ADVERTISEMENT

ಸಾಹಿತ್ಯದ ಒಡನಾಟದಲ್ಲಿ...

ನನ್ನ ಕಥೆ

ಗಿರಿರಾಜ್‌/ ನಿರೂಪಣೆ: ವಿದ್ಯಾಶ್ರೀ ಎಸ್‌.
Published 25 ಸೆಪ್ಟೆಂಬರ್ 2013, 19:59 IST
Last Updated 25 ಸೆಪ್ಟೆಂಬರ್ 2013, 19:59 IST

ತೇಜಸ್ವಿ, ಶಿವರಾಮ ಕಾರಂತರ ಕೃತಿಗಳನ್ನು ಓದುತ್ತಲೇ ಬೆಳೆದ ನನಗೆ ಅವರಂತೆಯೇ ಕಥೆಯ ಮೂಲಕ ಜನರನ್ನು ತಲುಪಬೇಕೆಂಬ ಹಂಬಲ. ಆ ವಾಂಛೆಯೇ ನಾನು  ಸಿನಿಮಾ ಕ್ಷೇತ್ರದತ್ತ ಸಾಗಲು ಪ್ರೇರೇಪಿಸಿತು.

ನಾನು ಹುಟ್ಟಿದ್ದು ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರದಲ್ಲಿ. ಆದರೆ ಸ್ವಂತ ಊರು ಮತ್ತೊಂದು ತುದಿಯ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ. ಅಪ್ಪ ಮಹದೇವ ಮಲ್ಲ ಖಾಸಗಿ ಕಂಪೆನಿಯೊಂದರ ಉದ್ಯೋಗಿ.  ಆ ಉದ್ಯೋಗದ ಅಲೆದಾಟದಿಂದಲೇ ನನಗೆ ಬಹು ಭಾಗದ ಗ್ರಾಮ್ಯ ಭಾಷೆ ಮತ್ತು ಪ್ರದೇಶಗಳ ಜೊತೆ ನಂಟು ಬೆಸೆಯಲು ಮೂಲವಾಯಿತು.

ಕರಾವಳಿ ಮತ್ತು ಮಲೆನಾಡಿನ ಸುಂದರ ಪರಿಸರ ಬಾಲ್ಯವನ್ನು ರೂಪಿಸಿತು. ಅಚ್ಚ ಕಾನನದೊಳಗಿನ ವಿಹಾರಿಯಾಗಿ ಸ್ವಚ್ಛಂದವಾಗಿ ಬೆಳೆದೆ. ಕಾರ್ಕಳ ತಾಲ್ಲೂಕಿನ ಹೆಬ್ರಿಯ ನವೋದಯ ಶಾಲೆಯಲ್ಲಿ 6 ರಿಂದ 10ನೇ ತರಗತಿವರೆಗೆ  ಪಠ್ಯಾಭ್ಯಾಸ ಮಾಡಿದೆ. ಒಂಬತ್ತನೇ ತರಗತಿಯಲ್ಲಿರುವಾಗ ‘ಪ್ಯಾರಾನ್ಯಾಯ್ಡ ಡೆಲ್ಯುಷನ್ಸ್’ ಎಂಬ ಕಾಯಿಲೆಗೆ ತುತ್ತಾದೆ. ಭಾವನೆಗಳಲ್ಲಿಯೇ ಜೀವಿಸುವುದು ಈ ಕಾಯಿಲೆಯ ಲಕ್ಷಣ.

ಈ ಸಮಯದಲ್ಲಿಯೇ ಹೆಚ್ಚೆಚ್ಚು ಪುಸ್ತಕಗಳನ್ನು ಓದಲು ಪ್ರಾರಂಭಿಸಿದೆ. ನಂತರ ನಿಮ್ಹಾನ್ಸ್‌ ಮತ್ತು ಸ್ಪಂದನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದೆ. ಕಾಯಿಲೆ ಗುಣವಾಯಿತು. ಆದರೆ ನನ್ನ ಓದುವ ಹವ್ಯಾಸ ದೂರವಾಗಲಿಲ್ಲ.   ದೇವನೂರು ಮಹದೇವ, ತೇಜಸ್ವಿ, ಕಾರಂತರು ಮೆಚ್ಚಿನ ಲೇಖಕರು.

