ADVERTISEMENT

ಖೇಲ್‌ ರತ್ನ ಪ್ರಶಸ್ತಿಗೆ ನೀರಜ್‌ ಹೆಸರು ಶಿಫಾರಸು

ಪಿಟಿಐ
Published 27 ಏಪ್ರಿಲ್ 2018, 19:41 IST
Last Updated 27 ಏಪ್ರಿಲ್ 2018, 19:41 IST
ಖೇಲ್‌ ರತ್ನ ಪ್ರಶಸ್ತಿಗೆ ನೀರಜ್‌ ಹೆಸರು ಶಿಫಾರಸು
ಖೇಲ್‌ ರತ್ನ ಪ್ರಶಸ್ತಿಗೆ ನೀರಜ್‌ ಹೆಸರು ಶಿಫಾರಸು   

ನವದೆಹಲಿ (ಪಿಟಿಐ): ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದ ಜಾವೆಲಿನ್‌ ಥ್ರೊ ಸ್ಪರ್ಧಿ ನೀರಜ್‌ ಚೋಪ್ರಾ ಹೆಸರನ್ನು ಭಾರತ ಅಥ್ಲೆಟಿಕ್ಸ್‌ ಫೆಡರೇಷನ್‌ (ಎಎಫ್‌ಐ) ಶುಕ್ರವಾರ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಿದೆ.

20ರ ಹರೆಯದ ನೀರಜ್‌, 2016ರಲ್ಲಿ ನಡೆದಿದ್ದ ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ದಿದ್ದರು. ಆಗ ಅವರನ್ನು ಅರ್ಜುನ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿತ್ತು.

ನೀರಜ್‌ ಅವರು ಕಾಮನ್‌ವೆಲ್ತ್‌ ಕೂಟದ ಜಾವೆಲಿನ್‌ ಥ್ರೊ ವಿಭಾಗದಲ್ಲಿ ಚಿನ್ನ ಜಯಿಸಿದ ಭಾರತದ ಮೊದಲ ಅಥ್ಲೀಟ್‌ ಎಂಬ ಹಿರಿಮೆ ಹೊಂದಿದ್ದಾರೆ.

ADVERTISEMENT

ಆಸ್ಟ್ರೇಲಿಯಾದ ಗೋಲ್ಡ್‌ ಕೋಸ್ಟ್‌ನಲ್ಲಿ ನಡೆದಿದ್ದ ಕೂಟದಲ್ಲಿ ಅವರು 86.47 ಮೀಟರ್ಸ್‌ ದೂರ ಜಾವೆಲಿನ್‌ ಎಸೆದಿದ್ದರು. ಇದಕ್ಕೂ ಮುನ್ನ ಅವರು ಪೋಲೆಂಡ್‌ನಲ್ಲಿ ಜರುಗಿದ್ದ ವಿಶ್ವ ಯೂತ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದರು. ಆ ಕೂಟದಲ್ಲಿ 86.48
ಮೀಟರ್ಸ್‌ ಸಾಮರ್ಥ್ಯ ತೋರಿ ವಿಶ್ವ ದಾಖಲೆ ನಿರ್ಮಿಸಿದ್ದರು. 2017ರಲ್ಲಿ ಭುವನೇಶ್ವರದಲ್ಲಿ ನಡೆದಿದ್ದ ಏಷ್ಯಾ ಯೂತ್‌ ಚಾಂಪಿಯನ್‌ಷಿಪ್‌ನಲ್ಲೂ ಚಿನ್ನ ಗೆದ್ದಿದ್ದರು.

ಅರ್ಜುನ ಪ್ರಶಸ್ತಿಗೆ ಅನು, ಸೀಮಾ: ಜಾವೆಲಿನ್‌ ಥ್ರೊ ಸ್ಪರ್ಧಿ ಅನುರಾಣಿ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ನಾಲ್ಕು ಪದಕಗಳನ್ನು ಜಯಿಸಿರುವ ಡಿಸ್ಕಸ್‌ ಥ್ರೊ ಸ್ಪರ್ಧಿ ಸೀಮಾ ಪುನಿಯಾ ಅವರ ಹೆಸರುಗಳನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

2000ರಲ್ಲಿ ನಡೆದಿದ್ದ ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಪದಕ ಜಯಿಸಿದ್ದ ಸೀಮಾ, 2002ರಲ್ಲಿ ಕಂಚಿನ ಸಾಧನೆ ಮಾಡಿದ್ದರು.
ಕಾಮನ್‌ವೆಲ್ತ್‌ನಲ್ಲಿ ಮೂರು ಬೆಳ್ಳಿಮತ್ತು ಒಂದು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು. 2014ರಲ್ಲಿ ನಡೆದಿದ್ದ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನಕ್ಕೆ ಕೊರಳೊಡ್ಡಿದ್ದರು.

ಪಿ.ಟಿ.ಉಷಾಗೆ ದ್ರೋಣಾಚಾರ್ಯ: ಹಿರಿಯ ಅಥ್ಲೀಟ್‌  ಹಾಗೂ ಕೋಚ್‌ ಪಿ.ಟಿ.ಉಷಾ ಮತ್ತು ಭಾರತ ಯೂತ್‌ ತಂಡದ ಕೋಚ್‌
ಸಂಜಯ್‌ ಗರ್‌ನಾಯಕ್‌ ಅವರ ಹೆಸರುಗಳನ್ನು ಎಎಫ್‌ಐ, ದ್ರೋಣಾಚಾರ್ಯ ಪುರಸ್ಕಾರಕ್ಕೆ ಶಿಫಾರಸು ಮಾಡಿದೆ.

ಬಾಬಿ ಅಲೋಷಿಯಸ್‌, ಕುಲದೀಪ್‌ ಸಿಂಗ್‌ ಭುಲ್ಲಾರ್‌ ಮತ್ತು ಜಾಟ ಶಂಕರ್‌ ಅವರನ್ನು ಧ್ಯಾನ್‌ಚಂದ್‌ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿದ್ದು, ಟಿ.ಪಿ.ಔಸೆಫ್‌ ಅವರ ಹೆಸರನ್ನು ಜೀವಮಾನ ಸಾಧನೆ ಪ್ರಶಸ್ತಿಗೆ ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.