ADVERTISEMENT

ಆಸ್ಟ್ರೇಲಿಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್‌ ಕ್ವಾರ್ಟರ್‌ಗೆ ಸೈನಾ, ಸಿಂಧು ಲಗ್ಗೆ

ಪಿಟಿಐ
Published 22 ಜೂನ್ 2017, 19:30 IST
Last Updated 22 ಜೂನ್ 2017, 19:30 IST
ಪಿ.ವಿ ಸಿಂಧು ರಿಟರ್ನ್ಸ್‌ಮಾಡಿದ ಕ್ಷಣ
ಪಿ.ವಿ ಸಿಂಧು ರಿಟರ್ನ್ಸ್‌ಮಾಡಿದ ಕ್ಷಣ   

ಸಿಡ್ನಿ: ಭಾರತದ ಪಿ.ವಿ ಸಿಂಧು, ಸೈನಾ ನೆಹ್ವಾಲ್‌, ಕಿದಂಬಿ ಶ್ರೀಕಾಂತ್‌ ಹಾಗೂ ಬಿ.ಸಾಯಿ ಪ್ರಣೀತ್‌ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗುರುವಾರ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಶ್ರೀಕಾಂತ್‌ 15–21, 21–13, 21–13ರಲ್ಲಿ ವಿಶ್ವ ರ್‍ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿರುವ ಕೊರಿಯಾದ ಆಟಗಾರ  ಸನ್‌ ವಾನ್‌ ಹೊ ಅವರಿಗೆ ಆಘಾತ ನೀಡಿದರು.

ಹೋದ ವಾರವಷ್ಟೇ ಇಂಡೊನೇಷ್ಯಾ ಓಪನ್‌ ಸೆಮಿಫೈನಲ್‌ ಪಂದ್ಯದಲ್ಲಿ ಸನ್‌ ವಾನ್ ಎದುರು ಗೆಲುವು ದಾಖಲಿಸಿದ್ದ ಶ್ರೀಕಾಂತ್ ಇಲ್ಲಿ ಮತ್ತೊಮ್ಮೆ ಯಶಸ್ಸು ಸಾಧಿಸಿದ್ದಾರೆ.

ADVERTISEMENT

57 ನಿಮಿಷದ ಹಣಾಹಣಿಯಲ್ಲಿ ಭಾರತದ ಆಟಗಾರ ಮೇಲುಗೈ ಸಾಧಿಸಿದರು. ಸನ್ ವಾನ್ ಎದುರು ಆಡಿದ ಎಂಟು ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದು ಸಮಬಲ ಮಾಡಿಕೊಂಡರು.

ಮೊದಲ ಗೇಮ್‌ನಲ್ಲಿ ಆರು ಪಾಯಿಂಟ್‌ಗಳ ಹಿನ್ನಡೆಯಲ್ಲಿ ಸೋತ ಭಾರತದ ಆಟಗಾರ ಎರಡನೇ ಗೇಮ್‌ನಲ್ಲಿ ಅಮೋಘ ರೀತಿಯಲ್ಲಿ ತಿರುಗೇಟು ನೀಡಿದರು.

ಮೊದಲ ಗೇಮ್‌ನಲ್ಲಿ ಮಾಡಿದ ಅನಗತ್ಯ ತಪ್ಪುಗಳನ್ನು ತಿದ್ದಿಕೊಂಡು ಆಡಿದರು. ಅಲ್ಲದೇ ಅತ್ಯುತ್ತಮ ಸ್ಮ್ಯಾಷ್ ಹಾಗೂ ರಿಟರ್ನ್ಸ್‌ಗಳಿಂದ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು.

ದೀರ್ಘ ರ್‍ಯಾಲಿಯ ವೇಳೆ ಶ್ರೀಕಾಂತ್ ಹೆಚ್ಚು ಪಾಯಿಂಟ್ಸ್ ಪಡೆದರು. ಮೂರನೇ ಗೇಮ್‌ನಲ್ಲಿ ಕೂಡ ಆರಂಭದಿಂದಲೇ ಭಾರತದ ಆಟಗಾರ ಮೇಲುಗೈ ಸಾಧಿಸಿದ್ದರು. ವಿಶ್ವದ ಅಗ್ರಮಾನ್ಯ ಆಟಗಾರ ಸಣ್ಣ ಸಣ್ಣ ತಪ್ಪುಗಳಿಂದಾಗಿ ಬೆಲೆ ತೆತ್ತರು. ಅನಗತ್ಯ ಹೊಡೆತಗಳಿಂದ ಪಾಯಿಂಟ್ಸ್ ಕಳೆದುಕೊಂಡರು. ಅಲ್ಲದೇ ನೆಟ್ ಬಳಿ ಆಡುವ ವೇಳೆ ಅವರು ಹಿನ್ನಡೆ ಅನುಭವಿಸಿದರು.

