ADVERTISEMENT

ಪ್ರಶಸ್ತಿಯ ಕನಸಲ್ಲಿ ಪ್ರಣೀತ್‌

ಪಿಟಿಐ
Published 8 ಮೇ 2018, 19:30 IST
Last Updated 8 ಮೇ 2018, 19:30 IST
ಸಾಯಿ ಪ್ರಣೀತ್‌
ಸಾಯಿ ಪ್ರಣೀತ್‌   

ಸಿಡ್ನಿ: ಭಾರತದ ಬಿ.ಸಾಯಿ ಪ್ರಣೀತ್‌ ಅವರು ಬುಧವಾರದಿಂದ ನಡೆಯುವ ಆಸ್ಟ್ರೇಲಿಯಾ ಓಪನ್‌ ಬಿಡಬ್ಲ್ಯುಎಫ್‌ ವಿಶ್ವ ಟೂರ್ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದ್ದಾರೆ.

ಇತ್ತೀಚೆಗೆ ನಡೆದಿದ್ದ ನ್ಯೂಜಿಲೆಂಡ್‌ ಓಪನ್‌ ಟೂರ್ನಿಯಲ್ಲಿ ಪ್ರಣೀತ್‌ ಸೆಮಿಫೈನಲ್‌ ಪ್ರವೇಶಿಸಿದ್ದರು. ಅವರು ಆಸ್ಟ್ರೇಲಿಯಾ ಓಪನ್‌ನಲ್ಲಿ ಅಗ್ರಶ್ರೇಯಾಂಕ ಹೊಂದಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 18ನೇ ಸ್ಥಾನ ಹೊಂದಿರುವ ಪ್ರಣೀತ್‌, ಮೊದಲ ಸುತ್ತಿನಲ್ಲಿ ಇಸ್ರೇಲ್‌ನ ಮಿಶಾ ಜಿಲ್‌ಬರ್ಮನ್‌ ವಿರುದ್ಧ ಸೆಣಸಲಿದ್ದಾರೆ.

ADVERTISEMENT

ನಾಲ್ಕನೇ ಶ್ರೇಯಾಂಕಿತ ಆಟಗಾರ ಸಮೀರ್‌ ವರ್ಮಾ ಕೂಡ ಶುಭಾರಂಭದ ನಿರೀಕ್ಷೆಯಲ್ಲಿದ್ದಾರೆ. ಸಮೀರ್‌ ಮೊದಲ ಸುತ್ತಿನಲ್ಲಿ ನ್ಯೂಜಿಲೆಂಡ್‌ನ ಅಭಿನಮ್‌ ಮನೋಟಾ ಎದುರು ಪೈಪೋಟಿ ನಡೆಸುವರು.

ಸೌರಭ್‌ ವರ್ಮಾಗೆ ಆರಂಭಿಕ ಸುತ್ತಿನಲ್ಲಿ ಜಪಾನ್‌ನ ಟಕುಮಾ ಉಯೆದಾ ಸವಾಲು ಎದುರಾಗಲಿದೆ.

ಅಜಯ್‌ ಜಯರಾಮ್‌ ಕೂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ ಎನಿಸಿದ್ದಾರೆ. ಅವರು ಮೊದಲ ಸುತ್ತಿನಲ್ಲಿ ಜಪಾನ್‌ನ ರಿಚಿ ತಕೆಶಿಟಾ ವಿರುದ್ಧ ಪೈಪೋಟಿ ನಡೆಸಲಿದ್ದಾರೆ. ಲಕ್ಷ್ಯ ಸೇನ್‌, ಹಾಂಕಾಂಗ್‌ನ ಲೀ ಚೆವುಕ್‌ ಯಿವು ಎದುರು ಆಡಲಿದ್ದಾರೆ.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನಲ್ಲಿ ಭಾರತದ ಸಾಯಿ ಉತ್ತೇಜಿತ ರಾವ್‌ ಚುಕ್ಕಾ, ಜಪಾನ್‌ನ ಅಯುಮಿ ಮಿನೆ ಎದುರು ಹೋರಾಡಲಿದ್ದಾರೆ.

ಶ್ರೀಕೃಷ್ಣ ಪ್ರಿಯ ಕುದರವಳ್ಳಿ, ಇಂಡೊನೇಷ್ಯಾದ ಯೂಲಿಯಾ ಯೋಸೆಫಿನ್‌ ಸುಸಾಂಟೊ ಎದುರೂ, ವೈಷ್ಣವಿ ರೆಡ್ಡಿ ಜಕ್ಕಾ, ಇಂಗ್ಲೆಂಡ್‌ನ ಜಾರ್ಜಿನಾ ಬ್ಲಾಂಡಾ ವಿರುದ್ಧವೂ ಪೈಪೋಟಿ ನಡೆಸಲಿದ್ದಾರೆ.

ಮಹಿಳೆಯರ ಡಬಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ ಜೆ.ಮೇಘನಾ ಮತ್ತು ಪೂರ್ವಿಶಾ ಎಸ್‌.ರಾಮ್‌ ಅವರಿಗೆ ಆಸ್ಟ್ರೇಲಿಯಾದ ಮ್ಯಾಗಿ ಚಾನ್‌ ಮತ್ತು ಜೋಡೀ ವೆಗಾ ಅವರ ಸವಾಲು ಎದುರಾಗಲಿದೆ.

ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ ಮತ್ತು ಬಿ.ಸುಮಿತ್‌ ರೆಡ್ಡಿ, ಆಸ್ಟ್ರೇಲಿಯಾದ ಲುಕಾಸ್‌ ಡೆಫೊಲ್ಕಿ ಮತ್ತು ಮೈಕಲ್‌ ಫಾರಿಮನ್‌ ವಿರುದ್ಧ ಸೆಣಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.