ADVERTISEMENT

Interview| ದೆಹಲಿ – ಪಂಜಾಬ್‌ನಲ್ಲಿ ಆದ ಮ್ಯಾಜಿಕ್ ರಾಜ್ಯದಲ್ಲೂ ಆಗಲಿದೆ: ಪೃಥ್ವಿರೆಡ್ಡಿ

ಆಮ್‌ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿರೆಡ್ಡಿ ಸಂದರ್ಶನ

ಚಂದ್ರಹಾಸ ಹಿರೇಮಳಲಿ
Published 2 ಮೇ 2023, 19:20 IST
Last Updated 2 ಮೇ 2023, 19:20 IST
ಆಮ್‌ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿ ರೆಡ್ಡಿ –ಕೃಷ್ಣಕುಮಾರ್ ಪಿ.ಎಸ್‌.
ಆಮ್‌ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿ ರೆಡ್ಡಿ –ಕೃಷ್ಣಕುಮಾರ್ ಪಿ.ಎಸ್‌.   
ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿ, ಯೂರೋಪ್‌ನಲ್ಲಿ ಕೈತುಂಬ ಸಂಬಳ ಪಡೆಯುತ್ತಿದ್ದ ಪೃಥ್ವಿರೆಡ್ಡಿ ಅವರು ಆಮ್‌ ಆದ್ಮಿ ಪಕ್ಷದ ಸಂಪರ್ಕಕ್ಕೆ ಬಂದಿದ್ದು ಅನಿರೀಕ್ಷಿತ. ಲೋಕಾಯುಕ್ತ ನ್ಯಾಯಮೂರ್ತಿಯಾಗಿದ್ದ ಸಂತೋಷ್‌ ಹೆಗ್ಡೆ ಅವರ ಸೂಚನೆಯಂತೆ ರಾಜ್ಯದ ಪಡಿತರ ಸಮಸ್ಯೆಗಳ ಮಾಹಿತಿ ಕಲೆಹಾಕಲು ರಾಜ್ಯದಾದ್ಯಂತ ಪ್ರವಾಸ ಮಾಡಿದ್ದರು. ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಗುರುತಿಸಿಕೊಂಡಾಗ ಈಗಿನ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ಪರಿಚಿತರಾಗಿದ್ದರು. ಅಲ್ಲಿಂದ ಮುಂದೆ ಅವರ ಪಯಣ ಆಮ್‌ ಆದ್ಮಿ ಜತೆ ಸಾಗಿ ಬಂದಿದೆ. ಪ್ರಸ್ತುತ ಎಎಪಿಯ ರಾಜ್ಯ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಅವರು ‘ಪ್ರಜಾವಾಣಿ‘ಗೆ ನೀಡಿದ ಸಂದರ್ಶನದ ಸಂಕ್ಷಿಪ್ತ ಸಾರ ಇಲ್ಲಿದೆ. 

ರಾಜ್ಯದಲ್ಲಿ ಎಎಪಿ ಭವಿಷ್ಯವೇನು?

–ಬಡ, ಮಧ್ಯಮ ವರ್ಗಗಳಲ್ಲಿ ಮನೆಯ ಯಜಮಾನರು ಇಡೀ ಜೀವನ ದುಡಿದ ಹಣವನ್ನು ತಮ್ಮ ಮಕ್ಕಳ ಶಿಕ್ಷಣ ಹಾಗೂ ವೃದ್ಧ ಪೋಷಕರ ಆರೋಗ್ಯಕ್ಕೆ ಖರ್ಚು ಮಾಡುತ್ತಾರೆ. ತಮ್ಮ ಮಕ್ಕಳಿಗೆ ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದ ಗುಣಮಟ್ಟದ ಉಚಿತ ಶಿಕ್ಷಣ ದೊರೆತರೆ, ಆರೋಗ್ಯದ ಎಲ್ಲ ಸಮಸ್ಯೆಗಳಿಗೂ ಉಚಿತ ಚಿಕಿತ್ಸೆ ಪಡೆಯಲು ಸಾಧ್ಯವಾದರೆ ಬಡ, ಮಧ್ಯಮ ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಜತೆಗೆ, ಉಚಿತ ವಿದ್ಯುತ್‌, ಉಚಿತ ಸಾರಿಗೆ ಜನರ ಆರ್ಥಿಕ ಹೊರೆ ತಗ್ಗಿಸುತ್ತವೆ. ಇವೆಲ್ಲವನ್ನೂ ತನ್ನ ಆಡಳಿತವಿರುವ ರಾಜ್ಯಗಳಲ್ಲಿ ಮಾಡಿ ತೋರಿಸಿದ ಪಕ್ಷ ಎಎಪಿ. ಅಂತಹ ಅವಕಾಶಕ್ಕಾಗಿ ರಾಜ್ಯದ ಜನರೇ ಎಎಪಿ ಭವಿಷ್ಯ ರೂಪಿಸುವರು. 

