ADVERTISEMENT

ಕರ್ನಾಟಕ-ದೆಹಲಿ ಪಂದ್ಯ ರೋಚಕ ಡ್ರಾ

ಕಬಡ್ಡಿ: ತಂಡದ ನಾಯಕಿ ತೇಜಸ್ವಿನಿ ಮಿಂಚು; ರೈಲ್ವೆಗೆ ಜಯ

​ಪ್ರಜಾವಾಣಿ ವಾರ್ತೆ
Published 11 ಜನವರಿ 2013, 19:59 IST
Last Updated 11 ಜನವರಿ 2013, 19:59 IST
ಮಂಡ್ಯದ ಸರ್.ಎಂ. ವಿಶ್ವೇಶ್ವರಯ್ಯ ಮೈದಾನದಲ್ಲಿ ನಡೆಯುತ್ತಿರುವ 60ನೇ ಸೀನಿಯರ್ ಸೂಪರ್ ಲೀಗ್ ಕಬಡ್ಡಿ ಚಾಂಪಿಯನ್‌ಷಿಪ್‌ನ ಮಹಿಳೆಯರ ವಿಭಾಗದ ಪಂದ್ಯದಲ್ಲಿ ಭಾರತೀಯ ರೈಲ್ವೆ ತಂಡದ ಆಟಗಾರ್ತಿಯರು ಛತ್ತೀಸಗಡದ ದಾಳಿಗಾರ್ತಿಯನ್ನು ಹಿಡಿಯುವ ಪ್ರಯತ್ನದಲ್ಲಿ ಯಶ ಕಂಡರು 	-ಪ್ರಜಾವಾಣಿ ಚಿತ್ರ: ಶ್ರೀನಿವಾಸ್
ಮಂಡ್ಯದ ಸರ್.ಎಂ. ವಿಶ್ವೇಶ್ವರಯ್ಯ ಮೈದಾನದಲ್ಲಿ ನಡೆಯುತ್ತಿರುವ 60ನೇ ಸೀನಿಯರ್ ಸೂಪರ್ ಲೀಗ್ ಕಬಡ್ಡಿ ಚಾಂಪಿಯನ್‌ಷಿಪ್‌ನ ಮಹಿಳೆಯರ ವಿಭಾಗದ ಪಂದ್ಯದಲ್ಲಿ ಭಾರತೀಯ ರೈಲ್ವೆ ತಂಡದ ಆಟಗಾರ್ತಿಯರು ಛತ್ತೀಸಗಡದ ದಾಳಿಗಾರ್ತಿಯನ್ನು ಹಿಡಿಯುವ ಪ್ರಯತ್ನದಲ್ಲಿ ಯಶ ಕಂಡರು -ಪ್ರಜಾವಾಣಿ ಚಿತ್ರ: ಶ್ರೀನಿವಾಸ್   

ಮಂಡ್ಯ:  ಸರ್. ಎಂ. ವಿಶ್ವೇಶ್ವರಯ್ಯ ಮೈದಾನದಲ್ಲಿ  ಶುಕ್ರವಾರ ರಾತ್ರಿ ಹದಿನೈದು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಕರ್ನಾಟಕ ಮತ್ತು ದೆಹಲಿ ನಡುವಿನ ಲೀಗ್ ಪಂದ್ಯ ಡ್ರಾನಲ್ಲಿ ಮುಕ್ತಾಯವಾಯಿತು.

ಕರ್ನಾಟಕ ಅಮೆಚೂರ್ ಕಬಡ್ಡಿ ಸಂಸ್ಥೆ ಮತ್ತು ಮಂಡ್ಯ ಜಿಲ್ಲಾ ಘಟಕದ ಆಶ್ರಯದಲ್ಲಿ ಅಂಬಿ ಗೋಲ್ಡ್ ಕಪ್‌ಗಾಗಿ ನಡೆಯುತ್ತಿರುವ  60ನೇ ಸೀನಿಯರ್ ಸೂಪರ್‌ಲೀಗ್ ಕಬಡ್ಡಿ ಚಾಂಪಿಯನ್‌ಷಿಪ್‌ನ ಪುರುಷರ `ಬಿ' ಗುಂಪಿನ  ಪಂದ್ಯದಲ್ಲಿ ಕರ್ನಾಟಕ 24-24ರಿಂದ ದೆಹಲಿ ತಂಡದ ಗೆಲುವಿನ ಅವಕಾಶವನ್ನು ತಪ್ಪಿಸಿ ಸಮಬಲ ಸಾಧಿಸಿತು.

