ADVERTISEMENT

ಹುಬ್ಬಿಗೊಂದು ಚಳವಳಿ

​ಪ್ರಜಾವಾಣಿ ವಾರ್ತೆ
Published 23 ಮೇ 2018, 19:30 IST
Last Updated 23 ಮೇ 2018, 19:30 IST
ಹುಬ್ಬಿಗೊಂದು ಚಳವಳಿ
ಹುಬ್ಬಿಗೊಂದು ಚಳವಳಿ   

ರೂಪದರ್ಶಿಯರಿಗೆ ಸೌಂದರ್ಯವೇ ಬಂಡವಾಳ. ತಮ್ಮ ರೂಪದ ಬಗ್ಗೆ ಹೆಚ್ಚೇ ಕಾಳಜಿ ವಹಿಸುವ ಅವರು, ತಮ್ಮ ಅಂದ ಹೆಚ್ಚಿಸಿಕೊಳ್ಳಲು ಎಷ್ಟೋ ಶಸ್ತ್ರಚಿಕಿತ್ಸೆಗಳ ಮೊರೆಹೋಗುತ್ತಾರೆ. ಆದರೆ ಸೋಫಿಯಾ ಎಂಬ ರೂಪದರ್ಶಿ ಮಾತ್ರ ಹಾಗಲ್ಲ. ಸೌಂದರ್ಯದ ಬಗ್ಗೆ ತನ್ನ ಭಿನ್ನ ನಿಲುವಿನಿಂದ ಹೆಸರಾಗಿದ್ದಷ್ಟೇ ಅಲ್ಲ, ಟೀಕೆಗೂ ಒಳಗಾದವರು.

ಇದೀಗ ಈಕೆ ಸುದ್ದಿಯಲ್ಲಿರುವುದು ‘ಯೂನಿಬ್ರೊ’ ಮೂವ್‍ಮೆಂಟ್‍ನಿಂದ. ಅಂದರೆ ಹುಬ್ಬಿನ ಕುರಿತ ಚಳವಳಿಯಿಂದ. ಮುಖದ ಸೌಂದರ್ಯದಲ್ಲಿ ತೀಡಿದ ಹುಬ್ಬಿಗೇ ಪ್ರಾಮುಖ್ಯ. ಅದನ್ನು ತಿದ್ದಿ ತೀಡಿದರೇನೇ ಮುಖಕ್ಕೆ ಕಳೆ ಎಂಬುದು ಎಷ್ಟೋ ಸೌಂದರ್ಯ ತಜ್ಞರ ಅಭಿಪ್ರಾಯ. ಜೊತೆಗೆ ಕೂಡಿಕೊಂಡಿರುವ ಹುಬ್ಬುಗಳನ್ನು ಹೊಂದಿದವರು ಸುಂದರವಾಗಿ ಕಾಣುವುದಿಲ್ಲ ಎಂಬ ಒಂದು ಅಪವಾದವೂ ಇದೆ.

ಆದರೆ ಸೋಫಿಯಾ ಅದಕ್ಕೆ ತಿರುಗೇಟು ನೀಡಿದ್ದಾರೆ. ಹುಬ್ಬಿನ ಕೂದಲನ್ನು ಹಾಗೇ ನೈಸರ್ಗಿಕವಾಗಿರಲು ಬಿಟ್ಟರೆ ಸೌಂದರ್ಯವೂ ನೈಸರ್ಗಿಕವಾಗಿಯೇ ಇರುತ್ತದೆ ಎಂಬುದನ್ನು ಸಾರಲೆಂದೇ ಈ ಅಭಿಯಾನವನ್ನು ಕೈಗೊಂಡಿದ್ದಂತೆ ಸೋಫಿಯಾ. 15ನೇ ವಯಸ್ಸಿಗೇ ಇಟಾಲಿಯನ್ ವೋಗ್ ವೆಬ್‍ಸೈಟ್‍ನಲ್ಲಿ ಕಾಣಿಸಿಕೊಂಡು ಸಂಚಲನ ಮೂಡಿಸಿದ್ದ ಸೋಫಿಯಾ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿರುವುದು ಇದೇ ಅಭಿಯಾನದಿಂದಲೇ.

