ADVERTISEMENT

ಆಸೀಸ್‌ಗೆ ಸತತ ಮೂರನೇ ಜಯ

​ಪ್ರಜಾವಾಣಿ ವಾರ್ತೆ
Published 23 ಜನವರಿ 2011, 19:30 IST
Last Updated 23 ಜನವರಿ 2011, 19:30 IST

ಸಿಡ್ನಿ: ಡೇವಿಡ್ ಹಸ್ಸಿ (ಅಜೇಯ 68) ಮತ್ತು ಬ್ರೆಟ್ ಲೀ (27ಕ್ಕೆ 3) ಅವರ ಪ್ರಭಾವಿ ಆಟದ ನೆರವಿನಿಂದ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 4 ವಿಕೆಟ್‌ಗಳ ಜಯ ಸಾಧಿಸಿತು.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 48 ಓವರ್‌ಗಳಲ್ಲಿ 214 ರನ್ ಗಳಿಸಿದರೆ, ಆಸ್ಟ್ರೇಲಿಯಾ 46 ಓವರ್‌ಗಳಲ್ಲಿ 6 ವಿಕೆಟ್‌ಗೆ 215 ರನ್ ಪೇರಿಸಿ ಜಯ ಸಾಧಿಸಿತು. ಈ ಮೂಲಕ ಏಳು ಪಂದ್ಯಗಳ ಸರಣಿಯಲ್ಲಿ ತನ್ನ ಮುನ್ನಡೆಯನ್ನು 3-0ಗೆ ಹೆಚ್ಚಿಸಿಕೊಂಡಿತು.

ಗೆಲುವಿಗೆ ಸುಲಭ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಒಂದು ಹಂತದಲ್ಲಿ 100 ವಿಕೆಟ್‌ಗೆ 5 ವಿಕೆಟ್ ಕಳೆದುಕೊಂಡು ಕುಸಿತ ಅನುಭವಿಸಿತ್ತು. ಆದರೆ ಡೇವಿಡ್ ಹಸ್ಸಿ ತಂಡಕ್ಕೆ ನೆರವಾದರು. ಆರನೇ ವಿಕೆಟ್‌ಗೆ ಸ್ಟೀವನ್ ಸ್ಮಿತ್ (26) ಜೊತೆ 63 ರನ್‌ಗಳ ಜೊತೆಯಾಟ ನೀಡಿದ ಅವರು ಮುರಿಯದ ಏಳನೇ ವಿಕೆಟ್‌ಗೆ ಹೇಸ್ಟಿಂಗ್ಸ್ ಜೊತೆ 52 ರನ್‌ಗಳನ್ನು ಸೇರಿಸಿ ತಂಡದ ಗೆಲುವಿಗೆ ಕಾರಣರಾದರು.

89 ಎಸೆತಗಳನ್ನು ಎದುರಿಸಿದ ಹಸ್ಸಿ ಆರು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಪರ ಜೊನಾಥನ್ ಟ್ರಾಟ್ (ಔಟಾಗದೆ 84, 119 ಎಸೆತ, 3 ಬೌಂ) ಮಾತ್ರ ಚೇತರಿಕೆಯ ಪ್ರದರ್ಶನ ನೀಡಿದರು. 27 ರನ್‌ಗಳಿಗೆ ಮೂರು ವಿಕೆಟ್ ಪಡೆದ ಬ್ರೆಟ್ ಲೀ ಇಂಗ್ಲೆಂಡ್ ಪತನಕ್ಕೆ ಕಾರಣರಾದರು.

ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್: 48 ಓವರ್‌ಗಳಲ್ಲಿ 214 (ಜೊನಾಥನ್ ಟ್ರಾಟ್ ಔಟಾಗದೆ 84, ಎಯೊನ್ ಮಾರ್ಗನ್ 30, ಲೂಕ್ ರೈಟ್ 32, ಬ್ರೆಟ್ ಲೀ 27ಕ್ಕೆ 3, ಕ್ಸೇವಿಯರ್ ಡೊಹೆಟ್ರಿ 37ಕ್ಕೆ 2). ಆಸ್ಟ್ರೇಲಿಯಾ: 46 ಓವರ್‌ಗಳಲ್ಲಿ 6 ವಿಕೆಟ್‌ಗೆ 215 (ಬ್ರಾಡ್ ಹಡಿನ್ 54, ಡೇವಿಡ್ ಹಸ್ಸಿ ಔಟಾಗದೆ 68, ಸ್ಟೀವನ್ ಸ್ಮಿತ್ 26, ಜಾನ್ ಹೇಸ್ಟಿಂಗ್ಸ್ ಔಟಾಗದೆ 18, ಪಾಲ್ ಕಾಲಿಂಗ್‌ವುಡ್ 25ಕ್ಕೆ 2).

ಫಲಿತಾಂಶ: ಆಸ್ಟ್ರೇಲಿಯಾಕ್ಕೆ 4 ವಿಕೆಟ್ ಗೆಲುವು ಹಾಗೂ ಏಳು ಪಂದ್ಯಗಳ ಸರಣಿಯಲ್ಲಿ 3-0 ರಲ್ಲಿ ಮುನ್ನಡೆ. 

ಪಂದ್ಯಶ್ರೇಷ್ಠ: ಬ್ರೆಟ್ ಲೀ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.