
ಪ್ರಾತಿನಿಧಿಕ ಚಿತ್ರ
ನಾವೆಷ್ಟು ಕನ್ನಡಿಗರಾಗಿ ಉಳಿದಿದ್ದೇವೆ? ನಿತ್ಯ ನಾವಾಡುವ ನಮ್ಮ ನುಡಿ ಎಷ್ಟು ‘ಕನ್ನಡ’ ವಾಗಿ ಉಳಿದಿದೆ ಮತ್ತು ಎಷ್ಟು ಕಲಬೆರಕೆಗೊಂಡಿದೆ? ಇಂದು ಕನ್ನಡದ ಉಳಿವಿನ ಮೇಲೆ ಗದಾಪ್ರಹಾರ ಮಾಡುತ್ತಿರುವ ಸಂದರ್ಭಗಳಾವವು? ಈ ಪ್ರಶ್ನೆಗಳನ್ನು ಇಂದು ನಾವು ಕನ್ನಡಿಗರು ನಮ್ಮನ್ನೇ ಕೇಳಿಕೊಳ್ಳುವಂಥ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎನ್ನುವುದು ಕಟುವಾಸ್ತವ.
ಮತ್ತೊಂದು ಕನ್ನಡ ರಾಜ್ಯೋತ್ಸವ, ಮತ್ತೊಂದು ವರ್ಷದ ವೀರಾವೇಶದ ಭಾಷಣಗಳು - ಇಷ್ಟಕ್ಕೆ ನಮ್ಮ ನುಡಿಯ ಹಬ್ಬದ ಸಂಭ್ರಮ ಸೀಮಿತಗೊಂಡುಬಿಟ್ಟಿದೆ. ಆದರೆ ಆಶಯಗಳು ಆಚರಣೆಗಳಾಗದೆ ಹೋದರೆ ಒಂದು ಭಾಷೆಯಾಗಿ ನಮ್ಮ ತಾಯ್ನುಡಿಯು ಯಾವೆಲ್ಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಈಗಾಗಲೇ ಎದುರಿಸುತ್ತಿದೆ ಎಂಬುದು ಇನ್ನೂ ನಮ್ಮ ಅರಿವಿಗೆ ಬರುತ್ತಿಲ್ಲ.
ಈ ಮೊದಲಿದ್ದ ನಮ್ಮ ಭಾಷೆಯ ಕಾಲ್ತೊಡಕುಗಳು ಇನ್ನೂ ಮುಂದುವರಿಯುತ್ತಿರುವುದು ಇನ್ನೊಂದು ಸಾಕ್ಷಿ. ಇದನ್ನು ಭಾಷಾಶಾಸ್ತ್ರೀಯವಾಗಿ ವಿವರಿಸಲು ತೊಡಗಿದರೆ ಈ ಚರ್ಚೆ ಒಂದು ಬೌದ್ಧಿಕ ಕಸರತ್ತಾಗುವುದೆ ವಿನಃ ವಾಸ್ತವಾಂಶಗಳು ಮನವರಿಕೆಯಾಗುವುದಿಲ್ಲ. ಆದ್ದರಿಂದ, ಸಿದ್ಧಾಂತ ಪ್ರತಿಪಾದನೆಗಿಂತಲೂ ನಿಜ ಜೀವನದ ಘಟನೆಗಳನ್ನೇ ಉದಾಹರಣೆಗಳಾಗಿ ತೆಗೆದುಕೊಂಡು ನೋಡಿದರೆ ಹೆಚ್ಚು ಸ್ಫುಟವಾಗಿ ನಮಗೆ ಇಂದು ಕನ್ನಡವು ಎದುರಿಸುತ್ತಿರುವ ಸಮಸ್ಯೆಗಳು ಅರಿವಿಗೆ ಬರಬಹುದು.
