ADVERTISEMENT

ಮನ ತೋಯಿಸಿದ ‘ಮಳೆಹಬ್ಬ’

ಪರಿಶುದ್ಧ ಪ್ರವಾಸೋದ್ಯಮದ ಪರಿಕಲ್ಪನೆ

ಇಂದ್ರಜಿತ್‌ ಶಾಂತರಾಜ್‌
Published 18 ಜುಲೈ 2018, 19:30 IST
Last Updated 18 ಜುಲೈ 2018, 19:30 IST
ಕೆಸರು ಗದ್ದೆಯಲ್ಲಿ ಕಬ್ಬಡ್ಡಿ ಆಟ. – (ಚಿತ್ರಗಳು: ಎನ್ವೀ ವೈದ್ಯಹೆಗ್ಗಾರ್‌)
ಕೆಸರು ಗದ್ದೆಯಲ್ಲಿ ಕಬ್ಬಡ್ಡಿ ಆಟ. – (ಚಿತ್ರಗಳು: ಎನ್ವೀ ವೈದ್ಯಹೆಗ್ಗಾರ್‌)   

ಮಲೆನಾಡಿನಲ್ಲಿ ಮಳೆಯೆಂದರೆ ಬರೀ ನೀರಲ್ಲ. ಅದು ಜೀವನ ಪ್ರೀತಿಯ ರಸಧಾರೆ. ಮಳೆಗಾಲದ ಕಾಡಿನ ಚೆಲುವು ಒಂದು ಅದ್ಭುತ ಸೃಷ್ಟಿ ಕಾವ್ಯ. ಇಂಥ ಅನನ್ಯ ಸೊಬಗನ್ನು ಪರಿಚಯಿಸುವ, ಪರಿಶುದ್ಧ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದೇ ‘ಮಳೆ ಹಬ್ಬ’ದ ಉದ್ದೇಶ. ಇತ್ತೀಚೆಗೆ ಶಿರಸಿಯ ವಾನಳ್ಳಿ ಸಮೀಪದ ಹೋಮ್ ಸ್ಟೇ ಸುತ್ತ ಆಯೋಜಿಸಿದ್ದ ‘ಮಳೆ ಹಬ್ಬ’ದಲ್ಲಿ ಪತ್ರಕರ್ತರಿದ್ದರು, ಐಟಿ, ಬಿಟಿ ಉದ್ಯೋಗಿಗಳು, ಕಿರುತರೆ ನಟರು-ತಾಂತ್ರಿಕ ವರ್ಗದವರಿದ್ದರು. ನನ್ನ ಹಾಗೆ ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುವವರಿದ್ದರು. ಶಿಕ್ಷಕರು, ವಿದ್ಯಾರ್ಥಿಗಳೂ ಇದ್ದರು. ಗುಲ್ಬರ್ಗ, ಬಳ್ಳಾರಿ, ಮಂಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಿಂದ ಹಬ್ಬದಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಮಳೆ ಹಬ್ಬಕ್ಕಾಗಿ ‘ಮಿನಿ ಕರ್ನಾಟಕ’ವೊಂದು ಅಲ್ಲಿ ಅನಾವರಣಗೊಂಡಿತ್ತು.

ಒಂದೆಡೆ ಹಚ್ಚ ಹಸಿರಿನ ದಟ್ಟ ಕಾಡು. ಇನ್ನೊಂದೆಡೆ ಜಿಟಿ ಜಿಟಿ ಮಳೆ. ಮತ್ತೊಂದೆಡೆ ರಭಸವಾಗಿ ಭೋರ್ಗರೆಯುವ ಜಲಪಾತ. ಇವೆಲ್ಲ ನೋಡಿದ ಮನಸ್ಸು ಖುಷಿಯಿಂದ ಒದ್ದೆಯಾಯಿತು. ನೀರಿಗಿಳಿದು ಆಟವಾಡುತ್ತಿದ್ದ ನಮ್ಮನ್ನು , ಸಾಹಸ ಕ್ರೀಡೆಯತ್ತ ಕರೆದೊಯ್ಯದರು ದಾಂಡೇಲಿಯ ಸಾಹಸ ಕ್ರೀಡೆಗಳ ತಜ್ಞರು.

