ADVERTISEMENT

ಮೈಸೂರುಸಿಲ್ಕ್‌ ‌ಸೀರೆ: ಯಾಕಿಷ್ಟು ಅಕ್ಕರೆ ನೀರೆ?

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 23:30 IST
Last Updated 24 ಅಕ್ಟೋಬರ್ 2025, 23:30 IST
ಮೈಸ್ಕೂರು ಸಿಲ್ಕ್‌ ಸೀರೆಯಲ್ಲಿ ಕಳೆಕಳೆಯಾಗಿರುವ ಹೆಂಗಳೆಯರು
ಮೈಸ್ಕೂರು ಸಿಲ್ಕ್‌ ಸೀರೆಯಲ್ಲಿ ಕಳೆಕಳೆಯಾಗಿರುವ ಹೆಂಗಳೆಯರು   
ಮೈಸೂರುಸಿಲ್ಕ್‌ ಸೀರೆಯ ಅಂದಕ್ಕೆ ಮನಸೋಲದ ಹೆಂಗಳೆಯರಿಲ್ಲ. ಈ ಸೀರೆಯ ವಿಶಿಷ್ಟವಾದ ಹೊಳಪು, ಮೃದು ಸ್ಪರ್ಶದ ಮೋಡಿಯು ಅದರ ದುಬಾರಿ ಬೆಲೆಯನ್ನೂ ಮೀರಿ ನಿಲ್ಲುತ್ತದೆ. ಉಟ್ಟ ನೀರೆಯ ಮೈಮಾಟದ ಸೊಬಗು ಹೆಚ್ಚಿಸುವ ಈ ಸೀರೆಯು ಉತ್ಕೃಷ್ಟ ಗುಣಮಟ್ಟದ ಕಾರಣದಿಂದ ಕರ್ನಾಟಕದ ಅಸ್ಮಿತೆಯಾಗಿಯೂ ಗುರುತಿಸಿಕೊಂಡಿದೆ.

ಮೈಸೂರು ಅರಮನೆ, ಮೈಸೂರು ದಸರಾ, ನಾಲಗೆಯಲ್ಲಿ ರಸ ಒಸರಿಸುವ ಮೈಸೂರು ಪಾಕು, ಮೈಸೂರು ಚಿಗುರು ವೀಳ್ಯದೆಲೆ, ಮೈಸೂರು ವೀರನಗೆರೆ ಬದನೆ,  ಘಮಘಮಿಸುವ ಮೈಸೂರು ಮಲ್ಲಿಗೆ ಎಂತೆಲ್ಲ ಹೆಗ್ಗಳಿಕೆಗೆ ಪಾತ್ರವಾಗಿರುವ ಸಾಂಸ್ಕೃತಿಕನಗರಿ ಮೈಸೂರು, ತನ್ನದೇ ಹೆಸರಿನೊಂದಿಗೆ ತಳುಕು ಹಾಕಿಕೊಂಡಿರುವ ರೇಷ್ಮೆಗೂ ಅಷ್ಟೇ ಹೆಸರುವಾಸಿ.

