ADVERTISEMENT

ಪ್ರಮುಖರ ಮೇಲೆ ಫ್ರಾಂಚೈಸ್‌ಗಳ ಕಣ್ಣು

​ಪ್ರಜಾವಾಣಿ ವಾರ್ತೆ
Published 29 ಮೇ 2018, 19:30 IST
Last Updated 29 ಮೇ 2018, 19:30 IST
ಪ್ರೊ ಕಬಡ್ಡಿ ಪಂದ್ಯದ ಚಿತ್ರ
ಪ್ರೊ ಕಬಡ್ಡಿ ಪಂದ್ಯದ ಚಿತ್ರ   

ಮುಂಬೈ: ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) ಆರನೇ ಆವೃತ್ತಿಯ‌ ಆಟಗಾರರ ಹರಾಜು ಪ್ರಕ್ರಿಯೆ ಬುಧವಾರ ಮತ್ತು ಗುರುವಾರ ನಡೆಯಲಿದ್ದು ಪ್ರಮುಖ ಆಟಗಾರರನ್ನು ತಮ್ಮತ್ತ ಸೆಳೆದುಕೊಳ್ಳುವತ್ತ ಫ್ರಾಂಚೈಸ್‌ಗಳು ಚಿತ್ತ ನೆಟ್ಟಿವೆ.

ಒಟ್ಟು 422 ಮಂದಿ ಹರಾಜು ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ. ಈ ಬಾರಿ ಫ್ಯೂಚರ್‌ ಕಬಡ್ಡಿ ಹೀರೋಸ್‌ (ಎಫ್‌ಕೆಎಚ್‌) ಕಾರ್ಯಕ್ರಮದ ಅಡಿಯಲ್ಲಿ 87 ಆಟಗಾರರನ್ನು ಆಯ್ಕೆ ಮಾಡಲಾಗಿದ್ದು ಇವರನ್ನೂ ಹರಾಜಿನಲ್ಲಿ ಸೇರಿಸಲಾಗಿದೆ. ಇರಾನ್‌, ಬಾಂಗ್ಲಾದೇಶ, ಜಪಾನ್‌, ಕೀನ್ಯಾ, ಕೊರಿಯಾ, ಮಲೇಷ್ಯಾ ಮತ್ತು ಶ್ರೀಲಂಕಾ ಸೇರಿದಂತೆ ಒಟ್ಟು 14 ದೇಶಗಳ 58 ಆಟಗಾರರು ಹರಾಜಿಗೆ ಲಭ್ಯರಿದ್ದಾರೆ.

12 ಫ್ರಾಂಚೈಸ್‌ಗಳ ಪೈಕಿ ಒಂಬತ್ತು ಫ್ರಾಂಚೈಸ್‌ಗಳು ಒಟ್ಟು 21 ಎಲೀಟ್‌ ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿವೆ. ಬಾಲಿವುಡ್‌ ನಟ ಅಭಿಷೇಕ್‌ ಬಚ್ಚನ್‌ ಮಾಲೀಕತ್ವದ ಜೈಪುರ ಪಿಂಕ್‌ ಪ್ಯಾಂಥರ್ಸ್‌, ಯು.ಪಿ.ಯೋಧಾ ಮತ್ತು ಯು ಮುಂಬಾ ತಂಡಗಳು ಹಿಂದಿನ ಆವೃತ್ತಿಯಲ್ಲಿ ಆಡಿದ್ದ ಎಲ್ಲಾ ಆಟಗಾರರನ್ನು ಕೈಬಿಟ್ಟಿದ್ದು, ಹೊಸದಾಗಿ ತಂಡ ಕಟ್ಟಲು ನಿರ್ಧರಿಸಿವೆ.

ADVERTISEMENT

ಹರಾಜಿನಲ್ಲಿ ಫ್ರಾಂಚೈಸ್‌ಗಳು ಒಟ್ಟು ₹ 4 ಕೋಟಿ ಹಣ ವಿನಿಯೋಗಿಸಿ 18 ರಿಂದ 25 ಆಟಗಾರರನ್ನು ಖರೀದಿಸಬಹುದಾಗಿದೆ.

