ADVERTISEMENT

ಆಧುನಿಕ ಉಡುಗೆಯಲ್ಲಿ ಸಂಪ್ರದಾಯಸ್ಥ ದೇಹ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2011, 19:30 IST
Last Updated 16 ಏಪ್ರಿಲ್ 2011, 19:30 IST

ತಮಿಳಿನ ಅಯ್ಯರ್ ಕುಟುಂಬದ ಹೆಣ್ಣುಮಗಳು. ನೃತ್ಯದ ಗಂಧ-ಗಾಳಿ ಇತ್ತು. ಸಂಪ್ರದಾಯಸ್ಥರ ಮನೆ. ಹೊಸಿಲು ದಾಟಿ ಹೋಗುವುದಾದರೆ ವಾಪಸ್ ಬರುವ ಹೊತ್ತನ್ನೂ ಹೇಳಿ ಹೋಗುವುದು ರೂಢಿ . ಇಲ್ಲವಾದರೆ, ಮನೆಯಲ್ಲಿ ಎಲ್ಲರಲ್ಲೂ ತಳಮಳ. ಇಂಥ ಕೌಟುಂಬಿಕ ಹಿನ್ನೆಲೆಯಿದ್ದೂ ವಿದ್ಯಾ ಬಾಲನ್‌ಗೆ ಬಣ್ಣದಲೋಕದ ಗೀಳುಹತ್ತಿದ್ದು ಆಶ್ಚರ್ಯ.

ವಿದ್ಯಾ ಮೊದಲು ಅವಕಾಶಕ್ಕೆ ಯತ್ನಿಸಿದ್ದು ತಮಿಳಿನಲ್ಲಿ. ಆದರೆ, ನಿರ್ದೇಶಕರೊಬ್ಬರು ನಟಿಯಾಗುವ ಯಾವ ಲಕ್ಷಣವೂ ಇಲ್ಲವೆಂದು ಹೇಳಿ ನಿರಾಸೆಗೊಳಿಸಿದರು. ಮಲಯಾಳದಲ್ಲಿ ಅವಕಾಶ ಸಿಕ್ಕಿ, ಮೋಹನ್‌ಲಾಲ್ ಜೊತೆ ‘ಚಕ್ರಂ’ ಚಿತ್ರದಲ್ಲಿ ನಟಿಸಿದರೂ ವಿದ್ಯಾ ಅಂದುಕೊಂಡಂತೆ ಅವಕಾಶಗಳೇನೂ ಹರಿದುಬರಲಿಲ್ಲ. ಆಗ ಕೈಬೀಸಿದ್ದು ಜಾಹೀರಾತು ಲೋಕ. ಸರ್ಫ್ ಎಕ್ಸೆಲ್ ವಾಷಿಂಗ್ ಪೌಡರ್‌ಗೆ ರೂಪದರ್ಶಿಯಾದ ನಂತರ ವಿದ್ಯಾ ಮುಖದಲ್ಲಿ ನಿರ್ದೇಶಕರಿಗೆ ದಿವ್ಯವಾದ ಕಳೆ ಕಾಣಿಸತೊಡಗಿತು. ‘ಪರಿಣೀತಾ’ ಸಿನಿಮಾ ಅವಕಾಶವೇನೋ ಸಿಕ್ಕಿತು. ಅದಕ್ಕಾಗಿ ವಿದ್ಯಾ 17 ತರಹದ ಮೇಕಪ್ ಮಾಡಿಸಿಕೊಳ್ಳಬೇಕಾಯಿತು. ಭರ್ತಿ 40 ಸ್ಕ್ರೀನ್ ಟೆಸ್ಟ್‌ಗಳಲ್ಲಿ ಪಾಸಾಗಬೇಕಾಯಿತು.

ವಿದ್ಯಾ ಧರಿಸುವ ಬಟ್ಟೆ, ಅವರಿಗಿರುವ ನಾಚಿಕೆ- ಸಂಕೋಚ, ಮಿತಭಾಷೆ ಎಲ್ಲವನ್ನೂ ಕಂಡು ಆಡಿಕೊಂಡವರೂ ಬಾಲಿವುಡ್‌ನಲ್ಲಿದ್ದಾರೆ. ಒಬ್ಬ ನಟಿ ‘ಕಾಲು ಕಾಣುವ ಬಟ್ಟೆ ಹಾಕಿದ ಮಾತ್ರಕ್ಕೆ ಸೆಕ್ಸಿ ಆಗಲು ಸಾಧ್ಯವಿಲ್ಲ’ ಎಂದಿದ್ದರು. ಅಂಥ ವಿಮರ್ಶೆಗಳಿಗೆ ವಿದ್ಯಾ ನಗುವನ್ನಷ್ಟೇ ಉತ್ತರ ರೂಪದಲ್ಲಿ ಕೊಟ್ಟರೇ ವಿನಾ ಕೆಣಕಿದವರ ಕಾಲೆಳೆಯಲಿಲ್ಲ.