‘ಮೈಸೂರು ದಸರಾ ಎಷ್ಟೊಂದು ಸುಂದರ, ಚೆಲ್ಲಿದೆ ನಗೆಯ ಪನ್ನೀರ’ ಎಂಬ ಹಾಡಿಗೆ ತಕ್ಕಂತೆ, ನಾಡಹಬ್ಬದ ಕಾರಣದಿಂದ ಮೈಸೂರು ಇತ್ತೀಚೆಗಷ್ಟೇ ಇಂದ್ರನಗರಿ ಅಮರಾವತಿಯಂತೆ ದೀಪಾಲಂಕಾರಗಳಿಂದ ಕಂಗೊಳಿಸಿ ಲಕ್ಷಾಂತರ ಜನರ ಮನಸೂರೆಗೊಂಡ ಈ ಸಂದರ್ಭದಲ್ಲಿ, ಮೈಸೂರುಸಿಲ್ಕು ಎನ್ನುವ ಗಂಧರ್ವಕನ್ಯೆಯ ಕುರಿತು ಹೇಳಲೇಬೇಕು. ಬೇರೆ ರೇಷ್ಮೆ ಸೀರೆಗೂ ಮೈಸೂರುಸಿಲ್ಕಿಗೂ ಏನು ವ್ಯತ್ಯಾಸವಿದೆ ? ವಿಶಿಷ್ಟ ಹೊಳಪಿರುವ ಮೈಸೂರುಸಿಲ್ಕ್‌ ಸೀರೆ ಸ್ವರ್ಗದಿಂದ ಇಳಿದ ದೇವತೆಯ ಹಾಗೆ. ಅದಕ್ಕೇ ಆಕೆಗೆ ಅಷ್ಟು ಮೌಲ್ಯ. ವಾರ್ಡ್‌ರೋಬಿನಲ್ಲಿ ಎಷ್ಟು ಮೈಸೂರುಸಿಲ್ಕ್‌ ಸೀರೆಗಳಿವೆ ಎಂದರೆ ಆ ಸ್ತ್ರೀಗೆ ಅಷ್ಟೊಂದು ಹೆಮ್ಮೆ ಎನ್ನುವಷ್ಟರ ಮಟ್ಟಿಗೆ ಈ ಸೀರೆ ಮೇಲಿನ ಮೋಹವಿದೆ.  ಜಿ.ಐ. ಟ್ಯಾಗಿಂಗ್ ಹೊಂದಿರುವ ಈ ಮೈಸೂರುಸಿಲ್ಕ್‌ ಬಹುಕಾಲ ಬಾಳಿಕೆ ಬರುವಂಥದ್ದು.

ನೋಡಲು ಅತ್ಯಂತ ಆಡಂಬರ ಎನಿಸದಿದ್ದರೂ ಅದರ ಮೌಲ್ಯದಿಂದಾಗಿಯೇ ಜನ ಅದನ್ನು  ಉಟ್ಟವರನ್ನು ಸಿರಿವಂತರೇ ಇರಬಹುದು ಎಂದುಕೊಳ್ಳುವಷ್ಟರ ಮಟ್ಟಿಗೆ ಇದು ಜನಜನಿತವಾಗಿದೆ. ಹಾಗೆ ನೋಡಿದರೆ ಇತ್ತೀಚೆಗೆ ಮೈಸೂರುಸಿಲ್ಕ್ ಇಮಿಟೇಶನ್ ಸೀರೆಗಳು ಬಹಳಷ್ಟು ಬಂದಿವೆ. ಏನೇ ನಕಲು ಬಂದರೂ ಮೂಲ ಮೈಸೂರು ಸಿಲ್ಕಿಗೆ ಇರುವ ಬೆಲೆ ಬೇರೆಯದ್ದಕ್ಕೆ ಲಭ್ಯವಾಗಲು ಸಾಧ್ಯವೇ?

ADVERTISEMENT

ಇವಳು ಯಾವಾಗಲೂ ಮೈಸೂರುಸಿಲ್ಕ್ ಸೀರೆಯನ್ನೇ  ಉಡುತ್ತಾಳೆ ಎಂದು ಕೆಲವರ ಬಗೆಗೆ ಕಹಿ ಮಾತನಾಡುವುದನ್ನು ಕೇಳಿದ್ದೇನೆ. ಅದು ಬರೀ ಕುಹಕವಲ್ಲ. ಅವಳ ಬಳಿ ತನಗಿಂತ ಹೆಚ್ಚು ಇವೆ ಎನ್ನುವ ಅಸೂಯಾ ಭಾವವೂ ಹೌದು. ‘ಓ ಅವಳಾ ಮೈಸೂರುಸಿಲ್ಕ್ ಪೂರ್ಣಿಮಾ , ಓಹ್ ಇವಳಾ ಮೈಸೂರುಸಿಲ್ಕ್ ರಾಧಾ’ ಎಂದೆಲ್ಲ ಹೆಸರಿನ ಜೊತೆ ವಿಶೇಷಣವಾಗಿಯೂ ಮೈಸೂರುಸಿಲ್ಕ್ ಬಳಕೆ ಆಗುತ್ತದೆ ಎಂದರೆ ಇದರ ಮಹಾಮಹಿಮೆ ಅರಿಯಬಹುದು.

