ADVERTISEMENT

ಕ್ರಿಸ್ ಗೇಲ್ ನೃತ್ಯ, ನೆರೆದ ಪ್ರೇಕ್ಷಕರಿಗೆ ಕೇಕೆಯ ಖುಷಿ...

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 19:59 IST
Last Updated 9 ಏಪ್ರಿಲ್ 2013, 19:59 IST

ಬೆಂಗಳೂರು: ಕ್ರಿಸ್ ಗೇಲ್ ಪಂದ್ಯದಲ್ಲಿ ರನ್ ಗಳಿಸಲಿ ಬಿಡಲಿ ಅದು ಬೇರೆ ಮಾತು. ಆದರೆ, ವೆಸ್ಟ್ ಇಂಡೀಸ್‌ನ ಈ ಆಟಗಾರ ಕ್ರೀಡಾಂಗಣದಲ್ಲಿದ್ದರೆ ಸಾಕು, ಕ್ರಿಕೆಟ್ ಪ್ರೇಮಿಗಳ ಸಂಭ್ರಮಕ್ಕೆ ಎಲ್ಲೆಯೆಂಬುದೇ ಇರುವುದಿಲ್ಲ. ಇದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಮತ್ತೊಮ್ಮೆ ಸಾಬೀತಾಯಿತು.

ಗೇಲ್ ಕೆಲವೇ ನಿಮಿಷ ಕ್ರೀಸ್‌ನಲ್ಲಿದ್ದರೂ ಪ್ರೇಕ್ಷಕರ ಗ್ಯಾಲರಿಯಿಂದ ಪದೇ ಪದೇ ಕೇಳಿ ಬಂದಿದ್ದು, `ಗೇಲ್ ಸಿಕ್ಸರ್ ಸಿಡಿಸಲಿ' ಎನ್ನುವ ಕೂಗು. ಗೇಲ್ ಒಂದು ಅಥವಾ ಎರಡು ರನ್ ಗಳಿಸುವುದನ್ನು ಕ್ರಿಕೆಟ್ ಪ್ರಿಯರು ಇಷ್ಟಪಡುವುದಿಲ್ಲ. ಪ್ರತಿ ಎಸೆತವನ್ನೂ ಸಿಕ್ಸರ್ ಸಿಡಿಸಬೇಕು ಎಂದು ಅಪೇಕ್ಷೆ ಪಡುತ್ತಾರೆ. ಅಭಿಮಾನಿಗಳ ಮನದಾಸೆಯನ್ನು ಅರ್ಥಮಾಡಿಕೊಂಡಂತೆ ಕಂಡು ಬಂದ ಗೇಲ್ ಒಂದು  ಸಿಕ್ಸರ್ ಸಿಡಿಸಿ ಗ್ಯಾಲರಿಯಲ್ಲಿನ ಸಂಭ್ರಮವನ್ನು ಹೆಚ್ಚಿಸಿದರು.

ಗೇಲ್ ಔಟಾದ ನಂತರ ಡಗ್‌ಔಟ್ ಬಳಿ ಬಂದು ವಾಹಿನಿಯ ಮುಂದೆ ಹರಟೆಗೆ ನಿಂತರು. ಆಗಲೂ ಗೇಲ್ ಮೇಲಿನ ಪ್ರೀತಿ ಪ್ರೇಕ್ಷಕರಿಗೆ ಕಿಂಚತ್ತೂ ಕಡಿಮೆಯಾಗಲಿಲ್ಲ. ಕೆಲ ಹೊತ್ತು ವಾಹಿನಿ ಜೊತೆ ಮಾತನಾಡಿ, ನಂತರ ಗ್ಯಾಂಗ್ನಮ್ ನೃತ್ಯಕ್ಕೆ ಹೆಜ್ಜೆ ಹಾಕಿದರು. ಕೆರಿಬಿಯನ್ ನಾಡಿನ ದೈತ್ಯ ಆಟಗಾರ ನೃತ್ಯ ಹಾಕುವುದನ್ನು ಎಲೆಕ್ಟ್ರಾನಿಕ್ ಬೋರ್ಡ್ ಮೇಲೆ ತೋರಿಸಲಾಯಿತು.

ಈ ವೇಳೆ ಅಭಿಮಾನಿಗಳ ಸಂಭ್ರಮ ಮತ್ತಷ್ಟು ಹೆಚ್ಚಾಯಿತು. ಇದರಿಂದ ಹುಮ್ಮಸ್ಸು ಹೆಚ್ಚಿಸಿಕೊಂಡ ಗೇಲ್ ತಮ್ಮ ನೃತ್ಯವನ್ನು ಮತ್ತಷ್ಟು ಹೆಚ್ಚಿಸಿದರು. ಆಗ, ಗ್ಯಾಲರಿಯಲ್ಲಿ ಕೇಕೆ ಅಬ್ಬರದ ಸದ್ದು ಹೆಚ್ಚಾಯಿತು. ಗೇಲ್ ಕೇವಲ ಬ್ಯಾಟಿಂಗ್ ಮೂಲಕ ಮಾತ್ರವಲ್ಲ, ತಮ್ಮ ನೃತ್ಯದ ಮೂಲಕವೂ ಜನರ ಮನ ಗೆದ್ದಿದ್ದಾರೆ ಎಂಬುದಕ್ಕೆ ಈ ಪ್ರಸಂಗವೇ ಸಾಕ್ಷಿ.

ಕಷ್ಟಪಟ್ಟು, ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಿ ಪಂದ್ಯ ನೋಡಲು ಬಂದಿದ್ದ ಕ್ರೀಡಾಭಿಮಾನಿಗಳಿಗೆ ಬೇಸರವಾಗಲಿಲ್ಲ.

`ಪೈಸಾ ವಸೂಲ್' ಮಾಡಿದ ಖುಷಿಯಿತ್ತು. ಗೇಲ್ ನೃತ್ಯದ ಸಂಭ್ರಮ ಒಂದೆಡೆಯಾದರೆ, ಕೊಹ್ಲಿ ಅಮೋಘ ಬ್ಯಾಟಿಂಗ್ ಪ್ರೇಕ್ಷಕರ ಹುಮ್ಮಸ್ಸನ್ನು ಇನ್ನಷ್ಟು ಹೆಚ್ಚಿಸಿತು. ನಟಿ ರಾಗಿಣಿ ಹಾಗೂ ಮೆಗಾ ಸ್ಟಾರ್ ಚಿರಂಜೀವಿ ಅವರ ಉಪಸ್ಥಿತಿಯೂ ಸಂಭ್ರಮವನ್ನು ಇಮ್ಮಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT