
ಮಕ್ಕಳ ಕ್ರಿಯಾಶೀಲತೆಗೆ ಹಲವು ದಾರಿ; ಅಭಿವ್ಯಕ್ತಿಗೆ ಹಲವು ರೂಪ. ಚೈತನ್ಯ ಉಕ್ಕುವ, ಬೆರಗು, ಉತ್ಸಾಹದಿಂದ ಪುಟಿಯುವ ಚಿಣ್ಣರು, ತಮ್ಮ ಕುತೂಹಲ, ಶಕ್ತಿಯನ್ನೆಲ್ಲ ಕೇಂದ್ರೀಕರಿಸಿ ಕಲೆ, ಕ್ರೀಡೆ, ಕಲಿಕೆಯ ಬೆನ್ನು ಹತ್ತಿದರೆ ಏನಾಗುತ್ತದೆ ಎನ್ನುವುದರ ನಿದರ್ಶನ ಇಲ್ಲಿದೆ
ಪುಷ್ಕರ್ ಸಾಯಿ | ಬಾಲಕ ಬ್ಯಾಡ್ಮಿಂಟನ್ ಸಾಧಕ
– ಬಿ.ವಿ.ಶ್ರೀನಾಥ್
ಬೆಂಗಳೂರು: 6 ವರ್ಷದ ಮಗ ವಿಪರೀತ ತುಂಟನಾಗಿದ್ದ. ಅವನನ್ನು ನಿಭಾಯಿಸುವುದರಲ್ಲಿ ಸುಸ್ತಾದ ತಂದೆ, ಮಗನನ್ನು ಕರೆದುಕೊಂಡು ಹೋಗಿ ಬ್ಯಾಡ್ಮಿಂಟನ್ ಆಟಕ್ಕೆ ಸೇರಿಸಿದರು. ಆ ಬಾಲಕ ಇಂದು 15 ವರ್ಷದ ಒಳಗಿನ ಸಿಂಗಲ್ಸ್ ವಿಭಾಗದಲ್ಲಿ ಭಾರತದ ನಂಬರ್ 3 ಬ್ಯಾಡ್ಮಿಂಟನ್ ಆಟಗಾರ. ಹೆಸರು ಪುಷ್ಕರ್ ಸಾಯಿ.
ಪುಷ್ಕರ್ ಸಾಯಿ, ಗೌರಿಬಿದನೂರು ತಾಲ್ಲೂಕಿನ ಪೋತೇನಹಳ್ಳಿಯ ಪಿ.ಎಸ್.ಜಯಕೀರ್ತಿ ಮತ್ತು ಎಂ.ಸ್ವರೂಪ ಅವರ ಮಗ. ಬೆಂಗಳೂರಿನಲ್ಲಿ ಕಿರು ಉದ್ದಿಮೆ ನಡೆಸುವ ಜಯಕೀರ್ತಿ ಮಗನಿಗಾಗಿ ತಮ್ಮ ತನು ಮನ ಧನ ಎಲ್ಲವನ್ನೂ ಮೀಸಲಿಟ್ಟಿದ್ದಾರೆ.
ಯು.ವಿನೋದ್‌ಕುಮಾರ್ ತರಬೇತುದಾರರಾಗಿ ಬಂದ ನಂತರ ಸಾಯಿ ಪುಷ್ಕರ್‌ನ ಆಟ ಹೊಳಪು ಪಡೆಯಿತು. ಅವರ ಅವಧಿಯಲ್ಲಿಯೇ ಪುಷ್ಕರ್ 13 ವರ್ಷದ ಒಳಗಿನ ವಿಭಾಗದಲ್ಲಿ ಡಬಲ್ಸ್ ಹಾಗೂ ಸಿಂಗಲ್ಸ್ ಎರಡೂ ವಿಭಾಗಗಳಲ್ಲಿಯೂ ರಾಷ್ಟ್ರದ ನಂಬರ್ 1 ಬ್ಯಾಡ್ಮಿಂಟನ್ ಆಟಗಾರನಾದ. 14 ವರ್ಷದೊಳಗಿನ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ರನ್ನರ್ ಅಪ್ ಆದ. ಹಲವು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸಿ, ಪ್ರೀಕ್ವಾರ್ಟರ್ ಫೈನಲ್ ಹಂತದವರೆಗೂ ತಲುಪಿದ್ದ.