ಹಳ್ಳಿಗಾಡಿನ ಕಡೆ ರೈತನೊಬ್ಬ ತನಗೆ ಹತ್ತಿರದ ರಾಷ್ಟ್ರೀಕೃತ ಬ್ಯಾಂಕೊಂದಕ್ಕೆ ಹೋಗುತ್ತಾನೆ. ಆದರೆ ಅಲ್ಲಿ ಕುಳಿತಿರುವ ವ್ಯವಸ್ಥಾಪಕ ಮತ್ತು ದುಡ್ಡು ಎಣಿಸಿ ಕೊಡುವವರು ಎಲ್ಲರೂ ಅನ್ಯ ಭಾಷಿಕರು. ಅವರಿಗೆ ಕನ್ನಡ ಬರುವುದಿಲ್ಲ. ನಮ್ಮ ರೈತನಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ. ಈಗ ಈ ರೈತನ ನಿತ್ಯದ ವ್ಯವಹಾರದ ಸಂವಹನ ನಡೆಯುವುದು ಹೇಗೆ?
ನೀವು ಸುದ್ದಿವಾಹಿನಿಯೊಂದನ್ನು ನೋಡುತ್ತಿದ್ದೀರಿ. ಯಾವುದೋ ಒಂದು ವಿಷಯದ ಕುರಿತು ಅಲ್ಲಿ ಕಾರ್ಯಕ್ರಮವೊಂದು ಪ್ರಸರಣಗೊಳ್ಳುತ್ತಿದೆ. ಅದರಲ್ಲಿ ಭಾಗಿಯಾದವರು ಮತ್ತು ಅದನ್ನು ನಡೆಸಿಕೊಡುವವರು ಪುಂಖಾನುಪುಂಖವಾಗಿ ಆಂಗ್ಲ ಭಾಷೆಯಲ್ಲಿ ಮಾತಾಡುತ್ತ ಮಧ್ಯೆ ಮಧ್ಯೆ ಕೊಸರಿಗೆಂಬಂತೆ ಕನ್ನಡವನ್ನು ಬಳಸುತ್ತ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಎಷ್ಟು ಆಂಗ್ಲಮಯ ಎಂದರೆ ಅವರ ಚಿಂತನೆ ಅಥವಾ ಅವರ ಭಾಷಾ ಸಾಮರ್ಥ್ಯ ಅಷ್ಟೊಂದು ಆಂಗ್ಲ ಪದಗಳನ್ನು ಬಳಸದಿದ್ದರೆ ಅಭಿವ್ಯಕ್ತಗೊಳ್ಳುವುದೇ ಇಲ್ಲವೇನೋ ಎನ್ನುವಷ್ಟು. ಎಂದರೆ, ಅವರಿಗೆ ತಮ್ಮ ವಿಚಾರಗಳನ್ನು ಸ್ವಚ್ಛ ಕನ್ನಡದಲ್ಲಿಯೇ ಹೇಳಲು ಸಾಧ್ಯವಾಗದಷ್ಟು ಭಾಷಾ ದಾರಿದ್ರ್ಯ, ಆಂಗ್ಲ ಭಾಷಾ ವ್ಯಾಮೋಹದ ಮನೋಸ್ಥಿತಿ.
ಬೆಳಗಿನ ಆಹ್ಲಾದಕರ ವಾಯುವಿಹಾರ ಮುಗಿಸಿ ಮನೆಗೆ ಬಂದು ಚಹಾ ಕುಡಿಯುತ್ತ ಅಂದಿನ ಕನ್ನಡ ದಿನಪತ್ರಿಕೆಯ ಪುಟ ತೆರೆಯುತ್ತೀರಿ. ಮುಖಪುಟದಲ್ಲಿಯೇ ಮುಖ್ಯ ಸುದ್ದಿಯ ತಲೆಬರಹವೋ, ಉಪ ಶೀರ್ಷಿಕೆಯೋ ಆಂಗ್ಲಮಯವಾಗಿರುತ್ತದೆ. ದಿನಪತ್ರಿಕೆಯ ಒಳ ಪುಟಗಳನ್ನು ತಡಕುತ್ತೀರಿ. ಅಲ್ಲಿಯೂ ಸಹ ಕನ್ನಡದ ನಡುವೆ ವಿರಾಜಮಾನವಾದ ಆಂಗ್ಲ, ಅನ್ಯ ಭಾಷೆಯ ಪದಗಳು ನಿಮ್ಮ ಕಣ್ಣಿಗೆ ರಾಚುತ್ತವೆ.
