ADVERTISEMENT

ಮಹಿಷ ಮಂಡಲದ ವಾದ- ವಿವಾದ: ಪುರಾಣ, ಇತಿಹಾಸ ಹೇಳುವುದು ಏನು?

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2019, 6:00 IST
Last Updated 6 ಅಕ್ಟೋಬರ್ 2019, 6:00 IST
ಮೈಸೂರು ನಗರದ ವಿಹಂಗಮ ನೋಟ
ಮೈಸೂರು ನಗರದ ವಿಹಂಗಮ ನೋಟ   

ಮಹಾಭಾರತ ಹಾಗೂ ಶ್ರೀಲಂಕಾದ ‘ಮಹಾವಂಸ’ ಮತ್ತು ‘ದೀಪವಂಸ’ ಗ್ರಂಥಗಳಲ್ಲಿ ಉಲ್ಲೇಖಿಸಿರುವ ‘ಮಾಹಿಸೆ’ ಅಥವಾ ‘ಮಹಿಷಮಂಡಲ’ವೆಂಬ ಭೌಗೋಳಿಕ ಘಟಕದ ಬಗ್ಗೆ ಈವರೆಗೂ ಇದ್ದ ಕೆಲವು ಅನುಮಾನಗಳು ಈಗ ತಿಳಿಗೊಳ್ಳತೊಡಗಿವೆ. ಇತ್ತೀಚೆಗೆ ಬೆಳಕು ಕಂಡಿರುವ ಕ್ರಿಸ್ತಪೂರ್ವ ಕಾಲದ ಪ್ರಾಕೃತ ಶಾಸನಗಳಿಂದಾಗಿ ಈ ಪ್ರದೇಶವು ನಿಶ್ಚಿತ ಐತಿಹಾಸಿಕ ಘಟಕವಾಗಿ ಹೊರಹೊಮ್ಮಿದೆ; ಮಾತ್ರವಲ್ಲ, ಇದರ ಭೌಗೋಳಿಕ ವ್ಯಾಪ್ತಿಯ ಸುತ್ತ ಹಬ್ಬಿದ್ದ ವಾದ ವಿವಾದಗಳೂ ಕೊನೆಗೊಳ್ಳತೊಡಗಿವೆ.

1. ಮಹಿಷ ಮಂಡಲದ ವಾದ- ವಿವಾದ: ಮಹಾಭಾರತದಲ್ಲಿ ಸುಮಾರು ಆರೇಳು ಕಡೆ ‘ಮಾಹಿಸೆ’ಯನ್ನು ಪ್ರಸ್ತಾಪಿಸಿದ್ದರೂ ಭೀಷ್ಮಪರ್ವದಲ್ಲಿ ಬಂದಿರುವ ‘ಜನಪದ ದಕ್ಷಿಣಾಯಃ’ ಎಂಬ ಉಲ್ಲೇಖವು ಇವುಗಳಲ್ಲಿ ಮುಖ್ಯವಾದದ್ದು. ಇಷ್ಟೇ ಮುಖ್ಯವಾದದ್ದು ಮಾಹಿಸಕರನ್ನು ‘ದಕ್ಷಿಣಾಪಥ ವಾಸಿವಃ’ ಎಂದು ಮಾರ್ಕಂಡೇಯ ಪುರಾಣದಲ್ಲಿ ಕರೆದಿರುವುದು.

ಗೌರವದಿಂದ ಗಮನಿಸಿದರೂ ಇತಿಹಾಸಕಾರರು ಇವನ್ನು ಪೂರ್ಣ ನಂಬದಿರಲು ಕಾರಣ, ಈ ಕೃತಿಗಳ ಕಾಲದ ಅನಿರ್ದಿಷ್ಟತೆ ಮತ್ತು ಈ ಉಲ್ಲೇಖಗಳು ಯಾವ ಹಂತದಲ್ಲಿ ಕೃತಿಗಳನ್ನು ಪ್ರವೇಶಿಸಿದವು ಎಂಬುದರ ಬಗೆಗಿರುವ ಆತಂಕಗಳು. ಶ್ರೀಲಂಕಾದ ಘಟನಾವಳಿಗಳನ್ನು ಕ್ರಿ.ಶ. ನಾಲ್ಕು- ಐದನೆಯ ಶತಮಾನದಲ್ಲಿ ಸಂಕಲಿಸಿದವರು ಅನುರಾಧಪುರ ವಿಹಾರದ ಬೌದ್ಧ ಭಿಕ್ಷು- ಭಿಕ್ಷುಣಿಯರು.

ADVERTISEMENT

ಚಾರಿತ್ರಿಕ ಘಟನೆಗಳಾದರೂ ಐತಿಹ್ಯಗಳನ್ನು ಹೆಚ್ಚು ಒಳಗೊಂಡಿರುವ ಈ ದಾಖಲೆಗಳೂ ಪೂರ್ಣ ನಂಬಿಕೆಗೆ ಅರ್ಹವೆನಿಸಿರಲಿಲ್ಲ. ದೀಪವಂಸದಲ್ಲಿ ‘ಮಹಿಸ’ ಎಂದು, ಮಹಾವಂಸದಲ್ಲಿ ‘ಮಹಿಷಮಂಡಲ’ ಎಂದು ಕರೆದಿರುವ ಭೂವಲಯವನ್ನು ಇದೇ ಕಾಲದಲ್ಲಿ ಇದೇ ವಿಹಾರದಲ್ಲಿದ್ದ ಭಿಕ್ಕು ಬುದ್ಧಘೋಷನು ‘ರಠ್ಠ ಮಹಿಸಂ’, ‘ಮಹಿಸಮಂಡಲ’, ಮತ್ತು ‘ಮಹಿಂಸಕ’ ಎಂದು ಕರೆದಿದ್ದನು.

19ನೆಯ ಶತಮಾನದ ಆರಂಭದಲ್ಲಿ ‘ಮಾಹಿಸ’ ವಲಯದ ಬಗ್ಗೆ ಹೆಚ್ಚಿನ ಕುತೂಹಲ ಕೆರಳಿದಾಗ, ಇದು ಇಂದೋರ್ ರಾಜ್ಯದ ನರ್ಮದಾ ನದಿಯ ಉತ್ತರ ದಡದ ಮೇಲಿನ ಮಹೇಶ್ವರವೆಂದು ಒಂದು ವರ್ಗ ವಾದಿಸಿದ್ದರೆ, ಇದು ಮೈಸೂರು ಪ್ರದೇಶವೆಂದು ಇನ್ನೊಂದು ವರ್ಗ ವಾದಿಸಿತ್ತು. 1807ರ ಸುಮಾರಿನಲ್ಲಿ ವಿಲ್ ಫ್ರೆಡ್ ಮಾಡಿದ್ದ ಈ ವಾದವನ್ನು, 1854ರಲ್ಲಿ ಕನ್ಹಿಂಗ್‍ಹ್ಯಾಮ್ ಅನುಮೋದಿಸಿದ್ದನು. ಆದರೆ, ಇದು ಹೆಚ್ಚು ನಿಖರತೆ ಪಡೆದುಕೊಂಡದ್ದು 1910ರಲ್ಲಿ ಜೆ.ಎಫ್. ಪ್ಲೀಟ್ ಪ್ರಕಟಿಸಿದ ‘ಮಹಿಷಮಂಡಲ ಮತ್ತು ಮಹಿಷ್ಮತಿ’ ಎಂಬ ಲೇಖನದಲ್ಲಿ.