ಪುಷ್ಕರ್, ಪ್ರಸ್ತುತ ಸಿದ್ಧಾರ್ಥ್ ಠಾಕೂರ್ ಮತ್ತು ಮಧುಸೂದರ್ ಎಂ. ಅವರ ಅಡಿಯಲ್ಲಿ ತರಬೇತಿ ಪಡೆಯುತ್ತಿದ್ದಾನೆ. ನವೆಂಬರ್‌ನಲ್ಲಿ, ಏಷ್ಯನ್ ಚಾಂಪಿಯನ್‌ಶಿಪ್‌ಗೆ ಭಾರತ ತಂಡದ ಆಯ್ಕೆಗಾಗಿ ನಡೆದ ಪಂದ್ಯಾವಳಿಯಲ್ಲಿ ಗೆದ್ದಿರುವ ಪುಷ್ಕರ್, ಡಿಸೆಂಬರ್‌ನಲ್ಲಿ ನಡೆಯಲಿರುವ 15 ವರ್ಷದ ಒಳಗಿನ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಸಿದ್ಧತೆ ನಡೆಸಿದ್ದಾನೆ. 9ನೇ ತರಗತಿಯಲ್ಲಿ ಓದುತ್ತಿರುವ ಪುಷ್ಕರ್ ಸಾಯಿ, ಆನ್‌ಲೈನ್‌ನಲ್ಲಿ ಕೋಚಿಂಗ್ ಪಡೆಯುತ್ತಿದ್ದು, ಪೂರ್ಣಾವಧಿ ಬ್ಯಾಡ್ಮಿಂಟನ್ ತರಬೇತಿಯಲ್ಲಿ ನಿರತನಾಗಿದ್ದಾನೆ.
ಪುಷ್ಕರ್ ಸಾಯಿ, ಡಿ.ಪಿ.ಪ್ರಸನ್ನಕುಮಾರ್
ಡಿ.ಪಿ.ಪ್ರಸನ್ನಕುಮಾರ್ | 15 ವರ್ಷಕ್ಕೆ 10 ದಾಖಲೆ
– ಎಚ್.ಎಸ್.ಶ್ರಿಹರಪ್ರಸಾದ
ಹೊಸಪೇಟೆ: ತಾಲ್ಲೂಕಿನ ಮರಿಯಮ್ಮನಹಳ್ಳಿ ಹೋಬಳಿ ಸಮೀಪದ ಜಿ.ನಾಗಲಾಪುರ ಗ್ರಾಮದ ವಿದ್ಯಾರ್ಥಿ ಡಿ.ಪಿ.ಪ್ರಸನ್ನಕುಮಾರ್ 15 ವರ್ಷ ವಯಸ್ಸಿಗೆ ವಿವಿಧ ಸಾಧನೆಗಳ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದಂತೆ ವಿವಿಧ 10 ದಾಖಲೆಗಳನ್ನು ಮಾಡಿದ್ದಾನೆ.
ಕಲಾವಿದ ಹಾಗೂ ಸದ್ಯ ಶಿವಮೊಗ್ಗದ ಮೆಸ್ಕಾಂ ಉದ್ಯೋಗಿಯಾಗಿರುವ ಡಿ.ಪಂಪಾಪತಿ ಹಾಗೂ ನಂದಿನಿ ಅವರ ಪುತ್ರ ಪ್ರಸನ್ನ ಸದ್ಯ ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾನೆ. ವಿಶಿಷ್ಟ ಚಿತ್ರಲಿಪಿಯ ಮೂಲಕ ಭಗವದ್ಗೀತೆಯ 700 ಶ್ಲೋಕಗಳನ್ನು ಕಲಿತು, ಅವುಗಳನ್ನು 84,426 ಪಿಕ್ಟೋರಿಯಲ್ ಭಾಷೆಯ ಚಿತ್ರಲಿಪಿಯಲ್ಲಿ ಬರೆದಿದ್ದಾನೆ. ಈ ಸಾಧನೆಯು 2024ರ ಅಕ್ಟೋಬರ್‌ನಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ವರ್ಲ್ಡ್‌ವೈಡ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. ಬ್ಯಾಸ್ಕೆಟ್‌ಬಾಲ್ ಅನ್ನು 2 ಗಂಟೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ತಡೆ ಇಲ್ಲದೆ ಕೆಳಗೆ ಬೀಳಿಸದೆ ಪುಶ್ ಮಾಡಿ 2024ರಲ್ಲಿ ದಾಖಲೆ ಬರೆದಿದ್ದಾನೆ. ದೇಶದ 784 ಜಿಲ್ಲೆಗಳನ್ನು ಸಂಕೇತ ಭಾಷೆ (ಕೈ ಭಾಷೆ) ಮೂಲಕ ಪ್ರಸ್ತುತಪಡಿಸಿ, 2 ನಿಮಿಷಗಳ ಕಾಲ ಉತ್ಥಿತ ಪದ್ಮಾಸನದಲ್ಲಿ ಕುಳಿತು (ಈ ಮೊದಲು 1.30 ನಿಮಿಷ ಮಾಡಿದ ದಾಖಲೆ ಮುರಿದು), ಲಿಪಿ ಇರುವ ಜಗತ್ತಿನ 70 ಭಾಷೆಗಳಲ್ಲಿ ‘ಸತ್ಯಮೇವ ಜಯತೆ’ ಎಂದು ಬರೆದು 2025ರ ವರ್ಲ್ಡ್‌ವೈಡ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರು ದಾಖಲಿಸಿದ್ದಾನೆ.
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ತಬಲಾವನ್ನು ತಡೆರಹಿತವಾಗಿ 1 ಗಂಟೆ 48 ನಿಮಿಷ ನುಡಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದಾನೆ. 10ನೇ ತರಗತಿಯ 6 ವಿಷಯಗಳನ್ನು ಕೊಡೆಯಲ್ಲಿ ವಿಜುವಲ್ ಆರ್ಟ್ಸ್ (ಮೆಮೊರಿ ಟೆಕ್ನಿಕ್) ಮಾಡಿ 2025ರ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾನೆ.
ಸುಶ್ವಿನ್ | ಸೈಕ್ಲಿಂಗ್‌ನಲ್ಲಿ ಮಿಂಚು
– ಶಿವರಾಯ ಪೂಜಾರಿ
ಹುಬ್ಬಳ್ಳಿ: ವಯಸ್ಸು ಚಿಕ್ಕದಾದರೂ ಈತನ ಸಾಧನೆ ದೊಡ್ಡದು. ಸೈಕ್ಲಿಂಗ್, ಸ್ಕೇಟಿಂಗ್‌ನಲ್ಲಿ ಮಿಂಚು ಹರಿಸುತ್ತಿರುವ ಐದರ ಈ ಪೋರ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತನ್ನ ಹೆಸರನ್ನು ನೋಂದಾಯಿಸಿಕೊಂಡಿದ್ದಾನೆ. ಹೆಸರು ಸುಶ್ವಿನ್. ಹುಬ್ಬಳ್ಳಿಯ ಇಂದ್ರಪ್ರಸ್ಥ ನಗರದ ವಿನಾಯಕ ಮತ್ತು ಸುಷ್ಮಾ ಹಳಪೇಟಿ ದಂಪತಿಯ ಮಗ.
ಐದು ವರ್ಷ ವಯಸ್ಸಿನ ಸುಶ್ವಿನ್, 4 ವರ್ಷದವನಾಗಿರುವಾಗಲೇ ಸೈಕ್ಲಿಂಗ್ ಮಾಡುತ್ತಾ 39 ನಿಮಿಷ 24 ಸೆಕೆಂಡ್‌ಗಳಲ್ಲಿ 11.02 ಕಿ.ಮೀ ಕ್ರಮಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರ್ಪಡೆಯಾದ. ಈ ಮೂಲಕ ತಮಿಳುನಾಡಿನ ಕಲ್ಲಾಕುರಿಚಿಯ ಆಧವ್ ಅಶೋಕ್‌ಕುಮಾರ ಎಂಬ 5 ವರ್ಷದ ಬಾಲಕ 39 ನಿಮಿಷ 44 ಸೆಕೆಂಡ್‌ಗಳಲ್ಲಿ 10.3 ಕಿ.ಮೀ ಕ್ರಮಿಸಿ ನಿರ್ಮಿಸಿದ್ದ ದಾಖಲೆಯನ್ನು ಮೀರಿದ್ದಾನೆ.