ದೆಹಲಿ, ಪಂಜಾಬ್‌ ಮ್ಯಾಜಿಕ್‌ ಕರ್ನಾಟಕದಲ್ಲಿ ಸಾಧ್ಯವೇ?

ADVERTISEMENT

ಖಂಡಿತ ಸಾಧ್ಯವಿದೆ. ರಾಜ್ಯದಲ್ಲಿ ಜನರು ಬೆಲೆ ಏರಿಕೆಯಿಂದ ಜೀವನ ನಡೆಸುವುದೇ ಕಷ್ಟವಾಗಿದೆ. ದಶಕಗಳು ಆಡಳಿತ ನಡೆಸಿದ ಕಾಂಗ್ರೆಸ್ ಇಂದು 'ಗ್ಯಾರಂಟಿ' ಕೊಡುತ್ತಿದೆ. ಹಾಗಾದರೆ ಇಷ್ಟು ವರ್ಷಗಳು ಮಾಡಿದ್ದು ಏನು? ಕೇಂದ್ರ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಭರವಸೆಗಳ ಮಾಹಾಪೂರವನ್ನೇ ನೀಡಿದೆ. ಗುಜರಾತ್‌ನಲ್ಲಿ ಮಾದರಿ ಸರ್ಕಾರಿ ಶಾಲೆ ಇಲ್ಲದೇ ಪ್ರಧಾನಿ ಮೋದಿ ಅವರು ಫೋಟೋ ತೆಗೆಸಿಕೊಳ್ಳುವುದಕ್ಕೆ ಮಾದರಿ ಶಾಲೆಯೇ ಇಲ್ಲದೇ ಸ್ಟುಡಿಯೊ ಮೊರೆ ಹೋಗಿದ್ದರು. ರಾಜ್ಯದಲ್ಲಿ ರಾಜಕಾರಣಿಗಳ ಒಡೆತನದಲ್ಲಿ ಇರುವ ಖಾಸಗಿ ಸಂಸ್ಥೆಗಳಿಗೆ ಲಾಭ ಮಾಡಿಕೊಡಲು ಸರ್ಕಾರಿ ಶಾಲೆ, ಆಸ್ಪತ್ರೆಗಳನ್ನು ಕಡೆಗಣಿಸಲಾಗಿದೆ. ಗೆದ್ದ ಪಕ್ಷಗಳು ಗುತ್ತಿಗೆದಾರರ, ಕಾರ್ಪೋರೇಟ್‌ ವಲಯದ ಕೆಲಸ ಮಾಡುತ್ತಿವೆ. ಎಎಪಿ ಪ್ರಣಾಳಿಕೆಗೂ, ನಡೆಗೂ ಯಾವ ವ್ಯತ್ಯಾಸವೂ ಇಲ್ಲ. ಜಿಲ್ಲಾವಾರು, ಕ್ಷೇತ್ರವಾರು ಪ್ರಣಾಳಿಕೆ ನೀಡಿದೆ. ಪಕ್ಷದ ಪ್ರಣಾಳಿಕೆ ರಾಜಕೀಯ ಚರ್ಚೆಯನ್ನೇ ಬದಲಾಯಿಸಿದೆ.  

ಗುಜರಾತ್ ಫಲಿತಾಂಶ ಉಲ್ಲೇಖಿಸಿರುವ ಕಾಂಗ್ರೆಸ್ ಮುಖಂಡರು ಎಎಪಿಯನ್ನು ಬಿಜೆಪಿಯ ಬಿ ಟೀಂ ಎನ್ನುತ್ತಿದ್ದಾರಲ್ಲ?