ಎರಡನೆಯ ವಾದವನ್ನು 19ನೆಯ ಶತಮಾನದ ಪೂರ್ವಾರ್ಧದಲ್ಲಿ ಮಂಡಿಸಿದವನು ಖ್ಯಾತ ಸಂಸ್ಕೃತ ಪಂಡಿತನಾದ ಎಚ್.ಎಚ್. ವಿಲ್ಸನ್. ಈ ಸೂಚನೆಯನ್ನು ಸ್ವಲ್ಪ ಮಾರ್ಪಡಿಸಿ, ಇದು ಮೈಸೂರು ರಾಜ್ಯವನ್ನೆಲ್ಲ ಒಳಗೊಂಡಿರಲಿಲ್ಲ, ಮೈಸೂರು ನಗರದ ಸುತ್ತಮುತ್ತಲ ಪ್ರದೇಶವನ್ನು ಮಾತ್ರ ಒಳಗೊಂಡಿತ್ತೆಂದು 1909ರಲ್ಲಿ ವಿ.ಎ. ಸ್ಮಿತ್ ವಾದಿಸಿದ್ದನು. ಇದೇ ಕಾಲದಲ್ಲಿ ಬಿ.ಎಲ್. ರೈಸ್ ಪ್ರಕಟಿಸಿದ ಎರಡು ಗ್ರಂಥಗಳಲ್ಲಿ (‘ಮೈಸೂರು’ ಮತ್ತು ‘ಮೈಸೂರು ಅಂಡ್ ಕೂರ್ಗ್ ಫ್ರಮ್ ದಿ ಇನ್ ಸ್ಕ್ರಿಪ್ಷನ್') ಇದು ನಿಖರಗೊಂಡಿತ್ತು. ಈ ಪ್ರದೇಶವನ್ನು ಗುರುತಿಸುವುದು ಕಷ್ಟಸಾಧ್ಯವೆಂದು ‘ಮಹಾವಂಸ’ವನ್ನು ಇಂಗ್ಲಿಷ್‍ಗೆ ಭಾಷಾಂತರಿಸಿದ ಜಾರ್ಜ್ ಟರ್ನರ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದನು.

ಬಳಸಬೇಕಾದುದಕ್ಕಿಂತ ಹೆಚ್ಚು ಒರಟು ಪದಗಳನ್ನು ಬಳಸಿ, ಮೈಸೂರು ಪರ ವಾದವನ್ನು, ಅದರಲ್ಲೂ ರೈಸ್ ಅವರ ಸೂಚನೆಗಳೆಲ್ಲವನ್ನೂ ತಿರಸ್ಕರಿಸಿ, ಪಾಣಿನಿ ಉಲ್ಲೇಖಿಸಿದ್ದ ಅತಿಪುರಾತನವೂ ಪವಿತ್ರವೂ ಆದ ಮಾಹಿಷ್ಮತಿಯನ್ನೇ ಇದು ಸೂಚಿಸುವುದೆಂದೂ ಇದು ನರ್ಮದಾ ನದಿ ದಡದ ಮೇಲಿನ ಇಂದೋರ್ ರಾಜ್ಯದ ನಿಮಾರ್ ಜಿಲ್ಲೆಯ ಮಾಹಿಷ್ಮತಿಯೆಂದೂ ಜೆ.ಎಫ್. ಪ್ಲೀಟ್ ವಾದಿಸಿದ್ದನು (ಇವೆಲ್ಲ ವಾದ- ವಿವಾದಗಳು ಪ್ರಕಟವಾಗಿದ್ದು ಆ ಕಾಲದ ‘ಇಂಪೀರಿಯಲ್ ಗೆಜೆಟಿಯರ್’, ‘ಇಂಡಿಯನ್ ಆ್ಯಂಟಿಕ್ವೆರಿ’, ‘ಎಪಿಗ್ರಾಫಿಯಾ ಇಂಡಿಕಾ’, ‘ಏಷ್ಯಾಟಿಕ್ ರಿಸರ್ಚಸ್’, ‘ಜರ್ನಲ್ ಆಫ್ ರಾಯಲ್ ಏಷ್ಯಾಟಿಕ್ ಸೊಸೈಟಿ' ಮತ್ತು ಸ್ಮಿತ್, ರೈಸ್, ಮುಂತಾದವರು ಹೊರತಂದಿದ್ದ ಚರಿತ್ರೆಯ ಗ್ರಂಥಗಳಲ್ಲಿ).

ಈ ಕಾಲದಲ್ಲಿ ಮಹಿಷಮಂಡಲ ಮತ್ತು ಮಹಿಷ್ಮತಿ ಎಂಬ ಹೆಸರುಗಳೆರಡೂ ಒಂದೇ ಸ್ಥಳವನ್ನು ಸೂಚಿಸುತ್ತವೆಂಬ ಸ್ಥೂಲ ಕಲ್ಪನೆ ಇದ್ದುದರಿಂದ ಇವು ಎರಡು- ಮೂರು ಬೇರೆ ಬೇರೆ ವಲಯಗಳನ್ನು ಸೂಚಿಸುವ ಸಾಧ್ಯತೆಯನ್ನು ಇವರಾರೂ ಕಲ್ಪಿಸಿಕೊಂಡಿರಲಿಲ್ಲ. ಗ್ರಂಥಾಧಾರಗಳ ಮೇಲೆ ಹೆಚ್ಚು ಅವಲಂಬಿತವಾಗಿದ್ದ ಈ ಕಾಲದ ಚರ್ಚೆಯಲ್ಲಿ, ಶಾಸನಗಳಲ್ಲಿ ಮಾಡಿದ್ದ ಮಾಹಿತಿಯನ್ನೂ ಗಮನಿಸಿರಲಿಲ್ಲ. ಉದಾಹರಣೆಗೆ, ಮಧ್ಯಪ್ರದೇಶದ ಸಾಂಚೀಸ್ತೂಪದ ಮೇಲಿರುವ ನಾಲ್ಕು ಶಾಸನಗಳಲ್ಲಿ ಎರಡು ಶಾಸನಗಳು ‘ಮಹಿಸತಿ’ಯನ್ನು, ಒಂದು ‘ಮಾಹಸತಿ’ಯನ್ನು ಮತ್ತು ಇನ್ನೊಂದು ‘ಮಾಹಿಷ್ಮತಿ’ಯನ್ನು ಹೆಸರಿಸುತ್ತವೆ. ಈ ನಾಲ್ಕೂ ಉಲ್ಲೇಖಗಳು ಮೊದಲ ತಲೆಮಾರಿನ ಪಂಡಿತರನ್ನು ವಂಚಿಸಿದ್ದವು. ಸು.ಕ್ರಿ.ಪೂ. ಎರಡನೆಯ ಶತಮಾನದ ಈ ನಾಲ್ಕು ಶಾಸನಗಳು ಉಲ್ಲೇಖಿಸಿದ್ದು ಗೋದಾವರಿ ನದೀ ದಡದ ಮೇಲಿನ ಮಾಹಿಷ್ಮತಿಯನ್ನು, ಎಂದರೆ ಭೌಗೋಳಿಕ ಆಧಾರದ ಮೇಲೆ ಇದನ್ನು ಸರಿ ಎನ್ನಬಹುದು.
ಇದೇ ಹೆಸರಿನ ಇನ್ನೊಂದು ಉಲ್ಲೇಖವು ಆಂಧ್ರಪ್ರದೇಶದ ಗುಂಟುಪಲ್ಲಿಯಲ್ಲಿ ಕ್ರಿ.ಪೂ. ಎರಡನೆಯ ಶತಮಾನದ ಶಾಸನದಲ್ಲಿ ಕಾಣಿಸಿಕೊಂಡಿತ್ತು. ಮಹಾಮೇಘವಾಹನ ರಾಜವಂಶದ ಸಿರಿಸದನ ಅರಸನ ಲೇಖಕನೊಬ್ಬನು (ಲಿಪಿಕಾರ) ಮಾಡಿಸಿದ ಮಂಟಪವನ್ನು ಉಲ್ಲೇಖಿಸುವ ಈ ಶಾಸನದಲ್ಲಿ, ಈ ಅರಸನನ್ನು ‘ಕಳಿಂಗ ಮಹಿಷಿಕಾಧಿಪತಿ’ ಎಂದು ಹೊಗಳಿರುವುದರಿಂದ, ಈತನು ‘ಕಳಿಂಗ’ ಮತ್ತು ‘ಮಹಿಷ’ವೆರಡನ್ನೂ ಆಳುತ್ತಿದ್ದನೆಂದು ಮತ್ತು ಇವೆರಡೂ ಅಕ್ಕಪಕ್ಕದ ರಾಜ್ಯಘಟಕಗಳಾಗಿದ್ದವೆಂದು ಭಾವಿಸಬಹುದು. ಇಲ್ಲಿ ಕಳಿಂಗವನ್ನು ಗುರುತಿಸುವಷ್ಟು ಸುಲಭವಾಗಿ ‘ಮಹಿಷಕ’ವನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ; ಆದರೆ ಇದು ಸಾಂಚೀ ಸ್ತೂಪದ ಶಾಸನಗಳ ಮಾಹಿಷ್ಮತಿಯಾಗಿರದೆ ಮತ್ತೊಂದು ಪ್ರದೇಶವನ್ನು ಸೂಚಿಸುವ ಸಾಧ್ಯತೆ ಹೆಚ್ಚಾಗಿತ್ತು. ಆಂಧ್ರಪ್ರದೇಶದ ವಿದ್ವಾಂಸರೊಬ್ಬರು ಇದನ್ನು ಕೃಷ್ಣಾ ನದಿಮುಖದ ಪುರಾತನ ಬಂದರು ಪಟ್ಟಣವಾದ ‘ಮಾಸೋಲಿಯ’ ಆಗಿರಬಹುದೆಂದು ಸೂಚಿಸಿದ್ದಾರೆ. ಇಲ್ಲಿ ಧ್ವನಿಸಾಮ್ಯವನ್ನು ಬಿಟ್ಟರೆ ಬೇರೆ ಆಧಾರಗಳಿಲ್ಲ.ಇಲ್ಲಿಯವರೆಗೂ ಇತ್ಯರ್ಥವಾಗದಿರುವ ಈ ಹೆಸರಿನ ಮೇಲೆ ಬೆಳಕು ಚೆಲ್ಲುವ ಸುಮಾರು ಅರ್ಧ ಡಜನ್ ಪ್ರಾಕೃತ ಶಾಸನಗಳು ಈಗ ಕರ್ನಾಟಕದಲ್ಲಿ ದೊರಕಿದ್ದು, ಇವುಗಳ ಆಧಾರದಿಂದ ಇದನ್ನು ಪುನಃ ಪರಿಶೀಲನೆ ಮಾಡಬೇಕಾಗಿದೆ.

