ADVERTISEMENT

ಫೈನಲ್‌ಗೆ ಪೇಸ್- ಸ್ಟೆಪನೆಕ್

​ಪ್ರಜಾವಾಣಿ ವಾರ್ತೆ
Published 26 ಜನವರಿ 2012, 19:30 IST
Last Updated 26 ಜನವರಿ 2012, 19:30 IST

ಮೆಲ್ಬರ್ನ್ (ಪಿಟಿಐ): ಲಿಯಾಂಡರ್ ಪೇಸ್ ಮತ್ತು ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪನೆಕ್ ಜೋಡಿ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದ ಫೈನಲ್ ಪ್ರವೇಶಿಸಿತು. 

ಗುರುವಾರ ನಡೆದ ನಾಲ್ಕರಘಟ್ಟದ ಪಂದ್ಯದಲ್ಲಿ ಭಾರತ-ಜೆಕ್ ಜೋಡಿ 2-6, 6-4, 6-4 ರಲ್ಲಿ ಬೆಲಾರಸ್‌ನ ಮ್ಯಾಕ್ಸ್ ಮಿರ್ನಿ ಹಾಗೂ ಕೆನಡಾದ ಡೇನಿಯಲ್ ನೆಸ್ಟರ್ ವಿರುದ್ಧ ಗೆಲುವು ಪಡೆಯಿತು.

ಪೇಸ್ ಮತ್ತು ಸ್ಟೆಪನೆಕ್‌ಗೆ ಇಲ್ಲಿ ಶ್ರೇಯಾಂಕ ಲಭಿಸಿಲ್ಲ. ಆದರೆ ಎರಡನೇ ಶ್ರೇಯಾಂಕಿತ ಜೋಡಿಯ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ಫೈನಲ್‌ಗೆ ಲಗ್ಗೆಯಿಟ್ಟರು.

ಎರಡು ಗಂಟೆ 13 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಪೇಸ್ ಜೋಡಿ ಮೊದಲ ಸೆಟ್‌ನಲ್ಲಿ ಸೋಲು ಅನುಭವಿಸಿತ್ತು. ಆ ಬಳಿಕ ತಿರುಗೇಟು ನೀಡಿತಲ್ಲದೆ, ಮುಂದಿನ ಎರಡೂ ಸೆಟ್‌ಗಳಲ್ಲಿ ಜಯ ಪಡೆಯಿತು.

ಪೇಸ್ ಮತ್ತು ಸ್ಟೆಪಾನೆಕ್ ಶನಿವಾರ ನಡೆಯುವ ಫೈನಲ್‌ನಲ್ಲಿ ಅಗ್ರಶ್ರೇಯಾಂಕದ ಜೋಡಿ ಅಮೆರಿಕದ ಬಾಬ್ ಮತ್ತು ಮೈಕ್ ಬ್ರಯನ್ ಅವರ ಸವಾಲನ್ನು ಎದುರಿಸುವರು. ದಿನದ ಮತ್ತೊಂದು ನಾಲ್ಕರಘಟ್ಟದ ಪಂದ್ಯದಲ್ಲಿ ಬ್ರಯನ್ ಸಹೋದರರು 4-6, 6-3, 7-6 ರಲ್ಲಿ ಸ್ವೀಡನ್‌ನ ರಾಬರ್ಟ್ ಲಿಂಡ್‌ಸ್ಟೆಡ್ ಮತ್ತು ರೊಮೇನಿಯದ ಹೊರಿಯಾ ಟೆಕಾವ್ ವಿರುದ್ಧ ಜಯ ಪಡೆದರು.

ಪೇಸ್ ಇದುವರೆಗೆ ಆಸ್ಟ್ರೇಲಿಯಾ ಓಪನ್‌ನಲ್ಲಿ ಪುರುಷರ ಡಬಲ್ಸ್ ವಿಭಾಗದ ಪ್ರಶಸ್ತಿ ಜಯಿಸಿಲ್ಲ. ಈ ಬಾರಿ ಅವರಿಗೆ ಮತ್ತೊಂದು ಅವಕಾಶ ಲಭಿಸಿದೆ. ಬ್ರಯನ್ ಸಹೋದರರು ಇಲ್ಲಿ ಕಿರೀಟ ಮುಡಿಗೇರಿಸಿಕೊಂಡರೆ ಹೊಸ ದಾಖಲೆ ಎನಿಸಲಿದೆ. ಇದು ಅವರು ಜೊತೆಯಾಗಿ ಪಡೆಯುವ 12ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಎನಿಸಲಿದೆ. ಈಗ ಅವರು ದಾಖಲೆಯನ್ನು ಆಸ್ಟ್ರೇಲಿಯಾದ ಟಾಡ್ ವುಡ್‌ಬ್ರಿಜ್ ಮತ್ತು ಮಾರ್ಕ್ ವುಡ್‌ಫೋರ್ಡ್ (ತಲಾ 11 ಪ್ರಶಸ್ತಿ) ಜೊತೆ ಹಂಚಿಕೊಂಡಿದ್ದಾರೆ.

ನಾಲ್ಕರಘಟ್ಟಕ್ಕೆ ಪೇಸ್-ವೆಸ್ನಿನಾ: ಮಿಶ್ರ ಡಬಲ್ಸ್ ವಿಭಾಗದಲ್ಲಿ ಪೇಸ್ ಅವರು ರಷ್ಯಾದ ಎಲೆನಾ ವೆಸ್ನಿನಾ ಜೊತೆ ಸೆಮಿಫೈನಲ್ ಪ್ರವೇಶಿಸಿದರು. ಗುರುವಾರ ನಡೆದ ಎಂಟರಘಟ್ಟದ ಪಂದ್ಯದಲ್ಲಿ ಅವರು 6-2, 6-2 ರಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಅಮೆರಿಕದ ಲೀಸಾ ರೇಮಂಡ್ ಎದುರು ಸುಲಭ ಗೆಲುವು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.