ADVERTISEMENT

ಹೀಗೆ ಒಮ್ಮೆ ಹುಬ್ಬು ತೀಡಲೂ ಸಮಯವಿಲ್ಲದಷ್ಟು ಬಿಜಿಯಿದ್ದ ಸೋಫಿಯಾ, ಅಜ್ಜಿ ಮನೆಗೆ ಬಂದಿದ್ದರು. ಆಗ ಅಜ್ಜಿ, "ನೀನೆಷ್ಟು ಮುದ್ದಾಗಿ ಕಾಣ್ತಿದ್ದೀಯ. ಯಾವತ್ತೂ ನೈಸರ್ಗಿಕವಾಗಿರುವುದೇ ಹೆಚ್ಚು ಸುಂದರವಾಗಿ ಕಾಣುವುದು' ಎಂದು ಹೊಗಳಿದ್ದರಂತೆ. ಅದೇ ಸೋಫಿಯಾ ಮನದಲ್ಲಿ ಮತ್ತೆ ಮತ್ತೆ ಅನುರಣಿಸುವಂತೆ ಮಾಡಿದ್ದು. ಮತ್ತೆ ಎಂದಿಗೂ ಹುಬ್ಬನ್ನು ತೀಡಲೇ ಇಲ್ಲ, ಆದರೆ ವೃತ್ತಿಪರವಾಗಿ ರೂಪದರ್ಶಿಯಾದ್ದರಿಂದ ಇದಕ್ಕೆ ಸಾಕಷ್ಟು ಅವಕಾಶಗಳೂ ದೂರವಾದವು. ಆದರೆ ತನ್ನ ನಿಲುವನ್ನು ಬಿಡಲು ಒಪ್ಪಲಿಲ್ಲ. ಅದನ್ನೇ ಒಂದು ಅಭಿಯಾನದಂತೆ ಕೈಗೊಂಡರು.

‘ಪ್ರಕೃತಿ ಕೊಟ್ಟ ಸಹಜ ಸೌಂದರ್ಯವನ್ನು ತಿದ್ದಿ ತೀಡಲು ನಾವ್ಯಾರು? ಅದನ್ನೇ ಏಕೆ ಸಹಜ ಸುಂದರ ಎಂದುಕೊಳ್ಳಬಾರದು? ಸೌಂದರ್ಯ ಇರುವುದು ನಮ್ಮ ದೃಷ್ಟಿಕೋನದಲ್ಲಿ’ ಎಂದು ಮಾಡೆಲಿಂಗ್ ಲೋಕಕ್ಕೇ ಸೌಂದರ್ಯದ ಹೊಸ ವ್ಯಾಖ್ಯಾನ ಕೊಡಲು ಮುಂದಾಗಿದ್ದಾರೆ.

ಕೂಡಿಕೊಂಡಿರುವ ಹುಬ್ಬನ್ನು ತೀಡಿಸದೇ ದಟ್ಟವಾಗಿ ಬಿಡುವ ಮೂಲಕ ಅಭಿಯಾನ ಕೈಗೊಂಡಿದ್ದಾರಂತೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸೋಫಿಯಾಗೆ ಇದರಿಂದ ಸಾಕಷ್ಟು ಟೀಕೆಗಳೂ ಬರುತ್ತಿವೆಯಂತೆ. ಆದರೂ ‘ನನ್ನ ನಿಲುವು ಗಟ್ಟಿಯಾಗಿಯೇ ಇದೆ. ಪರ್ಫೆಕ್ಟ್ ಲುಕ್ ಪಡೆಯಲು ಸೌಂದರ್ಯದ ಹಿಂದೆ ಓಡುವ ಎಲ್ಲರೂ ಕೇಳಿಸಿಕೊಳ್ಳಿ, ಯಾವತ್ತೂ ಸಹಜವೇ ಸುಂದರ’ ಎಂದೂ ಒತ್ತಿ ಹೇಳಿದ್ದಾರೆ. ಈಗಾಗಲೇ ಈ ಅಭಿಯಾನಕ್ಕೆ 1,78,000 ಅಭಿಮಾನಿಗಳೂ ಜೊತೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.