ADVERTISEMENT

ಲಲಿತಾ ಬಾಬರ್‌ ಫೈನಲ್‌ಗೆ ಅರ್ಹತೆ

ಅಥ್ಲೆಟಿಕ್ಸ್: 3000 ಮೀ. ಸ್ಟೀಪಲ್‌ಚೇಸ್‌ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2016, 23:10 IST
Last Updated 13 ಆಗಸ್ಟ್ 2016, 23:10 IST
ವನಿತೆಯರ 3000 ಮೀಟರ್ಸ್ ಸ್ಟೀಪಲ್‌ಚೇಸ್‌ನಲ್ಲಿ ಕೆನ್ಯಾದ ಬೀಟ್ರೈಸ್ ಚೆಪ್ಕೋಚ್ (ಬಲ), ಭಾರತದ ಲಲಿತಾ ಬಾಬರ್ (ಮಧ್ಯ) ಅವರು ಸ್ಪರ್ಧಿಸಿದರು  ಎಪಿ/ಪಿಟಿಐ ಚಿತ್ರ
ವನಿತೆಯರ 3000 ಮೀಟರ್ಸ್ ಸ್ಟೀಪಲ್‌ಚೇಸ್‌ನಲ್ಲಿ ಕೆನ್ಯಾದ ಬೀಟ್ರೈಸ್ ಚೆಪ್ಕೋಚ್ (ಬಲ), ಭಾರತದ ಲಲಿತಾ ಬಾಬರ್ (ಮಧ್ಯ) ಅವರು ಸ್ಪರ್ಧಿಸಿದರು ಎಪಿ/ಪಿಟಿಐ ಚಿತ್ರ   

ರಿಯೊ ಡಿ ಜನೈರೊ (ಪಿಟಿಐ):  ಭಾರತದ ಲಲಿತಾ ಬಾಬರ್‌ ರಿಯೊ ಕೂಟದ ಅಥ್ಲೆಟಿಕ್ಸ್‌ನ ಮಹಿಳೆಯರ 3 ಸಾವಿರ ಮೀಟರ್ಸ್‌ ಸ್ಟೀಪಲ್‌ ಚೇಸ್‌ ಸ್ಪರ್ಧೆಯ ಫೈನಲ್‌ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಅರ್ಹತಾ ಹಂತದಲ್ಲಿ ಎರಡನೇ ಹೀಟ್ಸ್‌ನಲ್ಲಿ ಓಡಿದ ಲಲಿತಾ ರಾಷ್ಟ್ರೀಯ ದಾಖಲೆಯೊಂದಿಗೆ ನಾಲ್ಕನೇ ಸ್ಥಾನ ಪಡೆದರು. ಆದರೆ ಸುಧಾ ಸಿಂಗ್‌ ಫೈನಲ್‌ ಪ್ರವೇಶಿಸಲು ವಿಫಲರಾದರು.

ಇಂಚೆನ್‌ನಲ್ಲಿ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚು ಜಯಿಸಿದ್ದ ಲಲಿತಾ 9 ನಿಮಿಷ 19.76 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರಲ್ಲದೆ, ಸುಧಾ ಸಿಂಗ್‌ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆ (9:26.25) ಮುರಿದರು. ಸುಧಾ ಮೇ ತಿಂಗಳಲ್ಲಿ ಶಾಂಘೈನಲ್ಲಿ ನಡೆದಿದ್ದ ಕೂಟದಲ್ಲಿ ಈ ದಾಖಲೆ ಸ್ಥಾಪಿಸಿದ್ದರು.

ಮೂರು ಹೀಟ್ಸ್‌ಗಳಲ್ಲಿ ಮೊದಲ ಮೂರು ಸ್ಥಾನ ಪಡೆದ ಸ್ಪರ್ಧಿಗಳು ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡರು. ಲಲಿತಾ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದರೂ, ಉತ್ತಮ ಸಮಯ ಕಂಡುಕೊಂಡಿದ್ದರಿಂದ ಫೈನಲ್‌ಗೆ ಅವಕಾಶ ಗಿಟ್ಟಿಸಿಕೊಂಡರು. ಲಲಿತಾ ಮೂರನೇ ಹೀಟ್ಸ್‌ನಲ್ಲಿ ಓಡಿದ್ದರೆ, ಆ ಹೀಟ್ಸ್‌ನಲ್ಲಿ ಅಗ್ರಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಪಡೆಯುತ್ತಿದ್ದರು.