ಏನೋ ಗೆದ್ದ ಸಂಭ್ರಮ
ಜಲಪಾತದ ಮೇಲ್ಭಾಗದಲ್ಲಿ ನಿಂತು, ‘ಸೊಂಟಕ್ಕೆ ಹಗ್ಗ ಕಟ್ಟಿಕೊಂಡು, ಇಲ್ಲಿಂದ ಕೆಳಗೆ ಇಳಿಯಬೇಕು’ ಎಂದರು ತಜ್ಞರು. ಅವರ ಮಾತು ಕೇಳಿ ಎಲ್ಲರ ಎದೆಯಲ್ಲಿ ಧಸಕ್ ಎಂದಿತು. ಇನ್ನು ತಲೆ, ಕೈಗೆ ಮತ್ತು ಕಾಲಿಗೆಲ್ಲ ರಕ್ಷಣಾ ಕವಚಗಳನ್ನು ತೊಡಿಸುತ್ತಿದ್ದಾಗ, ಎದೆಯಲ್ಲಿ ನಡುಕ. ಒದ್ದೆಯಾದ ಬಂಡೆಗಳು, ಪಾಚಿಕಟ್ಟಿದ ಕಲ್ಲುಗಳು... ಇವೆಲ್ಲದರ ಮೇಲೆ ಇಳಿಯೋದು ಹೇಗಪ್ಪಾ, ಅಂತ ಯೋಚಿಸುತ್ತಿರುವಾಗಲೇ, ಒಂದಿಬ್ಬರು ಸಹ ಶಿಬಿರಾರ್ಥಿಗಳು ಹಾಗೆ ಜಾರಿದರು. ಆದರೆ ಸೊಂಟಕ್ಕೆ ಗಟ್ಟಿಯಾದ ಹಗ್ಗ ಕಟ್ಟಿದ್ದರಿಂದ ಯಾವುದೇ ತೊಂದರೆಯಿರಲಿಲ್ಲ.

ADVERTISEMENT

‘ನಾನು ಇಳಿಯಲ್ಲ. ವಾಪಸ್ ಕರ್ಕೊಳ್ಳಿ..’ – ಎಂದು ಮಹಿಳೆಯೊಬ್ಬರು ಅರ್ಧ ಜಲಪಾತ ಇಳಿದ ಮೇಲೆ ಕೂಗುತ್ತಿದ್ದರು. ಕೊನೆಗೂ ಸಾಹಸ ತಜ್ಞರು ಅವರಿಗೆ ಧೈರ್ಯ ತುಂಬಿ ಕೆಳಗಿಳಿಸಿದರು. ನಂತರ ನನ್ನ ಸರದಿ. ಹೆದರಿಕೆಯಿಂದಲೇ ಹಗ್ಗ ಹಿಡಿದು ಇಳಿಯಲು ಆರಂಭಿಸಿದೆ. ಕೈ, ಕಾಲುಗಳ ಚಲನೆ ಮತ್ತು ದೇಹವನ್ನು ಬಂಡೆಗಳ ವಿರುದ್ದ ದಿಕ್ಕಿನಲ್ಲಿ ಬ್ಯಾಲೆನ್ಸ್ ಮಾಡುತ್ತಾ, ಇಳಿಯುವುದು ಸಾಹಸದ ಕೆಲಸ. ಪಾಚಿಗಟ್ಟಿದ ಬಂಡೆಗಳ ಮೇಲೆ ಎರಡು ಸಲ ಜಾರಿದೆ. ನೀರಿನ ಸೆಳೆತ. ಕೆಳಗೆ ನಿಂತ ಸ್ನೇಹಿತರು ಎಡ, ಬಲ ಎಂಬ ಮಾರ್ಗದರ್ಶನ. ಅಂತೂ ಇಂತೂ ಜಲಪಾತದ ತಳ ತಲುಪಿ ಕೆಳಗೆ ಕಾಲಿಟ್ಟೆ. ಆಗ ಪ್ರಪಂಚವನ್ನೇ ಗೆದ್ದ ಸಂಭ್ರಮ ನನ್ನದಾಯಿತು.

ಮೊದಲ ದಿನದ ಮಳೆ ಹಬ್ಬದಲ್ಲಿ ಸಾಹಸ ಕ್ರೀಡೆಗಳು, ದೇಹವನ್ನು ದಂಡಿಸಿದೆವು. ಮನಸ್ಸನ್ನು ಪ್ರಫುಲ್ಲಗೊಳಿಸಿದೆವು. ದಣಿದ ದೇಹಕ್ಕೆ ಹೋಮ್‌ಸ್ಟೇನಲ್ಲಿ ಹಂಡೆ ಬಿಸಿನೀರಿನ ಸ್ನಾನ. ಹಸಿದ ಹೊಟ್ಟೆಗೆ ಮಧ್ಯಾಹ್ನ ಹಲಸಿನ ಹಣ್ಣಿನ ಕಡುಬು, ಅತ್ರಾಸ, ತಂಬುಳಿ, ಮಿಡಿ ಉಪ್ಪಿನಕಾಯಿ, ಕೆಂಪನೆ ಅನ್ನ ಮತ್ತು ತರಕಾರಿ ಸಾರು. ನಳ ಮಹಾರಾಜನೆ ಬಂದು ಅಡುಗೆ ಮಾಡಿ ಬಡಿಸಿದ ಹಾಗಿತ್ತು.

ಎರಡನೇ ದಿನದ ಮುಂಜಾನೆ, ನಮ್ಮನ್ನು ಮಂಜಿನ ಹನಿಗಳು ಸ್ವಾಗತಿಸಿದೆವು. ನಮ್ಮನ್ನು ಸ್ವಾಗತಿಸಿದವು. ಬಿಸಿ ನೀರಿನ ಸ್ನಾನದ ನಂತರ ಮಲೆನಾಡು ಹಳ್ಳಿಗಳ ಸಾಂಪ್ರದಾಯಿಕ ಉಪಹಾರ. ಒಲೆಯ ಸುತ್ತ ಕುಳಿತ ನಾವು ಪಲ್ಯ, ಚಟ್ನಿ, ಜೇನುತುಪ್ಪದೊಂದಿಗೆ ಬಿಸಿ ಬಿಸಿಯಾದ ಈರುಳ್ಳಿ ದೋಸೆಗಳನ್ನು ಹೊಟ್ಟೆಗಿಳಿಸಿದೆವು.

ಪ್ಯಾಟೆ ಹೈಕಳ ಹಳ್ಳಿ ಲೈಫ್!
ಎರಡನೇ ದಿನ ಕೆಸರುಗದ್ದೆ ಕಡೆ ನಮ್ಮ ಪಯಣ. ಕಂದು ಬಣ್ಣದ ನೀರಿನಡಿ, ಮರಳು, ಅಂಟು ಮಿಶ್ರಿತ ಕೆಸರಿನ ಗದ್ದೆ ನಮಗಾಗಿ ಕಾಯುತ್ತಿತ್ತು. ಮಂಡೆ ಹಾಳೆ, ಕಂಬ್ಳಿ ಕೊಪ್ಪೆ, ನಾಟಿ ಮಾಡಲು ಸಸಿ, ಕೆಸರುಗದ್ದೆ ಉಳುಮೆಗೆ ನೇಗಿಲು, ಎತ್ತುಗಳು.. ಮುಂಗಾರು ಕೃಷಿ ಚಟುವಟಿಕೆ ಕಲಿಸಲು ಎಲ್ಲ ಸಿದ್ಧವಾದ್ದವು.