ಸ್ಕೇಟಿಂಗ್ ಪಟುವೂ ಆಗಿರುವ ಬಾಲಕ, ಈ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ, ರಾಜ್ಯಮಟ್ಟದಲ್ಲಿ ಬೆಳ್ಳಿ ಪದಕ ಹಾಗೂ ಧಾರವಾಡ ಜಿಲ್ಲಾಮಟ್ಟದಲ್ಲಿ 2024 ಹಾಗೂ 2025ರಲ್ಲಿ ಚಿನ್ನದ ಪದಕ ಪಡೆದಿದ್ದಾನೆ. ಈತನ ಸಾಧನೆ ಗುರುತಿಸಿ ಮೈಸೂರಿನ ಕರ್ನಾಟಕ ಯುವ ರಕ್ಷಣಾ ವೇದಿಕೆಯು ‘ಕರ್ನಾಟಕ ಸೇವಾರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ.
‘ನಾನು ಕ್ರೀಡಾಪಟು. ನನ್ನಂತೆ ಮಗನೂ ಕ್ರೀಡಾಪಟು ಆಗಬೇಕೆಂಬ ಆಸೆಯಿಂದ ಆರಂಭದಲ್ಲಿ ಸೈಕ್ಲಿಂಗ್ ಕಲಿಸಿದೆ. ನಾಲ್ಕು ತಿಂಗಳು ಪ್ರತಿದಿನ ಬೆಳಿಗ್ಗೆ ಸೈಕ್ಲಿಂಗ್ ಮಾಡಿ ಕೊನೆಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದಾನೆ. ರಾಷ್ಟ್ರಮಟ್ಟದಲ್ಲಿ ಸ್ಕೇಟಿಂಗ್ ಪಟು ಮಾಡಬೇಕೆಂಬ ಗುರಿ ಇದ್ದು, ಈಗಿನಿಂದಲೇ ತಯಾರಿ ಆರಂಭಿಸಲಾಗಿದೆ’ ಎನ್ನುತ್ತಾರೆ ಸುಶ್ವಿನ್ ತಂದೆ ವಿನಾಯಕ.
ಸುಶ್ವಿನ್, ಯುವರಾಜ್ ಡಿ.
ಯುವರಾಜ್ ಡಿ. | ಸ್ಕೇಟಿಂಗ್‌ನ ಯುವ‘ರಾಜ’
– ಸಂಧ್ಯಾ ಹೆಗಡೆ
ಮಂಗಳೂರು: ತುಂಟಾಟವಾಡುತ್ತ ಮನೆಯಲ್ಲಿ ಖುಷಿಯ ಹೊನಲು ಹರಿಸಿದ್ದ ಬಾಲಕನಿಗೆ ಆಗಾಗ ಕಾಡುವ ಉಬ್ಬಸದ ಸಮಸ್ಯೆ ಪಾಲಕರನ್ನು ಕಂಗೆಡಿಸಿತ್ತು. ಮಗನನ್ನು ಆಸ್ಪತ್ರೆಗೆ ಕರೆದೊಯ್ದ ಪಾಲಕರೆದುರು ವೈದ್ಯರು ಎರಡು ಆಯ್ಕೆ ಇಟ್ಟಿದ್ದರು; ಒಂದು ಈಜು, ಇನ್ನೊಂದು ಸ್ಕೇಟಿಂಗ್.
ಸ್ಕೇಟಿಂಗ್ ಹೆಚ್ಚು ಸುರಕ್ಷಿತವೆಂದು ನಿರ್ಧಾರಕ್ಕೆ ಬಂದ ಪಾಲಕರು ಮಗನನ್ನು ಸ್ಕೇಟಿಂಗ್ ತರಬೇತಿಗೆ ಸೇರಿಸಿದರು. ಅಂಬೆಗಾಲಿಕ್ಕುವ ಬಾಲಕ, ಕಾಲಿಗೆ ಚಕ್ರ ಕಟ್ಟಿ ಲೀಲಾಜಾಲವಾಗಿ ಮುನ್ನಡೆಯುವುದನ್ನು ಬಹುಬೇಗ ಕಲಿತ. ಈ ಬಾಲಕನೇ ಈಗ ರಾಷ್ಟ್ರಮಟ್ಟದಲ್ಲಿ ಪದಕಗಳನ್ನು ಗಳಿಸಿ ಸ್ಕೇಟಿಂಗ್ ಕ್ರೀಡೆಯಲ್ಲಿ ಭರವಸೆಯಾಗಿ ಬೆಳೆಯುತ್ತಿದ್ದಾನೆ.
ಮಂಗಳೂರಿನ ಕುಂಟಿಕಾನದ ಧೀರಜ್ ಕೋಟ್ಯಾನ್–ವೀಣಾ ದಂಪತಿ ಪುತ್ರ ಯುವರಾಜ್ ಡಿ., ಸೇಂಟ್ ಅಲೋಶಿಯಸ್ ಗೊನ್ಝಾಗ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ. ಯುಕೆಜಿ ಕಲಿಯುವಾಗಲೇ ಮೊದಲ ಪದಕ ಪಡೆದ ಯುವರಾಜ್, 3ನೇ ತರಗತಿಯಲ್ಲಿರುವಾಗ ರಾಜ್ಯ ಮಟ್ಟದ ಸ್ಪೀಡ್ ರೋಲರ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಪದಕ ಪಡೆದಿದ್ದ.
ಸ್ಥಳೀಯ, ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಗಳು ಸೇರಿ 35 ಚಿನ್ನ, 13 ಬೆಳ್ಳಿ, ಐದು ಕಂಚಿನ ಪದಕಗಳು ಈತನ ಕೊರಳೇರಿವೆ. ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್‌ನ ಮಹೇಶ್ ಕುಮಾರ್ ಬಳಿ ತರಬೇತಿ ಪಡೆಯುತ್ತಿದ್ದಾನೆ. ಅಥ್ಲೆಟಿಕ್ಸ್‌ನಲ್ಲೂ ಮಿಂಚುತ್ತಿರುವ ಯುವರಾಜ್, ಭಕ್ಷಿತ್ ಸಾಲ್ಯಾನ್ ಬಳಿ ತರಬೇತಿ ಪಡೆದು, ಓಟ ಮತ್ತು ಲಾಂಗ್‌ಜಂಪ್‌ನಲ್ಲಿ ಪ್ರಶಸ್ತಿ ಪಡೆದಿದ್ದಾನೆ.
ನವದೆಹಲಿಯಲ್ಲಿ ನಡೆಯುತ್ತಿರುವ ಸಿಬಿಎಸ್‌ಇ ಕ್ರೀಡಾಕೂಟದಲ್ಲಿ ಗುರುವಾರ 500 ಮೀಟರ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾನೆ.
ಪ್ರತಾಪ್ ಪಟಗಾರ | ವಿಶೇಷ ಒಲಿಂಪಿಕ್ಸ್‌ನತ್ತ ಚಿತ್ತ
– ಗಣಪತಿ ಹೆಗಡೆ
ಕಾರವಾರ: ಒಂದು ಕಾಲದಲ್ಲಿ ಆತ ಅತಿಯಾದ ಸಿಟ್ಟು, ಮಾನಸಿಕ ಸ್ತಿಮಿತ ಇಲ್ಲದೆ ಎಲ್ಲರಿಂದ ದೂರಲ್ಪಡುತ್ತಿದ್ದ ಬಾಲಕ. ಇಂದು ಅದೇ ಬಾಲಕ 2027ರಲ್ಲಿ ಚಿಲಿ ದೇಶದಲ್ಲಿ ನಡೆಯಲಿರುವ ವಿಶೇಷ ಒಲಿಪಿಂಕ್ಸ್‌ನ ಟೇಬಲ್ ಟೆನಿಸ್ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.
ಕುಮಟಾ ತಾಲ್ಲೂಕಿನ ಐಗಳಕೂರ್ವೆ ಗ್ರಾಮದ ಪ್ರತಾಪ್ ಪಟಗಾರ ಈ ಬಾಲ ಸಾಧಕ. 15 ವರ್ಷದ ಈತನಿಗೆ ಕುಮಟಾದ ದಯಾ ನಿಲಯ ವಸತಿ ಶಾಲೆಯಲ್ಲಿ ತರಬೇತಿ ನೀಡಲಾಗುತ್ತಿದೆ. ಕೆಲ ತಿಂಗಳ ಹಿಂದೆ ಚಂಡೀಗಢದಲ್ಲಿ ನಡೆದಿದ್ದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಪ್ರತಾಪ್ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ ದ್ದಾನೆ.
