ADVERTISEMENT

ವಿಶ್ವಕಪ್ ಟೂರ್ನಿಗೆ ಕಾಲಿಟ್ಟ 16ರ ಪೋರ ನಿತೀಶ್!

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 19:30 IST
Last Updated 28 ಫೆಬ್ರುವರಿ 2011, 19:30 IST

ನಾಗಪುರ (ಪಿಟಿಐ): ಕೆನಡಾದ 16 ವರ್ಷದ ನಿತೀಶ್ ಕುಮಾರ್ ಸೋಮವಾರ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ  ಪದಾರ್ಪಣೆ ಮಾಡಿದ ಅತಿ ಚಿಕ್ಕ ವಯಸ್ಸಿನ ಕ್ರಿಕೆಟ್ ಆಟಗಾರನ ಶ್ರೇಯಕ್ಕೆ ಪಾತ್ರರಾದರು. ಇಲ್ಲಿಯ ಜಾಮ್ತಾದಲ್ಲಿ ಲೀಗ್ ಹಂತದ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು ಎದುರಿಸಿದ ಕೆನಡಾ ತಂಡದಲ್ಲಿ ಆಡಿದ ನಿತೀಶ್ ಕುಮಾರ್ ನಿಕ್‌ನೇಮ್ ‘ತೆಂಡೂಲ್ಕರ್’ ಅಂತೆ.

1994ರ ಮೇ ತಿಂಗಳಲ್ಲಿ ಜನಿಸಿರುವ ನಿತೀಶ್ ಕೆನಡಾ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್. ಅವರೊಂದಿಗೆ ಇನಿಂಗ್ಸ್ ಆರಂಭಿಸುವವರು ನಲ್ವತ್ತು ವರ್ಷ ವಯಸ್ಸಿನ ಜಾನ್ ಡೇವಿಸನ್ ಎನ್ನುವುದು ಇನ್ನೊಂದು ವಿಶೇಷ. ಕೆನಡಾ ತಂಡದಲ್ಲಿ ಈಗ ಅತ್ಯಂತ ಹಿರಿಯ ಮತ್ತು ಕಿರಿಯ ಕ್ರಿಕೆಟಿಗರು ಇದ್ದಂತಾಗಿದೆ. ಜಾನ್ ಡೆವಿಸನ್ ಒಟ್ಟು ಮೂರು ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ್ದಾರೆ.

‘ಹತ್ತು ವರ್ಷಗಳ ಹಿಂದೆ ನಿತೀಶ್ ಪ್ರತಿಭೆಯನ್ನು ನೋಡಿದೆ. ಆಗ ಆತ ಕೇವಲ ಅರು ವರ್ಷದವನಾಗಿದ್ದರೂ ಬ್ಯಾಟಿಂಗ್ ಪ್ರತಿಭೆಯಿತ್ತು. ಆತ ಆಡುತ್ತಿದ್ದ ಶಾಟ್‌ಗಳ ಮೇಲೆ ನಿಖರ ಹಿಡಿತವಿತ್ತು. ಆ ವಯಸ್ಸಿನಲ್ಲಿಯೇ ಸುಂದರವಾದ ಪುಲ್ ಶಾಟ್‌ಗಳನ್ನು ಆಡುತ್ತಿದ್ದ. ಅವನಲ್ಲಿರುವ ವಿಶೇಷ ಪ್ರತಿಭೆಯಿಂದಾಗಿಯೇ ಆತ ತಂಡಕ್ಕೆ ಸೇರ್ಪಡೆಯಾಗಿದ್ದಾನೆ’ ಎಂದು ಡೇವಿಸನ್ ಹೇಳುತ್ತಾರೆ. ಈ ಮೊದಲು 18 ವರ್ಷದ ಐರ್ಲೆಂಡಿನ ಜಾರ್ಜ್ ಡಾಕ್ರೆಲ್ ವಿಶ್ವಕಪ್ ಟೂರ್ನಿಗೆ ಕಾಲಿಟ್ಟ ಅತಿ ಕಿರಿಯ ಕ್ರಿಕೆಟಿಗರಾಗಿದ್ದರು. ಈಗ ಆ ಶ್ರೇಯವನ್ನು ನಿತೀಶ್ ಪಡೆದುಕೊಂಡಿದ್ದಾರೆ. ನಿತೀಶ್ ಇದುವರೆಗೆ ಐದು ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅಫಘಾನಿಸ್ತಾನ ವಿರುದ್ಧ ಅವರು ಪದಾರ್ಪಣೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.