ADVERTISEMENT

ಮೇಲ್ಮನವಿ ಸಲ್ಲಿಸಲ್ಲ: ಚಾಂಡಿಲಾ

ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಹಗರಣದಲ್ಲಿ ಆಜೀವ ನಿಷೇಧ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2016, 19:32 IST
Last Updated 19 ಜನವರಿ 2016, 19:32 IST
ಅಜಿತ್‌ ಚಾಂಡಿಲಾ
ಅಜಿತ್‌ ಚಾಂಡಿಲಾ   

ಫರಿದಾಬಾದ್‌ (ಪಿಟಿಐ): ಇಂಡಿಯನ್‌ ಪ್ರೀಮಿಯರ್ ಲೀಗ್‌ (ಐಪಿಎಲ್‌) ಸ್ಪಾಟ್‌ ಫಿಕ್ಸಿಂಗ್‌ ಹಗರಣದಲ್ಲಿ  ಭಾಗಿಯಾದ ಕಾರಣ ಆಜೀವ ನಿಷೇಧಕ್ಕೊಳಗಾಗಿರುವ ಕಳಂಕಿತ ಕ್ರಿಕೆಟಿಗ ಅಜಿತ್‌ ಚಾಂಡಿಲಾ ಬಿಸಿಸಿಐ ಶಿಸ್ತು ಸಮಿತಿಯ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸದಿರಲು ತೀರ್ಮಾನಿಸಿದ್ದಾರೆ.

ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ತಮ್ಮ ಮೇಲೆ ಹೇರಿರುವ ನಿಷೇಧವನ್ನು ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ ಎಂದು ಚಾಂಡಿಲಾ ಮಂಗಳವಾರ ತಿಳಿಸಿದ್ದಾರೆ.

‘ಬಿಸಿಸಿಐ ತೀರ್ಪಿನಿಂದ ನನಗೂ ಹಾಗೂ ನನ್ನ ಕುಟುಂಬದವರಿಗೂ ತುಂಬಾ ನೋವಾಗಿದೆ. ನಾನು ನಿರ್ದೋಷಿ. ನನ್ನಿಂದ ಯಾವ ತಪ್ಪೂ ಆಗಿಲ್ಲ. ಕ್ರಿಕೆಟ್‌ ನನ್ನ ಉಸಿರು. ಈ ಕ್ರೀಡೆಯನ್ನು ಜೀವಕ್ಕಿಂತಲೂ ಹೆಚ್ಚು ಪ್ರೀತಿಸುವವನು ನಾನು. ಬಿಸಿಸಿಐ ನನ್ನ ವಿರುದ್ಧ ಈ ರೀತಿಯ ತೀರ್ಮಾನ ಕೈಗೊಳ್ಳಲಿದೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ. ತೀರ್ಪು ಮರುಪರಿಶೀಲಿಸುವಂತೆ ಬಿಸಿಸಿಐಗೆ ಮನವಿ ಮಾಡುತ್ತೇನೆ’ ಎಂದು ರಾಜಸ್ತಾನ ರಾಯಲ್ಸ್‌ ತಂಡದ ಮಾಜಿ ಆಟಗಾರ ಚಾಂಡಿಲಾ ಹೇಳಿದ್ದಾರೆ.

‘ಬಿಸಿಸಿಐ ತೀರ್ಪನ್ನು ನ್ಯಾಯಾಲಯ ದಲ್ಲಿ  ಪ್ರಶ್ನಿಸುವ ಆಲೋಚನೆ ಖಂಡಿತಾ ನನ್ನಲ್ಲಿಲ್ಲ. ಬಿಸಿಸಿಐ ಹಾಗೂ ನ್ಯಾಯಾಂಗಕ್ಕೂ ಯಾವ ವಿಷಯದಲ್ಲೂ ಸಾಮ್ಯತೆ ಇಲ್ಲ. ಬಿಸಿಸಿಐ ತನ್ನದೇ ಆದ ನೀತಿ ನಿಯಮಗಳನ್ನು ಹೊಂದಿದೆ. ಈ ನಿಯಮಗಳು ನ್ಯಾಯಾಂಗದ ನಿಯಮಗಳಿಗಿಂತಲೂ ಭಿನ್ನವಾಗಿವೆ. ಮೇಲ್ಮನವಿ ಸಲ್ಲಿಸುವ ಬದಲಿಗೆ ನನ್ನ ಮೇಲಿನ ನಿಷೇಧದ ತೀರ್ಪನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಬಿಸಿಸಿಐಗೆ ಮನವಿ ಮಾಡುತ್ತೇನೆ. ಈಗ ನನ್ನ ಮುಂದಿರುವ ಆಯ್ಕೆ ಇದೊಂದೆ’ ಎಂದಿದ್ದಾರೆ.

‘ಹಿಂದೆ ಪ್ರತಿಯೊಬ್ಬ ಆಟಗಾರನಲ್ಲೂ ಭಾರತ ತಂಡದಲ್ಲಿ ಸ್ಥಾನ ಗಳಿಸಬೇಕೆಂಬ ಮಹದಾಸೆ ಇರುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗದಿದ್ದರೂ ಪರವಾಗಿಲ್ಲ. ಐಪಿಎಲ್‌ನಲ್ಲಿ ಆಡಬೇಕು ಎಂಬ ಆಸೆ ಎಲ್ಲರಲ್ಲೂ ಮನೆಮಾಡಿದೆ. ಪೋಷಕರಲ್ಲೂ ಇದೇ ಕನಸಿರುತ್ತದೆ’ ಎಂದು ಚಾಂಡಿಲಾ ನುಡಿದಿದ್ದಾರೆ.

ಐಪಿಎಲ್‌ ಆರನೇ ಆವೃತ್ತಿಯಲ್ಲಿ ಜರುಗಿದ್ದ ಸ್ಪಾಟ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಹಗರಣದಲ್ಲಿ ಸಿಕ್ಕಿಬಿದ್ದಿದ್ದ ಚಾಂಡಿಲಾ ಐದು ವರ್ಷಗಳ ನಿಷೇಧ ಶಿಕ್ಷೆಗೂ ಒಳಗಾಗಿದ್ದರು. ಸೋಮವಾರ  ಈ ಹಗರಣದ ಸಮಗ್ರ ವಿಚಾರಣೆ ನಡೆಸಿದ್ದ ಬಿಸಿಸಿಐ ಅಧ್ಯಕ್ಷ ಶಶಾಂಕ್‌ ಮನೋಹರ್‌ ನೇತೃತ್ವದ ಶಿಸ್ತು ಸಮಿತಿ ಚಾಂಡಿಲಾ ಮೇಲೆ ಆಜೀವ ನಿಷೇಧ ವಿಧಿಸಿ ತೀರ್ಪು ಪ್ರಕಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.