ಇತ್ತೀಚಿನ ಕಾದಂಬರಿಯೊಂದನ್ನೋ, ಕಥೆಯನ್ನೋ ಓದಲು ಪುಸ್ತಕ ಕೈಗೆತ್ತಿಕೊಳ್ಳುತ್ತೀರಿ. ಶುರುವಿನಲ್ಲಿಯೇ ಆ ಬರಹಗಾರ/ಬರಹಗಾರ್ತಿ ತನ್ನ ಬರಹವನ್ನು ಆರಂಭಿಸುವುದು ಆಂಗ್ಲ ಅಥವಾ ಬೇರೆ ಇನ್ನಾವುದೋ ಭಾಷೆಯ ಸುದೀರ್ಘವಾದ ಉಕ್ತಿಯಿಂದ. ಅವರು ಬರೆಯುತ್ತಿರುವುದು ಕನ್ನಡದ ಬರಹ. ಆದರೆ ಆ ಬರಹಗಾರರ ಅಭಿವ್ಯಕ್ತಿಗೆ ಚಾಲನೆ ದೊರೆಯುವುದು ಆಂಗ್ಲ ಭಾಷೆಯ ಅಥವಾ ಬೇರೆ ಇನ್ನಾವುದೋ ಭಾಷೆಯ ಮೂಲಕ. ತೌಲನಿಕ ಸ್ವರೂಪದ ಬರಹದಲ್ಲಿ ಇದು ಮಾನ್ಯವಾದೀತು. ಆದರೆ ಒಂದು ಅಪ್ಪಟ ಸೃಜನಶೀಲ ಬರಹವಾಗಿದ್ದರೆ? ಕನ್ನಡದ ಸೃಜನಶೀಲ ಮನಸ್ಸು ಕನ್ನಡದಲ್ಲಿ ಚಿಂತಿಸಿ, ಕನ್ನಡದಲ್ಲಿ ಯೋಚಿಸಿ, ಕನ್ನಡದಲ್ಲಿಯೇ ಬರೆಯಬೇಕಲ್ಲವೆ? ಹೀಗಾಗುತ್ತಿಲ್ಲ ಎನ್ನುವುದು ಇಂದು ಕನ್ನಡಕ್ಕೆ ಎದುರಾಗಿರುವ ಸವಾಲುಗಳಲ್ಲಿ ಮುಖ್ಯವಾದದ್ದು. ಕನ್ನಡದ ಸೃಷ್ಟಿಶೀಲ ಮನಸ್ಸುಗಳು ತಮ್ಮ ಮೇಲೆ ತಾವೇ ವಿಧಿಸಿಕೊಂಡ ಈ ದಿಗ್ಬಂಧನದಿಂದ ಮೊದಲು ಮುಕ್ತವಾಗಬೇಕು.
ಇವೆಲ್ಲ ಕೆಲವೇ ಕೆಲವು ನಿದರ್ಶನಗಳು. ಇಲ್ಲೆಲ್ಲಾ ನಮಗೆ ಕಾಣುವುದು ಕನ್ನಡವು ಒಂದು ಸಶಕ್ತ ಭಾಷೆಯಾಗಿಯೂ ಸಹ ರಾಜಕೀಯ ಕಾರಣಗಳಿಂದ ಮತ್ತು ಅದನ್ನು ಬಳಸುವವರ ವಿವೇಕಹೀನತೆಯಿಂದ ಹೇಗೆ ಅವಜ್ಞೆಗೆ ಗುರಿಯಾಗಿದೆ ಎನ್ನುವುದು.
