ADVERTISEMENT

ರಾಯಲ್ಸ್- ರೈಡರ್ಸ್ ಪೈಪೋಟಿ

ಉಭಯ ತಂಡಗಳಿಗೆ ಸತತ ಎರಡನೇ ಗೆಲುವಿನ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2013, 19:59 IST
Last Updated 7 ಏಪ್ರಿಲ್ 2013, 19:59 IST

ಜೈಪುರ (ಪಿಟಿಐ): ಮೊದಲ ಪಂದ್ಯದಲ್ಲಿ ದೊರೆತ ಗೆಲುವಿನಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಜಸ್ತಾನ ರಾಯಲ್ಸ್ ತಂಡಗಳು ಐಪಿಎಲ್ ಟ್ವೆಂಟಿ-20 ಟೂರ್ನಿಯ ಪಂದ್ಯದಲ್ಲಿ ಸೋಮವಾರ ಪರಸ್ಪರ ಎದುರಾಗಲಿವೆ.

ಗೌತಮ್ ಗಂಭೀರ್ ನೇತೃತ್ವದ ನೈಟ್ ರೈಡರ್ಸ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಆರು ವಿಕೆಟ್‌ಗಳ ಗೆಲುವು ಪಡೆದಿತ್ತು. ರಾಹುಲ್ ದ್ರಾವಿಡ್ ನಾಯಕತ್ವದ ರಾಯಲ್ಸ್ ಶನಿವಾರ ಇದೇ ಎದುರಾಳಿಗಳನ್ನು ಐದು ರನ್‌ಗಳಿಂದ ಮಣಿಸಿತ್ತು.

ಡೆಲ್ಲಿ ಎದುರಿನ ಪಂದ್ಯದಲ್ಲಿ ದ್ರಾವಿಡ್ ಆಕರ್ಷಕ ಅರ್ಧಶತಕ ಗಳಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸೋಮವಾರ ಕೂಡಾ ತಂಡವು ಇವರಿಂದ ಮತ್ತೊಂದು ಉತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತಿದೆ.

ಆರಂಭಿಕ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಉತ್ತಮ ಆರಂಭ ಪಡೆದಿದ್ದರೂ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾಗಿದ್ದರು. ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ರಹಾನೆ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಡುವ ವಿಶ್ವಾಸದಲ್ಲಿದ್ದಾರೆ. 

ಆಲ್‌ರೌಂಡರ್ ಶೇನ್ ವಾಟ್ಸನ್ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಅವರ ಸಾನ್ನಿಧ್ಯ ತಂಡದ ಇತರ ಆಟಗಾರರ ಆತ್ಮವಿಶ್ವಾಸ ಹೆಚ್ಚಿಸುವುದು ಖಂಡಿತ. ಮೊದಲ ಪಂದ್ಯದಲ್ಲಿ ಮಿಂಚಿದ್ದ ಸ್ಟುವರ್ಟ್ ಬಿನ್ನಿ ಬಿರುಸಿನ ಆಟವಾಡಿದರೆ ರಾಯಲ್ಸ್‌ಗೆ ಸವಾಲಿನ ಮೊತ್ತ ಪೇರಿಸುವುದು ಕಷ್ಟವಾಗದು.

ದ್ರಾವಿಡ್ ಫಿಟ್‌ನೆಸ್ ಸಮಸ್ಯೆಯಿಂದ ಬಳಲುತ್ತಿರುವುದು ತಂಡದ ಆತಂಕಕ್ಕೆ ಕಾರಣವಾಗಿದೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಅವರು ಅಲ್ಪ ಹೊತ್ತು ಮಾತ್ರ ಕ್ಷೇತ್ರರಕ್ಷಣೆ ಮಾಡಿದ್ದರು. ಆದರೆ ಕೆಕೆಆರ್ ವಿರುದ್ಧ ಆಡಲು ಸಾಧ್ಯ ಎಂಬ ವಿಶ್ವಾಸವನ್ನು ಕರ್ನಾಟಕದ ಬ್ಯಾಟ್ಸ್‌ಮನ್ ಹೊಂದಿದ್ದಾರೆ.

ಸುನಿಲ್ ನಾರಾಯಣ್ ಅವರನ್ನೊಳಗೊಂಡ ರೈಡರ್ಸ್ ತಂಡದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಆದ್ದರಿಂದ ರಾಯಲ್ಸ್ ಬ್ಯಾಟ್ಸ್‌ಮನ್‌ಗಳಿಗೆ ಕಠಿಣ ಸವಾಲು ಎದುರಾಗುವುದು ಖಚಿತ.

ವೆಸ್ಟ್ ಇಂಡೀಸ್‌ನ ಸ್ಪಿನ್ನರ್ ಸುನಿಲ್ ಡೆಲ್ಲಿ ವಿರುದ್ಧ 13 ರನ್ ನೀಡಿ ನಾಲ್ಕು ವಿಕೆಟ್ ಪಡೆದಿದ್ದರು. ಬ್ರೆಟ್ ಲೀ, ಲಕ್ಷ್ಮೀಪತಿ ಬಾಲಾಜಿ ಮತ್ತು ಆಲ್‌ರೌಂಡರ್ ಜಾಕ್ ಕಾಲಿಸ್ ಅವರೂ ಕೆಕೆಆರ್ ಬೌಲಿಂಗ್ ವಿಭಾಗದ ಬಲ ಹೆಚ್ಚಿಸಲಿರುವರು.

ಕೋಲ್ಕತ್ತದ ತಂಡ ಬ್ಯಾಟಿಂಗ್‌ನಲ್ಲಿ ನಾಯಕ ಗಂಭೀರ್, ಮನೋಜ್ ತಿವಾರಿ, ಎಯೊನ್ ಮಾರ್ಗನ್ ಮತ್ತು ಯೂಸುಫ್ ಪಠಾಣ್ ಅವರನ್ನು ನೆಚ್ಚಿಕೊಂಡಿದೆ. ಟ್ವೆಂಟಿ-20 ಪಂದ್ಯಕ್ಕೆ ಯೋಗ್ಯವಾದ ಪಿಚ್‌ಅನ್ನು ನಿರ್ಮಿಸಲಾಗಿದೆ ಎಂದು ಕ್ಯುರೇಟರ್ ಹೇಳಿದ್ದಾರೆ.

ಇಂದಿನ ಪಂದ್ಯ
ರಾಜಸ್ತಾನ ರಾಯಲ್ಸ್ x ನೈಟ್ ರೈಡರ್ಸ್
ಸ್ಥಳ:  ಜೈಪುರ
ಆರಂಭ: ರಾತ್ರಿ 8 ಗಂಟೆಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.