‘ಮನೆ ನನಗೆ ವಿನಯ ಕಲಿಸಿದೆ. ಅನುಭವ ಬದುಕನ್ನು ಗಟ್ಟಿಗೊಳಿಸಿದೆ. ನಾನು ನಟಿಯಾಗಲು ಬಂದವಳು. ಕೇವಲ ಮೈಮಾಟ ಪ್ರದರ್ಶಿಸುವುದಷ್ಟೇ ನನ್ನ ಉದ್ದೇಶವಲ್ಲ. ನಾನು ಮೊದಲಿನಿಂದಲೂ ಒಳ್ಳೆಯ ನಟಿಯರೆಂದು ಗುರುತಿಸಿದವರೆಲ್ಲರೂ ತಮ್ಮ ಚಹರೆ, ಭಾವಗಳಿಂದಲೇ ನನ್ನ ಮೇಲೆ ಛಾಪುಮೂಡಿಸಿದ್ದರು. ಬೇಕಾದರೆ ಮೀನಾಕುಮಾರಿ, ಮಧುಬಾಲಾ ತರಹದವರನ್ನು ನೋಡಿ. ಕಾಜೋಲ್ ಕಡೆಗೆ ಕಣ್ಣಾಡಿಸಿ. ಅಷ್ಟೇ ಏಕೆ, ಮಾಧುರಿ ದೀಕ್ಷಿತ್ ನೃತ್ಯ ಮಾಡುವಾಗ ಅವರ ಕಣ್ಣುಗಳಲ್ಲಿ ಹೊಮ್ಮುವ ಕಾಂತಿ ನೋಡಿ. ಮೈಮಾಟವನ್ನೂ ಮೀರಿದ್ದೇನೋ ಅವರಲ್ಲಿ ಇದೆ. ನನಗೂ ಹಾಗೆಯೇ ಆಗುವಾಸೆ. ನಟನೆ ಎಂಬುದು ಮೈಮಾಟದಷ್ಟು ಸುಲಭವಲ್ಲ. ಬಾಲಿವುಡ್‌ನಲ್ಲಿ ಮೈಮಾಟಕ್ಕೇ ಆದ್ಯತೆ ಇರುವುದರಿಂದ ನನ್ನಂಥವರು ಅನೇಕರಿಗೆ ಮಡಿವಂತೆಯಂತೆ ಕಾಣಬಹುದು. ಆದರೆ, ವಿಷಯ ಅಂದುಕೊಂಡಷ್ಟು ಸರಳವಲ್ಲ...’ ಹೀಗೆ ಆತ್ಮವಿಮರ್ಶೆ ಮಾಡಿಕೊಳ್ಳುತ್ತಾರೆ ವಿದ್ಯಾ.

ವಿದ್ಯಾ ಅವರ ಇನ್ನೊಂದು ಗುಣ ಬಾಲಿವುಡ್‌ನಲ್ಲಿ ಸಾಕಷ್ಟು ಚರ್ಚೆಗೆ ಇಂಬುಗೊಟ್ಟಿದೆ. ತಮಗೆ ಹಿಡಿಸದೇ ಇರುವುದನ್ನು ಅವರು ನೇರವಾಗಿ ಹೇಳುವುದೇ ಇಲ್ಲ ಎಂಬುದೇ ಆ ಗುಣ. ಇದರ ಬಗ್ಗೆ ವಿದ್ಯಾ ಹೇಳುವುದಿಷ್ಟು: ‘ಅಪ್ರಿಯವಾದ ಸತ್ಯವನ್ನು ಥಟ್ಟನೆ ಹೇಳಬಾರದು. ಯಾರೋ ಒಬ್ಬರು ಸ್ಕ್ರಿಪ್ಟ್ ತರುತ್ತಾರೆ ಎಂದಿಟ್ಟುಕೊಳ್ಳಿ. ನನಗೆ ಅದು ಹಿಡಿಸುವುದಿಲ್ಲ. ಆದರೆ, ಏಕಾಏಕಿ ಸ್ಕ್ರಿಪ್ಟ್ ಸರಿಯಿಲ್ಲ ಎಂದು ನಾನು ಅವರಿಗೆ ಹೇಳುವುದಿಲ್ಲ. ಈ ಪಾತ್ರ ನನಗೆ ಹೊಂದುವುದಿಲ್ಲ ಎಂದಷ್ಟೆ ಹೇಳಿ ಸಾಗಹಾಕುತ್ತೇನೆ. ಕೆಲವರು ಸಿನಿಮಾ ತೋರಿಸಿ ಅಭಿಪ್ರಾಯ ಕೇಳುತ್ತಾರೆ. ನನಗೆ ಹಿಡಿಸಿದರೆ ಅದರ ಬಗ್ಗೆ ಮುಕ್ತವಾಗಿ ಮಾತಾಡುತ್ತೇನೆ. ಹಿಡಿಸದೇ ಇದ್ದರೆ ಮೌನಕ್ಕೆ ಜಾರುತ್ತೇನೆ. ಚರ್ಚೆಗೆ ಕರೆದರೆ, ಮುಂದಿನ ವಾರ ಮಾತಾಡೋಣ ಎಂದು ಕೊಂಕಣ ಸುತ್ತಿಸುತ್ತೇನೆ. ವಿಮರ್ಶೆ ಕಟುವಾಗಿರಬೇಕು ಎಂಬುದನ್ನು ನಾನು ಒಪ್ಪಿಕೊಂಡರೂ ಅದು ನನ್ನಿಂದ ಸಾಧ್ಯವಿಲ್ಲ. ಹಾಗಂತ ಅದು ನನ್ನ ದೌರ್ಬಲ್ಯವೂ ಅಲ್ಲ’.

ಸಂಪ್ರದಾಯಸ್ಥ ದೇಹವನ್ನು ಆಧುನಿಕ ಉಡುಗೆಯಲ್ಲಿ ತೂರಿಸಿರುವ ವಿದ್ಯಾ ಮನಸ್ಸು ಮಾತ್ರ ದಕ್ಷಿಣ ಭಾರತದ ಹೆಣ್ಣುಮಗಳ ತರಹವೇ ಇದೆ. ಅಂದಹಾಗೆ, ಮದುವೆ ಯಾವಾಗ ಎಂದರೆ, ‘ಒಂಟಿ ಹೆಣ್ಣೇ ಸೆಕ್ಸಿ’ ಎಂದು ಅವರು ಕಣ್ಣು ಹೊಡೆಯುತ್ತಾರೆ.   
                           

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.