ADVERTISEMENT

ಕ್ರೀಡಾಂಗಣ ಮಾರ್ಪಾಡಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 18:35 IST
Last Updated 16 ಫೆಬ್ರುವರಿ 2011, 18:35 IST

ಕೊಲಂಬೊ (ಎಎಫ್‌ಪಿ): ‘ವಿಶ್ವಕಪ್ ಕ್ರಿಕೆಟ್ ಅಭ್ಯಾಸ ಪಂದ್ಯದ ವೇಳೆ ನಡೆದಂತಹ ಗೊಂದಲಗಳು ಯಾವುದೇ ರೀತಿಯಲ್ಲಿ ಪುನರಾವರ್ತನೆ ಆಗದಂತೆ ಅಗತ್ಯವಾದ ಮಾರ್ಪಾಡುಗಳನ್ನು ಮಾಡಬೇಕು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಕೊಲಂಬೊ ಕ್ರೀಡಾಂಗಣದ ಮುಖ್ಯಸ್ಥರಿಗೆ ತಾಕೀತು ಮಾಡಿದೆ.

ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಮಂಗಳವಾರದ ಅಭ್ಯಾಸ ಪಂದ್ಯಕ್ಕೆ ಟಿಕೆಟ್ ಪಡೆಯಲು ಅಭಿಮಾನಿಗಳು ಇನ್ನಿಲ್ಲದಂತಹ ಹಿಂಸೆ ಅನುಭವಿಸಿದ್ದರು. ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳೂ ಆರ್. ಪ್ರೇಮದಾಸ್ ಕ್ರೀಡಾಂಗಣದ ಒಳಗೆ ಪ್ರವೇಶ ಪಡೆಯಲು ಪರದಾಡಿದ್ದರು. ಹೀಗಾಗಿ ಶ್ರೀಲಂಕಾ ಕ್ರಿಕೆಟ್ ಸಂಸ್ಥೆ ವಿರುದ್ಧ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು.

‘ಮಾಧ್ಯಮ ಪ್ರತಿನಿಧಿಗಳಿಗೆ ಕಾಯ್ದಿಟ್ಟ ಸ್ಥಳವನ್ನು ತಕ್ಷಣ ಸ್ಥಳಾಂತರಿಸಬೇಕು. ಕ್ರೀಡಾಂಗಣ ಪ್ರವೇಶಕ್ಕೆ ಇನ್ನಷ್ಟು ಸ್ಥಳಾವಕಾಶ ಕಲ್ಪಿಸಬೇಕು’ ಎಂದು ಪ್ರೇಮದಾಸ್ ಕ್ರೀಡಾಂಗಣದ ಮುಖ್ಯಸ್ಥರಿಗೆ ಐಸಿಸಿ ಸೂಚಿಸಿದೆ. ‘ಕ್ರೀಡಾಂಗಣಕ್ಕೆ ಅಗತ್ಯವಾದ ಮಾರ್ಪಾಡುಗಳನ್ನು ತಕ್ಷಣ ಮಾಡಬೇಕು ಮತ್ತು ಈ ಕುರಿತು ಸಂಬಂಧಪಟ್ಟವರಿಗೆ ಸೂಕ್ತ ಮಾಹಿತಿ ನೀಡಬೇಕು ಎಂಬ ಸೂಚನೆಯನ್ನು ಈಗಾಗಲೇ ನೀಡಲಾಗಿದೆ’ ಎಂದು ಸುದ್ದಿಸಂಸ್ಥೆಗೆ ಬಿಡುಗಡೆ ಮಾಡಲಾಗಿರುವ ಐಸಿಸಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಫೆ. 26ರಂದು ಮುಂದಿನ ಪಂದ್ಯ ನಡೆಯಲಿದ್ದು, ಅಷ್ಟರೊಳಗೆ ಹೊಸ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂಬ ಸೂಚನೆಯನ್ನೂ ಐಸಿಸಿ ನೀಡಿದೆ. ‘ಶ್ರೀಲಂಕಾ ಕ್ರಿಕೆಟ್ ಭದ್ರತಾ ಘಟಕದ ಅಧಿಕಾರಿಗಳ ಮುಂದಾಲೋಚನೆಯಿಲ್ಲದ ಕ್ರಮಗಳೇ ಅಭ್ಯಾಸ ಪಂದ್ಯದ ಸಂದರ್ಭದಲ್ಲಿ ಗೊಂದಲಕ್ಕೆ ಕಾರಣವಾದವು’ ಎಂದು ಆ ದೇಶದ ಪ್ರಮುಖ ದಿನಪತ್ರಿಕೆಯಾದ ‘ಡೇಲಿ ಮಿರರ್’ ವರದಿ ಮಾಡಿದೆ. ‘ಶ್ರೀಲಂಕಾದಲ್ಲಿ ಐಸಿಸಿ ಮಾಧ್ಯಮ ವ್ಯವಸ್ಥಾಪಕರಾಗಿರುವ ಬ್ರಯಾನ್ ಮರ್ಗಾಟ್ರಾಯ್ಡಾ ಸಹ ಆರಂಭದಲ್ಲಿ ಯಾರೂ ಕ್ರೀಡಾಂಗಣ ಪ್ರವೇಶಿಸದಂತೆ ತಡೆದರು’ ಎಂದು ಪತ್ರಿಕೆಯ ವರದಿಯಲ್ಲಿ ಹೇಳಲಾಗಿದೆ.

‘ಕ್ರೀಡಾಂಗಣದಿಂದ ಒಂದು ಕಿ.ಮೀ. ದೂರದಲ್ಲಿ ಏಕೈಕ ಟಿಕೆಟ್ ಮಾರಾಟ ಕೇಂದ್ರವನ್ನು ತೆರೆಯಲಾಗಿತ್ತು. ಹೀಗಾಗಿ ಟಿಕೆಟ್ ಎಲ್ಲಿ ಕೊಳ್ಳಬೇಕು ಎಂಬ ಗೊಂದಲದಲ್ಲಿ ಅಭಿಮಾನಿಗಳು ಮುಳುಗಿದ್ದರು’ ಎಂದೂ ವರದಿ ತಿಳಿಸಿದೆ. ಆರ್.ಪ್ರೇಮದಾಸ್ ಕ್ರೀಡಾಂಗಣದಲ್ಲಿ ಒಟ್ಟಾರೆ ಏಳು ಪಂದ್ಯಗಳು ನಡೆಯಬೇಕಿದೆ. 1996ರಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ಶ್ರೀಲಂಕಾ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ, ಜಿಂಬಾಬ್ವೆ, ಕೆನಡಾ ಮತ್ತು ಕೀನ್ಯಾ ಆ ತಂಡದಲ್ಲಿರುವ ಇತರ ತಂಡಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.