‘ಏಕ ಪಾಲಕರಿರುವ ಬಾಲಕನ ಅತಿಯಾದ ಸಿಟ್ಟು, ಸ್ಥಿಮಿತ ಇಲ್ಲದೆ ವರ್ತಿಸುತ್ತಿದ್ದ ಕಾರಣದಿಂದ ಆತನನ್ನು ನಮ್ಮ ಶಾಲೆಗೆ ಸೇರಿಸಿದ್ದರು. ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ಪ್ರತಾಪ್‌ನ ಆಸಕ್ತಿಯ ಕ್ರೀಡೆಯಾದ ಟೇಬಲ್ ಟೆನಿಸ್ ಆಟದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಲಾಯಿತು. ನಾಲ್ಕು ವರ್ಷಗಳ ನಿರಂತರ ಸಾಧನೆಯಿಂದ ಆತ ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗುವಂತಾಗಿದೆ’ ಎಂದು ದಯಾ ನಿಲಯ ಶಾಲೆಯ ಮುಖ್ಯಸ್ಥ ಸಿರಿನ್ ಲೋಪಿಸ್ ಹೇಳಿದರು.
ಪ್ರತಾಪ್ ಪಟಗಾರ, ಅದ್ವೈತ
ಅದ್ವೈತ ಕುಡಾಳಕರ | ಅದ್ವಿತೀಯ ಅದ್ವೈತ
– ರಾಜೇಂದ್ರ ಹೆಗಡೆ
ಶಿರಸಿ: ತನ್ನ ಐದನೇ ವಯಸ್ಸಿನಲ್ಲಿ ಲಿಂಬೂ ಸ್ಕೇಟಿಂಗ್ ಮಾಡುತ್ತಾ ಕಾರಿನ ನಾಲ್ಕು ಚಕ್ರಗಳ ಮಧ್ಯ ಹಾದು ಹೋಗಿ ತನ್ನ ಪ್ರತಿಭೆ ಪ್ರದರ್ಶಿಸುತ್ತಿದ್ದ ಶಿರಸಿಯ ಅದ್ವೈತ ಕುಡಾಳಕರ 12ನೇ ವಯಸ್ಸಿಗೆ ಬರುವಷ್ಟರಲ್ಲಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ಸ್ ಪಟ್ಟಿ ಸೇರಿ, ಸಾಧನೆ ತೋರಿದ್ದಾನೆ.
ಶಿರಸಿಯ ಸೇಂಟ್ ಅಂಥೋನಿ ಇಂಗ್ಲಿಷ್ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಅದ್ವೈತ ತನ್ನ 8ನೇ ವಯಸ್ಸಿನಲ್ಲಿ ಕಾರವಾರದಿಂದ ಬೆಂಗಳೂರು ವಿಧಾನಸೌಧದವರೆಗೆ 630 ಕಿ.ಮೀ. ಸ್ಕೇಟಿಂಗ್ ಮೂಲಕ ಸಂಚರಿಸಿದ್ದಾನೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು 5 ಕಿ.ಮೀ. ಸ್ಕೇಟಿಂಗ್ ಪ್ರದರ್ಶನವೂ ನೀಡಿದ್ದಾನೆ. ಇದು ‘ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ದಾಖಲಾಗಿದೆ.
ಯಕ್ಷಗಾನದ ತರಬೇತಿ ಪಡೆದು ಬಾಲ ಕಲಾವಿದನಾಗಿ ಪ್ರದರ್ಶನವೂ ನೀಡಿದ್ದಾನೆ. ಇವುಗಳ ಜತೆಜತೆಗೆ ಚೆಸ್, ಚಿತ್ರಕಲೆ, ನೃತ್ಯ ಮತ್ತು ಹಾಗೂ ಯೋಗಾಸನದಲ್ಲಿ ಪ್ರತಿಭೆ ತೋರಿದ್ದಾನೆ. ಹಾರ್ಮೋನಿಯಂ ಅನ್ನು ಸಲಲಿತವಾಗಿ ನುಡಿಸುವ ಈತ ಹಾರ್ಮೋನಿಯಂ ಮೂಲಕ ತಡೆರಹಿತ 75 ಬಾರಿ ರಾಷ್ಟ್ರಗೀತೆ ‘ಜನಗಣಮನ’ ನುಡಿಸಿ, ‘ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್’ ಮತ್ತು ‘ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್’ಗೆ ಸೇರಿದ್ದಾನೆ.
