ADVERTISEMENT

ಪ್ಲೇ ಆಫ್‌ ಮೇಲೆ ರಾಯಲ್ಸ್‌ ಕಣ್ಣು

ಗೆದ್ದ ತಂಡಕ್ಕೆ ಅಂತಿಮ ನಾಲ್ಕರಲ್ಲಿ ಸ್ಥಾನ ಗಳಿಸುವ ಅವಕಾಶ

ಪಿಟಿಐ
Published 14 ಮೇ 2018, 19:30 IST
Last Updated 14 ಮೇ 2018, 19:30 IST
ರಾಜಸ್ಥಾನ್‌ ರಾಯಲ್ಸ್‌ ಆಟಗಾರರು ಜಯದ ವಿಶ್ವಾಸದಲ್ಲಿದ್ದಾರೆ
ರಾಜಸ್ಥಾನ್‌ ರಾಯಲ್ಸ್‌ ಆಟಗಾರರು ಜಯದ ವಿಶ್ವಾಸದಲ್ಲಿದ್ದಾರೆ   

ಕೋಲ್ಕತ್ತ : ಆತಿಥೇಯ ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್‌) ತಂಡ ಐಪಿಎಲ್‌ನ ನಿರ್ಣಾಯಕ ಪಂದ್ಯದಲ್ಲಿ ಮಂಗಳವಾರ ರಾಜಸ್ಥಾನ್ ರಾಯಲ್ಸ್ (ಆರ್‌ಆರ್‌) ಎದುರು ಸೆಣಸಲಿದೆ.

ಈಡನ್‌ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಪ್ಲೇ ಆಫ್‌ ಹಂತದ ಕನಸು ಹೊತ್ತು ಉಭಯ ತಂಡಗಳು ಕಣಕ್ಕೆ ಇಳಿಯಲಿವೆ.

ಲೀಗ್ ಹಂತದಲ್ಲಿ ಈವರೆಗೆ ಸಮಬಲದ ಸಾಮರ್ಥ್ಯ ತೋರಿರುವ ಎರಡೂ ತಂಡಗಳು ತಲಾ 12 ಪಂದ್ಯಗಳಲ್ಲಿ 12 ಪಾಯಿಂಟ್‌ ಗಳಿಸಿವೆ. ಮಂಗಳವಾರ ಸೋತ ತಂಡಕ್ಕೆ ‍ಪ್ಲೇ ಆಫ್ ಹಂತದ ಹಾದಿ ಕಠಿಣವಾಗಲಿದೆ.

ADVERTISEMENT

ನಿರಂತರ ಎರಡು ಸೋಲಿನಿಂದ ಕಂಗೆಟ್ಟಿದ್ದ ಕೋಲ್ಕತ್ತ ನೈಟ್‌ ರೈಡರ್ಸ್‌ ಕಳೆದ ಪಂದ್ಯದಲ್ಲಿ ಕಿಂಗ್ಸ್ ಇಲೆವನ್‌ ಪಂಜಾಬ್‌ ಎದುರು 31 ರನ್‌ಗಳ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಆರು ವಿಕೆಟ್‌ಗಳಿಗೆ 245 ರನ್ ಕಲೆ ಹಾಕಿತ್ತು. ಇದು ಐಪಿಎಲ್‌ ಟೂರ್ನಿಯ ನಾಲ್ಕನೇ ಅತಿದೊಡ್ಡ ಮೊತ್ತವಾಗಿತ್ತು. ಹೀಗಾಗಿ ತಂಡದ ಬ್ಯಾಟಿಂಗ್ ವಿಭಾಗ ಈಗ ವಿಶ್ವಾಸದಲ್ಲಿದೆ.

