ADVERTISEMENT

ಫೈನಲ್‌ಗೆ ಬಿಎಫ್‌ಸಿ; ಪುಣೆಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2018, 19:30 IST
Last Updated 11 ಮಾರ್ಚ್ 2018, 19:30 IST
ಫೈನಲ್‌ಗೆ ಬಿಎಫ್‌ಸಿ; ಪುಣೆಗೆ ನಿರಾಸೆ
ಫೈನಲ್‌ಗೆ ಬಿಎಫ್‌ಸಿ; ಪುಣೆಗೆ ನಿರಾಸೆ   

ಬೆಂಗಳೂರು: ಗ್ಯಾಲರಿಗಳನ್ನು ಆಕ್ರಮಿಸಿಕೊಂಡಿದ್ದ 24 ಸಾವಿರ ಪ್ರೇಕ್ಷಕರ ನಿರೀಕ್ಷೆ ಹುಸಿಯಾಗಲಿಲ್ಲ. ನಾಯಕ ಸುನಿಲ್ ಚೆಟ್ರಿ ಅವರ ಮಿಂಚಿನ ಹ್ಯಾಟ್ರಿಕ್ ಗೋಲುಗಳು ಬೆಂಗಳೂರು ಫುಟ್‌ಬಾಲ್ ಕ್ಲಬ್‌ನ (ಬಿಎಫ್‌ಸಿ) ಕನಸನ್ನು ನನಸು ಮಾಡಿತು.

ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಮೊದಲ ಸೆಮಿಫೈನಲ್‌ನ ಎರಡನೇ ಲೆಗ್ ಪಂದ್ಯದಲ್ಲಿ ಪುಣೆಯನ್ನು 3–1 ಗೋಲುಗಳಿಂದ ಮಣಿಸಿದ ಚೆಟ್ರಿ ಬಳಗ ಪ್ರಶಸ್ತಿ ಹಂತಕ್ಕೆ ಪ್ರವೇಶಿಸಿತು.

ಪಂದ್ಯದ ಮೂರನೇ ನಿಮಿಷದಲ್ಲಿ ಉದಾಂತ ಸಿಂಗ್‌ ನಡೆಸಿದ ಆಕ್ರಮಣದ ಮೂಲಕ ಆಧಿಪತ್ಯ ಸ್ಥಾಪಿಸಿದ ಬಿಎಫ್‌ಸಿ ನಂತರ ತಿರುಗಿ ನೋಡಲಿಲ್ಲ.
ಬಿಎಫ್‌ಸಿಯ ಶ್ರಮಕ್ಕೆ 15ನೇ ನಿಮಿಷದಲ್ಲಿ ಫಲ ಸಿಕ್ಕಿತು. ಎದುರಾಳಿ ಪಾಳಯದ ಬಲಿಷ್ಠ ರಕ್ಷಣಾ ಗೋಡೆಯನ್ನು ಲೆಕ್ಕಿಸದೆ ಮುನ್ನುಗ್ಗಿದ ಉದಾಂತ ಸಿಂಗ್‌, ಮಿಕು ಮತ್ತು ಚೆಟ್ರಿ ಗೋಲು ಪೆಟ್ಟಿಗೆಯ ಬಳಿ ಉತ್ತಮ ಅವಕಾಶ ಸೃಷ್ಟಿಸಿಕೊಂಡರು. ಉದಾಂತ ಸಿಂಗ್ ಎಡಭಾಗದಿಂದ ನೀಡಿದ ಪಾಸ್‌ನಲ್ಲಿ ಹೆಡ್‌ ಮಾಡಿದ ಚೆಟ್ರಿ ಸುಲಭವಾಗಿ ಚೆಂಡನ್ನು ಗೋಲುಪೆಟ್ಟಿಗೆಯೊಳಗೆ ಕಳುಹಿಸಿದರು. ಈ ಕ್ಷಣಕ್ಕಾಗಿ ಕಾಯುತ್ತಿದ್ದ ಪ್ರೇಕ್ಷಕರು ಸಂಭ್ರಮದ ಅಲೆಯಲ್ಲಿ ಮಿಂದೆದ್ದರು.