ದಿವ್ಯಶ್ರೀ ಕೆಂಭಾವಿಮಠ | ‘ದಿವ್ಯ’ ಪ್ರತಿಭೆ
– ಎಂ.ಜಿ.ಬಾಲಕೃಷ್ಣ
ಹೊಸಪೇಟೆ: ದಿವ್ಯಶ್ರೀ ಕೆಂಭಾವಿಮಠ. ಇವಳಿಗಿನ್ನೂ ಹತ್ತು ವರ್ಷ ವಯಸ್ಸು. ಆಗಲೇ ಹಂಪಿ ಉತ್ಸವ, ಮೈಸೂರು ದಸರಾ, ಕನಕಗಿರಿ ಉತ್ಸವ, ಆನೆಗೊಂದಿ ಉತ್ಸವ, ಕದಂಬ ಉತ್ಸವಗಳಂತಹ ವೇದಿಕೆಗಳ ಮೇಲೆ ಪ್ರತಿಭೆ ಪ್ರದರ್ಶಿಸಿದ್ದಾಳೆ. ಗಾಯಕಿ ಮಂಗ್ಲಿಗೆ ಸಾಥ್ ನೀಡಿದ್ದಾಳೆ. ಬಳ್ಳಾರಿಯಲ್ಲಿ ಅಲ್ಲದೇ ಆಂಧ್ರಪ್ರದೇಶದಲ್ಲಿ ಗೀತೆಗಳನ್ನು ಹಾಡಿದ್ದಾಳೆ.
ಎಸ್‌ಬಿಐ ಉದ್ಯೋಗಿಗಳಾದ ಜಗದೀಶ್ ಕೆಂಭಾವಿಮಠ–ಶ್ರೀದೇವಿ ದಂಪತಿಯ ದ್ವಿತೀಯ ಪುತ್ರಿ ದಿವ್ಯಶ್ರೀ. ಹೊಸಪೇಟೆಯ ನ್ಯಾಷನಲ್ ಸ್ಕೂಲ್‌ನಲ್ಲಿ ಐದನೇ ತರಗತಿ ವಿದ್ಯಾರ್ಥಿನಿ. ಹಿಂದೂಸ್ಥಾನಿ ಸಂಗೀತ, ಕರೋಕೆ ಸಂಗೀತ, ಭರತನಾಟ್ಯ, ಕರಾಟೆ, ಈಜು, ರ‍್ಯಾಂಪ್ ವಾಕ್‌ಗಳಲ್ಲಿ ತನ್ನ ಪ್ರತಿಭೆಯನ್ನು ತೋರಿಸುತ್ತಿರುವ ಈಕೆ ಸಿನಿಮಾ ಬಾಲನಟಿಯೂ ಹೌದು. ‘ಜೋಗಿ ಕಾಮನ್ ಮ್ಯಾನ್’ ಸಿನಿಮಾದಲ್ಲಿ ನಟಿಸುತ್ತಿದ್ದು, ಇನ್ನೊಂದು ಚಿತ್ರದಲ್ಲಿ ಸಹ ಅವಕಾಶ ಸಿಕ್ಕಿದೆ.
ವೇದಿಕೆ ಏರಿಬಿಟ್ಟಳು ಎಂದರೆ ದಿವ್ಯಶ್ರೀಗೆ ಅಂಜಿಕೆಯೇ ಇಲ್ಲ. ಅದೆಂತಹ ಕಷ್ಟದ ಹಾಡನ್ನಾದರೂ ಲೀಲಾಜಾಲವಾಗಿ ಹಾಡಿಬಿಡುತ್ತಾಳೆ. ಕಳೆದ ಹಂಪಿ ಉತ್ಸವದಲ್ಲಿ ಬಸವಣ್ಣ ವೇದಿಕೆಯಲ್ಲಿ ಈಕೆ ಹಾಡಿದ ‘ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮಾ’ ಹಾಡು ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಸಿಬಿಟ್ಟಿತ್ತು. ಈಕೆಯ ಸಂಗೀತ ಗುರುಗಳು ಜೋಗಿ ಪುಟ್ಟರಾಜ ಗವಾಯಿಗಳು, ಮಂಜುನಾಥ ನೀಲಗಿರಿ. ಮಲ್ಲಿ ಮಾಸ್ಟರ್ ಈಕೆಯ ನೃತ್ಯ ಗುರುಗಳು.