ಮೈಸೂರು ಮಹಾರಾಜರ ದೂರದೃಷ್ಟಿತ್ವದ ಫಲವಾಗಿ ಹುಟ್ಟಿಕೊಂಡ ಸೀರೆ ಮೈಸೂರುಸಿಲ್ಕ್. ಪ್ರತಿ ರಾಜ್ಯಕ್ಕೂ ತನ್ನದೇ ಆದ ಕೆಲವು ಐಡೆಂಟಿಟಿ ವಸ್ತುಗಳಿರುತ್ತವೆ. ಅಂತೆಯೇ ನಮ್ಮ  ರಾಜ್ಯದಲ್ಲಿ  ಮೈಸೂರುಸಿಲ್ಕ್ ಅಂತಹ ಒಂದು ಐಡೆಂಟಿಟಿ ಎಂದರೆ ಅತಿಶಯೋಕ್ತಿಯಲ್ಲ. ಸಹಸ್ರಾರು ಜನರಿಗೆ ಉದ್ಯೋಗ ದೊರಕಿಸಿ ಕೊಡುವಲ್ಲಿ ಇದರ ಪಾತ್ರವನ್ನು ಅಲ್ಲಗಳೆಯುವಂತಿಲ್ಲ . ಹಿಪ್ಪು ನೇರಳೆ ಬೆಳೆಗಾರರ ಬದುಕನ್ನು ಬಂಗಾರವಾಗಿಸುವಲ್ಲಿ ಕೂಡ ಇದರ ಹಿರಿಮೆ ಇದೆ. ಮೈಸೂರುಸಿಲ್ಕಿಗೆ ಈಗ ಬರದ ಕಾಲ. ದುಡ್ಡು ಕೊಡುತ್ತೇನೆಂದರೂ ಬೇಕಾದ ಬಣ್ಣದ ಸೀರೆ ಸಿಗುತ್ತಿಲ್ಲ. ಇಂಥ ಕಾಲದಲ್ಲಿ ಹೊಸ ಹೊಸ ಬಣ್ಣಗಳ ಸೀರೆ ಉಡಬೇಕೆಂದು ಬಯಸುವವರಿಗೆ ಬಣ್ಣ ಬದಲಿಸಿ ಕೊಳ್ಳುವ ಸುವರ್ಣ ಅವಕಾಶವೂ ಇದೆ. ಹಾಗೆ ನೋಡಿದರೆ, ಇಷ್ಟವಾಗದ ಬಣ್ಣದ ಎರಡು ಮೈಸೂರುಸಿಲ್ಕ್ ಸೀರೆಗಳಿಗೆ ನಾನೇ ಬೇರೆ ಚಂದದ ಬಣ್ಣಗಳನ್ನು ಹಾಕಿಸಿ ಉಟ್ಟು ಖುಷಿಪಟ್ಟಿದ್ದೇನೆ. ಮೈಸೂರುಸಿಲ್ಕಿಗೆ ಬಣ್ಣ ಹಾಕುವ ಡೈಯಿಂಗ್‌ ಅಂಗಡಿಗಳು ಮೈಸೂರು ಮಾತ್ರವಲ್ಲದೆ ಬೆಂಗಳೂರಿನಲ್ಲಿ ಸಹ ಇವೆ. ಈ ಸೀರೆಗಳಿಗೆ ರೀಸೇಲ್ ವ್ಯಾಲ್ಯೂ ಕೂಡಾ ಇದೆ.