2.ಕಳೆದ ಶತಮಾನದಲ್ಲಿ ಕಲಬುರ್ಗಿ ಜಿಲ್ಲೆಯ ಭೀಮಾತೀರದ ಸಣ್ಣತಿಯಲ್ಲಿ ಅಶೋಕನ ಒಂದು ಅಪೂರ್ವ ಶಾಸನ ಮತ್ತು ಕೆಲವು ಬೌದ್ಧ ಸ್ಮಾರಕಗಳು ಬೆಳಕಿಗೆ ಬಂದಿದ್ದವು. ಇದರ ಮುಂದುವರಿಕೆಯಾಗಿ, ಈ ಶತಮಾನದಾರಂಭದಲ್ಲಿ ಸಣ್ಣತಿಗೆ ಐದು ಕಿ.ಮೀ. ದೂರದಲ್ಲಿರುವ ಕನಗನಹಳ್ಳಿಯಲ್ಲಿ ಹುದುಗಿದ್ದ ಸ್ತೂಪವೊಂದನ್ನು ಬಯಲುಗೊಳಿಸಲಾಗಿದೆ. ಈ ಭವ್ಯಸ್ತೂಪದ ಉತ್ಖನನ ವರದಿಯನ್ನು ಭಾರತೀಯ ಪ್ರಾಕ್ತನ ಇಲಾಖೆಯು 2011ರಲ್ಲಿ ಪ್ರಕಟಿಸಿ, ಸ್ತೂಪದ ವಾಸ್ತು ಮತ್ತು ಶಿಲ್ಪಗಳ ವಿವರಗಳನ್ನಲ್ಲದೆ, ಅದರ ಮೇಲಿರುವ ಸುಮಾರು 270 ಶಾಸನಗಳನ್ನೂ ಪರಿಚಯಿಸಿದೆ. ಇವುಗಳೊಡನೆ ಸಣ್ಣತಿಯಲ್ಲಿ ಈ ಮುಂಚೆ ದೊರಕಿರುವ ಸುಮಾರು 70 ಪ್ರಾಕೃತ ಶಾಸನಗಳನ್ನು ಸೇರಿಸಿಕೊಂಡು ನಮಗಿಲ್ಲಿ ಪ್ರಸ್ತುತವಾದ ಮಹಿಷಮಂಡಲದ ಚರ್ಚೆಯನ್ನು ಮುಂದುವರಿಸ ಬಯಸುವೆ.