ಎಲ್ಲರಿಗೂ ಮುಂಡೆ ಹಾಳೆ ಕೊಟ್ಟರು, ಕಂಬ್ಳಿಕೊಪ್ಪೆ ಹೊದ್ದುಕೊಳ್ಳಲು ಸೂಚಿಸಿದರು. ಒಬ್ಬೊಬ್ಬರ ಕೈಗೆ ಬತ್ತದ ಸಸಿಗಳನ್ನು ಕೈಗಿಟ್ಟು, ನಾಟಿ ಮಾಡುವ ವಿಧಾನ ತೋರಿಸಿಕೊಟ್ಟರು ಊರಿನ ರೈತರು ಮತ್ತು ಆಯೋಜಕರು. ಒಂದು ತಂಡ ಸಸಿ ನಾಟಿ ಮಾಡುತ್ತಿದ್ದರೆ, ಮತ್ತೊಂದು ತಂಡಕ್ಕೆ ಕೆಸರು ಗದ್ದೆಯಲ್ಲಿ ಉಳುಮೆ ಮಾಡುವುದನ್ನು ಕಲಿಸಲಾಗುತ್ತಿತ್ತು. ಕರಿ ಕಂಬ್ಳಿ ಕೊಪ್ಪೆ ಹೊದ್ದ ಹಳ್ಳಿಗರೊಂದಿಗೆ ಹೊಂದಿಕೊಂಡಿದ್ದ ಎತ್ತುಗಳು, ಬರ್ಮುಡಾ-ಟೀ ಶರ್ಟ್ ಹಾಕಿದ್ದ ಪ್ಯಾಟೆ ಹೈಕಳ ಜೊತೆ ಹಜ್ಜೆ ಹಾಕಬೇಕಾದಾಗ ತಲೆ ಕೊಡವಿದವು. ಕೆಲ ಬುದ್ದಿವಂತರು ತಾವೇ ಕಂಬಳಿ ಕೊಪ್ಪೆ ಹೊದ್ದು, ಕೆಲ ಹೊತ್ತು ಉಳುಮೆ ಮಾಡುವುದರಲ್ಲಿ ಸಫಲರಾದರು.

ನಾಟಿ ಮಾಡಲು ಹೊರಟ ಪ್ಯಾಟೆ ಹುಡುಗರಿಗೆ ಸೊಂಟ ಕೈ ಕೊಟ್ಟಿತು. ಇನ್ನೂ ಕೆಲವರಿಗೆ ಕೆಸರಿನಲ್ಲಿ ಹೆಜ್ಜೆ ಹಾಕುವುದೇ ದೊಡ್ಡ ಸಾಹಸವಾಗಿತ್ತು. ಕೆಲವರು ನಾಟಿ ಮಾಡುತ್ತಿದ್ದಾಗಲೇ ಕೆಸರಿನಲ್ಲಿ ಆಯ ತಪ್ಪಿ ಬಿದ್ದದ್ದು ಎಲ್ಲರೂ ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸಿಕೊಂಡರು. ಈ ಪ್ರಯತ್ನದ ನಡುವೆ ನಾವು ಕಲಿತ ಪಾಠವೆಂದರೆ, ರೈತರು ಬೆಳೆಯುವ ಅನ್ನದ ಹಿಂದಿನ ಕಷ್ಟ. ಆಗ ನಮಗರಿವಿಲ್ಲದಂತೆ ನಮ್ಮ ಕಣ್ಣುಗಳಲ್ಲಿ ಹನಿ ನೀರು ಜಿನುಗಿತು. ರೈತರ ಮೇಲಿನ ಗೌರವ ಮತ್ತಷ್ಟು ಹೆಚ್ಚಾಯಿತು.

ಕೆಸರಗದ್ದೆ ಕಬ್ಬಡ್ಡಿ ಆಟ
ಕೆಸರಗದ್ದೆಯಲ್ಲಿ ಕೃಷಿ ಪಾಠ ಕಲಿತ ಮೇಲೆ, ಪಕ್ಕದ ಗದ್ದೆಯಲ್ಲಿ ಕಬಡ್ಡಿ ಆಟಕ್ಕೆ ವೇದಿಕೆ ಸಿದ್ದವಾಗಿತತ್ತು. ದಂಡಿಸದ ಪೇಟೆ ದೇಹಗಳು ಬಾಗುವುದು ಕಷ್ಟ, ಓಡುವುದು ಕಷ್ಟ. ಆದರೂ, ಸಮೂಹ ಉತ್ಸಾಹ, ಅದನ್ನೆಲ್ಲವನ್ನೂ ಮರೆಸಿತು. ಎರೆಡಡಿ ಕೆಸರಿನ ಅಂಗಳದಲ್ಲಿ ಎಲ್ಲರೂ ಆಟದಲ್ಲಿ ಪಾಲ್ಗೊಂಡರು. ತುಂಬಾ ಮಜಬೂತ್ತಾಗಿತ್ತು.