ನಾನೊಮ್ಮೆ ಶೃಂಗೇರಿಗೆ ಹೋದಾಗ ಅಲ್ಲಿ ಒಬ್ಬ ಮಹಿಳೆ ಮೈಸೂರುಸಿಲ್ಕ್‌ ಸೀರೆ ಉಟ್ಟುಕೊಂಡಿದ್ದನ್ನು ನೋಡಿ, ಉಡುಪಿಯ ನನ್ನ ಗೆಳತಿಗೆ ‘ನೋಡಿ, ಅವರು ಮೈಸೂರಿನ ಕಡೆಯವರು ಅಂತ ಕಾಣುತ್ತೆ. ಮೈಸೂರುಸಿಲ್ಕ್ ಉಟ್ಟಿದ್ದಾರೆ. ಹೀಗೆಲ್ಲಾ ದೇವಸ್ಥಾನಕ್ಕೆ ಬಂದು ಅಲ್ಲಿ ಇಲ್ಲಿ ಕುಳಿತು ಕರೆಯಾದರೆ ಏನು ಗತಿ? ತುಂಬಾ ಕಾಸ್ಟ್ಲಿ ಸೀರೆ ಅದು’ ಎಂದೆ.

ಉಡುಪಿ, ದಕ್ಷಿಣ ಕನ್ನಡದ ಕಡೆಯಲ್ಲೆಲ್ಲಾ ಅಥವಾ ಉತ್ತರ ಕರ್ನಾಟಕದಲ್ಲಿ ಮೈಸೂರು ಸಿಲ್ಕು ಅಷ್ಟೇನೂ ಜನಜನಿತವಲ್ಲ. ಹಾಗಾಗಿ, ನನ್ನ ಗೆಳತಿ ‘ಹೌದಾ’ ಎಂದು ಆಶ್ಚರ್ಯದಿಂದ ಕೇಳಿದರು. ನಾನು ‘ಹೌದು, ಈಕೆ ಉಟ್ಟಿರುವ ಸೀರೆ ₹ 25,000ಕ್ಕೂ ಮಿಗಿಲು. ಕಳೆದ ಬಾರಿ ನೀವು ಮೈಸೂರಿನಲ್ಲಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಿಕ್ಕಾಗ ನಾನು ಉಟ್ಟಿದ್ದೆನಲ್ಲಾ ಅದಕ್ಕೆ ₹ 20,000 ಎಂದೆ. ಆಕೆಯ  ಹುಬ್ಬು ಅರ್ಧ ಇಂಚು ಮೇಲೆ ಏರಿತ್ತು. ಆಕೆಯ ಪತಿಯಂತೂ ‘ನೀವೆಲ್ಲಾ ಸಿರಿವಂತರ ಮಡದಿಯರು ಬಿಡಿ’ ಎಂದು ತಿಳಿಹಾಸ್ಯ ಮಾಡುತ್ತಾ ನಕ್ಕರು. 