ಕನಗನಹಳ್ಳಿ ಸ್ತೂಪದ ಅರ್ಧ ಡಜನ್ ಶಾಸನಗಳು ‘ಮಾಹಿಸ’ಕರನ್ನು ಹೆಸರಿಸಿ, ಅವರು ಮಾಡಿದ ಎಂಟು ದಾನಗಳ ವಿವರಗಳನ್ನು ಕೊಟ್ಟಿವೆ. ಇದರಲ್ಲಿ ಎರಡು ಪುಫಗಹನಿಗಳನ್ನು ದಾನ ಮಾಡಿದ ಖಜ (ಖಜಾಂಚಿ ಅಥವಾ ಖಜಗ್ರಾಮದ) ಕುಪನನ ಬಗ್ಗೆ, ಒಂದು ಕಂಬವನ್ನು ದಾನ ಮಾಡಿದ ಮಾಹಿಸದ ತೋಡಪಾಸಕನೆಂಬುವನ ಬಗ್ಗೆ, ಒಂದು ಛತ್ರವನ್ನು ದಾನ ಮಾಡಿದ ಮಾಹಿಸಕ ಹೆಸರಿನ ಬೌದ್ಧ ಸಂಘದ ಬಗ್ಗೆ, ಶಿಲ್ಪರಹಿತ ಕವಚ ಫಲಕವೊಂದನ್ನು ಮಾಹಿಸಕದ ಪೊಕಡೂರು ಗ್ರಾಮಿಣಿಯೊಬ್ಬನು ದಾನ ಮಾಡಿದ ಬಗ್ಗೆ (ಇದನ್ನು ವರದಿಯಲ್ಲಿ ಗಮನಿಸಿಲ್ಲ) ಮತ್ತು ಧರ್ಮಚಕ್ರವನ್ನು ಮೂಡಿಸಿದ ಫಲಕವೊಂದನ್ನು ದಾನ ಮಾಡಿದ ಮಾಹಿಸಕದ ಸಪುಡಿ ಗ್ರಾಮಿಣಿಯೊಬ್ಬನ ಬಗ್ಗೆ ವಿವರಗಳಿವೆ. ಇತ್ತೀಚೆಗೆ ಈ ಕೇಂದ್ರವನ್ನು ಸಂದರ್ಶಿಸಿ ಈ ವಿವರಗಳನ್ನು ದೃಢೀಕರಿಸಿಕೊಂಡು ನಾನು ಈ ಮುಂದಿನ ವಿವರಗಳನ್ನು ಹಂಚಿಕೊಳ್ಳುತ್ತಲಿರುವೆ.
ಮಹಿಸಕರು:ಈ ಆರು ಶಾಸನಗಳಲ್ಲಿ ಮೂರು ‘ಮಹಿಸಕ’ ಎಂಬ, ಇನ್ನು ಮೂರು ‘ಮಾಹಿಸೆಕ’ ಎಂಬ, ಅಲ್ಪ ಉಚ್ಚಾರ ವ್ಯತ್ಯಯದಿಂದ ಒಂದು ಪ್ರಾದೇಶಿಕ ಘಟಕವನ್ನು ಉಲ್ಲೇಖಿಸಿ, ಇದರ ಭಾಗವಾಗಿದ್ದ ಖಜ, ಪೊಕಡೂರ ಅಥವಾ ಪೋಕೋಟೂರಕ ಮತ್ತು ಸಪುಡ ಎಂಬ ಗ್ರಾಮಗಳನ್ನಲ್ಲದೆ, ಇಲ್ಲಿದ್ದ ಮಹಿಸಕ ಬೌದ್ಧ ಸಂಘವೊಂದನ್ನು ಹೆಸರಿಸಿವೆ. ಈ ಆರೂ ಶಾಸನಗಳು ಮ(ಮಾ)ಹಿಸ(ಸೆ)ವನ್ನು ಹೆಸರಿಸಿರುವುದರಿಂದ ಈ ದಾನಿಗಳೆಲ್ಲರೂ ಈ ನಾಡಿನವರಾಗಿದ್ದರು ಎಂಬುದರಲ್ಲಿ ಅನುಮಾನವಿಲ್ಲ.

ಇವರಲ್ಲಿ ಕಾಣಿಕೊಂಡಿರುವ ‘ಕುಪನ’ನು ಮೂಲತಃ ಕುಪನ ಗ್ರಾಮದವನಾಗಿದ್ದ ಎನ್ನುವುದರಲ್ಲಿ ಸಂದೇಹವಿಲ್ಲ. ಅಶೋಕನ ಕಾಲದ ಇಸಿಲ ಪಟ್ಟಣವು ಆ ನಂತರ ಕಾಲದಲ್ಲಿ ವ್ಯಕ್ತಿನಾಮವಾಗಿ ಪರಿವರ್ತನೆಗೊಂಡಂತೆ, ಕುಪನ ಎಂಬ ಸ್ಥಳನಾಮವು ಕಾಲಾನಂತರದಲ್ಲಿ ವ್ಯಕ್ತಿನಾಮವಾಗುವುದನ್ನು ಇಲ್ಲಿ ಕಾಣುವೆವು. ಇನ್ನೊಂದು ಶಾಸನದಲ್ಲಿ ದಾನಿಯನ್ನು ವ್ಯಕ್ತಿನಾಮದಿಂದ ಗುರುತಿಸದೆ ಅವನ ಕುಲದಿಂದ (ತೋಡಕುಲ) ಗುರುತಿಸಲಾಗಿದೆ. ಕುಪನದ ಬಗ್ಗೆ ವಿವರಣೆ ಕೊಡುವ ಅಗತ್ಯ ಇಲ್ಲ. ಏಕೆಂದರೆ ಅಶೋಕನ ಶಾಸನಗಳಿಂದ ಇದು ಲೋಕಪ್ರಸಿದ್ಧ ಸ್ಥಳವಾಗಿದೆ. ತೋಡ ಕುಲದ ಉಲ್ಲೇಖ ಮಾತ್ರ ಆಶ್ಚರ್ಯ ಮೂಡಿಸಿದೆ. ಇತಿಹಾಸಕ್ಕೆ ಪರಿಚಯವಿರುವ ಏಕೈಕ ತೋಡ ಕುಲಜರೆಂದರೆ ನೀಲಗಿರಿಬೆಟ್ಟದ ನಿವಾಸಿಗಳು. ಅವರಿಗೂ ಬೌದ್ಧಮತಕ್ಕೂ ಇರುವ ಸಂಬಂಧವು ಈವರೆಗೂ ಯಾರೂ ಊಹಿಸದಂತಹ ವಿಷಯವಾಗಿತ್ತು. ಈ ಸಮುದಾಯದ ಕೆಲವರು ಒಂದು ಕಾಲಘಟ್ಟದಲ್ಲಿ ಬೌದ್ಧಮತವನ್ನು ಸ್ವೀಕರಿಸಿದ್ದನ್ನು ಈ ಶಾಸನಗಳು ತಿಳಿಸಿವೆ. ಬೌದ್ಧ ಮತ್ತು ತೋಡ ಚರಿತೆಗಳೆರಡರಲ್ಲೂ ಸಂಚಲನವನ್ನು ಮೂಡಿಸಿವೆ. ಇಷ್ಟೇ ಆಶ್ಚರ್ಯ ಮೂಡಿಸುವ ಉಲ್ಲೇಖವು ಮಹಿಸಕ ಬೌದ್ಧ ಸಂಘದ್ದು. ಈ ಸಂಘದ ಹೆಸರು ಕ್ರಿ.ಶ. ಮೂರನೆಯ ಶತಮಾನದ ನಾಗಾರ್ಜುನಕೊಂಡದ ಒಂದು ಶಾಸನದಲ್ಲಿದ್ದುದು ಮಾತ್ರ ಈವರೆಗೂ ತಿಳಿದಿತ್ತು, ಪ್ರಸ್ತುತ ಉಲ್ಲೇಖವು ಅದಕ್ಕಿಂತಲೂ ಪೂರ್ವಕಾಲದ್ದಾಗಿದ್ದು, ಈ ಸಂಘದ ಇತಿಹಾಸವನ್ನು ಇನ್ನೂ ಪೂರ್ವಕಾಲಕ್ಕೆ ಕೊಂಡೊಯ್ದಿದೆ. ಕಳೆದ ಶತಮಾನದಲ್ಲಿ ಗಮನಕ್ಕೆ ಬಂದಿದ್ದ ನಾಗಾರ್ಜುನಕೊಂಡದ ಶಾಸನದ ಆಧಾರದ ಮೇಲೆ ಆಂಧ್ರಪ್ರದೇಶದ ಇತಿಹಾಸಕಾರರು ಈ ಮಾಹಿಸಕವನ್ನು ಕೃಷ್ಣಾ, ಗೋದಾವರಿ ನಡುವಿನ ಪ್ರದೇಶದಲ್ಲಿ ಕಾಣಲು ಪ್ರಯತ್ನಿಸಿದ್ದರು. ಅದನ್ನೀಗ ಪುನಃ ಪರಿಶೀಲಿಸಲು ಕನಗನಹಳ್ಳಿಯ ಶಾಸನವು ಒತ್ತಾಯಿಸುತ್ತದೆ.
ಈ ಮಹಿಸ ಸಂಘದ ಪುರಾತನತೆಯು ಕ್ರಿ.ಪೂ. ಮೂರನೆಯ ಶತಮಾನಕ್ಕೆ ಹೋಗುವುದಾದರೆ, ಇದಕ್ಕೂ ಮಹಿಷಮಂಡಲದಲ್ಲಿ ಬೌದ್ಧಧರ್ಮವನ್ನು ಪ್ರಸಾರ ಮಾಡಿದ ಭಿಕ್ಕು ಮಹೇಂದ್ರನಿಗೂ ಏನಾದರೂ ಸಂಬಂಧವಿತ್ತೇ ಎಂಬ ಕುತೂಹಲ ಮೂಡುವುದು.

