ADVERTISEMENT

ಫೈನಲ್‌ ಪ್ರವೇಶಿಸಿದ ವಾವ್ರಿಂಕಾ

ಫ್ರೆಂಚ್ ಓಪನ್ ಟೆನಿಸ್

ಏಜೆನ್ಸೀಸ್
Published 9 ಜೂನ್ 2017, 19:30 IST
Last Updated 9 ಜೂನ್ 2017, 19:30 IST
ಗೆಲುವಿನ ಸಂಭ್ರಮದಲ್ಲಿ ಸ್ಟಾನಿಸ್ಲಾಸ್ ವಾವ್ರಿಂಕಾ 
ಗೆಲುವಿನ ಸಂಭ್ರಮದಲ್ಲಿ ಸ್ಟಾನಿಸ್ಲಾಸ್ ವಾವ್ರಿಂಕಾ    

ಪ್ಯಾರಿಸ್:  ಸ್ವಿಟ್ಜರ್‌ಲೆಂಡ್‌ನ ಸ್ಟಾನಿಸ್ಲಾಸ್‌ ವಾವ್ರಿಂಕಾ  ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಶುಕ್ರವಾರ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಆ್ಯಂಡಿ ಮರ್ರೆಗೆ ಆಘಾತ ನೀಡುವ ಮೂಲಕ ಫೈನಲ್‌ ತಲುಪಿದ್ದಾರೆ. 44 ವರ್ಷದ ವಾವ್ರಿಂಕಾ ಫ್ರೆಂಚ್ ಓಪನ್‌ನಲ್ಲಿ ಫೈನಲ್ ಆಡಲಿರುವ ಅತ್ಯಂತ ಹಿರಿಯ ಆಟಗಾರ ಎನಿಸಿದ್ದಾರೆ.

1973ರಲ್ಲಿ 33 ವರ್ಷದ ನಿಕಿ ಫಿಲಿಕ್  ಇದುವರೆಗೂ ಇಲ್ಲಿ ಫೈನಲ್‌ನಲ್ಲಿ ಆಡಿದ ಹಿರಿಯ ಆಟಗಾರ ಎನಿಸಿದ್ದರು. ಆ ಪಂದ್ಯದಲ್ಲಿ ಅವರು ರನ್ನರ್ ಅಪ್ ಆಗಿದ್ದರು. ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಸ್ವಿಸ್‌ ಆಟಗಾರ 6–7, 6–3, 5–7, 7–6, 6–1ರಲ್ಲಿ ಬ್ರಿಟನ್‌ನ ಮರ್ರೆಗೆ ಸೋಲುಣಿಸಿದರು.

ಐದು ಸೆಟ್‌ಗಳಲ್ಲಿ ನಡೆದ ದೀರ್ಘ ಸಮಯದ ಪಂದ್ಯದಲ್ಲಿ ಸ್ವಿಸ್ ಆಟಗಾರ ಮೇಲುಗೈ ಸಾಧಿಸಿದರು. ನಾಲ್ಕು ಗಂಟೆ 34 ನಿಮಿಷಗಳ ಪಂದ್ಯ ಇದಾಗಿತ್ತು. 2015ರಲ್ಲಿ ಇಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದ ವಾವ್ರಿಂಕಾ ತಮ್ಮ 32ನೇ ವಯಸ್ಸಿನಲ್ಲಿ ಅಮೆರಿಕ ಓಪನ್ ಜಯಿಸಿದ್ದರು.

ADVERTISEMENT

‘ಒಂದು ಹಾಗೂ ಮೂರನೇ ಸೆಟ್‌ನಲ್ಲಿ ಆಡಲು ಕಷ್ಟ ಆಯಿತು. ಪಂದ್ಯ ಗೆಲ್ಲಬಹುದು ಎಂದು ತಡವಾಗಿ ಅನ್ನಿಸಿತು. ಆ್ಯಂಡಿ ಎದುರು ಗೆಲುವು ಕಷ್ಟ. ಎಲ್ಲಿಯೂ ಪಾಯಿಂಟ್ಸ್ ಪಡೆಯಲು ಸುಲಭವಾಗಿ ಅವರು ಅವಕಾಶ ನೀಡುವುದಿಲ್ಲ. ಇದು ನನ್ನ ಸ್ಮರಣೀಯ ಗೆಲುವು’ ಎಂದು ವಾವ್ರಿಂಕಾ ಹೇಳಿದ್ದಾರೆ.