ADVERTISEMENT

25ನೇ ನಿಮಿಷದಲ್ಲಿ ಬಿಎಫ್‌ಸಿಗೆ ಫ್ರೀ ಕಿಕ್ ಲಭಿಸಿತು. ಎರಿಕ್ ಪಾರ್ಟಲು ಒದ್ದ ಚೆಂಡನ್ನು ಆದಿಲ್‌ ಖಾನ್ ಹೊರಗೆ ಅಟ್ಟಿದರು. 31ನೇ ನಿಮಿಷದಲ್ಲಿ ಸೈಡ್‌ಲೈನ್‌ ಬಳಿ ಉದಾಂತ ಸಿಂಗ್ ಅವರನ್ನು ನೆಲಕ್ಕೆ ಕೆಡವಿದ ಶಾಹಿಲ್ ಪನ್ವರ್‌ ಹಳದಿ ಕಾರ್ಡ್‌ ಪಡೆದರು. 34ನೇ ನಿಮಿಷದಲ್ಲಿ ಡೀಗೊ ಕಾರ್ಲೋಸ್‌  ಹಳದಿ ಕಾರ್ಡ್‌ ಪಡೆದರು. ಈ ಎರಡು ಸಂದರ್ಭಗಳಲ್ಲೂ ಫ್ರೀ ಕಿಕ್‌ ಪಡೆದ ಬಿಎಫ್‌ಸಿಗೆ ಅದನ್ನು ಸದುಪಯೋಗಪಡಿಸಿಕೊಳ್ಳಲು ಆಗಲಿಲ್ಲ. 42ನೇ ನಿಮಿಷದಲ್ಲಿ ಲಭಿಸಿದ ಕಾರ್ನರ್‌ ಕಿಕ್ ಅವಕಾಶವೂ ಫಲ ನೀಡಲಿಲ್ಲ. ಎರಿಕ್ ಪಾರ್ಟಲು ನೀಡಿದ ಚೆಂಡನ್ನು ಸುನಿಲ್ ಚೆಟ್ರಿ ಹೆಡ್ ಮಾಡಿದರು. ಆದರೆ ಗುರಿ ಮುಟ್ಟಲು ಆಗಲಿಲ್ಲ.

0–1ರ ಹಿನ್ನಡೆಯೊಂದಿಗೆ ದ್ವಿತೀಯಾರ್ಧದಲ್ಲಿ ಕಣಕ್ಕೆ ಇಳಿದ ಪುಣೆ ನಾಜೂಕಿನ ಆಟ ಅಡಿತು. ಸಾಹಿಲ್ ಪನ್ವರ್ ಬದಲಿಗೆ ಬಂದಿದ್ದ ಸಾರ್ಥಕ್ ಗೊಲೊವಿ 47ನೇ ನಿಮಿಷದಲ್ಲಿ ಚೆಂಡನ್ನು ಡ್ರಿಬಲ್‌ ಮಾಡುತ್ತ ಬಿಎಫ್‌ಸಿ ಆವರಣಕ್ಕೆ ಪ್ರವೇಶಿಸಿದರು. ಬಲಭಾಗದಿಂದ ಚೆಂಡನ್ನು ಲಾಫ್ಟ್ ಮಾಡಿದರು. ಗೋಲುಪೆಟ್ಟಿಗೆ ಮುಂದೆ ಕಾಯುತ್ತಿದ್ದ ಎಮಿಲಿಯಾನೊ ಅಲ್ಫಾರೊ ಹೆಡ್ ಮಾಡಿದರೂ ಚೆಂಡು ಗುರಿ ಮುಟ್ಟಲಿಲ್ಲ.

52ನೇ ನಿಮಿಷದಲ್ಲಿ ಮಾರ್ಸೆಲೊ ಪೆರೇರ ಅವರನ್ನು ಶುಭಾಷೀಷ್ ಬೋಸ್‌ ಕೆಳಗೆ ಬೀಳಿಸಿದ್ದರಿಂದ ಪುಣೆಗೆ ಫ್ರೀ ಕಿಕ್ ಅವಕಾಶ ಲಭಿಸಿತು. ಆದರೂ ಗೋಲು ಗಳಿಸುವ ಆ ತಂಡದ ಕನಸು ನನಸಾಗಲಿಲ್ಲ.  ಆದರೆ ಬಿಎಫ್‌ಸಿ ಲಭಿಸಿದ ಅವಕಾಶವನ್ನು ಕೈಚೆಲ್ಲಲು ಸಿದ್ಧವಿರಲಿಲ್ಲ. 64ನೇ ನಿಮಿಷದಲ್ಲಿ ಸುನಿಲ್ ಚೆಟ್ರಿ ಅವರನ್ನು ಎಡಭಾಗದಲ್ಲಿ ಕೆಡವಿದ ಸಾರ್ಥಕ್‌ ಗೊಲೊವಿ ಬಿಎಫ್‌ಸಿಗೆ ಕನಸಿನ ಗೋಲು ಗಳಿಸಲು ಅವಕಾಶ ಮಾಡಿಕೊಟ್ಟರು.

ಚಾಣಾಕ್ಷ ಗೋಲ್‌ಕೀಪರ್‌ ವಿಶಾಲ್ ಕೇತ್ ಅವರನ್ನು ಸುಲಭವಾಗಿ ವಂಚಿಸಿದ ಚೆಟ್ರಿ ಪೆನಾಲ್ಟಿ ಕಿಕ್‌ನಲ್ಲಿ ಗೋಲು ಗಳಿಸಿದರು. ಗ್ಯಾಲರಿಗಳಲ್ಲಿ ಮೆಕ್ಸಿಕನ್ ಅಲೆ ಏಳಲು ಕಾರಣರಾದರು. 89ನೇ ನಿಮಿಷದಲ್ಲಿ ಬಲಶಾಲಿ ಕಿಕ್ ಮೂಲಕ ಗೋಲು ಗಳಿಸಿ ಚೆಟ್ರಿ ಹ್ಯಾಟ್ರಿಕ್ ಸಾಧನೆ ಮಾಡಿದರು. 82ನೇ ನಿಮಿಷದಲ್ಲಿ ಜೊನಾಥನ್ ಲೂಕಾ ‍ಪುಣೆ ಪರವಾಗಿ ಏಕೈಕ ಗೋಲು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.