‘ಸನ್‌ ವಾನ್‌ ಆಕ್ರಮಣಕಾರಿಯಾಗಿ ಆಡುವುದಿಲ್ಲ. ಬದಲಾಗಿ ದೀರ್ಘ ರ್‍ಯಾಲಿಗಳನ್ನು ಆಡುತ್ತಾರೆ. ಮೇಲ್ನೋಟಕ್ಕೆ ಅವರ ತಂತ್ರವನ್ನು ಮುರಿಯುವುದು ಸುಲಭ ಎನ್ನಿಸಬಹುದು. ಆದರೆ ರ್‍ಯಾಲಿಗಳನ್ನು ಆಡುವಲ್ಲಿ ಅವರು ಪರಿಣತರು. ಸ್ಪಲ್ಪ ಎಚ್ಚರ ತಪ್ಪಿದರೂ ಪಾಯಿಂಟ್ಸ್ ಕಳೆದುಕೊಳ್ಳುತ್ತೇವೆ. ಇಂತಹ ರ್‍ಯಾಲಿಗಳಲ್ಲಿ ನಿಧಾನವಾಗಿ ಷಟಲ್ ಬಂದರೆ ನಾವು ಕೂಡ ಆಕ್ರಮಣಕಾರಿಯಾಗಿ ಆಡಲು ಸಾಧ್ಯವಾಗುವುದಿಲ್ಲ. ಎರಡು ಮತ್ತು ಮೂರನೇ ಗೇಮ್‌ನಲ್ಲಿ ನಾನು ಈ ರೀತಿಯ ಹೊಡೆತಗಳನ್ನು ಚೆನ್ನಾಗಿ ನಿಭಾಯಿಸಿದೆ. ಆದ್ದರಿಂದ ಗೆಲುವು ಒಲಿಯಿತು’ ಎಂದು ಶ್ರೀಕಾಂತ್‌ ಹೇಳಿದ್ದಾರೆ.

ಇನ್ನೊಂದು ಪಂದ್ಯದಲ್ಲಿ ಸಾಯಿ ಪ್ರಣೀತ್‌ 21–18, 18–21, 21–13ರಲ್ಲಿ ಚೀನಾದ ಹುವಾಂಗ್ ಯುಕ್ಸಿಯಾಂಗ್ ಎದುರು ಗೆದ್ದರು.

2015ರ ಅಮೆರಿಕ ಓಪನ್‌ನಲ್ಲಿ ಚೀನಾ ಆಟಗಾರನನ್ನು ಮಣಿಸಿದ್ದ ಪ್ರಣೀತ್ ಇಲ್ಲಿ 64 ನಿಮಿಷಗಳಲ್ಲಿ ಪಂದ್ಯ ಗೆದ್ದುಕೊಂಡರು.

ಸಿಂಧು, ಸೈನಾಗೆ ಜಯ: ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಸಿಂಧು 21–13, 21–18ರಲ್ಲಿ ನೇರ ಗೇಮ್‌ಗಳಿಂದ ಚೀನಾದ ಚೆನ್ ಕ್ಸಿಯೊಕ್ಸಿನ್ ಎದುರು ಗೆದ್ದರು.

46 ನಿಮಿಷದ ಪಂದ್ಯದಲ್ಲಿ ಸಿಂಧು ಸುಲಭ ಗೆಲುವು ದಾಖಲಿಸಿದರು. ಮುಂದಿನ ಪಂದ್ಯದಲ್ಲಿ ಭಾರತದ ಆಟಗಾರ್ತಿ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಚೀನಾ ತೈಪೆಯ ತೈ ಜು ಯಿಂಗ್ ವಿರುದ್ಧ ಆಡಲಿದ್ದಾರೆ.

ಸಿಂಧು ಈಗಾಗಲೇ ತೈ ಎದುರು ಆರು ಪಂದ್ಯ ಸೋತಿದ್ದಾರೆ. ರಿಯೊ ಒಲಿಂಪಿಕ್ಸ್ ಸೇರಿ ಮೂರು ಬಾರಿ ಅವರನ್ನು ಮಣಿಸಿದ ದಾಖಲೆ ಹೊಂದಿದ್ದಾರೆ.
ವಿಶ್ವ ರ್‍ಯಾಂಕಿಂಗ್‌ನಲ್ಲಿ 16ನೇ ಸ್ಥಾನದಲ್ಲಿರುವ ಸೈನಾ 21–15, 20–22, 21–14ರಲ್ಲಿ ಅಮೆರಿಕದ ಸೋನಿಯಾ ಚೆಯಾ ವಿರುದ್ಧ ಗೆದ್ದರು.
ಮುಂದಿನ ಪಂದ್ಯದಲ್ಲಿ ಅವರು ಆರನೇ ಶ್ರೇಯಾಂಕದ ಚೀನಾದ ಆಟಗಾರ್ತಿ ಸನ್ ಯುಗೆ ಸವಾಲು ಒಡ್ಡಲಿದ್ದಾರೆ.

ಸನ್ ಅವರನ್ನು ಸೈನಾ ಆರು ಬಾರಿ ಮಣಿಸಿದ್ದಾರೆ. ಹೋದ ವರ್ಷ ಇದೇ ಟೂರ್ನಿಯ ಫೈನಲ್‌ನಲ್ಲಿ ಕೂಡ ಸೈನಾ ಗೆಲುವು ದಾಖಲಿಸಿದ್ದರು.

ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಜೋಡಿ 21–18, 18–21, 13–21ರಲ್ಲಿ  ಏಳನೇ ಶ್ರೇಯಾಂಕದ ಜಪಾನ್‌ನ ಶಿಹೊ ತನಕಾ ಮತ್ತು ಕೊಹರು ಯೊನೆಮೊಟೊ ಎದುರು ಸೋಲು ಅನುಭವಿಸಿತು.

ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್‌ಸೈರಾಜ್‌ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ 16–21, 18–21ರಲ್ಲಿ ಎಂಟನೇ ಶ್ರೇಯಾಂಕದ ಚೀನಾ ತೈಪೆಯ ಚೆನ್‌ ಲಿಂಗ್‌ ಮತ್ತು ವಾಂಗ್‌ ಚಿಲಿನ್ ಎದುರು ಸೋಲು ಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.