ADVERTISEMENT

ಭೂಮಿ ತಾಯಿಗೆ ಸೀಮಂತ: ಮಲೆನಾಡಿಗರ ವಿಶೇಷ ‘ಭೂಮಿ ಹುಣ್ಣಿಮೆ‘ ಆಚರಣೆಯ ಸೊಬಗು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಅಕ್ಟೋಬರ್ 2025, 7:24 IST
Last Updated 7 ಅಕ್ಟೋಬರ್ 2025, 7:24 IST
<div class="paragraphs"><p>ಭೂಮಿ ಹುಣ್ಣಿಮೆ ಆಚರಣೆ</p></div>

ಭೂಮಿ ಹುಣ್ಣಿಮೆ ಆಚರಣೆ

   

ಚಿತ್ರ ಕೃಪೆ: ನಂದಿತಾ ನೇರಿಗೆ

ಮಲೆನಾಡಿನ ವಿಶಿಷ್ಟ ಹಬ್ಬ ಭೂಮಿ ಹುಣ್ಣಿಮೆ ಶರತ್ ಋತುವಿನ ಅಶ್ವಯುಜ ಮಾಸದ ಶುಕ್ಲ ಪಕ್ಷದ ಕೊನೆಯ ದಿನದ ಹುಣ್ಣಿಮೆಯಂದು (ಸೀಗೆ ಹುಣ್ಣಿಮೆ ) ರೈತರು ಭೂಮಿ ಹುಣ್ಣಿಮೆಯನ್ನು ವಿಶೇಷವಾಗಿ ಆಚರಿಸುತ್ತಾರೆ. ಪಂಚಭೂತಗಳಾದ ಭೂಮಿ, ನೀರು, ಅಗ್ನಿ, ವಾಯು, ಆಕಾಶದ ಹೊರತಾಗಿ ಯಾವುದು ಇಲ್ಲ. ಮನುಷ್ಯ ಪ್ರಕೃತಿಯ ಒಂದು ಭಾಗವಾಗಿರುವುದರಿಂದ ಪ್ರಕೃತಿಗೆ ವಿಶೇಷ ಕೃತಜ್ಞತೆ ಸಲ್ಲಿಸಲು ಅನೇಕ ಪೂಜೆ, ಹಬ್ಬಗಳನ್ನು ಆಚರಿಸುತ್ತಾರೆ. ಕೃಷಿಯನ್ನು ನಂಬಿ ಬದುಕುವ ರೈತಾಪಿ ವರ್ಗ ಅನ್ನ ನೀಡುವ ಭೂಮಿಯನ್ನು ತಾಯಿಯ ಜೊತೆಗೆ ಭಾವನಾತ್ಮಕ ಬೆಸುಗೆ ಹೊಂದಿದ್ದಾರೆ. ಈ ಹಬ್ಬವನ್ನು ಭೂಮಿ ತಾಯಿ ಗರ್ಭಿಣಿ ಆಗಿರುವ ಸಂಕೇತ ಎಂದು ಆಚರಿಸುತ್ತಾರೆ. ಹಚ್ಚ ಹಸಿರಿನ ಮಡಿಲಿನಲ್ಲಿ ಫಸಲನ್ನು ಹೊತ್ತು ಗರ್ಭಿಣಿಯಾದ ಭೂಮಿ ತಾಯಿ ದೈವಿ ಸ್ವರೂಪಳು ಎಂದು ಭಕ್ತಿ ಭಾವದಿಂದ ನಮಿಸುತ್ತಾರೆ.

ADVERTISEMENT

ಸಂಸ್ಕೃತಿಯ ಪ್ರತೀಕವಾ ‘ಭೂಮಣ್ಣಿ ಬುಟ್ಟಿ‘

ವಿಶೇಷವಾಗಿ ಮಲೆನಾಡಿನ ದೀವರ ಸಮುದಾಯದವರು ಆಚರಿಸುವ ಹಬ್ಬಗಳಲ್ಲಿ ಭೂಮಿ ಹುಣ್ಣಿಮೆಗೆ ವಿಶೇಷ ಪ್ರಾಧಾನ್ಯತೆ ಇದೆ. ಈ ಹಬ್ಬವು ವೈಶಿಷ್ಟ ಹಾಗೂ ಅರ್ಥಪೂರ್ಣವಾದ್ದಾಗಿದೆ. ಹಬ್ಬದಲ್ಲಿ ಭೂಮಣ್ಣಿ ಬುಟ್ಟಿಗೆ ಹೆಚ್ಚು ವಿಶೇಷತೆ ನೀಡಲಾಗಿದೆ. ಬಿದಿರಿನಿಂದ ತಯಾರಿಸಿದ ಎರಡು ಬುಟ್ಟಿಗಳಿರುತ್ತವೆ, ಅದರಲ್ಲಿ ಒಂದು ಬುಟ್ಟಿ ದೊಡ್ಡದಾಗಿದ್ದರೆ, ಇನ್ನೊಂದು ಚಿಕ್ಕದು.

ವಿಜಯದಶಮಿ ಹಬ್ಬದ ಹಿಂದಿನ ದಿನ ಎರಡು ಬುಟ್ಟಿಗೆ ಸಗಣಿ ಬಳಿದು ಕೆಮ್ಮಣ್ಣು ಹಚ್ಚಿ ಚೆನ್ನಾಗಿ ಒಣಗಿಸಿ ವಿಜಯದಶಮಿ ಹಬ್ಬದಂದು ಈ ಬುಟ್ಟಿಗಳನ್ನು ಪೂಜಿಸಿ ನಂತರ ಮಹಿಳೆಯರು ಚಿತ್ತಾರ ಬರೆಯಲು ಪ್ರಾರಂಭಿಸುತ್ತಾರೆ. ಅಕ್ಕಿಯಿಂದ ಬಿಳಿ ಬಣ್ಣವನ್ನು ತಯಾರಿಸಿ ಪುಂಡಿ ನಾರಿನ ಕುಂಚ (ಬ್ರಷ್ )ದಿಂದ ಬುಟ್ಟಿಯ ಮೇಲೆ ಚಿತ್ತಾರ ಬರೆಯುತ್ತಾರೆ. ಈ ಚಿತ್ತಾರ ಕಲೆಯಲ್ಲಿ ಮಲೆನಾಡಿನ ಸುಂದರ ಬದುಕನ್ನು ಮತ್ತು ಕೃಷಿಯನ್ನು ಬಿಂಬಿಸುವ ಚಿತ್ರಗಳು ಇರುತ್ತವೆ. ಚಿತ್ತಾರದಲ್ಲಿ ಎಳೆ, ನೀಲಿ ಕೊಚ್ಚು, ಗೊಂಬೆ ಸಾಲು ,ಚೆಂಡು ಹೂವಿನ ಸಾಲು, ಪಪ್ಲಿ ,ಗಡಿಗೆ, ಬಸವನ ಪಾದ, ಆರತಿ ಚಿತ್ತಾರ, ಸೀತೆಮುಡಿ, ಕವಳಿ ಮಟ್ಟಿ, ಜೋಗಿ ಜಡೆ, ಭತ್ತದ ಸಸಿ, ತೆಂಗಿನ ಮರ, ಅಡಿಕೆ ಮರ, ಗೊಣಬೆ ,ಏಣಿ ,ಗಾಡಿ, ಎತ್ತು, ನೇಗಿಲು, ನೊಗ, ಕತ್ತಿ, ಸೂರ್ಯ,ಚಂದ್ರನ ಚಿತ್ತಾರಗಳನ್ನು ಚಿತ್ತಾರಗಿತ್ತಿಯರು ಕೆಮ್ಮಣ್ಣಿನ ಬುಟ್ಟಿಯ ಮೇಲೆ ಚಿತ್ರಿಸುತ್ತಾರೆ.

ಹಬ್ಬದ ಆಚರಣೆ ಮತ್ತು ಖಾದ್ಯ ತಯಾರಿ

ಮಳೆಗಾಲದ ಕೊನೆಯಲ್ಲಿ ಚಳಿಗಾಲದ ಆರಂಭದಲ್ಲಿ ಬರುವ ಈ ಹಬ್ಬದಲ್ಲಿ ರೈತರು ಬೆಳೆದ ಎಲ್ಲಾ ಬೆಳೆಗಳು ಫಸಲನ್ನು ಹೊತ್ತು ನಳನಳಿಸುತ್ತಿರುತ್ತವೆ. ಅದರಲ್ಲೂ ಭತ್ತದ ಸಸಿ ಹಾಲುದುಂಬಿ ಹೊಡೆಯಾಗಿರುತ್ತದೆ ಫಸಲು ಹೊತ್ತ ಭೂಮಿತಾಯಿಗೆ ಬಯಕೆ ತೀರಿಸುವ ಸೀಮಂತದ ಪ್ರತೀಕವಾಗಿ ಈ ಹಬ್ಬವನ್ನು ಆಚರಿಸುತ್ತಾರೆ.

