ADVERTISEMENT

ಇಂದು ಪಾಕ್‌–ಲಂಕಾ ಫೈನಲ್‌

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2014, 20:20 IST
Last Updated 7 ಮಾರ್ಚ್ 2014, 20:20 IST

ಮೀರ್‌ಪುರ (ಪಿಟಿಐ): ಅಜೇಯವಾಗಿ ಫೈನಲ್‌ ತಲುಪಿರುವ ಶ್ರೀಲಂಕಾ ತಂಡದವರು ಶನಿವಾರ ಇಲ್ಲಿ ನಡೆಯಲಿರುವ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದ್ದಾರೆ.

ಏಕದಿನ ಟೂರ್ನಿಯ ಈ ಪಂದ್ಯ ಷೇರ್‌ ಎ ಬಾಂಗ್ಲಾ ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಟೂರ್ನಿಯ ಲೀಗ್‌ ಹಂತದಲ್ಲಿ ಸಿಂಹಳೀಯ ಬಳಗದ ಎದುರು ಸೋಲು ಕಂಡಿದ್ದ ಪಾಕ್‌ ಈಗ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಆದರೆ ಈ ತಂಡದವರು ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ.

ಲೀಗ್‌ ಹಂತದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ವಿರುದ್ಧದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಲ್‌ರೌಂಡರ್‌ ಶಾಹಿದ್‌ ಅಫ್ರಿದಿ ಸೊಂಟದ ನೋವಿಗೆ ಒಳಗಾಗಿದ್ದಾರೆ. ಹಾಗಾಗಿ ಅವರು ಫೈನಲ್‌ ಪಂದ್ಯಕ್ಕೆ ಲಭ್ಯರಾಗುವುದೇ ಅನುಮಾನ. ಇದು ಪಾಕ್‌ ಬಳಗದ ಆತಂಕಕ್ಕೆ ಕಾರಣವಾಗಿದೆ. ವೇಗಿ ಉಮರ್‌ ಗುಲ್‌, ಶಾರ್ಜೀಲ್ ಖಾನ್‌ ಹಾಗೂ ಅಹ್ಮದ್ ಶೆಹ್ಜಾದ್‌ ಕೂಡ ಗಾಯಗೊಂಡಿದ್ದಾರೆ. ಹಾಗಾಗಿ ಕಣಕ್ಕಿಳಿಯುವ 11 ಆಟಗಾರರ ಬಳಗವನ್ನು ಪಾಕ್‌ ಇನ್ನೂ ನಿರ್ಧರಿಸಿಲ್ಲ.

‘ಪ್ರಶಸ್ತಿ ಉಳಿಸಿಕೊಳ್ಳುವ ಭರವಸೆಯಲ್ಲಿ ನಾವಿ ದ್ದೇವೆ. ಹಿಂದಿನ ಪಂದ್ಯಗಳಲ್ಲಿ ಲಭಿಸಿರುವ ಗೆಲುವು ತಂಡದ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ’ ಎಂದು ಪಾಕ್‌ ತಂಡದ ನಾಯಕ ಮಿಸ್ಬಾ ಉಲ್‌ ಹಕ್‌ ತಿಳಿಸಿದ್ದಾರೆ.

‘ಗಾಯದ ಸಮಸ್ಯೆ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಏಕೆಂದರೆ ಕ್ರೀಡೆಯಲ್ಲಿ ಇವೆಲ್ಲಾ ಇದ್ದಿದ್ದೆ. ಅಫ್ರಿದಿ ಈಗ ಎದುರಾಳಿ ಆಟಗಾರರಲ್ಲಿ ಆತಂಕ ಉಂಟು ಮಾಡಿದ್ದಾರೆ. ಅವರು ಆಡಲು ಲಭ್ಯವಾಗುತ್ತಾರೆ ಎಂಬ ವಿಶ್ವಾಸವಿದೆ’ ಎಂದೂ ಅವರು ಹೇಳಿದ್ದಾರೆ.
‘ಲಸಿತ್‌ ಮಾಲಿಂಗ ಅವರಂಥ ಪ್ರತಿಭಾವಂತ ಬೌಲರ್‌ ಲಂಕಾ ತಂಡದಲ್ಲಿದ್ದಾರೆ. ಆದರೆ ನಾವು ಇತ್ತೀಚೆಗೆ ಅಬುಧಾಬಿ, ದುಬೈ ಹಾಗೂ ಶಾರ್ಜಾದಲ್ಲಿ ನಡೆದ ಸರಣಿಗಳಲ್ಲಿ ಲಂಕಾ ಎದುರು ಉತ್ತಮ ಪ್ರದರ್ಶನ ನೀಡಿದ್ದೆವು. ಮಾಲಿಂಗ ಅವರನ್ನು ಸಮರ್ಥವಾಗಿ ಎದುರಿಸಿದ್ದೆವು. ಕೊನೆಯ ಓವರ್‌ಗಳಲ್ಲೂ ಅವರ ಎದುರು ಚೆನ್ನಾಗಿ ಆಡಿದ್ದೇವೆ’ ಎಂದು ಮಿಸ್ಬಾ ನುಡಿದಿದ್ದಾರೆ.