ಎಸ್ಸೆಸ್ಸೆಲ್ಸಿ ಮುಗಿದ ನಂತರ ಅಪ್ಪನಿಗೆ ಬೆಂಗಳೂರಿಗೆ ವರ್ಗವಾಯಿತು. ಶೇಷಾದ್ರಿಪುರಂ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಸೆಂಟ್ ಜಾನ್ಸ್ ಕಾಲೇಜಿನಲ್ಲಿ ಬಿ.ಕಾಂ ಪದವಿಗೆ ಸೇರಿದೆ. ಬಾಲ್ಯದಿಂದಲೇ ನಾನು ಕಲೆಯ ಆರಾಧಕನಾಗಿದ್ದೆ. ಯಕ್ಷಗಾನ ಮತ್ತು ನಾಟಕಗಳನ್ನು ನೋಡುತ್ತಲೇ ಬೆಳೆದವನು ನಾನು. ಕಾಲೇಜು ದಿನಗಳಲ್ಲಿಯೇ ನನ್ನ ಕಲಾಸಕ್ತಿಗೆ ಮೂರ್ತ ರೂಪ ಬಂದಿದ್ದು.

ಸ್ನೇಹಿತರೆಲ್ಲ ಸೇರಿ ‘ಭೂಮಿ’ಎಂಬ ರಂಗ ತಂಡ  ಕಟ್ಟಿಕೊಂಡೆವು. ‘ಭೂಮಿ’ ನನ್ನೊಳಗಿನ ಕಲೆಯನ್ನು ವಿಸ್ತರಿಸಿದ ಭೂಮಿಕೆ. ಸಮಾನ ಮನಸ್ಕರೆಲ್ಲ ಕೂಡಿ ಕಟ್ಟಿದ ತಂಡ. ಮಹಿಳೆಯರ ಪರ ದನಿ ಮತ್ತು ಮಕ್ಕಳ ಹಕ್ಕು ಸೇರಿದಂತೆ ಸಾಮಾಜಿಕ ವಸ್ತು ವಿಷಯಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ‘ಭೂಮಿ’ಯದ್ದು.

ಸಿಪಾಯಿಗಳ ಕಥೆಯನ್ನು ಹೇಳುವ ‘ಜನಾಗ್ರ’ ನಾನೇ ಬರೆದು ನಿರ್ದೇಶಿಸಿದ  ನನ್ನ ಮೊದಲ ನಾಟಕ. ಇದರ ಜೊತೆಗೆ ಸಾಮಾಜಿಕ ಜಾಗೃತಿಗೆ ಸಂಬಂಧಿಸಿದ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಬೀದಿ ನಾಟಕಗಳನ್ನು ಹಳ್ಳಿ ಹಳ್ಳಿಗಳಲ್ಲಿ ಅಭಿನಯಿಸಿದ್ದೇವೆ. ಕಾಲೇಜು ಹಂತದಲ್ಲಿ ನಮ್ಮ ತಂಡ ಪ್ರದರ್ಶಿಸಿದ ನಾಟಕಕ್ಕೆ 21 ಪ್ರಶಸ್ತಿ ಲಭಿಸಿತು.

ಅಪ್ಪನ ನೌಕರಿಯ ಕಾರಣದಿಂದ  ತಿರುಗಾಟಕ್ಕೆ ಒಗ್ಗಿಕೊಂಡವನಿಗೆ, ನನ್ನ ನಾಟಕಗಳಿಗಾಗಿ ಹಳ್ಳಿ ಸುತ್ತುವುದು ಹೊಸ ರೀತಿಯ ಅನುಭವ ನೀಡಿತು. ಬಾಲ್ಯದಿಂದಲೂ ಪಠ್ಯ ವಿಷಯಗಳಲ್ಲಿ ಅಷ್ಟಕಷ್ಟೆ. ಕಾಲೇಜಿನ ಆವರಣಕ್ಕೆ ಹಾಜರಾದರೂ ತರಗತಿಗಳಿಗೆ  ಮಾತ್ರ ಗೈರು. ಆ ವೇಳೆಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತು ಗ್ರಂಥಾಲಯಗಳಲ್ಲಿ ಅಭ್ಯಾಸಕ್ಕೆ    ಮೀಸಲಿಡುತ್ತಿದ್ದೆ.

ನಾನು ಓದಿ ಉತ್ತಮ ಕೆಲಸಕ್ಕೆ ಸೇರಬೇಕೆಂಬ ಆಸೆ ಕುಟುಂಬದ್ದು. ಆದರೆ ನಾಟಕದ ಗೀಳು ಪೋಷಕರ ಆಸೆಯನ್ನು ನನ್ನಿಂದ ದೂರಮಾಡಿತು. ಎಲ್ಲರಿಗೂ ಪದವಿ ಪಡೆದು ಕೆಲಸ ಗಳಿಸುವ ಆಕಾಂಕ್ಷೆ ಇದ್ದರೆ, ನಾನು ಈ ನಿಲುವಿಗೆ ವಿರುದ್ಧ.  ಒಂದು ವೇಳೆ ಪದವಿ ಪೂರ್ಣಗೊಳಿಸಿದರೆ  ಕೆಲಸ ದೊರಕುತ್ತದೆ. ಇಲ್ಲವಾದರೆ ಮನೆಯವರಾದರೂ ಒಂದು ಕೆಲಸ ಕೊಡಿಸುತ್ತಾರೆ.

ADVERTISEMENT

ನನ್ನ ಆಸೆಗಳೆಲ್ಲ ಕಮರುತ್ತವೆ ಎನ್ನುವ ಭಯ. ಹಾಗಾಗಿಯೇ ಪದವಿಯಲ್ಲಿ ಅನುತ್ತೀರ್ಣನಾದೆ. ಪದವಿ ಹಂತದಲ್ಲಿರುವಾಗಲೇ ನನ್ನ ಗುರಿಯ ಬಗ್ಗೆ ಸ್ಪಷ್ಟತೆ ಇದ್ದ ಕಾರಣದಿಂದಲೇ ನಾನು ಈ ನಿರ್ಧಾರ ಮಾಡಿದ್ದು. ಸಿನಿಮಾದಲ್ಲಿ ಬಣ್ಣ ಹಚ್ಚಲು ಆಸೆ. ನಾಯಕ ನಟನಾಗುವಷ್ಟು ನಾನು ಸುಂದರವಾಗಿರಲಿಲ್ಲ. ಯಾರಾದರೂ ನಟಿಸುವ ಅವಕಾಶ ನೀಡಿದರೂ ಖಳನಾಯಕನ ಪಾತ್ರ ನೀಡುತ್ತಾರೆ. ನನಗೆ ಅಂತಹ ಪಾತ್ರಗಳ ಬಗ್ಗೆ ಆಸಕ್ತಿ ಇರಲಿಲ್ಲ.   ಆಗ ಮೊಳೆತದ್ದು   ನಿರ್ದೇಶಕನಾಗುವ ಕನಸು. ಕಥೆಯನ್ನು ಬರೆಯುತ್ತಿದ್ದರಿಂದ ನಿರ್ದೇಶನದ ಬಗ್ಗೆ ವಿಶ್ವಾಸವಿಟ್ಟೆ.

ನಾಗಾಭರಣ ಅವರ ನಿರ್ದೇಶನದ ‘ಮನಸೇ ಓ ಮನಸೇ’ ಮತ್ತು ‘ಮಹಾಮಾಯೆ’ ಧಾರಾವಾಹಿಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದೆ. ನಂತರ ‘ಮೊಗ್ಗಿನ ಮನಸು’ ಮತ್ತು ‘ಕೃಷ್ಣನ್ ಲವ್ ಸ್ಟೋರಿ’ ಚಿತ್ರದಲ್ಲಿ ಸಹಾಯಕ ನಿರ್ದೇಶನದ ಜೊತೆಗೆ ಪಾತ್ರ ನಿರ್ವಹಣೆಯ ತರಬೇತುದಾರನ ಹೊಣೆ ಹೊತ್ತೆ.

ಸಾಹಿತ್ಯದಲ್ಲಿ ಆಸಕ್ತಿ ಇರುವವರೂ ಸಾಮಾನ್ಯವಾಗಿ ಕಲಾತ್ಮಕ ಸಿನಿಮಾಗಳ ನಿರ್ದೇಶನದಲ್ಲಿ ಆಸ್ಥೆ ವಹಿಸುತ್ತಾರೆ. ಆದರೆ ನನಗೆ ವ್ಯಾಪಾರಿ ಮತ್ತು ಕಲಾತ್ಮಕ ಸಿನಿಮಾಗಳಲ್ಲಿ ಅಂತಹ ವ್ಯತ್ಯಾಸಕಾಣಿಸುವುದಿಲ್ಲ. ಸಿನಿಮಾ ಜನರ ಮನಸ್ಸಿನಲ್ಲಿ ಅಚ್ಚೊತ್ತುವ  ಜತೆಗೆ ಚಲನಶೀಲ   ಗುಣ ಹೊಂದಿರಬೇಕು. ಚಿತ್ರಮಂದಿರದಿಂದ ಹೊರಗೆ ಬಂದರೂ ಸಿನಿಮಾದ ಕಥೆ ಜನರನ್ನು ಕಾಡುತ್ತಿರಬೇಕು. ಸಿನಿಮಾ ಉದರ ಮತ್ತು ಉದ್ಧಾರ ಎರಡಕ್ಕೂ ದಾರಿಯಾಗಬೇಕು ಎಂಬುದು ನನ್ನ ಪ್ರತಿಪಾದನೆ.