ನಿಮಗೊಂದು ಕಥೆ ಹೇಳುತ್ತೇನೆ ಕೇಳಿ. ಉತ್ತರ ಜಪಾನ್ ದೇಶದಲ್ಲಿ ‘ಐನು’ ಎಂಬುದೊಂದು ಬುಡಕಟ್ಟು ಮೂಲನಿವಾಸಿಗಳ ಭಾಷೆ. ಜಪಾನ್ ದೇಶದ ಮೈಜಿ ಸರ್ಕಾರ 1899ರಲ್ಲಿ ‘ಏಕಸ್ವರೂಪದ ರಾಷ್ಟ್ರೀಯತೆ’ಯ ಹುಚ್ಚಿಗೆ ಬಿದ್ದು ಐನು ಜನಾಂಗದವರ ಭಾಷೆಯನ್ನು ನಿರ್ಬಂಧಿಸಿತು. ಅವರಿಗೆ ಬೇರೆ ಹೆಸರು ಕೊಟ್ಟಿತು. ಒಟ್ಟಾರೆ ತಲೆತಲಾಂತರಗಳಿಂದ ಬಂದಿದ್ದ ಅವರ ‘ಗುರುತು’ ಗಳನ್ನು ಅವರಿಂದ ಕಿತ್ತುಕೊಂಡಿತು. ಪರಿಣಾಮವಾಗಿ ಐನು ಭಾಷೆಯ ಮೂಲಕ ಆ ಜನಾಂಗದವರು ಗಳಿಸಿದ್ದ ಪ್ರಾಕೃತಿಕ ಜ್ಞಾನ ಪರಂಪರೆ ಕಣ್ಮರೆಯಾಗತೊಡಗಿತು. ಐನು ಜನತೆ ತಿರುಗಿಬಿದ್ದರು. ಪ್ರತಿಭಟಿಸಿದರು. ಕೊನೆಗೂ ಜಪಾನ್ ಸರ್ಕಾರ ಮಣಿದು 2008ರಲ್ಲಿ ಐನು ಭಾಷೆಗೆ ಮಾನ್ಯತೆಯನ್ನು ಕೊಟ್ಟಿತು, ಅವರ ‘ಗುರುತು’ ಗಳನ್ನು ಅವರಿಗೆ ಮರಳಿಸಿತು - ಒಂದು ಶತಮಾನದ ಅನಂತರ. ನೂರು ವರ್ಷಗಳಲ್ಲಾಗಲೇ ಐನು ಭಾಷೆ ತನಗೇ ವಿಶಿಷ್ಟವೆನಿಸಿದ್ದ ಜ್ಞಾನ ಪರಂಪರೆಯಲ್ಲಿ ಬಹುಪಾಲನ್ನು ಕಳೆದುಕೊಂಡಿತ್ತು. ಟೋಕಿಯೋದಂಥ ದೊಡ್ಡ ನಗರಗಳಲ್ಲಿ ಕೆಲಸ ಮಾಡುವ ಆ ಜನಾಂಗದ ಹುಡುಗ-ಹುಡುಗಿಯರಿಗೆ ಇಂದಿಗೂ ಸಂದಿಗ್ಧ ಸ್ಥಿತಿ. ಅವರ ಗುರುತಿನ ಕುರಿತು ಅವರಿಗೇ ಒಂದು ವಿಸ್ಮೃತಿ. ಒಂದು ಕಾಲಕ್ಕೆ ಸಾಕಷ್ಟು ಹರಹು ಹೊಂದಿದ್ದ ಐನು ಭಾಷೆಯನ್ನು ಇಂದು ಜಪಾನ್ ದೇಶದಲ್ಲಿ ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಮಾತನಾಡುತ್ತಾರೆ, ಅದೂ ಆ ಜನಾಂಗದ ಹಿರೀಕರು. ಇಂದು ಈ ಭಾಷೆಯ ಪುನರುಜ್ಜೀವನ ನಡೆಯುತ್ತಿದೆ.