ಹಿಂದಿನ ಆವೃತ್ತಿಯಲ್ಲಿ ಫ್ರಾಂಚೈಸ್‌ಗಳು ಒಟ್ಟು ₹46.99 ಕೋಟಿ ಹಣ ವಿನಿಯೋಗಿಸಿ 227 ಆಟಗಾರರನ್ನು ಸೆಳೆದುಕೊಂಡಿದ್ದವು.

ಮೊದಲ ದಿನವಾದ ಬುಧವಾರ ‘ಎ’ ದರ್ಜೆಯ ಆಟಗಾರರನ್ನು ಕೊಂಡುಕೊಳ್ಳಲು ಫ್ರಾಂಚೈಸ್‌ಗಳು ಪ್ರಯತ್ನಿಸುವ ನಿರೀಕ್ಷೆ ಇದೆ. ವಿದೇಶಿ ಆಟಗಾರರ ಮೇಲೂ ದೊಡ್ಡ ಮೊತ್ತದ ಬಿಡ್‌ ಮಾಡುವ ಸಂಭವ ಇದೆ.

ರಾಹುಲ್‌ ಚೌಧರಿ, ಸುರೇಂದರ್‌ ನಡ್ಡಾ, ಫಾಜೆಲ್‌ ಅತ್ರಾಚಲಿ, ಮೋನು ಗೋಯತ್‌, ಅನೂಪ್‌ ಕುಮಾರ್‌, ಮಂಜೀತ್‌ ಚಿಲಾರ್‌ ಮತ್ತು ನಿತಿನ್‌ ತೋಮರ್‌ ಅವರನ್ನು ಖರೀದಿಸಲು ಫ್ರಾಂಚೈಸ್‌ಗಳು ಪೈಪೋಟಿ ನಡೆಸುವ ನಿರೀಕ್ಷೆ ಇದೆ.

ಕಣದಲ್ಲಿರುವ ಕನ್ನಡಿಗರು

ಬೆಂಗಳೂರಿನ ಡಿಫೆಂಡರ್‌ ಜೀವಕುಮಾರ್‌, ರೈಡರ್‌ ಶಬೀರ್‌ ಬಾಪು, ದಕ್ಷಿಣ ಕನ್ನಡ ಜಿಲ್ಲೆಯ ರೈಡರ್‌ ಸುಖೇಶ್‌ ಹೆಗ್ಡೆ, ಪ್ರಶಾಂತ್ ಕುಮಾರ್‌ ರೈ, ನೆಲಮಂಗಲದ ರೈಡರ್‌ ದರ್ಶನ್‌, ಚನ್ನಪಟ್ಟಣದ ಆಲ್‌ರೌಂಡರ್‌ ಎನ್‌.ಅಭಿಷೇಕ್‌ ಮತ್ತು ಮುಂಬೈನಲ್ಲಿ ನೆಲೆಸಿರುವ ಉಡುಪಿ ಜಿಲ್ಲೆಯ ರಿಶಾಂಕ್‌ ದೇವಾಡಿಗ ಅವರಿಗೂ ಹೆಚ್ಚು ಮೊತ್ತ ಸಿಗುವ ಸಾಧ್ಯತೆ ಇದೆ.

ಪ್ರಮುಖ ಅಂಶಗಳು

* ಫ್ರಾಂಚೈಸ್‌ಗಳು, ಫ್ಯೂಚರ್ ಕಬಡ್ಡಿ ಹೀರೋಸ್‌ ಕಾರ್ಯಕ್ರಮದ ಅಡಿಯಲ್ಲಿ ಆಯ್ಕೆಯಾಗಿರುವ ಆಟಗಾರರ ಪೈಕಿ ಗರಿಷ್ಠ ಮೂರು ಮಂದಿಯನ್ನು ಖರೀದಿಸಬಹುದು.