ದ್ಧಪರಂಪರೆಯಲ್ಲಿ ಥೇರವಾದಿಗಳಲ್ಲಿಯೇ ಅತ್ಯಂತ ಸಾಂಪ್ರದಾಯಿಗಳ ಶಾಖೆ ಇದಾಗಿತ್ತೆಂದೂ, ಸ್ಥಾವರವಾದಿಗಳಿಂದ ಬೇರ್ಪಟ್ಟು, ಸ್ವತಂತ್ರ ಸಿದ್ಧಾಂತಗಳನ್ನು ಈ ಸಂಘದ ಸದಸ್ಯರು ರೂಪಿಸಿಕೊಂಡಿದ್ದರೆಂದೂ ತಿಳಿದುಬರುವುದು. ಸಂಘ ಮತ್ತು ಸ್ತೂಪಗಳಿಗೆ ಮಾಡುವ ದಾನವು ನೇರವಾಗಿ ಬುದ್ಧನಿಗೆ ಮಾಡುವ ದಾನಕ್ಕಿಂತಲೂ ಶ್ರೇಷ್ಠವೆಂಬುದು ಇವರ ಸಿದ್ಧಾಂತಗಳಲ್ಲಿ ಒಂದಾಗಿತ್ತು. ಕನಗನಹಳ್ಳಿಯ ಸ್ತೂಪದೊಡನೆ ಈ ಸಂಘವು ಗುರುತಿಸಿಕೊಂಡಿರುವುದರಿಂದ ಇದಕ್ಕೂ ಮಹಿಷಮಂಡಲಕ್ಕೂ ಇದ್ದ ಸಂಬಂಧವನ್ನು ಈ ಮೂಲಕ ಅರಿತುಕೊಳ್ಳಬಹುದಾಗಿದೆ.
ತೋಡರು: ಇಂದು ತಮಿಳುನಾಡಿನ ಆಡಳಿತಕ್ಕೊಳಪಟ್ಟಿರುವ ನೀಲಗಿರಿ ಬೆಟ್ಟಪ್ರದೇಶವು ಮೈಸೂರು ಜಿಲ್ಲೆಯ ನಿಕಟ ದಕ್ಷಿಣಕ್ಕಿದ್ದು, ಪೂರ್ವಕಾಲದಲ್ಲಿ ತಮಿಳು, ಕೇರಳ ಮತ್ತು ಕರ್ನಾಟಕಗಳೊಡನೆ ಸಮಾನ ಸಂಪರ್ಕ ಹೊಂದಿತ್ತು. ‘ತೋಡುಪಾಸಕ’, 'ತೋಡಕಾಡ’, ‘ತೋಡಕುಲಸ’. ‘ತೋಡಗಹಪತಿ’, ‘ತೋಡ’ (ಸಚನ) ಎಂಬ ಹೆಸರಿನವರನ್ನು ಕನಗನಹಳ್ಳಿಯ ಶಾಸನಗಳು ಉಲ್ಲೇಖಿಸಿದ್ದು, ನೀಲಗಿರಿ ಬೆಟ್ಟದ ಈ ಬುಡಕಟ್ಟಿನ ಜನಾಂಗದ ಮೇಲೆ ಹೊಸ ಬೆಳಕನ್ನು ಚೆಲ್ಲಿವೆ. ವಿವರಗಳು ಹೀಗಿವೆ:

(1) ವೃತ್ತಿಯಿಂದ ಮಣಿಕಾರನಾಗಿದ್ದ ತೋಡಕಾಡ (ತೋಡ ಕುಟುಂಬದ) ಮಹಾಮರಿತಿನ್ ಎಂಬುವನು ಒಂದು ಫಲಕದ ಮೇಲೆ ಚೇತಿಯನ್ನೂ ನಾಗನನ್ನೂ ಕೆತ್ತಿಸಿ, ಅದನ್ನು ಈ ಸ್ತೂಪದ ಹೊರಮೈಯನ್ನು ಅಲಂಕರಿಸಲು ದಾನ ಮಾಡಿದ್ದನು.

(2) ತೋಡಕುಲವೆಂದು ಗುರುತಿಸಿಕೊಂಡ ಇನ್ನೋರ್ವನು ಸುಂದರವಾದ ಕವಚ ಫಲಕವೊಂದನ್ನು ಎರಡು ಹಂತಗಳಲ್ಲಿ ಕೆತ್ತಿಸಿ ಸ್ತೂಪದ ಹೊರಮೈಯನ್ನು ಅಲಂಕರಿಸಲು ದಾನ ಮಾಡಿದ್ದನು. ಈ ಫಲಕದ ಕೆಳಗಿನ ಅಂಕಣದಲ್ಲಿ ನಾಲ್ವರು ಮಹಿಳೆಯರು ಹಾಗೂ ಮೂವರು ಮಕ್ಕಳ ಶಿಲ್ಪಗಳಿದ್ದರೆ, ಮೇಲಿನ ಅಂಕಣದಲ್ಲಿ ಇಬ್ಬರು ಭಿಕ್ಕುಗಳು, ನಾಲ್ವರು ಪುರುಷರು ಹಾಗೂ ಮೂವರು ಮಕ್ಕಳ ಶಿಲ್ಪಗಳಿವೆ. ಒಂದು ಕುಟುಂಬದ ಸದಸ್ಯರೆಲ್ಲರೂ ಒಟ್ಟುಗೂಡಿ ಇಬ್ಬರು ಭಿಕ್ಕುಗಳಿಗೆ ಮಾಡಿದ ದಾನವನ್ನು ನಿರೂಪಿಸುವ ಈ ಫಲಕದ ಮೇಲೆ ಕಂಡರಿಸಿರುವ ಶಾಸನವು ವ್ಯಕ್ತಿಗತವಾಗಿ ಇವರಾರನ್ನೂ ಹೆಸರಿಸುವುದಿಲ್ಲ.

(3) ತೋಡಗಹಪತಿ ಎಂದು ಕರೆದುಕೊಂಡ ಇನ್ನೊಬ್ಬನು ಇದೇ ಸ್ತೂಪದ ಹೊರಮೈಯನ್ನು ಅಲಂಕರಿಸಲು, ವಿದುರ ಜಾತಕವನ್ನು ನಿರೂಪಿಸುವ ಎರಡು ಕವಚಫಲಕಗಳನ್ನು ಸಿದ್ಧಗೊಳಿಸಿ ದಾನ ಮಾಡಿದ್ದನು. ಎರಡೆರಡು ಅಂಕಣಗಳಲ್ಲಿ ಕೆತ್ತಿರುವ ಈ ಎರಡು ಫಲಕಗಳ ನಾಲ್ಕು ಅಂಕಣಗಳಲ್ಲಿ ಒಂಬತ್ತು ಸ್ತ್ರೀಯರು ಮತ್ತು ಹನ್ನೊಂದು ಪುರುಷರ ಶಿಲ್ಪಗಳಿವೆ. ಇದರ ಮೇಲೆ ಕಂಡರಿಸಿರುವ ಶಾಸನವು ಇವರಾರನ್ನೂ ಹೆಸರಿಸುವುದಿಲ್ಲ.

