ADVERTISEMENT

ಸೈನಾ, ಪ್ರಣೀತ್ ಸವಾಲು ಅಂತ್ಯ

ಮಕಾವ್‌ ಬ್ಯಾಡ್ಮಿಂಟನ್‌ ; ಕ್ವಾರ್ಟರ್‌ನಲ್ಲಿ ಮುಗ್ಗರಿಸಿದ ಭಾರತದ ಆಟಗಾರ್ತಿ

ಪಿಟಿಐ
Published 2 ಡಿಸೆಂಬರ್ 2016, 19:30 IST
Last Updated 2 ಡಿಸೆಂಬರ್ 2016, 19:30 IST
ಭಾರತದ ಸೈನಾ ನೆಹ್ವಾಲ್ ಆಟದ ವೈಖರಿ.
ಭಾರತದ ಸೈನಾ ನೆಹ್ವಾಲ್ ಆಟದ ವೈಖರಿ.   

ಮಕಾವ್‌: ಮಕಾವ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿ ಹಿಡಿಯುವ ಕನಸು ಹೊತ್ತಿದ್ದ ಭಾರತದ ಸೈನಾ ನೆಹ್ವಾಲ್‌  ಶುಕ್ರವಾರ ಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಮಹಿಳೆಯರ ಸಿಂಗಲ್ಸ್‌ ವಿಭಾಗದ  ಹೋರಾಟದಲ್ಲಿ ಸೈನಾ 17–21, 17–21ರ ನೇರ ಗೇಮ್‌ಗಳಿಂದ ತ ಗಿಂತಲೂ ಕ್ರಮಾಂಕ ಪಟ್ಟಿಯಲ್ಲಿ ಕೆಳಗಿನ ಸ್ಥಾನ ಹೊಂದಿರುವ ಜಾಂಗ್‌ ಯಿಮಾನ್‌ ವಿರುದ್ಧ ಪರಾಭವಗೊಂಡರು.

ರಿಯೊ ಒಲಿಂಪಿಕ್ಸ್‌ ವೇಳೆ ಗಾಯ ಗೊಂಡಿದ್ದ ಹೈದರಾಬಾದ್‌ನ ಆಟಗಾರ್ತಿ ಬಳಿಕ ಮಂಡಿಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಮೂರು ತಿಂಗಳ ಕಾಲ ಅಂಗಳದಿಂದ ದೂರ ಉಳಿದಿದ್ದರು.

ಪೂರ್ಣವಾಗಿ ಗುಣಮುಖರಾದ ಬಳಿಕ ಚೀನಾ ಓಪನ್‌ನಲ್ಲಿ ಆಡಿದ್ದ ಸೈನಾ ಮೊದಲ ಸುತ್ತಿನಲ್ಲಿ ಮುಗ್ಗರಿಸಿದ್ದರು. ಬಳಿಕ ನಡೆದ ಇಂಡೊನೇಷ್ಯಾ ಓಪನ್‌ ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದ್ದ ಭಾರತದ ಆಟಗಾರ್ತಿ ಮಕಾವ್‌ ಓಪನ್‌ನಲ್ಲೂ ನಿರಾಸೆ ಮೂಡಿಸಿದರು.

ಆರಂಭಿಕ ಪಂದ್ಯಗಳಲ್ಲಿ ಬಲಿಷ್ಠ ಆಟಗಾರ್ತಿಯರನ್ನು ಹಣಿದು ವಿಶ್ವಾಸದ ಉತ್ತುಂಗದಲ್ಲಿ ತೇಲುತ್ತಿದ್ದ ಸೈನಾ ಮೊದಲ ಗೇಮ್‌ನಲ್ಲಿ ಗುಣಮಟ್ಟದ ಆಟ ಆಡಲು ವಿಫಲರಾದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 226ನೇ ಸ್ಥಾನ ಹೊಂದಿದ್ದ ಜಾಂಗ್‌ ಸುಂದರ ಸರ್ವ್‌ ಹಾಗೂ ಆಕರ್ಷಕ ರಿಟರ್ನ್‌ಗಳ ಮೂಲಕ ಚುರುಕಾಗಿ ಪಾಯಿಂಟ್ಸ್‌ ಹೆಕ್ಕಿ 4–2ರ ಮುನ್ನಡೆ ಗಳಿಸಿದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ಸೈನಾ ನಂತರ ಆಕರ್ಷಕ ಡ್ರಾಪ್‌ಗಳ ಮೂಲಕ ಪಾಯಿಂಟ್ಸ್‌ ಸಂಗ್ರ ಹಿಸಿ ಹಿನ್ನಡೆಯನ್ನು 8–9ಕ್ಕೆ ತಗ್ಗಿಸಿ ಕೊಂಡರು.

ಈ ಹಂತದಲ್ಲಿ ಆಕ್ರಮಣಕಾರಿ ಆಟ ಆಡಿದ 19 ವರ್ಷದ ಚೀನಾದ ಆಟ ಗಾರ್ತಿ ಸತತ ಐದು ಪಾಯಿಂಟ್ಸ್‌ ಗಳಿಸಿ ಮುನ್ನಡೆಯನ್ನು 14–8ಕ್ಕೆ ಹೆಚ್ಚಿಸಿಕೊಂಡರು.