ಲಂಕಾ ತಂಡದವರು ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಈ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ ಕುಮಾರ ಸಂಗಕ್ಕಾರ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಬೌಲರ್‌ಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಬಾಂಗ್ಲಾ ದೇಶ ವಿರುದ್ಧದ ಕೊನೆಯ ಲೀಗ್‌ ಪಂದ್ಯದಲ್ಲಿ ಕೊಂಚ ತಡವರಿಸಿದ್ದರು. ಆಗ ನಾಯಕ ಏಂಜೆಲೊ ಮ್ಯಾಥ್ಯೂಸ್‌ ತಂಡಕ್ಕೆ ಆಸರೆಯಾಗಿದ್ದರು.

ಈ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಮಾಹೇಲ ಜಯವರ್ಧನೆ ಅವರ ಫಾರ್ಮ್‌ ಚಿಂತೆಗೆ ಕಾರಣವಾಗಿದೆ. ನಾಲ್ಕು ಪಂದ್ಯಗಳಿಂದ ಅವರು 36 ರನ್‌ ಗಳಿಸಿದ್ದಾರೆ.

‘ಫೈನಲ್‌ನಲ್ಲಿ ಮಾಹೇಲ ಜಯವರ್ಧನೆ ಉತ್ತಮ ಪ್ರದರ್ಶನ ತೋರುತ್ತಾರೆ. ಅವರು ಫಾರ್ಮ್‌ಗೆ ಮರಳಲಿದ್ದಾರೆ’ ಎಂದು ಸಿಂಹಳೀಯ ನಾಡಿನ ನಾಯಕ ಮ್ಯಾಥ್ಯೂಸ್‌್ ಹೇಳಿದರು.

ಶ್ರೀಲಂಕಾ ಏಂಜೆಲೊ ಮ್ಯಾಥ್ಯೂಸ್‌ (ನಾಯಕ)
ಕುಶಾಲ್‌ ಪೆರೇರಾ, ಲಾಹಿರು ತಿರಿಮಾನೆ, ಕುಮಾರ ಸಂಗಕ್ಕಾರ (ವಿಕೆಟ್ ಕೀಪರ್‌), ಮಾಹೇಲ ಜಯವರ್ಧನೆ, ಆಶನ್‌ ಪ್ರಿಯಾಂಜನ್‌, ಚತುರಂಗ ಡಿಸಿಲ್ವಾ, ತಿಸ್ಸಾರ ಪೆರೇರಾ, ಸಚಿತ್ರ ಸೇನನಾಯಕೆ, ಅಜಂತ ಮೆಂಡಿಸ್‌, ಸುರಂಗ ಲಕ್ಮಲ್‌, ಲಸಿತ್‌ ಮಾಲಿಂಗ, ದಿನೇಶ್‌ ಚಾಂಡಿಮಾಲ್‌ ಹಾಗೂ ಧಮ್ಮಿಕಾ ಪ್ರಸಾದ್‌.

ಪಾಕಿಸ್ತಾನ ಮಿಸ್ಬಾ ಉಲ್‌ ಹಕ್‌ (ನಾಯಕ)
ಅಹ್ಮದ್‌ ಶೆಹ್ಜಾದ್‌, ಮೊಹಮ್ಮದ್‌ ಹಫೀಜ್‌, ಶೊಹೇಬ್‌ ಮಕ್ಸೂದ್‌, ಫವಾದ್‌ ಆಲಾಂ, ಅಬ್ದುರ್‌ ರೆಹಮಾನ್‌, ಶಾಹಿದ್‌ ಅಫ್ರಿದಿ, ಉಮರ್‌ ಅಕ್ಮಲ್‌, ಮೊಹಮ್ಮದ್‌ ತಲ್ಲಾ, ಸಯೀದ್‌ ಅಜ್ಮಲ್‌, ಬಿಲವಾಲ್ ಭಟ್ಟಿ, ಜುನೈದ್‌ ಖಾನ್‌, ಅನ್ವರ್‌ ಅಲಿ ಹಾಗೂ ಶಾರ್ಜೀಲ್‌ ಖಾನ್‌.

ಆರಂಭ: ಮ. 1.30ಕ್ಕೆ (ಭಾರತೀಯ ಕಾಲಮಾನ). ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.