ಭೂಮಿ ಹುಣ್ಣಿಮೆ ಹಬ್ಬದ ಹಿಂದಿನ ದಿನ ಮನೆಯೊಡತಿಯರು ತಮ್ಮ ಹೊಲಗದ್ದೆಗಳಲ್ಲಿ ಬೆಳೆದ ಎಲ್ಲ ಸೊಪ್ಪು ತರಕಾರಿಗಳನ್ನು ಮನೆಗೆ ತರುತ್ತಾರೆ. ನಂತರ ಮನೆಯನ್ನು ಸ್ವಚ್ಛಗೊಳಿಸಿ ರಾತ್ರಿಯಿಡಿ ನಿದ್ದೆ ಬಿಟ್ಟು ಅಡುಗೆ ಮಾಡುತ್ತಾರೆ. ಎಲ್ಲ ಬಗೆಯ ಸೊಪ್ಪು ತರಕಾರಿಗಳನ್ನು ಸೇರಿಸಿ ಹಚ್ಚಂಬಲಿ (ಚರಗ) ತಯಾರಿಸುತ್ತಾರೆ. ಸೌತೆಕಾಯಿಯ ಸಿಹಿ ಮತ್ತು ಸಪ್ಪೆ ಕಡುಬು, ಕೆಸುವಿನ ದಂಡಿನ ಕಡಬು, ಅಮಟೆಕಾಯಿ ಗೊಜ್ಜು, ಏಳು ಬಗೆಯ ಪಲ್ಯ, ಪಚಡಿ, ಪಾಯ್ಸ ,ಬುತ್ತಿ ಉಂಡೆ,ಹೋಳಿಗೆ, ಅತಿರಸ, ಕರ್ಜಿಕಾಯಿ, ಮುಂತಾದ ಖಾದ್ಯಗಳನ್ನು ತಯಾರಿಸುತ್ತಾರೆ.

ಪೂಜಾ ವಿಧಾನ

ಹಬ್ಬದ ಹಿಂದಿನ ದಿನ ಗಂಡಸರು ಗದ್ದೆ ಅಥವಾ ತೋಟಗಳಲ್ಲಿ ಪೂರ್ವಾಭಿಮುಖವಾಗಿ ಪೂಜೆ ಸ್ಥಳವನ್ನು ಗೊತ್ತುಪಡಿಸಿ ಸ್ವಚ್ಛಗೊಳಿಸಿ ಹಾಲುಗಂಬ ನೆಟ್ಟು ಬಾಳೆಗಿಡ, ಮಾವಿನ ತೋರಣ, ಚೆಂಡುಹೂವಿನಹಾರ ಕಟ್ಟಿ ಸಿಂಗರಿಸಿರುತ್ತಾರೆ. ಬೆಳಗಿನ ಜಾವ ಮನೆಯವರೆಲ್ಲರೂ ಪೂಜೆಗೆ ಸಿದ್ಧಗೊಳ್ಳುತ್ತಾರೆ ರಾತ್ರಿ ತಯಾರಿಸಿದ ಚರಗವನ್ನು ಹಚ್ಚಂಬಲಿ ಬುಟ್ಟಿಗೆ ತುಂಬುತ್ತಾರೆ ಮತ್ತು ಪೂಜಾ ಸಾಮಗ್ರಿ ನೈವೇದ್ಯದ ಎಡೆ ಗಳನ್ನು ಭೂಮಣ್ಣಿ ಬುಟ್ಟಿಯಲ್ಲಿ ತುಂಬಿ ಎರಡು ಬುಟ್ಟಿಗಳನ್ನು ಇಡಕಲು ಮೇಲೆ ಇಟ್ಟು ಪೂಜಿಸುತ್ತಾರೆ. ನಂತರ ಈ ಬುಟ್ಟಿಯನ್ನು ಮನೆಯ ಹಿರಿಯರು ಹೊತ್ತು ಮನೆಯವರೆಲ್ಲ ಜೊತೆಗೂಡಿ ಭತ್ತದ ಸಸಿ ಅಥವಾ ಅಡಿಕೆ ಮರಕ್ಕೆ ಬಂಗಾರ, ಮಾಂಗಲ್ಯ, ಸೀರೆ, ರವಿಕೆ, ಬಳೆ ತೊಡಿಸಿ ದೀಪ, ದೂಪ, ಆರತಿ ಹಚ್ಚಿ ಅಲಂಕರಿಸಿ ಎಡೆಯಿಟ್ಟು ಚರಗವನ್ನು ಇಟ್ಟು ಭಕ್ತಿ ಭಾವದಿಂದ ಪೂಜೆ ನೆರವೇರಿಸಿ ಒಂದು ಕಡಬನ್ನು ಭೂಮಿಯಲ್ಲಿ ಹುಗಿಯುತ್ತಾರೆ. ಹಚ್ಚೆಂಬಲಿ ಹರವೇ ಸೊಪ್ಪು ಹಿತ್ತಲಾಗಿನ ದಾರ್ ಹೀರೆಕಾಯಿ ಭೂಮಿ ತಾಯಿ ಬಂದು ಉಣ್ಣಲಿ ಎಂದು ಕೂಗುತ್ತಾ ತಮ್ಮ ಎಲ್ಲಾ ಗದ್ದೆ ತೋಟಗಳಿಗೆ ಚರಗವನ್ನು ಬಿತ್ತಿ ಈ ವರ್ಷದ ಬೆಳೆ ಬೇಸಾಯ ಚೆನ್ನಾಗಿ ಬರಲಿ ಎಂದು ಭೂಮಿತಾಯಿಯಲ್ಲಿ ಪ್ರಾರ್ಥಿಸುತ್ತಾರೆ. ಭೂಮಿ ಹುಣ್ಣಿಮೆ ಹಬ್ಬದ ಮರು ದಿನ ಭೂಮಿಯನ್ನು ಉಳುಮೆ ಮಾಡುವುದಿಲ್ಲ ರೈತರು ಸಹ ವಿಶ್ರಾಂತಿ ಪಡೆಯುತ್ತಾರೆ.