ಜನರಿಗೆ ಅಗತ್ಯವಿರುವ ಕೆಲಸ ಮಾಡದ, ಜನರನ್ನು ತಲುಪುವಲ್ಲಿ ವಿಫಲವಾದ ಪಕ್ಷಗಳ ನಾಯಕರು ತಮ್ಮ ವೈಫಲ್ಯವನ್ನು ಇತರರ ಮೇಲೆ ಹಾಕುತ್ತಾರೆ. ಗುಜರಾತ್‌ನಲ್ಲೂ ಅದೇ ಆಗಿದೆ. ಬಿಜೆಪಿ ವಿರೋಧಿಸುವವರು ಅನಿವಾರ್ಯವಾಗಿ ಕಾಂಗ್ರೆಸ್ ಬೆಂಬಲಿಸುತ್ತಿದ್ದರು. ಈಗ ಎಎಪಿ ಅವರಿಗೆ ಪರ್ಯಾಯ ಶಕ್ತಿಯಾಗಿದೆ. ನಾವು ಯಾರ ಬಿ ಟೀಂ ಅಲ್ಲ, ನಾವು ಜನರ ಎ ಟೀಂ. 

ಕೆಲವರು ಹೊರಗೆ ಹೋಗುತ್ತಿದ್ದಾರಲ್ಲ?

ಯಾರೋ ಒಬ್ಬಿಬ್ಬರು ವಾಪಸ್‌ ಹೋದರೆ ಏನು ಮಾಡುವುದು. ಒಬ್ಬರು ಹೊರ ಹೋದರೆ ಸಾವಿರಾರು ಜನರು ಪಕ್ಷಕ್ಕೆ ಬರುತ್ತಿದ್ದಾರೆ. ಸಾಮಾನ್ಯ ಜನರು ಗೆಲ್ಲಲು ಸಾಧ್ಯವಿರುವುದು ಎಎಪಿಯಲ್ಲಿ ಮಾತ್ರ. ಪಂಜಾಬ್‌ನಲ್ಲಿ 82 ಹೊಸಬರು ಶಾಸಕರಾದುದು ಇತಿಹಾಸ. ರಾಜ್ಯದಲ್ಲೂ ಯುವಕರು, ಮಹಿಳೆಯರು, ಕಾರ್ಮಿಕರು, ಕೆಎಸ್‌ಆರ್‌ಟಿಸಿ ಸಿಬ್ಬಂದಿ, ಅಲ್ಪಸಂಖ್ಯಾತರು, ಬಡವರು ಅಭ್ಯರ್ಥಿಗಳಾಗಿರುವುದು ಇದಕ್ಕೆ ಸಾಕ್ಷಿ.

ಜಾತಿ, ಧರ್ಮ, ಹಣ ಬಲಗಳ ಚುನಾವಣೆಗೆ ಮುಕ್ತಿ ಸಿಗುವುದೇ?

ಪ್ರತಿಯೊಂದು ಸಮಸ್ಯೆಗೆ ಹತ್ತು ಪರಿಹಾರ ಇರುತ್ತವೆ. ನಿಯತ್ತು ಇದ್ದಾಗ ಆ ಪರಿಹಾರ ಸಾಧ್ಯ. ತಾಳ್ಮೆಯಿಂದ ಕಾಯಬೇಕಷ್ಟೆ. ಎಎಪಿ ದೆಹಲಿ ಚುನಾವಣೆಗೆ ನಿಂತಾಗ ಎಲ್ಲರ ಮಾತು ಇದೇ ಆಗಿತ್ತು. ಈಗ ಉತ್ತರ ಸ್ಪಷ್ಟವಾಗಿದೆ. ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ನ್ಯಾಯದ ಧ್ವನಿಗಳನ್ನು ಹತ್ತಿಕ್ಕುತ್ತಿದೆ. ಯಾರು ಏನೇ ಮಾಡಿದರೂ ನ್ಯಾಯ, ಪ್ರಾಮಾಣಿಕತೆಗಳೇ ಗೆಲ್ಲಲಿವೆ. 

ಆಮ್‌ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿ ರೆಡ್ಡಿ –ಕೃಷ್ಣಕುಮಾರ್ ಪಿ.ಎಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.