ರಾಜಸ್ಥಾನ್‌ ರಾಯಲ್ಸ್‌ ಕೂಡ ಸೋಲಿನ ಸುಳಿಯಲ್ಲಿ ಸಿಲುಕಿ ಟೂರ್ನಿ ಯಿಂದ ಹೊರಬೀಳುವ ಆತಂಕದಲ್ಲಿತ್ತು. ಈ ಸಂದರ್ಭದಲ್ಲಿ ಪುಟಿದೆದ್ದು ಹ್ಯಾಟ್ರಿಕ್‌ ಜಯ ಗಳಿಸಿತ್ತು. ಈ ಮೂರೂ ಪಂದ್ಯಗಳಲ್ಲಿ ಅಮೋಘ ಬ್ಯಾಟಿಂಗ್ ಸಾಮರ್ಥ್ಯ ತೋರಿದ ಜೋಸ್ ಬಟ್ಲರ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದ್ದರು.

ಭಾನುವಾರ ರಾತ್ರಿ ನಡೆದ ಪಂದ್ಯ ದಲ್ಲಿ ಅವರು ಅಜೇಯ 94 ರನ್‌ ಗಳಿಸಿ ಮುಂಬೈ ಇಂಡಿಯನ್ಸ್ ಎದುರು ತಂಡಕ್ಕೆ ಜಯ ಗಳಿಸಿಕೊಟ್ಟಿದ್ದರು. ಇದರೊಂದಿಗೆ ಸತತ ಐದು ಅರ್ಧಶತಕ ಗಳಿಸಿದ ದಾಖಲೆ ಸರಿಗಟ್ಟಿದ್ದರು. ಈ ಹಿಂದೆ ಸೆಹ್ವಾಗ್ ಈ ಸಾಧನೆ ಮಾಡಿದ್ದಾರೆ.

ಅವರೊಂದಿಗೆ ಬೆನ್‌ ಸ್ಟೋಕ್ಸ್ ಕೂಡ ಕಳೆದ ಕೆಲವು ಪಂದ್ಯಗಳಲ್ಲಿ ಉತ್ತಮ ಆಟ ಆಡಿದ್ದಾರೆ. ಹೀಗಾಗಿ ಇವರಿಬ್ಬರನ್ನು ನಿಯಂತ್ರಿಸಲು ಕೆಕೆಆರ್‌ ಬೌಲರ್‌ಗಳು ಮಂಗಳವಾರ ಶ್ರಮಿಸಲಿದ್ದಾರೆ. ತವರಿನಲ್ಲಿ ರೌಂಡ್ ರಾಬಿನ್‌ ಹಂತದ ಕೊನೆಯ ಪಂದ್ಯ ಆಡಲು ಸಜ್ಜಾಗಿರುವ ಕೆಕೆಆರ್‌ಗೆ ಎದುರಾಳಿ ತಂಡದ ಇತರ ಬ್ಯಾಟ್ಸ್‌ಮನ್‌ಗಳು ಹೆಚ್ಚು ಸವಾಲು ಒಡ್ಡುವ ಸಾಧ್ಯತೆ ಇಲ್ಲ.

ನಾಯಕ ಅಜಿಂಕ್ಯ ರಹಾನೆ ನಿರಂತರ ವೈಫಲ್ಯ ಕಂಡಿದ್ದಾರೆ. ಅವರು ಈ ವರೆಗೆ 12 ಪಂದ್ಯಗಳಲ್ಲಿ ಗಳಿಸಿದ್ದು 280 ರನ್‌ ಮಾತ್ರ.

ಸುನಿಲ್‌, ಕಾರ್ತಿಕ್‌, ಗಿಲ್‌ ಸವಾಲು: ಕೆಕೆಆರ್‌ ಬ್ಯಾಟಿಂಗ್‌ ವಿಭಾಗಕ್ಕೆ ಎಡಗೈ ಬ್ಯಾಟ್ಸ್‌ಮನ್‌ ಸುನಿಲ್‌ ನಾರಾಯಣ್‌, ನಾಯಕ ದಿನೇಶ್ ಕಾರ್ತಿಕ್ ಮತ್ತು ಯುವ ಆಟಗಾರ ಶುಭಮನ್ ಗಿಲ್‌ ಬಲ ತುಂಬಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.