‘ವಾವ್ರಿಂಕಾ ಯಾವಾಗಲೂ ಕೊನೆಯಲ್ಲಿ ಕಠಿಣ ಸವಾಲುಗಳನ್ನು ಒಡ್ಡುತ್ತಾರೆ. ನಾನು ಸಾಕಷ್ಟು ಪ್ರಯತ್ನ ಹಾಕಿದೆ. ಆದರೆ ಗೆಲ್ಲಲು ಆಗಲಿಲ್ಲ’ ಎಂದು ಮರ್ರೆ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದಾರೆ. ಮೊದಲ ಪಂದ್ಯದಲ್ಲಿ ವಾವ್ರಿಂಕಾ 5–3ರಲ್ಲಿ ಮುಂದಿದ್ದರು. ಆದರೆ ಸತತವಾಗಿ ಪಾಯಿಂಟ್ಸ್ ಬಿಟ್ಟು ಕೊಡುವ ಮೂಲಕ ಸೋಲು ಕಂಡರು. ಈ ಸೆಟ್‌ನಲ್ಲಿ ವಾವ್ರಿಂಕಾ 23 ಅನಗತ್ಯ ತಪ್ಪುಗಳನ್ನು ಎಸಗಿದರು.

ಎರಡನೇ ಸೆಟ್‌ನಲ್ಲಿ ವಾವ್ರಿಂಕಾ ಸುಧಾರಿತ ಆಟ ಆಡಿದರು. ಬ್ಯಾಕ್‌ಹ್ಯಾಂಡ್ ಹೊಡೆತಗಳ ವೇಳೆ ಹೆಚ್ಚು ನಿಖರವಾಗಿ ತಿರುಗೇಟು ನೀಡಿದರು. 4–3ರಲ್ಲಿ ಮುನ್ನಡೆ ಪಡೆದು ಸೆಟ್ ಗೆದ್ದರು.

ಮೂರನೇ ಸೆಟ್‌ನಲ್ಲಿ ವಾವ್ರಿಂಕಾ 3–0ರಲ್ಲಿ ಮುನ್ನಡೆ ಹೊಂದಿದ್ದರು. ಆದರೆ ಆ ನಂತರದ ಆಟದಲ್ಲಿ ಮಂಕಾದರು. ಸತತ ಗೆಲುವು ಪಡೆದ ಮರ್ರೆ ಸೆಟ್ ಗೆದ್ದರು. ಐದನೇ ಗೇಮ್‌ನಲ್ಲಿ ಮರ್ರೆ ಅತ್ಯುತ್ತಮ ಶಾಟ್‌ಗಳಿಂದ ಗಮನ ಸೆಳೆದರು.

ಕೊನೆಯ ಎರಡು ಗೇಮ್‌ಗಳಲ್ಲಿ ವಾವ್ರಿಂಕಾ ತಮ್ಮ ನೈಜ ಸಾಮರ್ಥ್ಯದ ಆಟ ಆಡಿದರು. ಅವರು ಬಳಸಿದ ನೂತನ ರಕ್ಷಣಾತ್ಮಕ ತಂತ್ರಗಳಿಂದ ಚಪ್ಪಾಳೆ ಗಿಟ್ಟಿಸಿದರು.

ಜೆಲೆನಾಗೆ ಮೊದಲ ಗ್ರ್ಯಾಂಡ್‌ಸ್ಲಾಮ್‌ ಕನಸು
ಪ್ಯಾರಿಸ್:
ಲಾಟ್ವಿಯಾದ ಜೆಲೆನಾ ಓಸ್ತಪೆಂಕೊ ಹಾಗೂ ರುಮೇನಿಯಾದ ಸಿಮೊನಾ ಹಲೆಪ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಶನಿವಾರ ಮೊದಲ ಪ್ರಶಸ್ತಿ ಎತ್ತಿಹಿಡಿಯುವ ಕನಸಿನೊಂದಿಗೆ ಕಣಕ್ಕಿಳಿಯಲಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಓಸ್ತಪೆಂಕೊ ಹಾಗೂ ಹಲೆಪ್ ಪರಸ್ಪರ ಮುಖಾಮುಖಿಯಾಗಲಿದ್ದಾರೆ.

ಇಬ್ಬರು ಆಟಗಾರ್ತಿಯರಿಗೂ ಇದು ಮೊದಲ ಗ್ರ್ಯಾಂಡ್‌ಸ್ಲಾಮ್ ಜಯಿಸುವ ಅವಕಾಶ ಎನಿಸಿದೆ. ಮ್ಯಾಡ್ರಿಡ್ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದ ಹಲೆಪ್‌ ಇಲ್ಲಿ ಪ್ರಶಸ್ತಿ ಗೆದ್ದುಕೊಳ್ಳುವ ಮೂಲಕ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಕ್ಕೇರುವ ಗುರಿ ಹೊಂದಿದ್ದಾರೆ. ರೋಮ್‌ನಲ್ಲಿ ನಡೆದ ಟೂರ್ನಿಯಲ್ಲಿ ರನ್ನರ್ಸ್ ಅಪ್‌ ಆಗಿದ್ದ ಅವರು ಇಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿ ಕೂಡ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.