ಆರಂಭದಲ್ಲಿ ಕೆಲವರು ಆಕ್ರಮಣಕಾರಿ ಆಟ ಪ್ರದರ್ಶಿಸಿದರೆ, ಕೆಲವರು ನಿಧಾನಗತಿಯಲ್ಲಿ ಆಡುತ್ತಿದ್ದರು. ಆದರೆ ಆಟದ ಕಾವು ಏರಿದಾಗ ಎಲ್ಲರೂ ತಮ್ಮ ತಮ್ಮತಾಕತ್ತು-ತಂತ್ರಗಳನ್ನು ಪ್ರದರ್ಶಿಸಲು ಶುರು ಮಾಡಿದರು. ಒಬ್ಬರು ತಪ್ಪಿಸಿಕೊಳ್ಳಲು ಹೋಗಿ ಸಣ್ಣದಾಗಿ ಕಾಲು ಉಳುಕಿಸಿಕೊಂಡರು. ನಮ್ಮೆಲ್ಲರ ಉತ್ಸಾಹದ ಆಟ ನೋಡಲು ಹಳ್ಳಿ ಜನರೆಲ್ಲ ಜಮಾಯಿಸಿದ್ದರು. ಅಂದು ಕೆಸರು ಗದ್ದೆ ಕ್ರೀಡಾಂಗಣದಂತಾಗಿತ್ತು.

ಹಿರಿಯರಿಗೆ ‘ಹಬ್ಬ’ದ ಗೌರವ
ಮಳೆ ಹಬ್ಬದ ನೆಪದಲ್ಲಿ ಮಲೆನಾಡ ಗ್ರಾಮೀಣ ಬದುಕಿನ ಪಾಠಗಳನ್ನು ಕಲಿಸಿದರು ಗ್ರಾಮದ ಹಿರಿಯರು. ಕೃಷಿ ಚಟುವಟಿಕೆಗಳನ್ನು ಹತ್ತಿರದಿಂದ ಪರಿಚಯಿಸಿದರು. ಹಬ್ಬದ ಕೊನೆಯಲ್ಲಿ ಭಾಗಹವಹಿಸಿದ್ದವರು, ಕೃಷಿ ಜೀವನಕ್ಕೆ ಮರಳುವ ತಮ್ಮ ಆಸೆಯನ್ನು ವ್ಯಕ್ತಪಡಿಸಿದರು. ಆ ಮಟ್ಟಿಗೆ ಮಳೆ ಹಬ್ಬ, ವ್ಯಕ್ತಿಗಳ ಮನಸ್ಸನ್ನು ತಟ್ಟಿತ್ತು. ಇಂಥ ಅಪೂರ್ವ ಅವಕಾಶ ಮಾಡಿಕೊಟ್ಟ ಎಲ್ಲ ಹಿರಿಯರಿಗೆ ಮಳೆ ಹಬ್ಬದ ತಂಡ ಗೌರವ ಸಮರ್ಪಿಸಿತು. ಒಟ್ಟಿನಲ್ಲಿ ಈ ‘ಮಳೆಹಬ್ಬ’ ವೆಂಬ ಕಾರ್ಯಕ್ರಮ ಅನೇಕ ಹೊಸ ಸ್ನೇಹಿತರನ್ನು ಕೊಟ್ಟಿದ್ದಲ್ಲದೆ, ಎಲ್ಲರಲ್ಲೂ ಅದಮ್ಯ ಕನಸುಗಳನ್ನು ಬಿತ್ತುವುದರ ಮೂಲಕ ಯಶಸ್ವಿಯಾಯಿತು.

ಕಾಡಿನೊಳಗೆ ಮೌನ ನಡಿಗೆ
ಎರಡನೇ ದಿನ ಭೀಮತಾರಿ ಕಾಡಿನಲ್ಲಿ ಮೌನವಾಗಿ ಹೆಜ್ಜೆ ಹಾಕಿದ್ದು ಅನೂಹ್ಯ ಅನುಭವ ನೀಡಿತು. ಮಳೆಹಬ್ಬದ ಆಯೋಜಕರಾದ ನಾಗರಾಜ ವೈದ್ಯ ಮತ್ತು ರಾಮಚಂದ್ರ ವೈದ್ಯ, ಇದೇ ವೇಳೆ ಪರಿಶುದ್ಧ ಪ್ರವಾಸೋದ್ಯಮದ ಕನಸನ್ನು ತೆರೆದಿಟ್ಟರು. ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್, ಖಾಲಿ ಶೀಶೆಗಳ ಅವಾಂತರ, ಇದರಿಂದ ಜನರಿಗೆ, ಕಾಡಿನ ಪ್ರಾಣಿ-ಪಕ್ಷಿಗಳಿಗೆ ತೊಂದರೆಯಾಗುವ ಬಗೆ ವಿವರಿಸಿದರು.

‘ಇಂಥವನ್ನೆಲ್ಲ ಬಿಟ್ಟು, ಕಾಡಿನಲ್ಲಿ ಮೌನವಾಗಿ ಸಾಗುತ್ತಾ, ಬೀಜದ ಉಂಡೆಗಳನ್ನು ಎಸೆಯುತ್ತಾ, ಕೆಲ ಮರಗಳ ಹುಟ್ಟಿಗೆ ಕಾರಣರಾಗಬೇಕು’ ಎಂದು ನಮ್ಮನ್ನು ಹುರಿದುಂಬಿಸಿದರು. ಕಾಡಿನೊಳಗಿನ ಮೌನ ನಡಿಗೆ, ಮಲೆನಾಡಿನ ಆಹಾರ ಸಂಸ್ಕೃತಿ, ಜೀವನ ಕ್ರಮ, ಕಾಡು, ಮಳೆಯನ್ನು ಪರಿಚಯಿಸಿದ ಮಳೆಹಬ್ಬ ನಮ್ಮೆಲ್ಲರ ಮನಸನ್ನು ಗೆದ್ದಿತ್ತು.


-ಹಗ್ಗ ಹಿಡಿದು ಜಲಪಾತಕ್ಕೆ ಇಳಿಯುವ ಸಾಹಸ

‌ಮಳೆ ಹಬ್ಬದ ಆಶಯ...
*ಪ್ಲಾಸ್ಟಿಕ್ ರಹಿತ ಪರಿಶುದ್ಧ ಪ್ರವಾಸೋದ್ಯಮದ ಸಾದ್ಯತೆಗಳ ಅನ್ವೇಷಣೆ. ಪ್ರವಾಸಿ ತಾಣಗಳನ್ನು ಪರಿಸರ ಸ್ನೇಹಿಯಾಗಿಟ್ಟುಕೊಳ್ಳಲು ಜಾಗೃತಿ ಮೂಡಿಸುವುದು ಮಳೆ ಹಬ್ಬದ ಮೂಲ ಆಶಯ.

* ಮಲೆನಾಡಿನ ಮಳೆಗಾಲದ ಸೊಬಗನ್ನು ತೋರಿಸುವ ಜತೆಗೆ ಇಲ್ಲಿನ ಆತಿಥ್ಯ ಹಾಗೂ ಸಾಂಪ್ರದಾಯಿಕ ಅಡುಗೆ, ಊಟಗಳನ್ನು ಪರಿಚಯಿಸುವುದು. ಪರಿಶುದ್ಧ ಪ್ರವಾಸ ಹೇಗೆ ಸಾಧ್ಯ ಎಂಬುದನ್ನು ಪ್ರಾಯೋಗಿಕವಾಗಿ ಮನವರಿಕೆ ಮಾಡಿಕೊಡುವುದು ಇದರ ಉದ್ದೇಶ.