(4) ಸ್ತೂಪದ ಪ್ರದಕ್ಷಿಣ ಪಥದ ಒಂದು ಕಂಬವನ್ನು ದಾನ ಮಾಡಿದವನು ತಾನೊಬ್ಬ ತೋಡ ಉಪಾಸಕನೆಂದೂ ಮಹಿಸನಾಡಿನವನೆಂದೂ ಗುರುತಿಸಿಕೊಂಡಿರುವನು.

(5) ‘ಸಚನ’ನೆಂಬ ಹೆಸರಿನ ಇನ್ನೊಬ್ಬ ತೋಡನು, ತೋಡಗಹಪತಿ ಮತ್ತು ತೋಡಕಾಡನು ಮಾಡಿದ ಕವಚಫಲಕಗಳ ದಾನದಂತೆ, ಎರಡು ಅಂಕಣದ ಒಂದು ಫಲಕವನ್ನು ಸಿದ್ಧಗೊಳಿಸಿ ದಾನ ಮಾಡಿರುವನು. ಇದರ ಮೇಲಿನ ಅಂಕಣದಲ್ಲಿ ರಥವನ್ನು, ಕೆಳಗಿನ ಅಂಕಣದಲ್ಲಿ ಗಜಗಳನ್ನು ಪ್ರದರ್ಶಿಸಲಾಗಿದೆ. ಆದರೆ ಇದರ ಸಂದೇಶ ನಿಲುಕದಾಗಿದೆ.

ಈ ಎಲ್ಲಾ ದಾನಿಗಳೂ ಮಾಹಿಸಕ ದೇಶದವರೆಂದು ಹೇಳಿಕೊಂಡಿರುವುದು ಇಲ್ಲಿ ಗಮನಾರ್ಹ. ಅಂದರೆ ಕ್ರಿಸ್ತಶಕದ ಆರಂಭಕ್ಕಿಂತ ಮುಂಚೆ ನೀಲಗಿರಿ ಬೆಟ್ಟಪ್ರದೇಶವು ಮಾಹಿಸಕ ಜನಪದದ ದಕ್ಷಿಣದ ಭಾಗವಾಗಿತ್ತೆಂದಂತಾಯ್ತು. ಇಲ್ಲಿಂದ ಈ ವಲಯವು ಉತ್ತರಕ್ಕೆ ವಿಸ್ತರಿಸಿಕೊಂಡು ಇಂದಿನ ಕೊಪ್ಪಳವನ್ನು ತಲುಪಿತ್ತೆನ್ನಿಸುವುದು. ಅಲ್ಲದೆ ಈ ವಿಶಾಲ ಪ್ರದೇಶದ ನಿವಾಸಿಗಳು ಕಲಬುರ್ಗಿ ಜಿಲ್ಲೆಯ ಬೌದ್ಧ ಕೇಂದ್ರಗಳೊಡನೆ ಗಾಢವಾಗಿ ಗುರುತಿಸಿಕೊಂಡಿದ್ದರು ಎಂಬುದಕ್ಕೆ ತೋಡರನ್ನು ಉಲ್ಲೇಖಿಸುವ ಆರು ಶಾಸನಗಳು ಸಾಕ್ಷಿಯಾಗಿವೆ. ಈ ತೋಡರಲ್ಲಿ ಕೆಲವರು ಕ್ರಿ.ಪೂ.ಮೂರನೆಯ ಶತಮಾನದಲ್ಲಿಯೇ ಭಿಕ್ಕು ಮಹೇಂದ್ರನ ಬೌದ್ಧಮತ ಪ್ರಸಾರದಿಂದ ಪ್ರಭಾವಿತರಾಗಿ ಕುಟುಂಬ ಸಮೇತರಾಗಿ ಈ ಮತವನ್ನು ಸ್ವೀಕರಿಸಿದ್ದರೆಂಬುದು, ಇವರಲ್ಲಿ ಕೆಲವರು ಮಣಿಕಾರ ಮುಂತಾದ ವಣಜಿಗ ವೃತ್ತಿಗೆ ಸೇರಿದವರಾಗಿದ್ದರೆ ಇನ್ನು ಕೆಲವರು ಸ್ಥಿತಿವಂತ ಗೃಹಸ್ಥರಾಗಿದ್ದರು. ಇವರಲ್ಲಿ ಮಾಹಿಸಕ ಸಂಘದ ಭಿಕ್ಕುಗಳೂ ಇದ್ದರೆಂಬುದನ್ನು ಈಗಾಗಲೇ ಗಮನಿಸಿರುವೆವು.

ಇವರೆಲ್ಲರೂ ಈ ಸ್ತೂಪಕ್ಕೆ ಮಾಡಿದ ಕೊಡುಗೆಗಳಿಂದ ಮಾತ್ರವಲ್ಲ ಈ ಸ್ತೂಪದ ಮೇಲೆ ಪ್ರದರ್ಶಿಸಿಕೊಂಡಿರುವ ವೈಖರಿಯಿಂದಲೂ ತಮ್ಮ ಬೌದ್ಧನಿಷ್ಠೆಯನ್ನು ಸಾಬೀತುಪಡಿಸಿದ್ದಾರೆ. ಕನಗನಹಳ್ಳಿಯ ಅಧಲೋಕ ಮಹಾಚೇತಿಯ ಕಟ್ಟಡ ಕಾರ್ಯವು ಉಚ್ಛ್ರಾಯ ಹಂತದಲ್ಲಿರುವಾಗ, ಅದರ ಹೊರಾಲಂಕಾರವು ಭರದಿಂದ ಸಾಗುತ್ತಿದ್ದಾಗ, ಬೃಹದಾಕಾರದ ಸುಮಾರು 59 ಸಚಿತ್ರ ಕವಚ ಫಲಕಗಳಿಂದ (ಸು. 3.30 ಮೀ.ಎತ್ತರ, 1.20 ಮೀ. ಅಗಲ) ಇದನ್ನು ಅಲಂಕರಿಸುವ ಕಾರ್ಯದಲ್ಲಿ ಈ ತೋಡರು ತೊಡಗಿಸಿಕೊಂಡಿದ್ದರೆಂದು ಕಾಣುವುದು.

3.ಮಹಿಷಮಂಡಲಕ್ಕೆ ಸಂಬಂಧಿಸಿ ಇನ್ನೂ ಕೆಲವು ವಿವರಗಳು: ಅಶೋಕನ ಕಾಲದಲ್ಲಿ ಮತ ಪ್ರಸಾರಕ್ಕೆ ಕಳಿಸಿದ ಮಹಿಷಮಂಡಲವು ಇಂದಿನ ಮೈಸೂರು ಪ್ರದೇಶವಾಗಿತ್ತೆಂಬುದನ್ನು, ಭಿಕ್ಕು ಮಹೇಂದ್ರನ ತಂಡವು ಬೌದ್ಧಮತಕ್ಕೆ ಪರಿವರ್ತಿಸಿದ ಇಲ್ಲಿಯ 60,000 ನಿವಾಸಿಗಳಲ್ಲಿ ನೀಲಗಿರಿಯ ಪ್ರಧಾನ ಬುಡಕಟ್ಟಿನ ಸಮುದಾಯದ ತೋಡರೂ ಸೇರಿದ್ದರೆಂಬುದನ್ನು ಮತ್ತು ಅಂದಿನ ಮಹಿಷಮಂಡಲವು ನೀಲಗಿರಿ ಬೆಟ್ಟಸಾಲನ್ನು ಒಳಗೊಂಡಿತ್ತೆಂಬುದನ್ನು ಕನಗನಹಳ್ಳಿಯಲ್ಲಿ ಶಾಸನಗಳು ದೃಢಪಡಿಸುತ್ತವೆ. ಇದನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಲು ನಾವು ತಮಿಳುನಾಡಿನ ಶಂಗಂ ಸಾಹಿತ್ಯವನ್ನು ಈ ಅಧ್ಯಯನದ ವ್ಯಾಪ್ತಿಯಲ್ಲಿ ತಂದುಕೊಳ್ಳಬೇಕಾಗುತ್ತದೆ.

