ADVERTISEMENT

ಫೆಲ್ಪ್ಸ್ ಚಿನ್ನದ ಬೇಟೆ ನಿರಂತರ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2016, 19:49 IST
Last Updated 10 ಆಗಸ್ಟ್ 2016, 19:49 IST
ತಮ್ಮ ಮಗ ಬೂಮರ್‌ಗೆ ಸಿಹಿಮುತ್ತು ನೀಡಿದ ಮೈಕೆಲ್ ಫೆಲ್ಪ್ಸ್ .  ಪತ್ನಿ ನಿಕೋಲ್ ಜಾನ್ಸನ್ ಇದ್ದಾರೆ   ಎಎಫ್‌ಪಿ ಚಿತ್ರ
ತಮ್ಮ ಮಗ ಬೂಮರ್‌ಗೆ ಸಿಹಿಮುತ್ತು ನೀಡಿದ ಮೈಕೆಲ್ ಫೆಲ್ಪ್ಸ್ . ಪತ್ನಿ ನಿಕೋಲ್ ಜಾನ್ಸನ್ ಇದ್ದಾರೆ ಎಎಫ್‌ಪಿ ಚಿತ್ರ   

ರಿಯೊ ಡಿ ಜನೈರೊ (ಎಪಿ/ ರಾಯಿಟರ್ಸ್‌):  ಈಜುಕೊಳದಲ್ಲಿ ಅಮೆರಿಕದ ಮೈಕಲ್‌ ಫೆಲ್ಪ್ಸ್‌ ಅವರ ಆಧಿಪತ್ಯ ಮುಂದುವರಿದಿದ್ದು, ರಿಯೊ ಕೂಟದಲ್ಲಿ ಮತ್ತೆರಡು ಚಿನ್ನ ಜಯಿಸಿದ್ದಾರೆ.

ಮಂಗಳವಾರ ನಡೆದ 200 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ಅಗ್ರಸ್ಥಾನ ಪಡೆದ ಫೆಲ್ಪ್ಸ್‌, 4X200 ಮೀ. ಫ್ರೀಸ್ಟೈಲ್‌ ರಿಲೇಯಲ್ಲಿ ಅಮೆರಿಕ ತಂಡ ಚಿನ್ನ ಗೆಲ್ಲಲು ನೆರವಾದರು.

ಈ ಮೂಲಕ ಫೆಲ್ಪ್ಸ್‌ ರಿಯೊ ಕೂಟದಲ್ಲಿ ಮೂರು ಚಿನ್ನ ಗೆದ್ದ ಸಾಧನೆ ಮಾಡಿದ್ದು, ಒಲಿಂಪಿಕ್‌ ಕೂಟಗಳಲ್ಲಿ ಗೆದ್ದ ಚಿನ್ನದ ಪದಕಗಳ ಸಂಖ್ಯೆಯನ್ನು 21ಕ್ಕೆ ಏರಿಸಿಕೊಂಡಿದ್ದಾರೆ. ಇದಲ್ಲದೆ ತಲಾ ಎರಡು ಬೆಳ್ಳಿ ಮತ್ತು ಕಂಚಿನ ಪದಕಗಳನ್ನೂ ಅವರು ಜಯಿಸಿದ್ದಾರೆ.

ಪ್ರತೀಕಾರದ ಗೆಲುವು:
200 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ಗೆಲ್ಲಲೇಬೇಕು ಎಂದು ಫೆಲ್ಪ್ಸ್‌ ಪಣತೊಟ್ಟಿದ್ದರು. ಏಕೆಂದರೆ ನಾಲ್ಕು ವರ್ಷಗಳ ಹಿಂದೆ ಲಂಡನ್‌ ಒಲಿಂಪಿಕ್ಸ್‌ ನಲ್ಲಿ ಅವರು ಈ ಸ್ಪರ್ಧೆಯಲ್ಲಿ ಸೋತಿ ದ್ದರು.  ಫೆಲ್ಪ್ಸ್‌ ಒಂದು ನಿಮಿಷ 53.36 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಲಂಡನ್‌ ಕೂಟದಲ್ಲಿ ದಕ್ಷಿಣ ಆಫ್ರಿಕಾದ ಚಾಡ್‌ ಲಿ ಕ್ಲೋಸ್‌ ಅವರು ಅಮೆರಿಕದ ಸ್ಪರ್ಧಿಯನ್ನು ಹಿಂದಿಕ್ಕಿ ಚಿನ್ನ ಗೆದ್ದಿದ್ದರು.

