ADVERTISEMENT

ಐರ್ಲೆಂಡ್ ಆಟಕ್ಕೆ ಸ್ಟ್ರಾಸ್ ಚಪ್ಪಾಳೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2011, 19:30 IST
Last Updated 3 ಮಾರ್ಚ್ 2011, 19:30 IST
ಐರ್ಲೆಂಡ್ ಆಟಕ್ಕೆ ಸ್ಟ್ರಾಸ್ ಚಪ್ಪಾಳೆ
ಐರ್ಲೆಂಡ್ ಆಟಕ್ಕೆ ಸ್ಟ್ರಾಸ್ ಚಪ್ಪಾಳೆ   

ಬೆಂಗಳೂರು: ತಮ್ಮ ದೇಶದ ಕ್ರಿಕೆಟಿಗರು ಇಂಥದೊಂದು ಸಾಧನೆ ಮಾಡಬಹುದು ಎಂದು ಐರ್ಲೆಂಡ್ ಜನತೆ ಕನಸಿನಲ್ಲೂ ಯೋಚಿಸಿರಲಿಕ್ಕಿಲ್ಲ. ಆದರೆ ಬುಧವಾರ ರಾತ್ರಿ ಉದ್ಯಾನ ನಗರಿಯಲ್ಲೊಂದು ಅಂಥ ಪವಾಡ ನಡೆದು ಹೋಯಿತು.

ಇಂಗ್ಲೆಂಡ್ ವಿರುದ್ಧ ನಡೆದ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಐರ್ಲೆಂಡ್ ತಂಡ ಮೂರು ವಿಕೆಟ್‌ಗಳ ಅಚ್ಚರಿ ಗೆಲುವು ಸಾಧಿಸಿಯೇ ಬಿಟ್ಟಿತು.

ಈ ಅದ್ಭುತ ಪ್ರದರ್ಶನಕ್ಕೆ ಮೊದಲು ಬೆನ್ನು ತಟ್ಟಿದ್ದು ಇಂಗ್ಲೆಂಡ್ ತಂಡದ ನಾಯಕ ಆ್ಯಂಡ್ರ್ಯೂ ಸ್ಟ್ರಾಸ್. ಐರ್ಲೆಂಡ್ ತಂಡ ಈ ಗೆಲುವಿಗೆ ಅರ್ಹ ಎಂದು ಪಂದ್ಯದ ಬಳಿಕ ಅವರು ನುಡಿದರು.

‘ನಿಜ, ಫಲಿತಾಂಶ ನೋಡಿ ನನಗೆ ಶಾಕ್ ಆಯಿತು. ಜೊತೆಗೆ ಈ ಸೋಲಿನಿಂದ ನಿರಾಶೆಯೂ ಆಯಿತು. ಆದರೆ ಐರ್ಲೆಂಡ್ ತಂಡದ ಆಟಗಾರರದ್ದು ಅದ್ಭುತ ಪ್ರದರ್ಶನ. ಈ ಗೆಲುವಿಗೆ ಅವರು ಅರ್ಹರು. ಅವರ ಹೋರಾಟದ ಮನೋಭಾವ ಮೆಚ್ಚುವಂಥದ್ದು. ಅದರಲ್ಲೂ ಕೆವಿನ್ ಒಬ್ರಿಯನ್ ಅಮೋಘ ಇನಿಂಗ್ಸ್ ಕಟ್ಟಿದರು. ನಮ್ಮಿಂದ ಪಂದ್ಯವನ್ನು ಕಸಿದುಕೊಂಡರು’ ಎಂದು ಸ್ಟ್ರಾಸ್ ನುಡಿದರು.

ಆದರೆ ಚಾಂಪಿಯನ್‌ಷಿಪ್‌ನಲ್ಲಿ ಪುಟಿದೇಳುವ ಸಾಮರ್ಥ್ಯ ಇಂಗ್ಲೆಂಡ್ ತಂಡಕ್ಕಿದೆ ಎಂದು ಅವರು ಹೇಳಿದ್ದಾರೆ.
‘ವಿಶ್ವಕಪ್ ಗೆಲ್ಲುವ ನಮ್ಮ ಕನಸು ಇನ್ನೂ ಅಸ್ತಮಿಸಿಲ್ಲ. ಏಕೆಂದರೆ ತಂಡ ಉತ್ತಮ ಪ್ರದರ್ಶನವನ್ನೇ ನೀಡುತ್ತಿದೆ. ಬುಧವಾರದ ಪಂದ್ಯದಲ್ಲಿ ಎಲ್ಲವೂ ನಾವು ಅಂದುಕೊಂಡಂತೆ ನಡೆಯುತಿತ್ತು. 25 ಓವರ್‌ಗಳವರೆಗೆ ಪಂದ್ಯ ನಮ್ಮ ಕಡೆಯೇ ಇತ್ತು.

ಏಕೆಂದರೆ ಅವರು ಒಂದು ಹಂತದಲ್ಲಿ 111 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದರು. ಆದರೆ ಒಬ್ರಿಯನ್ ಹಾಗೂ ಕ್ಯೂಸಕ್ ಜೊತೆಯಾಟ ಪಂದ್ಯಕ್ಕೆ ತಿರುವು ನೀಡಿತು. ಅವರು ಆರನೇ ವಿಕೆಟ್‌ಗೆ 162 ರನ್ ಸೇರಿಸಿದರು’ ಎಂದು ಸ್ಟ್ರಾಸ್ ವಿವರಿಸಿದರು.
ಚಾಂಪಿಯನ್‌ಷಿಪ್‌ನಲ್ಲಿ ಸ್ಟ್ರಾಸ್ ಪಡೆ ಇನ್ನೂ ದಕ್ಷಿಣ ಆಫ್ರಿಕಾ, ವೆಸ್ಟ್‌ಇಂಡೀಸ್ ಹಾಗೂ ಬಾಂಗ್ಲಾದೇಶ ಎದುರು ಪೈಪೋಟಿ ನಡೆಸಬೇಕಾಗಿದೆ.

ಇದೊಂದು ನಮ್ಮ ಜೀವನದ ಶ್ರೇಷ್ಠ ದಿನ ಎಂದು ಐರ್ಲೆಂಡ್ ತಂಡದ ನಾಯಕ ವಿಲಿಯಮ್ ಪೋರ್ಟರ್‌ಫೀಲ್ಡ್ ತಿಳಿಸಿದ್ದಾರೆ.
‘ಇದೊಂದು ಶ್ರೇಷ್ಠ ದಿನ. ಅತ್ಯುತ್ತಮ ಪ್ರದರ್ಶನವಿದು. ನಮ್ಮ ಮೇಲೆ ನಮಗೆ ನಂಬಿಕೆ ಇತ್ತು. ನಮಗೂ ಗೆಲುವಿನ ಸಾಮರ್ಥ್ಯವಿದೆ. ಕೆವಿನ್ ಒಬ್ರಿಯನ್ ಅಮೋಘ ಪ್ರದರ್ಶನ ತೋರಿದರು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.