ಸುಧಾಗೆ ನಿರಾಸೆ: ಎರಡನೇ ಹೀಟ್ಸ್‌ನಲ್ಲಿ ಓಡಿದ ಸುಧಾ 9 ನಿಮಿಷ 43.29 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರಲ್ಲದೆ, 52 ಸ್ಪರ್ಧಿಗಳಲ್ಲಿ ಒಟ್ಟಾರೆಯಾಗಿ 30ನೇ ಸ್ಥಾನ ತಮ್ಮದಾಗಿಸಿಕೊಂಡರು.

3 ಸಾವಿರ ಮೀಟರ್‌ ಸ್ಟೀಪಲ್‌ ಚೇಸ್‌ ಸ್‍ಪರ್ಧೆಯ ಫೈನಲ್‌ ಆಗಸ್ಟ್‌ 15 ರಂದು ನಡೆಯಲಿದೆ. ಪಿ.ಟಿ. ಉಷಾ ಬಳಿಕ ಒಲಿಂಪಿಕ್ಸ್‌ ಟ್ರ್ಯಾಕ್‌ ಮತ್ತು ಫೀಲ್ಡ್‌ ಸ್ಪರ್ಧೆಯಲ್ಲಿ ಫೈನಲ್‌ ಪ್ರವೇಶಿಸಿದ ಭಾರತದ ಮೊದಲ ಮಹಿಳೆ ಎಂಬ ಗೌರವ ಲಲಿತಾ ತಮ್ಮದಾಗಿಸಿಕೊಂಡರು.

‘ಪಯ್ಯೋಳಿ ಎಕ್ಸ್‌ಪ್ರೆಸ್‌’ ಖ್ಯಾತಿಯ ಉಷಾ 1984 ರ ಲಾಸ್‌ ಏಂಜಲೀಸ್‌ ಕೂಟದ 400 ಮೀ. ಓಟದ ಸ್ಪರ್ಧೆಯ ಫೈನಲ್‌ ಪ್ರವೇಶಿಸಿದ್ದರು. ‘ಸ್ವಾತಂತ್ರ್ಯೋತ್ಸವ ದಿನದಂದೇ ಫೈನಲ್‌ ನಡೆಯಲಿದ್ದು, ನನ್ನ ಶ್ರೇಷ್ಠ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ’ ಎಂದು ಬಬಿತಾ ಪ್ರತಿಕ್ರಿಯಿಸಿದ್ದಾರೆ.

ಸುಧಾ ಫೈನಲ್‌ ಪ್ರವೇಶಿಸಲು ವಿಫಲರಾದದ್ದು ನಿರಾಸೆ ಉಂಟುಮಾಡಿದೆ ಎಂದು ಬಬಿತಾ ಹೇಳಿದ್ದಾರೆ. ‘ನಾವಿಬ್ಬರೂ ಒಬ್ಬರೇ ಕೋಚ್‌ ಬಳಿ ತರಬೇತಿ ಪಡೆಯುತ್ತೇವೆ. ಸುಧಾ ಕೂಡಾ ಫೈನಲ್‌ ಪ್ರವೇಶಿಸಿದ್ದರೆ ಸಂತಸ ಇಮ್ಮಡಿಯಾಗುತ್ತಿತ್ತು’ ಎಂದಿದ್ದಾರೆ.

ದ್ಯುತಿಗೆ ನಿರಾಸೆ: ದ್ಯುತಿ ಚಾಂದ್‌ ಅವರು 100 ಮೀ. ಓಟದ ಸ್ಪರ್ಧೆಯಲ್ಲಿ ನಿರಾಸೆ ಎದುರಿಸಿದರು. ಐದನೇ ಹೀಟ್ಸ್‌ನಲ್ಲಿ ಓಡಿದ ಅವರು ಏಳನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು.