ಹೌದು, ಮೈಸೂರುಸಿಲ್ಕ್‌ ಸೀರೆ ಬಹಳ ದುಬಾರಿ. ‘ಕಾಸಿಗೆ ತಕ್ಕ ಕಜ್ಜಾಯ’ ಎನ್ನುವ ಗಾದೆ ಮಾತಿನ ಹಾಗೆ, ಅಷ್ಟು  ದುಡ್ಡು  ಕೊಟ್ಟರೂ ಅದನ್ನು ಉಟ್ಟಾಗ ಆಗುವ ಒಂದು ಸುಖದ ಫೀಲ್ ಇದೆಯಲ್ಲ, ಅದು ವರ್ಣನಾತೀತ. ಮೂವತ್ತು ವರ್ಷಗಳ ಹಿಂದೆ ನನ್ನ ಮದುವೆಯಲ್ಲೂ ಒಂದು ಮೈಸೂರುಸಿಲ್ಕ್‌ ಸೀರೆ ಬೇಕೆಂದು ಇಷ್ಟಪಟ್ಟುಕೊಂಡಿದ್ದೆ. ಅದು ಇಂದಿಗೂ ತನ್ನ ಸೌಂದರ್ಯವನ್ನು  ಹಾಗೆಯೇ ಉಳಿಸಿಕೊಂಡಿದೆ. ಝೀರೊ ಸೈಝ್‌ ಮೋಹಕ್ಕೆ ಬಿದ್ದ ಹೆಂಗಳೆಯರ ಜೊತೆ ಮೈಸೂರುಸಿಲ್ಕ್‌ ಸೀರೆ ಕೂಡಾ ಸ್ಪರ್ಧೆಗೆ ಇಳಿದಂತಿದೆ.  ಅಂದು ಇದ್ದಷ್ಟು ದಪ್ಪ ಈಗಿಲ್ಲ. ಮತ್ತೊಂದು ಬಗೆಯಲ್ಲಿ ಹೇಳುವುದಾದರೆ, ಅದು ಮೈಯಿಗೆ ಅಂಟಿಕೊಂಡು ಕೂರುತ್ತದೆ . ಹಾಗಾಗಿ ತುಸು ದಪ್ಪ ಇರುವವರು ಉಟ್ಟರೂ ಕಾಂಚೀವರಂ ಅಥವಾ ಮೊಳಕಾಲ್ಮುರು ರೇಷ್ಮೆ ಸೀರೆಯ ರೀತಿ ಹರಡಿಕೊಳ್ಳುವುದಿಲ್ಲ. ಅದರಿಂದ ತುಂಬಾ ದಪ್ಪಗೆ ಕಾಣುವುದಿಲ್ಲ ಎನ್ನುವ ಒಂದು ಬಗೆಯ ಸಮಾಧಾನದ ಅನುಭವ ಆ ಹೆಂಗಳೆಯರಿಗೆ.

ಡಿಸ್ಕೌಂಟ್ ಸೇಲ್‌ ಇದ್ದಾಗ, ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಸರತಿ ನಿಂತ ಹಾಗೆ ಮೈಸೂರುಸಿಲ್ಕ್‌ ಸೀರೆ ಕೊಳ್ಳಲು ಹೆಂಗಸರು ಬೆಳಿಗ್ಗೆ ಐದರಿಂದಲೇ ನಿಂತಿದ್ದನ್ನು, ಸೀರೆಯನ್ನು ಆರಿಸಿಕೊಳ್ಳುವಾಗ ಸಣ್ಣ ಸಂಗ್ರಾಮವಾದದ್ದನ್ನು ನೋಡಿದಾಗ ‘ಓಹ್ ಏನಮ್ಮಾ ನಿನ್ನ ಲೀಲೆ, ಓ ಮೈಸೂರುಸಿಲ್ಕ್‌ ತಾಯೇ’ ಎಂದು ನನ್ನೊಳಗೇ ಹಾಡಿಕೊಂಡಿದ್ದೆ.

ಇನ್ನು ನೂರು ವರ್ಷಗಳಾದರೂ ಈ ಸೀರೆಗೆ ಇದೇ ಮರ್ಯಾದೆ, ಮಾನ, ಸಮ್ಮಾನಗಳು ಇರುತ್ತವೆ ಎಂದರೆ ನೀವು ನಂಬಲೇಬೇಕು.

