೊಂದು ಚಿತ್ರವನ್ನು ದಿಟ್ಟಿಸಿ, ಒಂದ್ಹುತ್ತು ನಿಮಿಷ ಅದನ್ನೇ ನಿರುಕಿಸಿ, ನೋಡಿ, ತಾವು ಅವಲೋಕಿಸಿದ್ದನ್ನು ಬರೆಯಲು ತಿಳಿಸಲಾಗುತ್ತಿದೆ. ಪ್ರತಿ ಮಗುವೂ ಒಂದೊಂದು ಆಯಾಮದಲ್ಲಿ ಚಿತ್ರವನ್ನು ವಿಶ್ಲೇಷಿಸುತ್ತಿದೆ. ಕಲಾವಿದರು ಯಾವ ದಿಕ್ಕಿನಲ್ಲಿ ನಿಂತಿದ್ದರು, ಯಾವ ಸಮಯವನ್ನು ಚಿತ್ರಿಸಿದ್ದಾರೆ, ವರ್ಣ ಸಂಯೋಜನೆ ಹೀಗೆ ಹತ್ತು ಹಲವಾರು ವಿಷಯಗಳನ್ನು ಚರ್ಚಿಸುತ್ತಿದ್ದಾರೆ. ಮಕ್ಕಳ ಮನದೊಳಗೆ ರೋರಿಕ್‌ ಕುಡಿಯನ್ನು ಬೆಳಗಿಸುವ ಕೆಲಸ ನಡೆದಿದೆ. ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ರೋರಿಕ್‌ ಅವರ ಕಲಾಕೃತಿಗಳ ಪ್ರದರ್ಶನ ನ.18ರಂದು ಕೊನೆಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.