ಶಂಗಂ ಕಾಲದ ಬಗ್ಗೆ ಅನಿಶ್ಚಿತತೆ ಇದೆ. ಆದರೆ, ಇದು ತಮಿಳರ ಅತಿಪೂರ್ವಕಾಲದ ಮೌಖಿಕ ಸಾಹಿತ್ಯವಾಗಿತ್ತೆಂಬುದರ ಬಗ್ಗೆ ಮತ್ತು ಇದರ ಆರಂಭವು ಕ್ರಿ.ಶ.ದ ಹೊರಳಿನಲ್ಲಿ ಇತ್ತೆನ್ನುವ ಬಗ್ಗೆ ಅನುಮಾನವಿಲ್ಲ. ಇದರಲ್ಲಿ ತೊಡಗಿಸಿಕೊಂಡ 423 ಕವಿ-ಕವಿಯತ್ರಿಯರು ರಚಿಸಿದ 2,381 ಕವನಗಳು ಇಂದಿಗೂ ಉಳಿದುಕೊಂಡು ಬಂದಿವೆ. ಇವನ್ನು 13-14ನೆಯ ಶತಮಾನದಲ್ಲಿ ಸಂಕಲಿಸಿ, ಗ್ರಂಥರೂಪಕ್ಕಿಳಿಸಿ, ಟೀಕೆಯನ್ನು ಬರೆದ ಬಗ್ಗೆ ಭಿನ್ನಾಭಿಪ್ರಾಯವಿಲ್ಲ. ನಂದರನ್ನೂ ಮೌರ್ಯರನ್ನೂ ಸ್ಮರಿಸುವ ಇದರಲ್ಲಿಯ ಕೆಲವು ಕವನಗಳು ಇವು ಅಶೋಕೋತ್ತರ ಕಾಲದಲ್ಲಿ, ಅಂದರೆ ಸು.ಕ್ರಿ.ಪೂ.ಎರಡನೆಯ ಶತಮಾನದಲ್ಲಿ ಇಲ್ಲವೇ ಆನಂತರದ ಕಾಲದಲ್ಲಿ ರಚನೆಯಾಗಿದ್ದ ಸಾಧ್ಯತೆಯನ್ನು ಸೂಚಿಸುತ್ತವೆ. ಸಾತವಾಹನರನ್ನು 'ನೂರ್ರವರ್- ಕಣ್ಣರ್’ ಎಂದು ಇವರಲ್ಲಿ ಕೆಲವರು ನೆನೆದಿರುವುದರಿಂದ ಈ ಸಾಹಿತ್ಯವು ಸಾತವಾಹನರ ಅಂತ್ಯಕಾಲದವರೆಗೂ ಮುಂದುವರಿಯಿತು ಎನ್ನಬಹುದಾಗಿದೆ. ಇದು ಏನೇ ಆಗಿರಲಿ, ಮಹಿಷಮಂಡಲದಲ್ಲಿ ಬೌದ್ಧಮತ ಪ್ರಸಾರವಾಗುತ್ತಿದ್ದ ಕಾಲದ ಸರಿಸುಮಾರಿನಲ್ಲಿ ಈ ಕಾವ್ಯ ರಚನೆಯಾಯಿತು ಎನ್ನಬಹುದು. ಅಂದಹಾಗೆ, ‘ಶಂಗಂ’ ಪದವು ಬೌದ್ಧ-ಜೈನರ ಸಂಘದಿಂದ ಕ್ರಿ.ಶ. ಏಳನೆಯ ಶತಮಾನದಲ್ಲಿ ಪಡೆದುಕೊಂಡದ್ದಾಗಿದ್ದು, ಆ ಮುಂಚೆ ಇದನ್ನು ‘ತೊಗೈ’ ಪದದಿಂದ ತಮಿಳು ಭಾಷಿಕರು ಗುರುತಿಸಿದ್ದರು.