ದಿವ್ಯಶ್ರೀ ಕೆಂಭಾವಿಮಠ, ಬಿ.ಕೆ.ಸಿಂಚನಾ
ಬಿ.ಕೆ.ಸಿಂಚನಾ | ಯೋಗ ಸಾಧಕಿ
– ಕೆ.ಎಸ್.ಗಿರೀಶ
ಮಡಿಕೇರಿ: ದಟ್ಟ ಅರಣ್ಯದ ಮಧ್ಯೆ, ಗುಡ್ಡಗಾಡಿನಲ್ಲಿರುವ ಈಕೆ ಮಾಡಿರುವುದು ಬರೋಬ್ಬರಿ 12 ದಾಖಲೆಗಳು.
ಕೊಡಗು ಜಿಲ್ಲೆಯ ಮದೆನಾಡು ಗ್ರಾಮದಲ್ಲಿರುವ ಬಿಜಿಎಸ್ ಪಬ್ಲಿಕ್ ಶಾಲೆಯ 6ನೇ ತರಗತಿಯ ಬಿ.ಕೆ.ಸಿಂಚನಾ, ದೇಹವನ್ನು ಚಕಚಕನೇ ತಿರುಗಿಸುತ್ತಾ, ಬಿಲ್ಲಿನಂತೆ ಬಗ್ಗಿಸುತ್ತಾ ಮಾಡುವ ಯೋಗಾಸನಗಳು ನಿಬ್ಬೆರಗು ಮೂಡಿಸುತ್ತವೆ.
ಅಂತರರಾಷ್ಟ್ರೀಯ ಮಟ್ಟದ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ 2, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ 8, ರಾಷ್ಟ್ರಮಟ್ಟದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ 1 ಹಾಗೂ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ 1 ದಾಖಲೆ ನಿರ್ಮಿಸಿದ್ದಾಳೆ. ಈಕೆಗೆ ತಾಯಿಯೇ ಗುರು, ಶಾಲೆಯೇ ವೇದಿಕೆ. ಸುತ್ತಮುತ್ತಲ ಸ್ನೇಹಿತರೇ ಪ್ರೇರಣೆ.
ಕೀರ್ತಿಕುಮಾರ್–ರೇಣುಕಾ ದಂಪತಿಯ ಪುತ್ರಿ, ಯಾವುದೇ ಯೋಗ ತರಬೇತಿ ಕೇಂದ್ರಕ್ಕೆ ಹೋಗದೆ ತಾಯಿಯ ಗರಡಿಯಲ್ಲಿ 300ಕ್ಕೂ ಅಧಿಕ ಯೋಗಾಸನಗಳನ್ನು ಕಲಿತಿರುವುದು ವಿಶೇಷ.
‘ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ‘ಸಣ್ಣ ವಯಸ್ಸಿನಲ್ಲಿ ಕಠಿಣ ಆಸನಗಳನ್ನು ಮಾಡುವ ಬಾಲಕಿ’ ಎಂಬ ದಾಖಲೆ ನಿರ್ಮಿಸಿದ್ದಾಳೆ.
ಅಕ್ಷರದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾವೇದಿಕೆ ಧಾರವಾಡ, ಬೆಳಗಾವಿ ಸಂಸ್ಥೆಯು ‘ರಾಷ್ಟ್ರೀಯ ಯೋಗಭಾರತೀ’ ಪ್ರಶಸ್ತಿ ನೀಡಿ ಗೌರವಿಸಿದೆ.
‘ನಿರಂತರ ಪರಿಶ್ರಮ, ತಂದೆ, ತಾಯಿಯರ ಬೆಂಬಲ ಹಾಗೂ ದೇವರ ಆಶೀರ್ವಾದ ಇದ್ದರೆ ಎಲ್ಲರೂ ಸಾಧನೆ ಮಾಡಬಹುದು’ ಎಂಬುದು ಯೋಗಸಾಧಕಿ ಸಿಂಚನಾಳ ಆತ್ಮವಿಶ್ವಾಸದ ನುಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.