ADVERTISEMENT

ಜನಿಸಿದ ಊರಲ್ಲಿ ಶತಕ, 6000 ರನ್ ಸಾಧನೆ ಮಾಡಿದ ರೋಹಿತ್ ಶರ್ಮಾ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 19:44 IST
Last Updated 1 ಅಕ್ಟೋಬರ್ 2017, 19:44 IST
ಜನಿಸಿದ ಊರಲ್ಲಿ ಶತಕ, 6000 ರನ್ ಸಾಧನೆ ಮಾಡಿದ ರೋಹಿತ್ ಶರ್ಮಾ
ಜನಿಸಿದ ಊರಲ್ಲಿ ಶತಕ, 6000 ರನ್ ಸಾಧನೆ ಮಾಡಿದ ರೋಹಿತ್ ಶರ್ಮಾ   

ನಾಗಪುರ: ಬ್ಯಾಟ್ಸ್‌ಮನ್ ರೋಹಿತ್ ಗುರುನಾಥ್ ಶರ್ಮಾ ಅವರಿಗೆ ತಾವು ಜನಿಸಿದ ಊರು ನಾಗಪುರವೆಂದರೆ ಅಚ್ಚುಮೆಚ್ಚು.

ಅಜ್ಜಿಮನೆ ಇರುವ ನಾಗಪುರದಲ್ಲಿ ಶತಕ ಹೊಡೆಯಬೇಕು ಎಂಬ ಅವರ ಬಹುದಿನಗಳ ಆಸೆ ಭಾನುವಾರ ಈಡೇರಿತು. ಅಲ್ಲದೇ ಏಕದಿನ ಕ್ರಿಕೆಟ್‌ನಲ್ಲಿ ಎರಡು ಮಹತ್ವದ ಮೈಲುಗಲ್ಲುಗಳನ್ನೂ ಅವರು ತಲುಪಿದರು.

1987ರಲ್ಲಿ ರೋಹಿತ್ ಅವರು  ಇಲ್ಲಿಯ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ್ದರು. ನಂತರ ಆವರ ಕುಟುಂಬವು ಮುಂಬೈಗೆ ಬಂದು ನೆಲೆಸಿತ್ತು. ರೋಹಿತ್ ಅವರು ಕ್ರಿಕೆಟ್‌ ಪಾಠ ಕಲಿತಿದ್ದು ಮುಂಬೈನಲ್ಲಿಯೇ. ಆದರೆ ಅವರು ಇಂದಿಗೂ ‘ಕಿತ್ತಳೆ ನಗರಿ’ ನಾಗಪುರದ ನಂಟು ಕಳೆದುಕೊಂಡಿಲ್ಲ.

ADVERTISEMENT

ಅವರು ಇಲ್ಲಿ ಆಡಿದ ಎರಡನೇ ಏಕದಿನ ಪಂದ್ಯ ಇದಾಗಿದೆ. 2013ರಲ್ಲಿ ಇಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಅವರು 79 ರನ್‌ ಹೊಡೆದಿದ್ದರು. ಈ ಬಾರಿ 125 ರನ್‌ಗಳನ್ನು ಗಳಿಸಿದರು. ಈ ಪಂದ್ಯದಲ್ಲಿ 96 ರನ್‌ ಗಳಿಸಿದ ಸಂದರ್ಭದಲ್ಲಿ ಅವರು ಏಕದಿನ ಕ್ರಿಕೆಟ್‌ನಲ್ಲಿ ಆರು ಸಾವಿರ ರನ್‌ಗಳನ್ನು ಗಳಿಸಿದ ಸಾಧನೆಗೆ ಪಾತ್ರರಾದರು. ಒಟ್ಟು 168 ಪಂದ್ಯಗಳಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಆರು ಸಾವಿರ ರನ್‌ ಗಡಿ ದಾಟಿದ ಭಾರತದ ಎಂಟನೇ ಆಟಗಾರರಾಗಿದ್ದಾರೆ.

ಅಲ್ಲದೇ ತವರಿನಲ್ಲಿ ಆಡಿದ ಏಕದಿನ ಮಾದರಿ ಪಂದ್ಯಗಳಲ್ಲಿ 2000 ರನ್‌ಗಳನ್ನು ವೇಗವಾಗಿ ಕಲೆಹಾಕಿದ ದಾಖಲೆಯನ್ನೂ ಬರೆದರು. ಅವರು 43 ಪಂದ್ಯಗಳನ್ನು ಭಾರತದಲ್ಲಿ ಆಡಿದ್ದಾರೆ. ಈ ಹಿಂದೆ ವೀರೇಂದ್ರ ಸೆಹ್ವಾಗ್ ಅವರು ಮಾಡಿದ್ದ ದಾಖಲೆಯನ್ನು ರೋಹಿತ್ ಸರಿಗಟ್ಟಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.