ಮೈಸ್ಕೂರು ಸಿಲ್ಕ್‌ ಸೀರೆಯಲ್ಲಿ ಕಳೆಕಳೆಯಾಗಿರುವ ಹೆಂಗಳೆಯರು
ಮೈಸ್ಕೂರು ಸಿಲ್ಕ್ ಸೀರೆ ತಯಾರಿಕೆ ಹಂತ
ಮೈಸ್ಕೂರ್ ಸಿಲ್ಕ್ ಸೀರೆಯಲ್ಲಿ ನಟಿ ಸಾನ್ಯಾ ಅಯ್ಯರ್

ಗುಣಮಟ್ಟದಲ್ಲಿ ರಾಜಿಯೇ ಇಲ್ಲ

ಕೆಎಸ್‌ಐಸಿ (ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ) ಉತ್ಪಾದಿಸುವ ಮೈಸೂರು ಸಿಲ್ಕ್‌ ಸೀರೆ ಶತಮಾನದ ನಂತರವೂ ತನ್ನ ವೈಭವವನ್ನು ಉಳಿಸಿಕೊಂಡಿದೆ. ಈ ಕುರಿತು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಝಹೀರಾ ನಸೀಂ ಅಭಿಪ್ರಾಯ ಹಂಚಿಕೊಂಡಿದ್ದಾರೆ

ಮೈಸೂರುಸಿಲ್ಕ್‌ ಸೀರೆಗೆ ಅಷ್ಟೊಂದು ಬೇಡಿಕೆ ಏಕೆ?

ಗುಣಮಟ್ಟದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳದೇ ಇರುವುದರಿಂದ ಈ ಸೀರೆಯು ಮಹಿಳೆಯರ ಮನಸ್ಸನ್ನು ಸೆಳೆದಿದೆ. ರೇಷ್ಮೆಗೂಡು ಖರೀದಿಸಿ, ದಾರವನ್ನು ತಯಾರಿಸಿ, ವಿವಿಧ ಬಣ್ಣ ಮತ್ತು ವಿನ್ಯಾಸಗಳ ಉತ್ಪನ್ನಗಳನ್ನು ಒಂದೇ ಸೂರಿನಡಿ ಉತ್ಪಾದಿಸುವ ದೇಶದ ಏಕೈಕ ಸಂಸ್ಥೆ ಎನ್ನುವುದು ಕೆಎಸ್ಐಸಿ ಹಿರಿಮೆ.

ನೈಸರ್ಗಿಕ ರೇಷ್ಮೆ ಮತ್ತು ಶೇ 100ರಷ್ಟು ಶುದ್ಧ ಚಿನ್ನದ, ಎಂದಿಗೂ ಕಳೆಗುಂದದ ಜರಿಯನ್ನು ಬಳಕೆ ಮಾಡುವುದು ವಿಶೇಷವೇ. ಗುಣಮಟ್ಟ ಖಾತರಿಗಾಗಿ ವಿಶಿಷ್ಟ ಕೋಡ್‌, ಹಾಲೊಗ್ರಾಂ ಅನ್ನು ಪ್ರತಿ ಜರಿ ಸೀರೆಯಲ್ಲೂ ಹಾಕಲಾಗುತ್ತದೆ. ಭೌಗೋಳಿಕ ಸೂಚ್ಯಂಕದ(ಜಿ.ಐ. ಟ್ಯಾಗ್‌) ಮಾನ್ಯತೆಯೂ ಇದಕ್ಕೆ ಸಿಕ್ಕಿದೆ. ಈ ಎಲ್ಲ ಕಾರಣಗಳಿಂದಲೂ ಕರ್ನಾಟಕದ ಹೆಮ್ಮೆಯ ರೇಷ್ಮೆ ಸೀರೆಗೆ ಈಗಲೂ ಬೇಡಿಕೆ ಹಾಗೂ ಮಾನ್ಯತೆ.

ಹೊಸ ವಿನ್ಯಾಸಗಳೇನಾದರೂ ಬಂದಿವೆಯೇ?

ಸೊಗಸಾದ ಜರಿ, ನಾವೀನ್ಯ, ಬಣ್ಣಗಳ ಸಂಯೋಜನೆ, ಉತ್ಪಾದನಾ ಕ್ರಮ, ಆಕರ್ಷಕವಾದ ಕನಿಷ್ಠ ವಿನ್ಯಾಸಗಳು ನಮ್ಮ ಬ್ರ್ಯಾಂಡ್‌. ವಿಭಿನ್ನ ಬಣ್ಣದ ಸೀರೆಗಳು, ಅದರ ಅಂದ ಹೆಚ್ಚಿಸುವ ಚಿನ್ನಲೇ‍ಪಿತ ಜರಿಗಳನ್ನೂ ಹೊಸ ವಿನ್ಯಾಸಗಳೊಂದಿಗೆ ಮಾರುಕಟ್ಟೆಗೆ ತರಲಾಗುತ್ತಿದೆ. ಸುಮಾರು 25 ಬಣ್ಣಗಳ, 300ರಿಂದ 400 ವಿನ್ಯಾಸಗಳ ಸೀರೆಗಳು ನಮ್ಮಲ್ಲಿ ಲಭ್ಯ ಇವೆ. ಈಗ
‘ಝಡ್‌.ಎನ್‌.20’ ಎನ್ನುವ ವಿನ್ಯಾಸದ ಸೀರೆಗಳನ್ನು ಉತ್ಪಾದಿಸಲಾಗುತ್ತಿದೆ. ಕ್ರೇಪ್‌ ಪ್ರಿಂಟೆಡ್‌ ಸೀರೆ, ಜರಿ ಕ್ರೇಪ್‌ ಸೀರೆ, ದುಪಟ್ಟಾ, ಪುರುಷರಿಗೆ ಶರ್ಟ್‌, ಪಂಚೆ, ಶಲ್ಯ ಸಹಿತ ಸಿದ್ಧ ಉಡುಪುಗಳನ್ನೂ ಕೆಎಸ್‌ಐಸಿ ಉತ್ಪಾದಿಸುತ್ತಿದೆ. ಬೇರೆ ಬ್ರ್ಯಾಂಡ್‌ನ ಸೀರೆಗಳ ವಿನ್ಯಾಸಕ್ಕೂ ಕೆಎಸ್‌ಐಸಿ ರೇಷ್ಮೆ ಸೀರೆಗಳಿಗೂ ಬಹಳಷ್ಟು ವ್ಯತ್ಯಾಸವಿದೆ. ಅದನ್ನು ಧರಿಸಿದಾಗ ಖಂಡಿತವಾಗಿಯೂ ಇದು ತಿಳಿಯುತ್ತದೆ.

ಎಲ್ಲ ವರ್ಗದವರೂ ಖರೀದಿಸಲು ಅನುವಾಗುವಂತೆ ಮೈಸೂರು ಸಿಲ್ಕ್‌ ಸೀರೆಯನ್ನು ಕಡಿಮೆ ಬೆಲೆಗೆ ಪೂರೈಸುವ ಯೋಜನೆ ಏನಾದರೂ ಇದೆಯೇ?

ನಮ್ಮ ಸೀರೆಗಳು ಕನಿಷ್ಠ ₹16 ಸಾವಿರದಿಂದಲೇ ಆರಂಭವಾಗುತ್ತವೆ. ಲಕ್ಷ ರೂಪಾಯಿ ಬೆಲೆಯ ಸೀರೆಗಳೂ ಇವೆ. ಈ ದರದಲ್ಲಿಯೇ ಬೇಡಿಕೆಯಷ್ಟು ಸೀರೆಗಳನ್ನು ಒದಗಿಸಲು ನಮಗೆ ಆಗುತ್ತಿಲ್ಲ. ಇನ್ನು ಕಡಿಮೆ ದರಕ್ಕೆ ಒದಗುವಂತೆ ಮಾಡಲು ಆಗುವುದೇ ಇಲ್ಲ. ಹಾಗೆ ಕೊಟ್ಟರೆ ಅದು ಮೈಸೂರುಸಿಲ್ಕ್ ಸೀರೆ ಎನ್ನಿಸದು. ಹಾಗಾಗಿ ಅಂತಹ ಯೋಚನೆ ಬಿಟ್ಟು, ಹಿಂದಿನ ಹಿರಿಮೆಯನ್ನೇ ಉಳಿಸಿಕೊಂಡು ಹೋಗುತ್ತಿದ್ದೇವೆ.