ಹೊನಲು ಬೆಳಕಿನಲ್ಲಿ ನಡೆದ ಪಂದ್ಯದಲ್ಲಿ ಏಟಿಗೆ ಏಟು, ತಿರುಗೇಟು ಎನ್ನುಂತೆ ಸಮಬಲದ ಪೈಪೋಟಿ ನಡೆಯಿತು. ಪ್ರಥಮಾರ್ಧದ ವಿರಾಮದ ವೇಳೆಗೆ ದೆಹಲಿ 11-10ರಿಂದ ಮುಂದಿತ್ತು. ನಂತರ ಆಕ್ರಮಣಕಾರಿ ಆಟ ಆರಂಭಿಸಿದ ದೆಹಲಿ ತಂಡದ ಅರ್ಜುನ ಪ್ರಶಸ್ತಿ ವಿಜೇತ ಅನೂಪಕುಮಾರ್ ಚುರುಕಿನ ದಾಳಿ ಮೂಲಕ  ಪಟಪಟನೆ ಅಂಕ ಗಳಿಸಿದರು. ಕರ್ನಾಟಕದ ದಾಳಿಗಾರರನ್ನೂ ದೆಹಲಿ ಕ್ಯಾಚರ್‌ಗಳು ಹಿಡಿದು ಹಾಕಿದರು. ಇದರಿಂದಾಗಿ  ದೆಹಲಿ ತಂಡವು 20-12ರಿಂದ ಮುನ್ನಡೆಯಲ್ಲಿತ್ತು. ಈ ಹಂತದಲ್ಲಿ ಒಂದು ಬಾರಿ ಕರ್ನಾಟಕದ ಅಂಕಣವನ್ನು ಖಾಲಿ ಮಾಡುವಲ್ಲಿ ಸಫಲವಾದ ದೆಹಲಿ ತಂಡವು 2 ಲೋನಾ ಅಂಕಗಳನ್ನು ಗಳಿಸಿತ್ತು.

ಆದರೆ ಗಾಯಗೊಂಡ ಹುಲಿಯಂತೆ ತಿರುಗೇಟು ನೀಡಿದ ಆತಿಥೇಯ ತಂಡದ ಆಟಗಾರರು, ದೆಹಲಿ ತಂಡಕ್ಕೆ ಹೆಚ್ಚು ಪಾಯಿಂಟ್ ಬಿಟ್ಟುಕೊಡದೇ ತಮ್ಮ ಅಂಕಗಳನ್ನು ಏರಿಸತೊಡಗಿದರು. ಕ್ಯಾಚಿಂಗ್‌ನಲ್ಲಿ ಮಿಂಚಿದ ನಾಯಕ ಜೀವಕುಮಾರ್ ಮೂರು ಪಾಯಿಂಟ್ ಮತ್ತು ದಾಳಿಗೆ ಹೋದ ಶಬ್ಬೀರ್ ತಂದ ಎರಡು ಪಾಯಿಂಟ್‌ಗಳಿಂದ ಅಂಕ ಗಳಿಕೆಗೆ ವೇಗ ಸಿಕ್ಕಿತ್ತು. ನಿನ್ನೆ ಬಿಹಾರ ವಿರುದ್ಧ ಮಿಂಚಿದ್ದ ಪ್ರಶಾಂತ್ ರೈ ಕೂಡ ಎರಡು ಪಾಯಿಂಟ್ ತಂದರು. ಈ ಸಂದರ್ಭದಲ್ಲಿ 2 ಲೋನಾ ಅಂಕಗಳೂ ಕರ್ನಾಟಕಕ್ಕೆ ಲಭಿಸಿದ್ದರಿಂದ, ಕರ್ನಾಟಕ ಕೇವಲ 2 ಪಾಯಿಂಟ್‌ಗಳಿಂದ (21-23) ಹಿಂದೆ ಉಳಿದಿತ್ತು.