ಒಂದು ರಾಷ್ಟ್ರದ ಸಾಂಸ್ಕೃತಿಕ ಜೀವನದಲ್ಲಿ ಕೆಲವೊಮ್ಮೆ ಈ ರಾಷ್ಟ್ರೀಯತೆ ಎನ್ನುವುದನ್ನು ದೇಶದ ಉದ್ದಗಲಕ್ಕೂ ಅನ್ವಯಿಸುವ ‘ಏಕ ಸ್ವರೂಪದ’ ನೆಲೆಗಟ್ಟಿನಲ್ಲಿ ನೋಡುತ್ತ ‘ಒಂದು ದೇಶ - ಒಂದು ಭಾಷೆ’; ‘ಒಂದು ದೇಶ - ಒಂದು ಸಂಸ್ಕೃತಿ’ ಎಂಬ ಅವೈಜ್ಞಾನಿಕ, ಅವಾಸ್ತವಿಕ ನೆಲೆಗಳಲ್ಲಿ ಮುಂಚೂಣಿಗೆ ತರುವ ಹುನ್ನಾರಗಳು ನಡೆಯುತ್ತವೆ. ಪ್ರಭುತ್ವಗಳು ಹಿಂದೆ ನಿಂತು ಬೆಂಬಲಿಸುವ ಇಂಥ ಹುನ್ನಾರಗಳಿಂದ ಪ್ರಾದೇಶಿಕ ಸಂಸ್ಕೃತಿಗಳು ನಲುಗಿ ಹೋಗುತ್ತವೆ. ಅದರಲ್ಲಿ ಪ್ರಾದೇಶಿಕ ಭಾಷೆಗಳೂ ಸಹ ತುಳಿತಕ್ಕೆ ಒಳಗಾಗುತ್ತವೆ.
ಒಂದು ದೇಶದ ‘ರಾಷ್ಟ್ರೀಯ ಪ್ರಜ್ಞೆ’ ಎನ್ನುವುದು ಆ ದೇಶದೊಳಗಿನ ಒಟ್ಟು ‘ಪ್ರಾದೇಶಿಕ ಪ್ರಜ್ಞೆ’ ಗಳ ಸಂಕಲನವಾಗಬೇಕಲ್ಲದೆ ಒಂದನ್ನು ಕಳೆದು ಸಾಧಿಸುವ ವ್ಯವಕಲನವಾಗಬಾರದು. ಸದೃಢವಾದ ಪ್ರಾದೇಶಿಕತೆ [ಎಂದರೆ ಪ್ರಾದೇಶಿಕ ಭಾಷೆ, ಆಚರಣೆ, ಸಂಪ್ರದಾಯಗಳು, ಧಾರ್ಮಿಕ ನಂಬುಗೆಗಳು ಇತ್ಯಾದಿ] ಸಶಕ್ತವಾದ ರಾಷ್ಟ್ರೀಯತೆಯನ್ನು ನಿರ್ಮಿಸುತ್ತದೆ ಎನ್ನುವ ಆತ್ಯಂತಿಕ ಸತ್ಯವನ್ನು ಮನಗಾಣಬೇಕು. ಇಂದು ಕನ್ನಡವು ಒಂದು ಭಾಷೆಯಾಗಿ ತನ್ನದೇ ಆದ ಸದೃಢವಾದ ಪ್ರಾದೇಶಿಕ ಬಲವನ್ನು ಗಳಿಸಿಕೊಳ್ಳಬೇಕಾದ ಇನ್ನೊಂದು ಗಂಭೀರವಾದ ಸವಾಲನ್ನು ಎದುರಿಸುತ್ತಿದೆ. ಕನ್ನಡವು ತನ್ನ ಸಹಸ್ರಮಾನಗಳ ಹಿರಿಮೆಯನ್ನು ಮುಂದೆಯೂ ಕಾಪಿಟ್ಟುಕೊಂಡು ಹೋಗಲು ಇದು ಅತ್ಯಂತ ಅವಶ್ಯಕ. ಇದು ಸಾಧ್ಯವಾಗುವುದು ಈ ಭಾಷೆಯ ವಾರಸುದಾರರಾದ ನಾವು ಪ್ರತಿಯೊಂದು ಹಂತದಲ್ಲೂ ಕನ್ನಡವನ್ನು ಬಳಸುವುದರಿಂದ. ಮತ್ತು ಸರ್ಕಾರಗಳಿಂದ ನಮ್ಮ ಭಾಷೆಯ ಬೆಳವಣಿಗೆಗೆ ಬೇಕಾದ ಆರ್ಥಿಕ ಸಂಪನ್ಮೂಲಗಳನ್ನು ನಮ್ಮ ಮೂಲಭೂತ ಹಕ್ಕುಗಳ ರೀತಿಯಲ್ಲಿ ನಿರ್ದಾಕ್ಷಿಣ್ಯವಾಗಿ ಪಡೆದುಕೊಂಡು ಭಾಷೆಯ ಉಳಿವು-ಬೆಳವಿನ ಕಡೆಗೆ ಕಾರ್ಯೋನ್ಮುಖವಾಗುವುದರಿಂದ.
