ADVERTISEMENT

ವಿಶ್ವಕಪ್‌:ಎಂಟರ ಘಟ್ಟಕ್ಕೆ ಸ್ಪೇನ್‌

ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ ಫುಟ್‌ಬಾಲ್‌

ಪಿಟಿಐ
Published 17 ಅಕ್ಟೋಬರ್ 2017, 19:30 IST
Last Updated 17 ಅಕ್ಟೋಬರ್ 2017, 19:30 IST
ವಿಶ್ವಕಪ್‌:ಎಂಟರ ಘಟ್ಟಕ್ಕೆ ಸ್ಪೇನ್‌
ವಿಶ್ವಕಪ್‌:ಎಂಟರ ಘಟ್ಟಕ್ಕೆ ಸ್ಪೇನ್‌   

ಗುವಾಹಟಿ (ಪಿಟಿಐ): ಯುರೋಪಿಯನ್‌ ಚಾಂಪಿಯನ್‌ ಸ್ಪೇನ್‌ ತಂಡದವರು ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ ಫುಟ್‌ಬಾಲ್‌ ನಲ್ಲಿ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ.

ಇಂದಿರಾಗಾಂಧಿ ಅಥ್ಲೆಟಿಕ್ಸ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಸ್ಪೇನ್‌ 2–1 ಗೋಲುಗಳಿಂದ ಫ್ರಾನ್ಸ್‌ ತಂಡವನ್ನು ಸೋಲಿಸಿತು. ಶುರುವಿನಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾದ ಫ್ರಾನ್ಸ್‌ ತಂಡ 34ನೇ ನಿಮಿಷದಲ್ಲಿ ಮುನ್ನಡೆ ಗಳಿಸಿ ಗೆಲುವಿನ ಕನಸು ಕಂಡಿತ್ತು. ಸಹ ಆಟಗಾರ ತಮ್ಮತ್ತ ಒದ್ದು ಕಳುಹಿಸಿದ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಲೆನ್ನಿ ಪಿಂಟೊರ್‌ ಅದನ್ನು ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಗುರಿ ಮುಟ್ಟಿಸಿದರು.

ಈ ಖುಷಿ ಎದುರಾಳಿ ಪಾಳಯದಲ್ಲಿ ಹೆಚ್ಚು ಹೊತ್ತು ಉಳಿಯಲು ಸ್ಪೇನ್‌ ಅವಕಾಶ ನೀಡಲಿಲ್ಲ. ಈ ತಂಡದ ವುವಾನ್‌ ಮಿರಾಂಡ 44ನೇ ನಿಮಿಷದಲ್ಲಿ ಕಾಲ್ಚಳಕ ತೋರಿದರು. ಹೀಗಾಗಿ ಉಭಯ ತಂಡಗಳೂ 1–1ರ ಸಮಬಲದೊಂದಿಗೆ ವಿರಾಮಕ್ಕೆ ಹೋದವು. ದ್ವಿತೀಯಾರ್ಧದಲ್ಲಿ ಎರಡೂ ತಂಡಗಳು ಮುನ್ನಡೆ ಗೋಲು ದಾಖಲಿಸಲು ಜಿದ್ದಿಗೆ ಬಿದ್ದ ಹಾಗೆ ಸೆಣಸಿದವು.

ADVERTISEMENT

89ನೇ ನಿಮಿಷದವರೆಗೂ ಸಮಬಲದ ಪೈಪೋಟಿ ಕಂಡುಬಂದಿದ್ದರಿಂದ ಪಂದ್ಯ ಡ್ರಾ ಆಗಬಹುದೆಂದು ಅಂದಾಜಿಸಲಾಗಿತ್ತು. 90ನೇ ನಿಮಿಷದಲ್ಲಿ ಅಬೆಲ್‌ ರುಯಿಜ್‌ ಮನಮೋಹಕ ರೀತಿಯಲ್ಲಿ ಗೋಲು ದಾಖಲಿಸಿ ಪಂದ್ಯದ ಚಿತ್ರಣವನ್ನೇ ಬದಲಿಸಿಬಿಟ್ಟರು. ಅವರು ಬಲವಾಗಿ ಒದ್ದ ಚೆಂಡು ಎದುರಾಳಿ ಗೋಲುಪೆಟ್ಟಿಗೆಯ ಬಲೆಗೆ ಮುತ್ತಿಕ್ಕುತ್ತಿದ್ದಂತೆ ಸ್ಪೇನ್‌ ಆಟಗಾರರು ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.ಎಂಟರ ಘಟ್ಟದ ಹೋರಾಟದಲ್ಲಿ ಸ್ಪೇನ್‌ ತಂಡದವರು ಇರಾನ್‌ ವಿರುದ್ಧ ಆಡಲಿದ್ದಾರೆ.

ಗೋವಾದ ಪಂಡಿತ್‌ ಜವಾಹರಲಾಲ್‌ ನೆಹರು ಕ್ರೀಡಾಂಗಣದಲ್ಲಿ ನಡೆದ ಇನ್ನೊಂದು ಪ್ರೀ ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ಇರಾನ್‌ 2–1 ಗೋಲುಗಳಿಂದ ಮೆಕ್ಸಿಕೊ ತಂಡವನ್ನು ಸೋಲಿಸಿತು.ಆರಂಭದಿಂದಲೇ ವೇಗದ ಆಟಕ್ಕೆ ಮುಂದಾದ ಇರಾನ್‌ ತಂಡಕ್ಕೆ 7ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಲಭ್ಯವಾಯಿತು. ಈ ಅವಕಾಶದಲ್ಲಿ ಷರೀಫಿ ಚೆಂಡನ್ನು ಗುರಿ ತಲುಪಿಸಿದರು. 11ನೇ ನಿಮಿಷದಲ್ಲಿ ಸಯ್ಯದ್‌ ಮುನ್ನಡೆ ಹೆಚ್ಚಿಸಿದರು. ಮೆಕ್ಸಿಕೊ ತಂಡದ ಡೆ ಲಾ ರೋಸಾ 37ನೇ ನಿಮಿಷದಲ್ಲಿ ಗೋಲು ಬಾರಿಸಿ ಹಿನ್ನಡೆ ತಗ್ಗಿಸಲಷ್ಟೇ ಶಕ್ತರಾದರು.

ರಾತ್ರಿ ನಡೆದ ಪಂದ್ಯಗಳಲ್ಲಿ ಇಂಗ್ಲೆಂಡ್‌ ತಂಡ 5–3ರಿಂದ (ಪೆನಾಲ್ಟಿ) ಜಪಾನ್ ವಿರುದ್ಧ ಮತ್ತು ಮಾಲಿ 5–1ರಿಂದ ಇರಾಕ್ ವಿರುದ್ಧ ಗೆಲುವು ಸಾಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.