ADVERTISEMENT

ಕೋಲ್ಕತ್ತ ನೈಟ್ ರೈಡರ್ಸ್‌ಗೆ ಕಠಿಣ ಗುರಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2011, 19:30 IST
Last Updated 27 ಸೆಪ್ಟೆಂಬರ್ 2011, 19:30 IST
ಕೋಲ್ಕತ್ತ ನೈಟ್ ರೈಡರ್ಸ್‌ಗೆ ಕಠಿಣ ಗುರಿ
ಕೋಲ್ಕತ್ತ ನೈಟ್ ರೈಡರ್ಸ್‌ಗೆ ಕಠಿಣ ಗುರಿ   

ಹೈದರಾಬಾದ್ (ಪಿಟಿಐ): ಕಾಲಮ್ ಫರ್ಗ್ಯುಸನ್ (ಅಜೇಯ 70) ಮತ್ತು ಡೇನಿಯಲ್ ಕ್ರಿಸ್ಟಿಯನ್ ತೋರಿದ ಉತ್ತಮ ಬ್ಯಾಟಿಂಗ್ ನೆರವಿನಿಂದ ಸೌತ್ ಆಸ್ಟ್ರೇಲಿಯಾ ತಂಡ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಗೆಲುವಿಗೆ ಸವಾಲಿನ ಗುರಿ ನೀಡಿದೆ.

ಉಪ್ಪಳದ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ ಮೊದಲು ಬ್ಯಾಟ್ ಮಾಡಿದ ಸೌತ್ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 188 ರನ್ ಪೇರಿಸಿತು. ಈ ಗುರಿ ಬೆನ್ನಟ್ಟಿರುವ ನೈಟ್ ರೈಡರ್ಸ್ ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆ ಐದು ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 37 ರನ್ ಗಳಿಸಿತ್ತು.

ಮಿಂಚಿದ ಫರ್ಗ್ಯುಸನ್:
ಸೌತ್ ಆಸ್ಟ್ರೇಲಿಯಾ ತಂಡದ ಉತ್ತಮ ಮೊತ್ತಕ್ಕೆ ಕಾರಣರಾದದ್ದು ಕಾಲಮ್ ಫರ್ಗ್ಯುಸನ್. 40 ಎಸೆತಗಳನ್ನು ಎದುರಿಸಿದ ಅವರು ಐದು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳ ನೆರವಿನಿಂದ ಅಜೇಯ 70 ರನ್ ಗಳಿಸಿದರು.

ಅವರಿಗೆ ಡೇನಿಯಲ್ ಕ್ರಿಸ್ಟಿಯನ್ (42, 27 ಎಸೆತ, 4 ಬೌಂ, 2 ಸಿಕ್ಸರ್) ಉತ್ತಮ ಬೆಂಬಲ ನೀಡಿದರು. ಬ್ರೆಟ್ ಲೀ ಅವರನ್ನೊಳಗೊಂಡ ಕೋಲ್ಕತ್ತದ ಬೌಲಿಂಗ್ ದಾಳಿಯನ್ನು ಇವರು ಸಮರ್ಥವಾಗಿ ಮೆಟ್ಟಿನಿಂತರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 48 ಎಸೆತಗಳಲ್ಲಿ 84 ರನ್‌ಗಳನ್ನು ಕಲೆಹಾಕಿದರು. ಇದರಿಂದ ತಂಡದ ಮೊತ್ತ ಹಿಗ್ಗಿತು.

ಫರ್ಗ್ಯುಸನ್ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಲ್ಲಿ ಅಲ್ಪ ಎಚ್ಚರಿಕೆಯ ಆಟವಾಡಿದ ಅವರು ಪರಿಸ್ಥಿತಿಗೆ ಹೊಂದಿಕೊಂಡ ಬಳಿಕ ಎದುರಾಳಿ ಬೌಲರ್‌ಗಳ ಮೇಲೆ ದಂಡೆತ್ತಿ ಹೋದರು. ಇವರನ್ನು ಕಟ್ಟಿಹಾಕಲು ರೈಡರ್ಸ್ ನಾಯಕ ಗೌತಮ್ ಗಂಭೀರ್ ನಡೆಸಿದ ಎಲ್ಲ ಪ್ರಯತ್ನಗಳೂ ವಿಫಲವಾದವು.

