ರೋಟರ್‌ಡಮ್ (ಪಿಟಿಐ): ಎಫ್‌ಐಎಚ್ ವಿಶ್ವ ಹಾಕಿ ಲೀಗ್ ರೌಂಡ್-3 ಟೂರ್ನಿಯಲ್ಲಿ ಭಾರತ ಮಹಿಳಾ ತಂಡದವರ ಕಳಪೆ ಪ್ರದರ್ಶನ ಮತ್ತೆ ಮುಂದುವರಿದಿದೆ.
5 ರಿಂದ 8ರ ವರೆಗಿನ ಸ್ಥಾನಗಳನ್ನು ನಿರ್ಣಯಿಸಲು ಗುರುವಾರ ನಡೆದ ಪಂದ್ಯದಲ್ಲಿ ಭಾರತ 0-4 ಗೋಲುಗಳಿಂದ ಜಪಾನ್ ಎದುರು ಸೋಲು ಅನುಭವಿಸಿತು. ಇದೀಗ ಭಾರತ 7-8 ನೇ ಸ್ಥಾನಕ್ಕಾಗಿ ಬೆಲ್ಜಿಯಂ ಅಥವಾ ಚೀನಾ ಜೊತೆ ಪೈಪೋಟಿ ನಡೆಸಲಿದೆ.
ವಿಶ್ವ ರ‌್ಯಾಂಕಿಂಗ್‌ನಲ್ಲಿ 12ನೇ ಸ್ಥಾನದಲ್ಲಿರುವ ಭಾರತ ತನಗಿಂತ ಮೇಲಿನ ರ‌್ಯಾಂಕ್‌ನಲ್ಲಿರುವ ಜಪಾನ್‌ಗೆ (9) ತಕ್ಕ ಪೈಪೋಟಿ ನೀಡುವಲ್ಲಿ ವಿಫಲವಾಯಿತು. ಅಯಾಕ ನಿಶಿಮುರ ಎರಡನೇ ನಿಮಿಷದಲ್ಲಿ ಜಪಾನ್‌ಗೆ ಮುನ್ನಡೆ ತಂದಿತ್ತರೆ, ಶಿಹೊ ಒತ್ಸುಕಾ 18ನೇ ನಿಮಿಷದಲ್ಲಿ ಗೋಲು ಗಳಿಸಿ ಮುನ್ನಡೆಯನ್ನು 2-0ಗೆ ಹೆಚ್ಚಿಸಿಕೊಂಡರು.
ಎರಡನೇ ಅವಧಿಯಲ್ಲೂ ಜಪಾನ್ ತಂಡದ ಪ್ರಾಬಲ್ಯ ಮುಂದುವರಿಯಿತು. ಒತ್ಸುಕಾ 36ನೇ ನಿಮಿಷದಲ್ಲಿ ತಮ್ಮ ಎರಡನೇ ಗೋಲು ಗಳಿಸಿದರು. 54ನೇ ನಿಮಿಷದಲ್ಲಿ ಯೂರಿ ನಗಾಯ್ ಚೆಂಡನ್ನು ಗುರಿ ಸೇರಿಸಿ ಗೆಲುವಿನ ಅಂತರವನ್ನು 4-0ಗೆ ಹೆಚ್ಚಿಸಿದರು. ಭಾರತ ಮಹಿಳಾ ತಂಡ ಟೂರ್ನಿಯಲ್ಲಿ ಇದುವರೆಗೆ ಒಂದೂ ಗೆಲುವು ಪಡೆದಿಲ್ಲ. ಬೆಲ್ಜಿಯಂ ಜೊತೆ 1-1 ರಲ್ಲಿ ಡ್ರಾ ಸಾಧಿಸಿದ್ದು ತಂಡದ ಅತ್ಯುತ್ತಮ ಪ್ರದರ್ಶನ ಎನಿಸಿಕೊಂಡಿದೆ.
ಭಾರತ ಪುರುಷರ ತಂಡದವರು 5 ರಿಂದ 8ರ ವರೆಗಿನ ಸ್ಥಾನವನ್ನು ನಿರ್ಣಯಿಸಲು ಶುಕ್ರವಾರ ನಡೆಯುವ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.