ಇದರಿಂದ ಕೊಂಚ ಒತ್ತಡಕ್ಕೆ ಒಳಗಾದಂತೆ ಕಂಡರೂ ಕೂಡಾ  ಸೈನಾ ಛಲದ ಹೋರಾಟ ಮುಂದುವರಿಸಿದರು. ನೆಟ್‌ನ ಸಮೀಪದಲ್ಲಿ ಷಟಲ್‌ ಡ್ರಾಪ್‌ ಮಾಡುವ ಮೂಲಕ ಎದುರಾಳಿ ಯನ್ನು ತಬ್ಬಿಬ್ಬುಗೊಳಿಸಿದ ಅವರು 17–17ರ ಸಮಬಲಕ್ಕೆ ಕಾರಣರಾದರು.

ಆ ನಂತರ ಚೀನಾದ ಆಟಗಾರ್ತಿ ಅಂಗಳದಲ್ಲಿ  ಮಿಂಚು ಹರಿಸಿದರು. ಜಾಂಗ್‌ ರ್‍ಯಾಕೆಟ್‌ನಿಂದ ಹೊರಹೊಮ್ಮುತ್ತಿದ್ದ ಮನಮೋಹಕ ಕ್ರಾಸ್‌ಕೋರ್ಟ್‌ ಹೊಡೆತಗಳನ್ನು ಹಿಂತಿರುಗಿಸಲು ಪ್ರಯಾಸ ಪಟ್ಟ ಸೈನಾ ಸೋಲಿಗೆ ಶರಣಾದರು.

ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಸಾಧನೆ ಮಾಡಿದ್ದ ಸೈನಾ ಎರಡನೇ ಗೇಮ್‌ನಲ್ಲಿ ತಿರುಗೇಟು ನೀಡಬಹುದು ಎಂದು ಅಂದಾಜಿಸಲಾಗಿತ್ತು. ಈ ನಿರೀಕ್ಷೆಯನ್ನು ಭಾರತದ ಆಟಗಾರ್ತಿ ಹುಸಿ ಮಾಡಲಿಲ್ಲ.

ಸುಂದರ ಸರ್ವ್‌ಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ ಅವರು ಸತತ ಆರು ಪಾಯಿಂಟ್ಸ್‌ ಬೇಟೆಯಾಡಿ ಮುನ್ನಡೆ ಕಂಡುಕೊಂಡರು. ಇದರಿಂದ ಚೀನಾದ ಆಟಗಾರ್ತಿ ಧೃತಿಗೆಡಲಿಲ್ಲ. ಗುಣಮಟ್ಟದ ಆಟ ಆಡಿದ ಅವರು 7–7ರಲ್ಲಿ ಸಮಬಲ ಮಾಡಿಕೊಂಡು ಸೈನಾ ಗೆಲುವಿನ ಹಾದಿಯನ್ನು ಕಠಿಣಗೊಳಿಸಿದರು.

ಆ ನಂತರವೂ ಅವರ ಅಬ್ಬರ ಮುಂದುವರಿಯಿತು. ನಿರಂತರವಾಗಿ ಪಾಯಿಂಟ್ಸ್‌ ಸಂಗ್ರಹಿಸುತ್ತ ಸಾಗಿದ ಜಾಂಗ್‌ 19–12ರ ಮುನ್ನಡೆ ಗಳಿಸಿ ಪಂದ್ಯದ ಮೇಲಿನ ಹಿಡಿತ ಬಿಗಿ ಮಾಡಿಕೊಂಡರು.

ಈ ಹಂತದಲ್ಲಿ ಸೈನಾ ಸತತ ನಾಲ್ಕು ಪಾಯಿಂಟ್ಸ್‌ ಸಂಗ್ರಹಿಸಿ ತೀವ್ರ ಪೈಪೋಟಿ ಒಡ್ಡಿದರು. ಇದರ ನಡುವೆಯೂ ಭಾರತದ ಆಟಗಾರ್ತಿಯ ಸವಾಲು ಮೀರಿ ನಿಂತ ಜಾಂಗ್‌ 35ನೇ ನಿಮಿಷದಲ್ಲಿ ಗೆಲುವಿನ ತೋರಣ ಕಟ್ಟಿದರು.

ಪ್ರಣೀತ್‌ಗೆ ನಿರಾಸೆ: ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಭರವಸೆ ಎನಿಸಿದ್ದ ಬಿ. ಸಾಯಿ ಪ್ರಣೀತ್‌ ಕೂಡಾ ಎಂಟರ ಘಟ್ಟದ ಹೋರಾಟದಲ್ಲಿ ಎಡವಿದರು.
ಕ್ವಾರ್ಟರ್‌ಫೈನಲ್‌ನಲ್ಲಿ ಪ್ರಣೀತ್‌ 19–21, 9–21ರಿಂದ ಚೀನಾದ ಜುನ್‌ ಪೆಂಗ್‌ ಜಾವೊಗೆ ಶರಣಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.