ಇದಕ್ಕೂ ಮೊದಲು ಮೈಕಲ್ ಕ್ಲಿಂಗರ್ (20) ಹಾಗೂ ಡೇನಿಯಲ್ ಹ್ಯಾರಿಸ್ (26) ಮೊದಲ ವಿಕೆಟ್‌ಗೆ 5.3 ಓವರ್‌ಗಳಲ್ಲಿ 45 ರನ್‌ಗಳನ್ನು ಸೇರಿಸಿ ಸೌತ್ ಆಸ್ಟ್ರೇಲಿಯಾ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು.
ಮುಂದಿನ 32 ರನ್ ಸೇರಿಸುವಷ್ಟರಲ್ಲಿ ಮೂರು ವಿಕೆಟ್‌ಗಳು ಬಿದ್ದವು. ಈ ಹಂತದಲ್ಲಿ ರೈಡರ್ಸ್ ತಂಡದ ಬೌಲರ್‌ಗಳು ಪಂದ್ಯದ ಮೇಲೆ ಹಿಡಿತ ಸಾಧಿಸುವ ಸೂಚನೆ ನೀಡಿದ್ದರು.

ಆದರೆ ಫರ್ಗ್ಯುಸನ್ ಮತ್ತು ಕ್ರಿಸ್ಟಿಯನ್ ಅದಕ್ಕೆ ಅವಕಾಶ ನೀಡಲಿಲ್ಲ. ನೈಟ್ ರೈಡರ್ಸ್ ಪರ ಲಕ್ಷ್ಮೀಪತಿ ಬಾಲಾಜಿ (27ಕ್ಕೆ 2) ಯಶಸ್ವಿ ಬೌಲರ್ ಎನಿಸಿದರು.

ಸ್ಕೋರ್ ವಿವರ
ಸೌತ್ ಆಸ್ಟ್ರೇಲಿಯಾ: 20 ಓವರ್‌ಗಳಲ್ಲಿ
5 ವಿಕೆಟ್‌ಗೆ 188
ಮೈಕಲ್ ಕ್ಲಿಂಗರ್ ರನೌಟ್  20
ಡೇನಿಯಲ್ ಹ್ಯಾರಿಸ್ ಸಿ ಅಬ್ದುಲ್ಲಾ ಬಿ ಲಕ್ಷ್ಮೀಪತಿ ಬಾಲಾಜಿ  26
ಕಾಲಮ್ ಫರ್ಗ್ಯುಸನ್ ಔಟಾಗದೆ  70
ಕ್ಯಾಮರನ್ ಬಾರ್ಗಸ್ ಸಿ ಬಾಲಾಜಿ ಬಿ ಯೂಸುಫ್ ಪಠಾಣ್  14
ಡೇನಿಯಲ್ ಕ್ರಿಸ್ಟಿಯನ್ ಸಿ ತಿವಾರಿ ಬಿ ಲಕ್ಷ್ಮೀಪತಿ ಬಾಲಾಜಿ  42

ಟಾಮ್ ಕೂಪರ್ ಸಿ ಮತ್ತು ಬಿ ಬ್ರೆಟ್ ಲೀ 01
ಟಿಮ್ ಲೂಡ್ಮನ್ ಔಟಾಗದೆ  00

ಇತರೆ: (ಬೈ-2, ಲೆಗ್‌ಬೈ-4, ವೈಡ್-9)  15

ವಿಕೆಟ್ ಪತನ: 1-45 (ಹ್ಯಾರಿಸ್; 5.3), 2-51 (ಕ್ಲಿಂಗರ್; 6.4), 3-77 (ಬಾರ್ಗಸ್; 10.6), 4-161 (ಕ್ರಿಸ್ಟಿಯನ್; 18.2), 5-174 (ಕೂಪರ್; 19.2).

ಬೌಲಿಂಗ್: ಬ್ರೆಟ್ ಲೀ 4-0-42-1, ಇಕ್ಬಾಲ್ ಅಬ್ದುಲ್ಲಾ 4-0-37-0, ಯೂಸುಫ್ ಪಠಾಣ್ 4-0-43-1, ಲಕ್ಷ್ಮೀಪತಿ ಬಾಲಾಜಿ 3-0-27-2, ಶಕೀಬ್ ಅಲ್ ಹಸನ್ 4-0-23-0, ರಜತ್ ಭಾಟಿಯಾ 1-0-10-0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.