ವಹಿವಾಟು ಹೇಗಿದೆ? ಹೊಸ ಯೋಜನೆಗಳು ಏನಿವೆ?

ಕೆಎಸ್ಐಸಿ ಸೀರೆಗಳ ಮಾರಾಟದ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ವರ್ಷಕ್ಕೆ ಲಕ್ಷಕ್ಕೂ ಹೆಚ್ಚು ಸೀರೆಗಳ ಮಾರಾಟ ಆಗುತ್ತದೆ. ಈಗ ಆನ್‌ಲೈನ್‌ನಲ್ಲೂ ಮಾರಾಟಕ್ಕೆ ಅವಕಾಶ ಇರುವುದರಿಂದ ವಿದೇಶದಿಂದಲೂ ಬೇಡಿಕೆಯಿದೆ. 2024–25ನೇ ಸಾಲಿನಲ್ಲಿ ₹ 375 ಕೋಟಿ ವಹಿವಾಟು ನಡೆದಿದೆ. ಇದರಲ್ಲಿ ನಿವ್ವಳ ಲಾಭದ ಪ್ರಮಾಣ ₹ 96 ಕೋಟಿ. ಬೆಂಗಳೂರು, ಮೈಸೂರು, ದಾವಣಗೆರೆ, ಚನ್ನಪಟ್ಟಣ, ಹೈದರಾಬಾದ್‌ ಸಹಿತ 16 ಮಾರಾಟ ಮಳಿಗೆಗಳನ್ನು ಕೆಎಸ್‌ಐಸಿ ಹೊಂದಿದೆ. ಬೆಂಗಳೂರಿನ ಏರ್‌ಪೋರ್ಟ್‌ ಆವರಣದಲ್ಲಿ ಸದ್ಯದಲ್ಲೇ ಎರಡು ಮಳಿಗೆಗಳು ಬರಲಿವೆ. ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಆಗಾಗ ಮಾರಾಟ ಮೇಳಗಳನ್ನು ಆಯೋಜಿಸಲಾಗುತ್ತದೆ. ಯಂತ್ರೋಪಕರಣಗಳ ಉನ್ನತೀಕರಣವೂ ಕಾಲಕಾಲಕ್ಕೆ ಆಗುತ್ತಿದೆ. ‌ಇದರಿಂದ ಉತ್ಪಾದನೆಯನ್ನು ನಿಧಾನವಾಗಿ ಹೆಚ್ಚಿಸಲು ಸಾಧ್ಯವಾಗುತ್ತಿದೆ

ಸಂದರ್ಶನ: ಉಮೇಶ ಭಟ್ಟ ಪಿ.ಎಚ್‌.

ನಲ್ಲನ ಸ್ಪರ್ಶದಂತೆ!

ಹೆಂಗಳೆಯರಿಗೇಕೆ ಮೈಸೂರುಸಿಲ್ಕ್ ಸೀರೆ ಎಂದರೆ ಇಷ್ಟೊಂದು ವ್ಯಾಮೋಹ ಎಂಬ ಪ್ರಶ್ನೆಗೆ ಅಚ್ಚರಿಯ ಉತ್ತರ ಸಿಗುತ್ತದೆ. ಈ ಸೀರೆ ಉಟ್ಟಾಗ, ನಲ್ಲನು ತನ್ನನ್ನು ಸ್ಪರ್ಶಿಸಿದಾಗ ಉಂಟಾಗುವಂತಹ ರೋಮಾಂಚಕಾರಿ ಅನುಭವ ಆಗುತ್ತದೆ ಎಂಬುದು ಹಲವು ಹೆಣ್ಣುಮಕ್ಕಳ ಆಂಬೋಣ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.