ಕೊನೆಯ ಕೆಲವೇ ನಿಮಿಷಗಳು ಬಾಕಿಯಿದ್ದಾಗ ದಾಳಿ ಮಾಡಿದ ಶಬ್ಬೀರ್ ತೋರಿದ ವೀರಾವೇಶದ ಆಟ ಪಂದ್ಯಕ್ಕೆ ರೋಚಕ ತಿರುವು ನೀಡಿತು. ಶಬ್ಬೀರ್ ಅವರನ್ನು ಕ್ಯಾಚ್‌ಮಾಡಲು ಯತ್ನಿಸಿದ ದೆಹಲಿ ಆಟಗಾರರ ಪ್ರಯತ್ನವನ್ನು ತಮ್ಮೆಲ್ಲ ಕಸುವು ಪ್ರಯೋಗಿಸಿ ವಿಫಲಗೊಳಿಸಿದ ಶಬ್ಬೀರ್, ಮಧ್ಯದ ಗೆರೆಯನ್ನು ಮುಟ್ಟಿದಾಗ ಕರ್ನಾಟಕದ ಬುಟ್ಟಿಗೆ ಮೂರು ಅಂಕಗಳು ಸೇರಿ 24-23ರಿಂದ ಮುನ್ನಡೆಯಿತು. ಈ ಸಂದರ್ಭದಲ್ಲಿ  ಉಭಯ ತಂಡಗಳ ಆಟಗಾರರ ನಡುವೆ ಮಾತಿನ ಚಕಮಕಿ ನಡೆದು ವಾತಾವರಣ ಬಿಸಿಯೇರಿತ್ತು. ಕೊನೆಯ ನಿಮಿಷದಲ್ಲಿ ದೆಹಲಿಯ ದಾಳಿಗಾರ ಅನೂಪಕುಮಾರ್ ಒಂದು ಅಂಕ ಗಳಿಸಿದಾಗ ಪಂದ್ಯ ಸಮವಾಯಿತು. 

ಬಿ ಗುಂಪಿನ ಅಂಕಪಟ್ಟಿಯಲ್ಲಿ ಕರ್ನಾಟಕ ಮತ್ತು ದೆಹಲಿ ತಲಾ ಮೂರು ಹಾಗೂ ರಾಜಸ್ತಾನ ಎರಡು ಅಂಕ ಗಳಿಸಿವೆ. ಶನಿವಾರ ಕರ್ನಾಟಕ ತಂಡವು ರಾಜಸ್ತಾನವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಆತಿಥೇಯರು ಗೆದ್ದರೆ, ಕ್ವಾರ್ಟರ್‌ಫೈನಲ್ ಪ್ರವೇಶಿಸುತ್ತದೆ. ಈ ಗುಂಪಿನ ಇನ್ನೊಂದ ತಂಡ ಬಿಹಾರ ಎರಡೂ ಪಂದ್ಯಗಳನ್ನೂ ಸೋತಿದೆ.  ಮಧ್ಯಾಹ್ನ ನಡೆದ ಪಂದ್ಯದಲ್ಲಿ ದೆಹಲಿ ತಂಡವು 23-19ರಿಂದ ರಾಜಸ್ತಾನದ ವಿರುದ್ಧ ಗೆದ್ದಿತ್ತು.

ಮಮತಾ, ತೇಜಸ್ವಿನಿ ಪ್ರಾಬಲ್ಯ:
ಮಹಿಳೆಯರ `ಸಿ' ಗುಂಪಿನ ಲೀಗ್‌ನಲ್ಲಿ ಕಳೆದ ವರ್ಷದ ಚಾಂಪಿಯನ್ ಭಾರತೀಯ ರೈಲ್ವೆ ಛತ್ತೀಸ್‌ಗಢ್ ತಂಡವನ್ನು ನಿರಾಯಾಸವಾಗಿ ಮಣಿಸಿತು.
ಕನ್ನಡತಿಯರಾದ ತಂಡದ ನಾಯಕಿ ತೇಜಸ್ವಿನಿ ಬಾಯಿ ಮತ್ತು ಮಮತಾ ಪೂಜಾರಿ ಅವರ ಮಿಂಚಿನ ದಾಳಿಗೆ ಛತ್ತೀಸಗಢದ ವನಿತೆಯರು ಶರಣಾದರು. ಇದರಿಂದ ರೈಲ್ವೆ ತಂಡವು 64-21ರಿಂದ ಭರ್ಜರಿ ಗೆಲುವು ಸಾಧಿಸಿತು.

ನೇರಪ್ರಸಾರ: ಟೂರ್ನಿಯ ಪಂದ್ಯಗಳನ್ನು ಡಿಡಿ ಸ್ಪೋರ್ಟ್ಸ್ ವಾಹಿನಿಯಲ್ಲಿ ನೇರಪ್ರಸಾರ ನೀಡಲಾಗುತ್ತಿದೆ. ದೆಹಲಿ ದೂರದರ್ಶನದಿಂದ ಬಂದಿರುವ ವಾಹಿತಿ ತಂಡಗಳು ಸಂಜೆ ನಾಲ್ಕು ಗಂಟೆಯಿಂದಲೇ ಪಂದ್ಯಗಳನ್ನು ನೇರಪ್ರಸಾರ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.