ಎಡೆ ಇಡುವ ಪದ್ಧತಿ

ಭೂಮಿ ಹುಣ್ಣಿಮೆಯಂದು ಮಲೆನಾಡಿನ ರೈತರು ತಮ್ಮೊಂದಿಗೆ ಭೂಮಿ ಮೇಲಿನ ಜೀವರಾಶಿಗಳನ್ನು ಸ್ಮರಿಸುತ್ತಾರೆ. ಬೆಳೆಯನ್ನು ಹಾನಿ ಮಾಡುವ ಇಲಿಯನ್ನು ಈ ದಿನ ಗೌರವದಿಂದ ಕಾಣುತ್ತಾರೆ. ಒಂದು ಎಡೆಯನ್ನು ಇಲಿಗೆ ಗದ್ದೆಯ ಮೂಲೆಯಲ್ಲಿ ಇಡುತ್ತಾರೆ. ಈ ಹಬ್ಬದಲ್ಲಿ ಹಿರಿಯರನ್ನು ಸ್ಮರಿಸಿ ಹಿರಿಯರು ಕಾಗೆ ರೂಪದಲ್ಲಿ ಭೂಮಿ ಹುಣ್ಣಿಮೆ ಹಬ್ಬಕ್ಕೆ ಬರುತ್ತಾರೆ ಎಂಬ ನಂಬಿಕೆಯಿಂದ ಕಾಗೆಗೆ ಒಂದು ಎಡೆ ಇಡುತ್ತಾರೆ

ನಂತರ ಮನೆಯವರೆಲ್ಲರೂ ಹೊಲಗದ್ದೆಯಲ್ಲಿ ಕುಳಿತು ಊಟ ಮಾಡುತ್ತಾರೆ. ಮಲೆನಾಡಿನಲ್ಲಿ ಭೂಮಿ ಹುಣ್ಣಿಮೆ ಆಚರಿಸುವ ಮೂಲಕ ಈ ನೆಲದ ಸಂಸ್ಕೃತಿ ಸಿರಿವಂತಿಕೆಯನ್ನು ಪ್ರತಿಬಿಂಬಿಸುತ್ತಾರೆ ಮನುಷ್ಯ ಜೀವನ ಜೊತೆ ಪಶು ಪಕ್ಷಿಗಳ ಸಂಬಂಧದ ಬೆಸುಗೆಯನ್ನು ಬಿಂಬಿಸುವ ಹಬ್ಬ ಇದಾಗಿದೆ. ವರ್ಷದ ಕೂಳನ್ನು ನೀಡುವ ಭೂಮಿತಾಯಿಗೆ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ ಕೃತಜ್ಞರಾಗುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.