● ಸಂಸ್ಕೃತ ಭಾಷೆ - ₹2532 ಕೋಟಿ
● ಉರ್ದು ಭಾಷೆ - ₹837 ಕೋಟಿ
● ಹಿಂದಿ ಭಾಷೆ - ₹426 ಕೋಟಿ
● ತಮಿಳು ಭಾಷೆ - ₹113 ಕೋಟಿ
● ಕನ್ನಡ ಭಾಷೆ - ₹34 ಕೋಟಿ
ಎರಡೂವರೆ ಸಾವಿರ ವರ್ಷಗಳಿಗಿಂತಲೂ ಅಧಿಕ ದಾಖಲಿತ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ಕೇಂದ್ರ ಸರ್ಕಾರವು 10 ವರ್ಷಗಳಲ್ಲಿ ಕೊಟ್ಟ ಅನುದಾನ ಕೇವಲ 34 ಕೋಟಿ ರೂಪಾಯಿಗಳು. ಇದು ಸಮ್ಮತವೇ? ನಮ್ಮ ರಾಜ್ಯದ ಎಲ್ಲ ಸಂಸದರೂ ನಮ್ಮ ಭಾಷೆಗೆ ಸಂಬಂಧಿಸಿದ ಇಂಥ ವಿಷಯಗಳ ಕುರಿತು ಯಾಕೆ ಲೋಕಸಭೆಯಲ್ಲಿ ದನಿ ಎತ್ತುವುದಿಲ್ಲ? ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಸಭೆಗೆ ಆಯ್ಕೆ ಆಗಿರುವುದು ನಮ್ಮ ಕರ್ನಾಟಕದಿಂದ. ರಾಜ್ಯ ಸಭೆಯಲ್ಲಿ ಕನ್ನಡ ನಾಡಿನ ಪ್ರತಿನಿಧಿಯಾಗಿ ನಿರ್ಮಲಾ ಸೀತಾರಾಮನ್ ಅವರು ಕನ್ನಡ ಭಾಷೆಗೆ ಆಗಿರುವ ಈ ತಾರತಮ್ಯವನ್ನು ಯಾಕೆ ಸರಿಪಡಿಸಬಾರದು? ಇದುವರೆಗೂ ನಮ್ಮ ರಾಜ್ಯಕ್ಕೆ, ರಾಜ್ಯದ ಭಾಷೆಗೆ ಯಾವ ಕೊಡುಗೆಯನ್ನು ಅವರು ನೀಡಿದ್ದಾರೆ?.
ಇದೊಂದು ಸಂದರ್ಭದಲ್ಲಿ ಮಾತ್ರವಲ್ಲ, ಕೇಂದ್ರ ಸರ್ಕಾರವು ನಮ್ಮ ಕನ್ನಡ ನಾಡಿನಲ್ಲಿ ಹುಟ್ಟಿದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನಗೊಳಿಸಿದಾಗಲೂ ಸಹ ನಮ್ಮ ಜನಪ್ರತಿನಿಧಿಗಳು ಅದನ್ನು ಪ್ರತಿಭಟಿಸಲಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇಂದು ಹೇಳ ಹೆಸರಿಲ್ಲದಂತೆ ಕಣ್ಮರೆಯಾಗಿ ಹೋದರೆ ಬ್ಯಾಂಕ್ ಆಫ್ ಬರೋಡ ಮಾತ್ರ ಇನ್ನೂ ಅಸ್ತಿತ್ವದಲ್ಲಿದೆ. ಈಗ ಯೋಚಿಸಿ - ನಮ್ಮದೇ ಆದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇಂದು ಅಸ್ತಿತ್ವದಲ್ಲಿದ್ದಿದ್ದರೆ ಬ್ಯಾಂಕಿಗೆ ಹೋಗುವ ರೈತನಿಗೆ ಕನ್ನಡದಲ್ಲಿ ಮಾತಾಡುವ ವ್ಯವಸ್ಥಾಪಕರೂ, ದುಡ್ಡೆಣಿಸಿ ಕೊಡುವವರೂ ಸಿಕ್ಕು ಅಷ್ಟರ ಮಟ್ಟಿಗೆ ಆ ರೈತನ ನಿತ್ಯದ ಬದುಕಿನ ವ್ಯವಹಾರ ಸುಗಮವಾಗಿ ನಡೆಯುತ್ತಿತ್ತು. ಅಲ್ಲವೇ? ಪ್ರಶ್ನೆಗಳಿವೆ ಆದರೆ ಉತ್ತರಗಳು ಸಿಗುತ್ತಿಲ್ಲ.
ಇದು ಕೇಂದ್ರದ ಕಥೆಯಾದರೆ ಇನ್ನು ರಾಜ್ಯ ಸರ್ಕಾರದ ಧೋರಣೆಯೂ ಸಹ ಪ್ರಶ್ನಾರ್ಹವೆ. ಕನ್ನಡ ನುಡಿಯ ಕುರಿತು ಒಂದು ವಿಶ್ವವಿದ್ಯಾನಿಲಯವಿರಲಿ ಎನ್ನುವುದು ದಶಕಗಳ ಕನಸಾಗಿತ್ತು. ಅದು ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಯಾಗುವುದರ ಮೂಲಕ ಈಡೇರಿತು. ಆದರೆ ಇಂದು ಅಲ್ಲಿ ೪೦ ಕ್ಕಿಂತಲೂ ಕಮ್ಮಿ ಸಂಖ್ಯೆಯ ಅಧ್ಯಾಪಕರಿದ್ದಾರೆ. ಇಷ್ಟು ಕಡಿಮೆ ಅಧ್ಯಾಪಕ ವೃಂದದಿಂದ ಅದಾವ ಕನ್ನಡದ ಕೈಂಕರ್ಯ ಸಾಧ್ಯ? ದುರಂತವೆಂದರೆ, ಅನೇಕ ಸಲ ಕನ್ನಡ ವಿಶ್ವವಿದ್ಯಾಲಯ ವಿದ್ಯುಚ್ಛಕ್ತಿಯ ಬಾಕಿ ಕಟ್ಟಲೂ ಆಗದೆ ಕತ್ತಲಲ್ಲಿ ಕಾರ್ಯ ನಿರ್ವಹಿಸುವ ದುಸ್ಥಿತಿಗೆ, ಕಸ ಗುಡಿಸುವವರಿಗೂ ಹಣ ಕೊಡಲು ಆಗದಂಥ ನಿಕೃಷ್ಟ ಸ್ಥಿತಿಗೆ ತಲುಪಿದೆಯೆಂದರೆ ರಾಜ್ಯ ಸರ್ಕಾರ ಏನು ಮಾಡುತ್ತಿದೆ? ಮೊದಲು ಕನ್ನಡ ವಿಶ್ವವಿದ್ಯಾಲಯದ ಕಾಯಕಲ್ಪದ ಕೆಲಸವಾಗಲಿ.
ಇಡಿಯಾಗಿ ಇವೆಲ್ಲ ಇಂದು ನಮ್ಮ ಕನ್ನಡ ನುಡಿಗೆ ಎದುರಾಗಿರುವ ಸವಾಲುಗಳು. ಇವುಗಳಲ್ಲಿ ಕೆಲವು ಮೊದಲಿನಿಂದಲೂ ಇದ್ದರೆ ಕೆಲವು ಇತ್ತೀಚಿನ ದಿನಗಳಲ್ಲಿ ಎದುರಾಗಿವೆ.