ಇತ್ತೀಚಿನ ಸಂಶೋಧನೆಯಲ್ಲಿ ಈ ಸಾಹಿತ್ಯವು ಸಾಂಪ್ರದಾಯಿಕ ತಮಿಳುನಾಡಿನ ಗಡಿಯನ್ನು ದಾಟಿ ಉತ್ತರಕ್ಕೆ ಪಸರಿಸಿತ್ತು ಎಂಬುದು ತಿಳಿದುಬಂದಿದೆ. ಶಂಗಂ ಕವಿಗಳ ಸಾಂಪ್ರದಾಯಿಕ ಕಲ್ಪನೆಯಲ್ಲಿ ‘ತಮಿಳಗಂ’ ಎಂದರೆ ಕುಮಾರಿಯಿಂದ ವೇಂಗಡದವರೆಗಿನ (ಕನ್ಯಾಕುಮಾರಿಯಿಂದ ವೆಂಕಟಾದ್ರಿ ಅಥವಾ ತಿರುಪತಿ) ಪ್ರದೇಶವು; ಇದರ ಕೇಂದ್ರವು ವೈಗೈ (ಮದುರೆ ಪಟ್ಟಣ) ನದೀದಡವು. ಆದರೆ ಇದು ಪೂರ್ವಭಾಗವನ್ನಷ್ಟೇ ಗಣನೆಗೆ ತೆಗೆದುಕೊಂಡು, ಪಶ್ಚಿಮ ಭಾಗವನ್ನು ಉಪೇಕ್ಷಿಸಿರುವ ಅಸಮರ್ಪಕ ಭೌಗೋಳಿಕ ವ್ಯಾಖ್ಯಾನವೆನಿಸಿದೆ. ತಮಿಳು ಮೂವೆಂದಾರ್ (ಅಂದರೆ ಮೂವರು ಪ್ರಧಾನ ರಾಜರುಗಳಾದ ಪಾಂಡ್ಯ, ಚೋಳ ಮತ್ತು ಚೇರರು ಮಾತ್ರವಲ್ಲದೆ) ಹತ್ತಾರು ಚಿರ್ರರಸರು ಆಳುತ್ತಿದ್ದ ತಮಿಳುಗಂ ವಲಯದವರು ತಮ್ಮೊಡನೆ ಮಾತ್ರವಲ್ಲ ತಮ್ಮ ಉತ್ತರಕ್ಕಿದ್ದ ವಡುಗರೊಡನೆ ನೀಲಗಿರಿ ಪ್ರದೇಶವನ್ನು ಈ ಕಾಲದಲ್ಲಿ ಹಂಚಿಕೊಂಡಿದ್ದರು.
ವಡುಗರು ತಮಿಳೇತರರೂ ಹಾಗೂ ತಮಿಳುಭಾಷೆ ತಿಳಿಯದವರೂ ಆಗಿದ್ದರೆಂಬುದನ್ನು ಕೆಲವು ಶಂಗಂ ಕವಿಗಳು ಸ್ಪಷ್ಟಪಡಿಸಿದ್ದಾರೆ. ಆನೆಗಳನ್ನು ಅಂಕುಶಗಳಿಂದ ಮೀಟುತ್ತಾ ಪಳಗಿಸುತ್ತಿದ್ದ ಮಾವುತರು ಹೇಗೆ ತಮಿಳೇತರ ನುಡಿಯಲ್ಲಿ ಕೂಗುತ್ತಿದ್ದರೆಂಬುದನ್ನು ಪತ್ತುಪಾಟುವಿನ ಕವಿ ನಪ್ಪೂದಣಾರ್ ವರ್ಣಿಸಿರುವರು. ಇದು ಆನೆಗಳನ್ನು ಪಳಗಿಸುವುದರಲ್ಲಿ ಹೆಸರಾದ ಕಬನೀ-ನೀಲಗಿರಿ ಪ್ರಾದೇಶಿಕರನ್ನು ನೆನಪಿಗೆ ತರುವುದು. ವಡುಗರ ನಾಯಕರುಗಳಾದ ಕೊಂಗಾಣರ್, ಕರುನಾಡರ್, ಗಂಗರ್ ಈ ಮುಂತಾದ ‘ಆರ್ಯರ’ ಮೇಲೆ ಜಯ ಸಾಧಿಸಿಕೊಂಡ ಚೇರ ಶೆಂಗುಟ್ಟುವನ್ ಪ್ರಸ್ತಾಪ ಪದಿಮ್ರಿಪಟ್ಟುವಿನಲ್ಲಿದೆ. ಚೇರರಿಗೂ ಕಟಂಬರಿಗೂ (ಕದಂಬ) ಸಂಭವಿಸುತ್ತಿದ್ದ ಕಡಲಯುದ್ಧದ ಪ್ರಸ್ತಾಪಗಳಿಗೆ ಎಣಿಕೆ ಇಲ್ಲ. ಈ ಕಟಂಬುಗಳನ್ನು ಚೇರರು ಕಡಲ್ಗಳ್ಳರೆಂದು ಕರೆದರೆ, ಕದಂಬರು ತಮ್ಮನ್ನು ತಾವು ಸಮುದ್ರಾಧಿಪತಿಗಳೆಂದು ಕರೆದುಕೊಳ್ಳುತ್ತಿದ್ದ ಚಿತ್ರವಿದೆ. ವಡುಗರನ್ನು ಕುಡ (ಪಶ್ಚಿಮ) ನಾಡಾಧಿಪತಿಗಳೆಂದು ಕೆಲವು ಶಂಗಂ ಕವಿಗಳು ಕರೆದರೆ, ಇನ್ನು ಕೆಲವರು ‘ಎರುಮೈಕುಡುನಾಡು’, ‘ಎರುಮೈನಲ್ನಾಡು’ವಿನವರು ಎಂದು ಕರೆದಿರುವರು. ವಡುಗರ ರಾಜ್ಯ ಘಟಕಗಳು ಆಯಿರಿ ನದಿಯ ಪರಿಸರದಲ್ಲಿ ಇದ್ದವೆಂದು ಅಹನಾನೂರಿನ ಕವಿ ಹೇಳಿರುವುದರಿಂದ ಇದು ದಿಂಡಿಗಲ್ ಜಿಲ್ಲೆಯ ಐವಾರ್‍ಮಲೈ ನದಿಯಾಗಿತ್ತೆಂದು ಭಾವಿಸಲಾಗಿದೆ. ಎರುಮೈ ಊರವರು ತಮಿಳು ಭಾಷಿಕರಾಗಿದ್ದಂತೆ ಕೊಡಗು, ಕೊಂಕಣಿ, ತುಳು ಮತ್ತು ಕನ್ನಡ ಭಾಷಿಕರೂ ಆಗಿದ್ದರು. ಈ ಕಾರಣದಿಂದಲೇ ಏನೋ, ತಮಿಳಗಂನ ಉತ್ತರ ಗಡಿಯಲ್ಲಿ (ಕಾವಲ್ ನಾಡನ್ನು) ಆಳುತ್ತಿದ್ದವರನ್ನು ‘ನೆಡುಮೋಳಿ’ (ಅರ್ಧಂಬರ್ಧ ತಮಿಳರು), 'ತಿರುವುಮೋಳಿ’ (ಅಶುದ್ಧ ತಮಿಳು ಭಾಷಿಕರು) ಎಂದು ಈ ಕವಿಗಳು ಕರೆದಿದ್ದರು. ತಮಿಳಿನ 'ಎರುಮೈನಾಡು’ವಿನ ಕನ್ನಡ ರೂಪಾಂತರವೇ ಎರುಮಿನಾಡು.

ಇದು ಇಂದಿನ ಕೊಡಗು, ದಕ್ಷಿಣ ಕನ್ನಡ (ಕೊಂಕಣ), ಮೈಸೂರು ಮತ್ತು ಕೇರಳದ ಉತ್ತರಕ್ಕಿರುವ ಭೂಭಾಗವನ್ನು ಒಳಗೊಂಡಿತ್ತು. ಇವರು ತಮಿಳುನಾಡಿನಲ್ಲಿ ಪ್ರಚಾರಕ್ಕೆ ಬಂದಿದ್ದ ಬ್ರಾಹ್ಮಿ ಲಿಪಿಯಲ್ಲಿ ಕನ್ನಡ ಮಿಶ್ರಿತ ತಮಿಳು ಭಾಷೆಯಲ್ಲಿ ಕ್ರಿ.ಪೂ ಒಂದನೆಯ ಶತಮಾನದಲ್ಲಿ ಪುದುಕ್ಕೋಟೈ ಜಿಲ್ಲೆಯ ಸಿತ್ತನ್‍ವಾಸಲ್‍ನಲ್ಲಿ ಒಂದು ಶಾಸನವನ್ನು ಬರೆಸಿದ್ದರು. ಇದರಲ್ಲಿ ಎರಮಿನಾಡ ಕುಮಳೂರಿನಲ್ಲಿ ಜನಿಸಿದ ಗೌಡನ (ಕುವಡಿಯ) ಮತ್ತು ಮೈಸೂರು ಪ್ರದೇಶದ ಕುಮಳೂರಿನ (ಕುಂಬಳೂರು-ಕುಂಬ್ಳೂರಿನ) ಪ್ರಸ್ತಾಪಗಳಿವೆ. ಈ ಉಲ್ಲೇಖಗಳಲ್ಲಿರುವ ಎರಮೈ ತಮಿಳು ಪದವು ಕನ್ನಡದ ಎಮ್ಮೆ ಪದಕ್ಕೆ ಸಮಾನ. ಅಂದರೆ ಎರುಮೈನಾಡವರು ಗುರುತಿಸಿಕೊಳ್ಳುತ್ತಿದ್ದ ಎಮ್ಮೆಗಳ ನಾಡು ಎಂದಂತಾಯ್ತು. ಇದು ಸುಲಭವಾಗಿ ಮಹಿಷಮಂಡಲದೊಡನೆ ಸಮೀಕರಣಗೊಳ್ಳುವುದರಿಂದ ತೋಡ ಜನಾಂಗದ ನೀಲಗಿರಿಯೂ ಇದರಲ್ಲಿ ಒಳಗೊಂಡಿತ್ತೆನ್ನಲು ಅನುಮಾನ ಬರುವುದಿಲ್ಲ. ಇವರಲ್ಲಿ ಒಬ್ಬನನ್ನು ಕನಗನಹಳ್ಳಿಯ ಪ್ರಾಕೃತ ಶಾಸನವು ‘ಮಹಿಸಕಸ ತೋಡುಪಾಸಕ’ನೆಂದು ನೆನೆದಿರುವುದು. ಈ ಬೌದ್ಧೋಪಾಸಕರಾದ ತೋಡರನ್ನು ‘ತೋಡಕಾಡ’, ‘ತೋಡಕುಲ’, ‘ತೋಡಗಹಪತಿ’ ಎಂದೂ ಗುರುತಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.