ನಿರ್ದೇಶನದ ಕನಸು ತಲೆಯಲ್ಲಿ ಹೊಕ್ಕಿದ್ದರೂ ಬರವಣಿಗೆಗೆ ಮಾತ್ರ ವಿರಾಮ ನೀಡಿರಲಿಲ್ಲ. ನಾನು ಬರೆದ ‘ಕಥೆಗೆ ಸಾವಿಲ್ಲ’ ಎಂಬ ಕಾದಂಬರಿಗೆ 2008-–09ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ಲಭಿಸಿತು. ಪ್ರಶಸ್ತಿಯ ಜೊತೆಗೆ 10,000 ನಗದನ್ನು ಬಹುಮಾನವಾಗಿ ನೀಡಿದರು. ಈ ಹಣದ ಜೊತೆಗೆ ನಾನು ಕೂಡಿಟ್ಟಿದ್ದ 25 ಸಾವಿರ ರೂಪಾಯಿ ಸೇರಿಸಿ ಕೋಮು ಸೌಹಾರ್ದತೆ  ಬಿಂಬಿಸುವ ‘ನವಿಲಾದವರು’ ಎಂಬ ಸಿನಿಮಾ ನಿರ್ದೇಶಿಸಿದೆ. ವಿಮರ್ಶಕರಿಂದ ಸಿನಿಮಾದ ಕುರಿತು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

20 ವರ್ಷದವನಿದ್ದಾಗ ಬರೆದ ಸ್ತ್ರೀ ಹಕ್ಕುಗಳನ್ನು ಪ್ರತಿಪಾದಿಸುವ ‘ಎಲ್ಲೋ ಹುಟ್ಟಿ ಎಲ್ಲೋ ಬೆಳೆದು’ ಎಂಬ ಕಥೆಗೆ ಪ್ರಜಾವಾಣಿ ದೀಪಾವಳಿ ವಿಶೇಷಾಂಕ ಸ್ಪರ್ಧೆಯಲ್ಲಿ ಪ್ರಶಸ್ತಿ ಒಲಿಯಿತು. ಸಮಯ ಸಿಕ್ಕಾಗಲೆಲ್ಲ ಸಣ್ಣ ಕಥೆಗಳನ್ನು ಗೀಚುತ್ತಿರುತ್ತೇನೆ. ಒಂದು ಕಾದಂಬರಿ ಸೇರಿದಂತೆ 20 ಕಥೆಗಳನ್ನು ಬರೆದಿದ್ದೇನೆ. ಈ ಕಥೆಗಳನ್ನೆಲ್ಲ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸುವ ಕನಸಿದೆ.

ನವಿಲಾದವರು ಸೇರಿದಂತೆ ಜಟ್ಟ, ಅದ್ವೈತ, ಮೈತ್ರೇಯಿ ಸಿನಿಮಾವನ್ನು ನಿರ್ದೇಶಿಸಿದೆ.  ನಾನು ನಿರ್ದೇಶಿಸಿದ ನಾಟಕ ಮತ್ತು ಬರೆದ ಕಥೆಗಳು ಸಾಮಾನ್ಯವಾಗಿ ಮಹಿಳಾ ಕೇಂದ್ರಿತವಾಗಿರುತ್ತದೆ. ಪುರುಷ ಸಮಾಜ ಶೋಷಕ ವರ್ಗದಲ್ಲಿರುತ್ತದೆ. ಅದರ ಒಂದು ಭಾಗ ನಾನು ಎಂಬುದು ಕೂಡ ಸತ್ಯ. ಆ ಪಾಪ ಪ್ರಜ್ಞೆಯೇ ಇದಕ್ಕೆ ಕಾರಣವಿರಬಹುದೇನೋ ನಾನರಿಯೆ.

  ಬಿಡುವಿದ್ದರೆ ಹವ್ಯಾಸಗಳು ಹುಟ್ಟಿಕೊಳ್ಳುತ್ತವೆ. ಆದರೆ ನನಗೆ ಬಿಡುವೇ ಸಿಗುವುದಿಲ್ಲ. ಹಾಗಾಗಿ ಯಾವುದೇ ಹವ್ಯಾಸಗಳನ್ನು ರೂಢಿಸಿಕೊಂಡಿಲ್ಲ. ಸಾಕಷ್ಟು ಪುಸ್ತಕಗಳನ್ನು ಓದುತ್ತಿರುತ್ತೇನೆ. ಆದರೆ ಅದು ಹವ್ಯಾಸವಲ್ಲ, ನನ್ನ ಬದುಕಿನ ಒಂದು ಭಾಗ. ಇನ್ನು, ನನ್ನದು ಪ್ರೇಮ ವಿವಾಹ. ಒಬ್ಬ ಮಗನಿದ್ದಾನೆ. ಅವನ ಹೆಸರು ಕಬೀರ್. ಒಟ್ಟಿನಲ್ಲಿ ನಮ್ಮದು ಸುಖಿ ಸಂಸಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.