ADVERTISEMENT

ಸೈನಾ ನೆಹ್ವಾಲ್‌ಗೆ ಮುನ್ನಡೆ, ಸಿಂಧುಗೆ ಸೋಲು

ಮಲೇಷ್ಯಾ ಬ್ಯಾಡ್ಮಿಂಟನ್ ಓಪನ್: ಎರಡನೇ ಸುತ್ತಿಗೆ ಅಶ್ವಿನಿ ಜೋಡಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2013, 19:59 IST
Last Updated 16 ಜನವರಿ 2013, 19:59 IST
ಸೈನಾ ನೆಹ್ವಾಲ್
ಸೈನಾ ನೆಹ್ವಾಲ್   

ಕ್ವಾಲಾಲಂಪುರ (ಪಿಟಿಐ): ಭಾರತದ ಸೈನಾ ನೆಹ್ವಾಲ್ ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಸಿಂಗಲ್ಸ್ ಪೈಪೋಟಿಯಲ್ಲಿ ಅಗ್ರಶ್ರೇಯಾಂಕದ ಸೈನಾ ಸಿಂಗಪುರದ ಶ್ರೇಯಾಂಕ ರಹಿತ ಗೂ ಜೂನ್ ಅವರನ್ನು ಕೇವಲ 29 ನಿಮಿಷಗಳಲ್ಲಿ 21-12, 21-15ರಿಂದ ಸುಲಭವಾಗಿ ಸೋಲಿಸಿದರು.ಆದರೆ ಭಾರತದ ಪಿ.ವಿ.ಸಿಂಧು ಅವರಿಗೆ ಅದೃಷ್ಟ ಒಲಿಯಲಿಲ್ಲ. ಇವರು ಮೊದಲ ಸುತ್ತಿನಲ್ಲಿ ತಮಗಿಂತ ಹೆಚ್ಚಿನ ಕ್ರಮಾಂಕದ ಆಟಗಾರ್ತಿ ಡೆನ್ಮಾರ್ಕ್‌ನ ಟೈನ್ ಬೌನ್ ಎದುರು ಸೋಲನುಭವಿಸಿದರು.

ಮೂರನೇ ಶ್ರೇಯಾಂಕದ ಟೈನ್‌ಗೆ ಗೆಲುವು ಸುಲಭದಲ್ಲಿ ಬರಲಿಲ್ಲ. 49 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ 21-16, 18-21, 21-17ರಿಂದ ಟೈನ್ ಗೆದ್ದರು. ಎರಡನೇ ಸೆಟ್‌ನ ಆರಂಭದಿಂದಲೂ ಇಬ್ಬರ ನಡುವೆ ತೀವ್ರ ಸೆಣಸಾಟ ಕಂಡು ಬಂದಿದ್ದು, 18ನೇ ಪಾಯಿಂಟ್‌ವರೆಗೂ ಟೈನ್ ಮುನ್ನಡೆಯಲ್ಲಿದ್ದರು. ಆ ನಂತರದ ಕ್ಷಣಗಳಲ್ಲಿ ಅತ್ಯುತ್ತಮ ಚೇತರಿಕೆಯ ಆಟವಾಡಿದ ಸಿಂಧು ಗೆಲುವು ಗಳಿಸಿದರು. ಆದರೆ ಮೂರನೇ ಸೆಟ್‌ನಲ್ಲಿ ಅಂತಿಮ ನಗು ವಿಶ್ವದ ಆರನೇ ಕ್ರಮಾಂಕದ ಟೈನ್ ಅವರದಾಯಿತು.

ಬೆಂಗಳೂರಿನ ಅಶ್ವಿನಿ ಪೊನ್ನಪ್ಪ ಮತ್ತು ಪ್ರದ್ನ್ಯಾ ಗಡ್ರೆ ಜೋಡಿ ಮಹಿಳಾ ಡಬಲ್ಸ್‌ನ ಮೊದಲ ಸುತ್ತಿನಲ್ಲಿ 20-22, 21-16, 21-15ರಿಂದ ಸಿಂಗಪುರದ ಯೂ ಯಾನ್ ವಾನೆಸಾ ಮತ್ತು ಡೆಲಿಸ್ ಯೂಲಿಯಾನ ಅವರನ್ನು ಮಣಿಸಿದರು.
ಇನ್ನೊಂದು ಡಬಲ್ಸ್ ಪಂದ್ಯದಲ್ಲಿ ಭಾರತದ ಅಪರ್ಣಾ ಬಾಲನ್ ಮತ್ತು ಸಿಕಿ ರೆಡ್ಡಿ ಎರಡನೇ ಸೆಟ್‌ನಲ್ಲಿ `ನಿವೃತ್ತಿ' ಹೇಳಿದ್ದರಿಂದ ಇಂಗ್ಲೆಂಡ್‌ನ ಹೀತರ್ ಓಲ್ವರ್ ಮತ್ತು ಕೇಟ್ ರಾಬರ್ಟ್ ಷಾ ಜೋಡಿ ಮುನ್ನಡೆಯಿತು. ಭಾರತದ ಜೋಡಿ ಮೊದಲ ಸೆಟ್‌ನಲ್ಲಿ 21-11ರಿಂದ ಮುಂದಿತ್ತು. ಆದರೆ ಎರಡನೇ ಸೆಟ್‌ನಲ್ಲಿ 3-4ರಿಂದ ಹಿಂದಿದ್ದಾಗ ಏಕಾಏಕಿ ಆಡುವುದರನ್ನು ನಿಲ್ಲಿಸಿದರು.

ಸೈನಾ ಅವರು ಮುಂದಿನ ಸುತ್ತಿನಲ್ಲಿ ಹಾಂಕಾಂಗ್‌ನ ಪುಯ್ ಇನ್ ಇಪ್ ವಿರುದ್ಧ ಆಡಲಿದ್ದಾರೆ.ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಭಾರತದ ಆಟಗಾರರಾದ ಗುರುಸಾಯಿದತ್ 21-11, 21-14ರಿಂದ ಸೌರಭ್ ವರ್ಮಾ ಅವರನ್ನು ಸೋಲಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದರು. ಪರುಪ್ಪಳ್ಳಿ ಕಶ್ಯಪ್ ಮೊದಲ ಸುತ್ತಿನಲ್ಲಿ 21-14, 16-21, 21-5ರಿಂದ ಜಪಾನ್‌ನ ಟಕುಮಾ ಇದಾ ಅವರನ್ನು ಮಣಿಸಿದರು.

ಪುರುಷರ ಡಬಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯ ಕಂಡಿತು. ಪ್ರಣವ್ ಜೆರಿ ಚೋಪ್ರಾ ಮತ್ತು ಅಕ್ಷಯ್ ದೇವಾಲ್ಕರ್ ಜೋಡಿಯನ್ನು ಇಂಡೋನೇಷ್ಯಾದ ಅಂಗಾ ಪ್ರತಾಮಾ ಮತ್ತು ರ‌್ಯಾನ್ ಅಗುಂಗ್ ಸಪೂತ್ರ 21-12, 21-16ರಿಂದ ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.