36 ವರ್ಷಗಳ  ಬಳಿಕ ಒಲಿಂಪಿಕ್ಸ್‌ನ 100 ಮೀ. ಓಟದಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದ ಭಾರತದ ಮಹಿಳೆ ಎಂಬ ಗೌರವ ತಮ್ಮದಾಗಿಸಿಕೊಂಡಿರುವ ದ್ಯುತಿ 11. 69 ಸೆಕೆಂಡುಗಳಲ್ಲಿ ಗುರಿ ತಲುಪಿದರು. ದ್ಯುತಿ ಅವರ ವೈಯಕ್ತಿಕ ಶ್ರೇಷ್ಠ ಸಮಯ 11.24 ಸೆಕೆಂಡು ಆಗಿದೆ.

ADVERTISEMENT


‘ಇಂತಹ ದೊಡ್ಡ ಕೂಟದಲ್ಲಿ ನಾನು ಸ್ಪರ್ಧಿಸಿಯೇ ಇಲ್ಲ. ಒತ್ತಡಕ್ಕೆ ಒಳಗಾದ್ದರಿಂದ ಶ್ರೇಷ್ಠ ಪ್ರದರ್ಶನ ನೀಡಲು ವಿಫಲಳಾದೆ’ ಎಂದು ದ್ಯುತಿ ಹೇಳಿದ್ದಾರೆ.

ಅನಸ್‌ಗೆ 31ನೇ ಸ್ಥಾನ: ಪುರುಷರ 400 ಮೀ. ಓಟದಲ್ಲಿ ಮೊಹಮ್ಮದ್‌ ಅನಸ್‌ ಹೀಟ್ಸ್‌ನಲ್ಲೇ ಹೊರಬಿದ್ದರು. ಏಳನೇ ಹೀಟ್ಸ್‌ನಲ್ಲಿ ಓಡಿದ ಅವರು 45.95 ಸೆಕೆಂಡುಗಳಲ್ಲಿ ಗುರಿ ತಲುಪಿ ಆರನೇ ಸ್ಥಾನ ಪಡೆದರು. ಕಣದಲ್ಲಿದ್ದ 50 ಸ್ಪರ್ಧಿಗಳಲ್ಲಿ ಒಟ್ಟಾರೆಯಾಗಿ 31ನೇ ಸ್ಥಾನ ಪಡೆದರು.

ಮಹಿಳೆಯರ 400 ಮೀ. ಓಟದಲ್ಲಿ ನಿರ್ಮಲಾ ಶೊರಾನ್‌ 53.03 ಸೆಕೆಂಡುಗಳಲ್ಲಿ ಗುರಿ ತಲುಪಿ ಒಟ್ಟಾರೆಯಾಗಿ 35ನೇ ಸ್ಥಾನ ಪಡೆದರು.ಲಾಂಗ್‌ ಜಂಪ್‌ ಸ್ಪರ್ಧಿ ಅಂಕಿತ್‌ ಶರ್ಮಾ 30 ಸ್ಪರ್ಧಿಗಳಲ್ಲಿ 12ನೇ ಸ್ಥಾನದಲ್ಲಿ ಕಾಣಿಸಿಕೊಂಡರು. ಅವರು 7.67 ಮೀ. ದೂರ ಜಿಗಿದರು. ಜೂನ್‌ನಲ್ಲಿ ಕಜಕಸ್ತಾನದಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ಅವರು 8.19 ಮೀ. ದೂರ ಜಿಗಿದು ರಿಯೊಗೆ ಅರ್ಹತೆ ಪಡೆದುಕೊಂಡಿದ್ದರು. ಆದರೆ ಆ ಸಾಧನೆ ಪುನರಾವರ್ತಿಸುವಲ್ಲಿ ಎಡವಿದರು.

ಮನೀಷ್‌ಗೆ 13ನೇ ಸ್ಥಾನ: ಪುರುಷರ 20 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಮನೀಷ್‌ ಸಿಂಗ್‌ ರಾವತ್‌ 13ನೇ ಸ್ಥಾನ ಪಡೆದರು. ಆದರೆ ಗುರ್ಮೀತ್‌ ಸಿಂಗ್‌ ಮತ್ತು ಕೃಷ್ಣನ್‌ ಗಣಪತಿ ಆರಂಭದಲ್ಲೇ ಅನರ್ಹರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.