ಅಂದು ಎದುರಾಗಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಂಡರು. ಈ ಬಾರಿ ನಾಲ್ಕನೇ ಸ್ಥಾನ ಪಡೆದ ಲಿ ಕ್ಲೋಸ್‌ ಪದಕ ಗೆಲ್ಲುವಲ್ಲಿ ವಿಫಲರಾದರು.
ದಕ್ಷಿಣ ಆಫ್ರಿಕಾದ ಸ್ಪರ್ಧಿಗೆ ರಿಯೊ ಕೂಟಕ್ಕೆ ಸರಿಯಾದ ಸಿದ್ಧತೆ ನಡೆಸಲು ಆಗಿರಲಿಲ್ಲ. ಏಕೆಂದರೆ ಲೀ ಕ್ಲೋಸ್‌ ಅವರ ತಂದೆ ಹಾಗೂ ತಾಯಿಗೆ ಕ್ಯಾನ್ಸರ್‌ಗೆ ಇರುವುದು ಇತ್ತೀಚೆಗೆ ಪತ್ತೆಯಾಗಿತ್ತು.

ಜಪಾನ್‌ನ ಮಸಟೊ ಸಕಾಯ್‌ (1:53.40) ಮತ್ತು ಹಂಗರಿಯ ತಮಸ್‌ ಕೆಂಡೆರೆಸಿ (1:53.62)  ಕ್ರಮವಾಗಿ ಬೆಳ್ಳಿ ಹಾಗೂ ಚಿನ್ನದ ಪದಕ ಜಯಿಸಿದರು.
‘ನನ್ನ ಗುರಿ ಈಡೇರಿದೆ’ ಎಂದು ಸ್ಪರ್ಧೆಯ ಬಳಿಕ ಪ್ರತಿಕ್ರಿಯಿಸಿದ ಫೆಲ್ಪ್ಸ್‌,  ಕುಟುಂಬ ಸದಸ್ಯರ ಜತೆ ಗೆಲುವಿನ ಸಂಭ್ರಮ ಆಚರಿಸಿದರು. ಫೆಲ್ಪ್ಸ್‌ ಅವರು ಅಥೆನ್ಸ್‌ ಮತ್ತು ಬೀಜಿಂಗ್‌ನಲ್ಲಿ 200 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದರು.

ರಿಲೇ ತಂಡಕ್ಕೆ ಚಿನ್ನ:
ಫೆಲ್ಪ್ಸ್‌, ರ್‍್ಯಾನ್‌ ಲಾಕ್ಟೆ, ಟೌನ್ಲಿ ಹಾಸ್‌ ಮತ್ತು ಕಾನರ್‌ ಡ್ವಯರ್‌ ಅವರಿದ್ದ ಅಮೆರಿಕ ತಂಡ   4X200 ಮೀ. ಫ್ರೀಸ್ಟೈಲ್‌ ರಿಲೇ ಸ್ಪರ್ಧೆಯಲ್ಲಿ ಏಳು ನಿಮಿಷ 0.66 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದಿತು.

ಬ್ರಿಟನ್‌ (7:03.13 ಸೆ.) ಮತ್ತು ಜಪಾನ್‌ (7:03.50) ಕ್ರಮವಾಗಿ ಬೆಳ್ಳಿ  ಹಾಗೂ ಕಂಚು ಜಯಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.