* ತಂಡವೊಂದರಲ್ಲಿ ಕನಿಷ್ಠ ಎರಡು ಮತ್ತು ಗರಿಷ್ಠ ನಾಲ್ಕು ಮಂದಿ ವಿದೇಶಿ ಆಟಗಾರರು ಇರಬಹುದು.

* ಈಗಾಗಲೇ ನಾಲ್ಕು ಮಂದಿ ಎಲೀಟ್‌ ಆಟಗಾರರನ್ನು ಉಳಿಸಿಕೊಂಡಿರುವ ಫ್ರಾಂಚೈಸ್‌ಗಳು ‘ಫೈನಲ್‌ ಬಿಡ್‌ ಮ್ಯಾಚ್‌’ ಮೂಲಕ ಮತ್ತೊಬ್ಬ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು.

* ಫ್ಯೂಚರ್ ಕಬಡ್ಡಿ ಹೀರೋಸ್‌ ಕಾರ್ಯಕ್ರಮದ ಅಡಿಯಲ್ಲಿ ಆಯ್ಕೆಯಾಗಿರುವ ಆಟಗಾರರಿಗೆ ₹6.6 ಲಕ್ಷ ಮೊತ್ತ ನಿಗದಿ ಮಾಡಲಾಗಿದೆ.

ಫ್ರಾಂಚೈಸ್‌ಗಳು ಉಳಿಸಿಕೊಂಡಿರುವ ಎಲೀಟ್‌ ಆಟಗಾರರ ಮಾಹಿತಿ

* ಬೆಂಗಾಲ್‌ ವಾರಿಯರ್ಸ್‌: ಸುರ್ಜೀತ್‌ ಸಿಂಗ್‌ ಮತ್ತು ಮಣಿಂದರ್‌ ಸಿಂಗ್‌.

* ಬೆಂಗಳೂರು ಬುಲ್ಸ್‌: ರೋಹಿತ್‌ ಕುಮಾರ್‌.

* ದಬಾಂಗ್‌ ಡೆಲ್ಲಿ: ಮೆರಾಜ್‌ ಶೇಖ್‌.

* ಗುಜರಾತ್‌ ಫಾರ್ಚೂನ್‌ಜೈಂಟ್ಸ್‌: ಸಚಿನ್‌, ಸುನಿಲ್‌ ಕುಮಾರ್‌ ಮತ್ತು ಮಹೇಂದ್ರ ಗಣೇಶ್‌ ರಜ‍ಪೂತ್‌.

* ಹರಿಯಾಣ ಸ್ಟೀಲರ್ಸ್‌: ಕುಲದೀಪ್‌ ಸಿಂಗ್‌.

* ಪಟ್ನಾ ಪೈರೇಟ್ಸ್‌: ಪ್ರದೀಪ್‌ ನರ್ವಾಲ್‌, ಜೈದೀಪ್‌, ಜವಾಹರ್‌ ದಾಗರ್‌ ಮತ್ತು ಮನೀಷ್‌ ಕುಮಾರ್‌

* ಪುಣೇರಿ ಪಲ್ಟನ್‌: ಸಂದೀಪ್‌ ನರ್ವಾಲ್‌, ರಾಜೇಶ್‌ ಮಂಡಲ್‌, ಜಿ.ಬಿ.ಮೋರೆ ಮತ್ತು ಗಿರೀಶ್‌ ಎರ್ನಾಕ್‌

* ತಮಿಳ್‌ ತಲೈವಾಸ್‌: ಅಜಯ್‌ ಠಾಕೂರ್‌, ಅಮಿತ್‌ ಹೂಡಾ ಮತ್ತು ಸಿ.ಅರುಣ್‌.

* ತೆಲುಗು ಟೈಟನ್ಸ್‌: ನೀಲೇಶ್‌ ಸಾಳುಂಕೆ ಮತ್ತು ಮೊಹಸಿನ್ ಮಗಸುದ್ ಉಲ್ ಜಾಫರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.