ಮಗಳು ಅನ್ಯಮನಸ್ಕಳಾಗಿ ಇರುತ್ತಾಳೆ. ಏನು ಕೇಳಿದರೂ ಸರಿಯಾಗಿ ಮಾತನಾಡುವುದಿಲ್ಲ. ಅವಳ ನಡೆ ನನಗೆ ತೀವ್ರ ಭಯ ಹುಟ್ಟಿಸಿದೆ. ಸದಾ ಪಟಪಟನೆ ಮಾತನಾಡುತ್ತಿದ್ದ ಹುಡುಗಿ ಹರೆಯಕ್ಕೆ ಕಾಲಿಟ್ಟಾಗಿನಿಂದ ಹೀಗಾಗಿದ್ದಾಳೆ. ಅವಳನ್ನು ಸಹಜ ಸ್ಥಿತಿಗೆ ತರಲು ಯಾವ ರೀತಿಯ ಪ್ರಯತ್ನಗಳನ್ನು ಮಾಡಬೇಕು ತಿಳಿಸುತ್ತೀರಾ ಸರ್.
- ಆಶಾ, ಬಾಳೇಸರ
ಹದಿಹರೆಯಕ್ಕೆ ಕಾಲಿಟ್ಟಿರುವ ಆಕೆಯಲ್ಲಿ ವಯೋಸಹಜವಾದ ಮನೋದೈಹಿಕ ಬದಲಾವಣೆಗಳಾಗುತ್ತಿವೆ. ಅವೆಲ್ಲವೂ ಆಕೆಗೆ ಹೊಸದು. ಕೆಲವೊಂದು ಅವಳಲ್ಲಿ ಕಿರಿಕಿರಿಯನ್ನು ಉಂಟು ಮಾಡಿರಬಹುದು. ಕೆಲವು ಆತಂಕ, ಭಯವನ್ನು ಹುಟ್ಟುಹಾಕಿರಬಹುದು. ಹಾರ್ಮೋನುಗಳ ಪ್ರಭಾವದಿಂದ ಆಕೆಯಲ್ಲಿ ಮೂಡ್ ಸ್ವಿಂಗ್ ಆಗುತ್ತಿರಬಹುದು. ಹೆಣ್ಣಾಗಿ ಬೆಳೆಯುವುದರಿಂದ ಜೀವನದಲ್ಲಿ ಬಹಳ ಕಷ್ಟಪಡಬೇಕಾಗುತ್ತದೆ ಎನ್ನುವಂಥದ್ದೇನಾದರೂ ಅವಳ ಮನಸ್ಸಿಗೆ ನಾಟಿರಬಹುದು. ಇವೆಲ್ಲವುಗಳನ್ನೂ ನೀವೂ ಅನುಭವಿಸಿದ್ದೀರಿ. ದಾಟಿ ಬಂದಿದ್ದೀರಿ. ಈಗ ಮರೆತಿರಬಹುದು!
ತನ್ನಲ್ಲಾಗುತ್ತಿರುವ ಬದಲಾವಣೆಗಳ ಬಗ್ಗೆ, ತನ್ನ ಮನಃಸ್ಥಿತಿಯ ಬಗ್ಗೆ ಮುಕ್ತವಾಗಿ ಮಾತನಾಡಲಿಕ್ಕೆ ಆಗದೆ ಅವಳಿಗೆ ಒಂಟಿತನ ಕಾಡುತ್ತಿರಬಹುದು. ಭಾವನೆಗಳ ತಾಕಲಾಟವನ್ನು ಮ್ಯಾನೇಜ್ ಮಾಡಲಿಕ್ಕಾಗದೆ ಆಕೆ ಮೌನದ ಗೂಡು ಸೇರಿರಬಹುದು. ಅವಳಲ್ಲಿ ನೀವು ಮುಕ್ತವಾಗಿ ಮಾತನಾಡಬೇಕು. ಹುಡುಗಿ ಹೆಣ್ಣಾಗುವ ದಿವ್ಯತೆಯ ಬಗ್ಗೆ, ಅದರ ಮಹತ್ವದ ಬಗ್ಗೆ ಅವಳಿಗೆ ಬಿಡಿಸಿ ಬಿಡಿಸಿ, ತಿಳಿಸಿ ಹೇಳಬೇಕು. ಅವಳ ಗೆಳತಿಯರನ್ನು ಗಮನಿಸಬೇಕು. ಆಕೆ ಯಾರೊಂದಿಗೆ ಆತ್ಮೀಯಳಾಗಿದ್ದಾಳೆ ಎನ್ನುವುದನ್ನು ಗಮನಿಸಬೇಕು. ಅವಳ ಸಹಾಯದಿಂದ ಇವಳ ಮನಸ್ಸಿನ ತಾಕಲಾಟವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬಹುದು. ಆಕೆಯ ಶಿಕ್ಷಕಿಯರಲ್ಲಿ ಒಬ್ಬರೊಂದಿಗೆ ಅವಳಲ್ಲಾದ ಬದಲಾವಣೆಗಳ ಬಗ್ಗೆ ನೀವು ಚರ್ಚಿಸಬಹುದು. ಅವರಿಂದ ಸೂಕ್ತವಾದ ಮಾರ್ಗದರ್ಶನವನ್ನು ಕೊಡಿಸಬಹುದು.
ಆಕೆಗೆ ಶಾಲೆಯಲ್ಲಾಗಲೀ ಮನೆಯಲ್ಲಾಗಲೀ ಹೊರಗೆಲ್ಲಾಗಲೀ ಏನಾದರೂ ಅವಘಡಗಳಾಗಿವೆಯೇ ಎನ್ನುವುದನ್ನು ಸಮಾಧಾನದಿಂದ ತಿಳಿದುಕೊಳ್ಳಲು ಪ್ರಯತ್ನಿಸಿ. ಅವಳ ಮನಸ್ಸು ಗಾಸಿಯಾಗದಂತೆ ನೀವು ವ್ಯವಹರಿಸಬೇಕು. ಆಕೆಯ ಊಟೋಪಚಾರ, ನಿದ್ರೆಯ ಬಗ್ಗೆ ಗಮನಿಸಬೇಕು. ಅಗತ್ಯವಿರುವಷ್ಟು ನೀರು ಕುಡಿಯುವಂತೆ ನೋಡಿಕೊಳ್ಳಬೇಕು ಹಾಗೂ ಸಮತೋಲಿತ ಆಹಾರವನ್ನು ಕೊಡಬೇಕು. ಅವಳ ಸೋಷಿಯಲ್ ಮೀಡಿಯಾ ಅಕೌಂಟ್‌ಗಳ ಬಗ್ಗೆ, ಸ್ಕ್ರೀನ್ ಟೈಮ್ ಬಗ್ಗೆ ಎಚ್ಚರಿಕೆ ವಹಿಸುವುದು ಒಳಿತು. ಮನೆ ಜನರಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಮುಕ್ತತೆ ಹೆಚ್ಚಿದಷ್ಟೂ ಮಕ್ಕಳ ಬೆಳವಣಿಗೆ ಸಹಜವಾಗಿಯೂ ಸರಳವಾಗಿಯೂ ಇರಲಿಕ್ಕೆ ಸಹಾಯಕವಾಗುತ್ತದೆ.
ನಿಮ್ಮ ಇಷ್ಟೆಲ್ಲ ಪ್ರಯತ್ನದ ನಂತರವೂ ಅವಳ ವರ್ತನೆಯಲ್ಲಿ ಸಕಾರಾತ್ಮಕ ಬದಲಾವಣೆ ಕಾಣದಿದ್ದರೆ, ಸಮರ್ಥ ಮನೋವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.