ಭಾಷೆಯೊಂದು ಬಳಸದೇ ಹೋದರೆ ಅಳಿವಿನಂಚಿಗೆ ತಲುಪುತ್ತದೆ. ಯುನೆಸ್ಕೋದ ಒಂದು ವರದಿಯನ್ವಯ ಇಂದು ಜಗತ್ತಿನಾದ್ಯಂತ ಸುಮಾರು 7000 ಭಾಷೆಗಳಿದ್ದು ಅವುಗಳಲ್ಲಿ ಸುಮಾರು 3000 ದಷ್ಟು ಭಾಷೆಗಳು ಅಳಿವಿನಂಚಿನಲ್ಲಿವೆ. ಕಳೆದ ಒಂದು ಶತಮಾನದಲ್ಲಿಯೇ 400ಕ್ಕಿಂತಲೂ ಹೆಚ್ಚು ಭಾಷೆಗಳು ಕಣ್ಮರೆಯಾಗಿ ಹೋಗಿವೆ. ಸದ್ಯಕ್ಕೆ ಕನ್ನಡವೇನೂ ಅಳಿವಿನಂಚಿಗೆ ಸೇರಿರುವ ಭಾಷೆಗಳ ಪಟ್ಟಿಯಲ್ಲಿ ಇಲ್ಲ. ಆದರೆ, ಕನ್ನಡವು ಇಂದು ಎದುರಿಸುತ್ತಿರುವ ಈ ಎಲ್ಲ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಿಕೊಂಡು ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳದೆ ಹೋದರೆ ಅಂಥದೊಂದು ಪ್ರಸಂಗ ಬಂದರೂ ಬಂದೀತು. ಈ ಎಚ್ಚರ ಈ ಮಹೋನ್ನತ ಭಾಷೆಯ ವಾರಸುದಾರರಾದ ನಮಗಿರಬೇಕು. ಯಾಕೆಂದರೆ ಅಳಿದು ಹೋಗುವ ಭಾಷೆಯೊಡನೆ ಒಂದಿಡೀ ಜನಾಂಗದ ವಿಚಾರಗಳು, ಜ್ಞಾನ ಪರಂಪರೆಗಳು, ಪರಿಸರದ ಪ್ರಜ್ಞೆಗಳು - ಹೀಗೆ ಒಂದು ನಾಡವರ್ಗರ ಇತಿಹಾಸವೇ ಕಾಣೆಯಾಗಿಬಿಡುತ್ತದೆ. ಹಾಗಾಗದಂತೆ ತಡೆಯುವ ನೈತಿಕ ಹೊಣೆಗಾರಿಕೆ ನಮ್ಮ ಮೇಲಿದೆ. ಅದಕ್ಕಾಗಿ ನಾವು ಮಾಡಬೇಕಾದುದಿಷ್ಟೆ - ನಿತ್ಯದ ಬದುಕಿನಲ್ಲಿ ಕನ್ನಡವನ್ನೇ ಬಳಸುವುದು, ಕನ್ನಡ ಬಾರದವರಿಗೆ ಕನ್ನಡ ಕಲಿಸುವುದು, ಸರ್ಕಾರಗಳಿಂದ ಬರಬೇಕಾದ ಅನುದಾನ ಪಡೆದುಕೊಂಡು ಭಾಷೆಯ ಔನ್ನತ್ಯಕ್ಕಾಗಿ ಹೊಸ ಹೊಸ ಸಂಶೋಧನೆ, ಪ್ರಸರಣ, ಜಾಗೃತಿ ಮತ್ತು ಸಾಹಿತ್ಯ ನಿರ್ಮಾಣದ ಕಡೆಗೆ ಕಟಿಬದ್ಧರಾಗಿ ಕೆಲಸ ಮಾಡುವುದು.
ಒಟ್ಟಾರೆಯಾಗಿ ಕರ್ನಾಟಕದ ಹೃದಯ ಶಿವನ ಕನ್ನಡದ ಡಿಂಡಿಮವು ಬಾರಿಸಿದರೆ ನಿಸ್ಸಂಶಯವಾಗಿ ಕನ್ನಡ ನಾಡಿನಲ್ಲಿ ಕನ್ನಡವು ಕನ್ನಡವ ಕನ್ನಡಿಸುವುದರಲ್ಲಿ ಯಾವ ಅನುಮಾನವೂ ಬೇಡ. ಹಾಗಾಗಲಿ ಎಂದು ಆಶಿಸುತ್ತ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
(ಲೇಖಕರು: ವಿಜಯ್ ಮಹಾಂತೇಶ. ಪಾಪನಾಳ. ಸ್ವತಂತ್ರ ಸಂಶೋಧಕ -ಪ್ರಾಚೀನ ಇತಿಹಾಸ ಮತ್ತು ಶಾಸನ ಶಾಸ್ತ್ರ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.