* ಕಾಡಿನಲ್ಲಿ ಮೌನ ನಡಿಗೆ, ಆ ಮೂಲಕ ಪರಿಸರ ಕಾಳಜಿ ಬಿತ್ತಲು - ಸೀಡ್ ಬಾಲ್ ಪ್ರಸರಣ, ಗಿಡ ನೆಡುವುದು ಸೇರಿದಂತೆ, ಪರಿಸರ ಪ್ರಿಯ ಕಾರ್ಯಕ್ರಮಗಳ ಆಯೋಜನೆ.

* ಕೃಷಿಯಿಂದವಿಮುಖರಾಗಿ ಪಟ್ಟಣ ಸೇರಿದ ಯುವ ಸಮೂಹವನ್ನು ಸೆಳೆಯಲು ಉಳುಮೆ ಹಾಗೂ ಮತ್ತಿತರ ಕೃಷಿ ಚಟುವಟಿಕೆಗಳ ಅಭ್ಯಾಸ. ಕೃಷಿ ಭೂಮಿಯ ಕೆಸರಿನ ಸಖ್ಯ ಬೆಳೆಸುವುದು. ಕೃಷಿಯಲ್ಲಿ ಕೆಲಸದ ಜತೆಗೆ ರಂಜನೆಯೂ ಇದೆ ಎಂಬುದುನ್ನು ಮನವರಿಕೆ ಮಾಡಿಸಲು ಕೆಸರುಗದ್ದೆ ಕಬಡ್ಡಿ, ಹಗ್ಗ ಜಗ್ಗಾಟ, ಓಟದಂತ ಆಟಗಳ ಆಯೋಜನೆ.‌

* ಸಾಹಸ ಕ್ರೀಡಾ ತಜ್ಞರ ನೇತೃತ್ವದಲ್ಲಿ ಸಾಹಸದ ಆಟಗಳು. ಜಲಪಾತಗಳಂಥ ಪ್ರದೇಶದಲ್ಲಿ ಹೇಗೆ ವರ್ತಿಸಬೇಕು ಎಂಬುದಕ್ಕೆ ತಜ್ಞರಿಂದ ಪಾಠ.

* ಸೋಷಿಯಲ್ ಮೀಡಿಯಾ ಅಥವಾ ಬಾಯಿ ಮಾತಲ್ಲಿ ಕಾಳಜಿ ತೋರಿದರೆ, ಕೆಲಸ ಆಗಲ್ಲ. ಇದನ್ನು ಮನಗಂಡು ಪ್ರಾಯೋಗಿ ಅನುಭವ ನೀಡುವುದಕ್ಕಾಗಿ ಮಳೆಹಬ್ಬ ಆಯೋಜಿಸಿದ್ದು. ಇದು ಎರಡು ದಿನದ ಮೋಜಿನ ಪ್ರವಾಸ ಅಲ್ಲ. ಇಲ್ಲಿ ಕಲಿತದ್ದನ್ನು ಕಲಿತವರು, ಹೊರ ಜಗತ್ತಿಗೆ ಹೇಳಬೇಕು. ಶಾಲಾ - ಕಾಲೇಜುಗಳಿಗೆ ತೆರಳಿ ಪ್ರವಾಸದ ಸಮಯದ ವರ್ತನೆಯ ಪಾಠ ಹೇಳುವುದು ಎಲ್ಲವೂ ಇವೆ. ಈಗಾಗಲೇ ಈ ಕೆಲಸ ಆರಂಭವಾಗಿದೆ.

– ನಾಗರಾಜ ವೈದ್ಯ, ಮಳೆ ಹಬ್ಬದ ಮೂಲ ಪರಿಕಲ್ಪನೆ, ಆಯೋಜಕರು
(ಮಳೆ ಹಬ್ಬದ ಕುರಿತ ಹೆಚ್ಚಿನ ಮಾಹಿತಿ ಹಂಚಿಕೆಗೆ ಸಂಪರ್ಕಿಸುವ ಸಂಖ್ಯೆ; 8762329546)


-ಲಗೋರಿ ಆಟಕ್ಕೆ ಕಲ್ಲು ಜೋಡಿಸುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.