ADVERTISEMENT

ಸೌರಭ್‌ ವರ್ಮಾಗೆ ಪ್ರಶಸ್ತಿ

ಪಿಟಿಐ
Published 16 ಅಕ್ಟೋಬರ್ 2016, 19:30 IST
Last Updated 16 ಅಕ್ಟೋಬರ್ 2016, 19:30 IST
ಸೌರಭ್‌ ವರ್ಮಾ
ಸೌರಭ್‌ ವರ್ಮಾ   

ತೈಪೆ ಸಿಟಿ: ಅಪೂರ್ವ ಆಟ ಆಡಿದ ಭಾರತದ ಸೌರಭ್‌ ವರ್ಮಾ ಅವರು ಇಲ್ಲಿ ನಡೆದ ಚೀನಾ ತೈಪೆ ಮಾಸ್ಟರ್ಸ್‌ ಗ್ರ್ಯಾನ್‌ ಪ್ರಿ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ ಹಣಾಹಣಿ ಯಲ್ಲಿ  ಸೌರಭ್‌ 12–10, 12–10, 3–3 ರಲ್ಲಿ ಮಲೇಷ್ಯಾದ ಡರೆನ್‌ ಲಿಯೆವ್‌ ಅವರನ್ನು ಪರಾಭವಗೊಳಿಸಿದರು.

ಮೂರನೇ ಗೇಮ್‌ ವೇಳೆ ಡರೆನ್‌ ಗಾಯಗೊಂಡು ಅಂಗಳದಿಂದ ಹೊರ ನಡೆದರು. ಹಿಂದಿನ ಪಂದ್ಯದಲ್ಲಿ ಅಮೋಘ ಆಟ ಆಡಿ ವಿಶ್ವಾಸದ ಗಣಿ ಎನಿಸಿದ್ದ ಸೌರಭ್‌ ಅಂತಿಮ ಘಟ್ಟದಲ್ಲೂ ಶ್ರೇಷ್ಠ ಆಟ ಆಡಿದರು.

ಮೊದಲ ಗೇಮ್‌ನ ಶುರು ವಿನಿಂದಲೇ ಆಕ್ರಮಣಕಾರಿ ಆಟ ಆಡಿದ ಸೌರಭ್‌ ಚುರುಕಾಗಿ ಪಾಯಿಂಟ್ಸ್್ ಕಲೆಹಾಕಿ  5–3ರ ಮುನ್ನಡೆ ಗಳಿಸಿದ್ದರು.   ಆ ನಂತರ  ಅಬ್ಬರಿಸಿದ ಡರೆನ್‌ ಸತತ ಐದು ಪಾಯಿಂಟ್ಸ್‌ ಹೆಕ್ಕಿ 8–5ರ ಮುನ್ನಡೆ ತಮ್ಮದಾಗಿಸಿಕೊಂಡರು. ಇದರಿಂದ ವಿಚಲಿತರಾಗದ ಸೌರಭ್‌ ಹಿನ್ನಡೆಯನ್ನು 7–10ಕ್ಕೆ ತಗ್ಗಿಸಿಕೊಂಡರಲ್ಲದೆ ಬಳಿಕ ಲೀಲಾಜಾಲವಾಗಿ ಐದು ಪಾಯಿಂಟ್ಸ್‌ ಗಳಿಸಿ ಗೇಮ್‌ ತಮ್ಮದಾಗಿಸಿಕೊಂಡರು.

ಎರಡನೇ ಗೇಮ್‌ನಲ್ಲೂ ಭಾರತದ ಆಟಗಾರ ಆರಂಭಿಕ ಹಿನ್ನಡೆ ಕಂಡರು. ಚುರುಕಿನ  ಸರ್ವ್‌ ಹಾಗೂ ಶರವೇಗದ ಹೊಡೆತಗಳ ಮೂಲಕ ಅಂಗಳದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದ ಡರೆನ್‌ 5–1ರ ಮುನ್ನಡೆ ಪಡೆದು ತಿರುಗೇಟು ನೀಡುವ ಮುನ್ಸೂಚನೆ ನೀಡಿದ್ದರು.

ಆ ಬಳಿಕವೂ ಗುಣಮಟ್ಟದ ಆಟ ಮುಂದುವರಿಸಿದ ಅವರು 10–6ರ ಮುನ್ನಡೆ ಹೊಂದಿದ್ದರು. ಸಂದಿಗ್ಧ ಪರಿಸ್ಥಿತಿಯಲ್ಲೂ ಒತ್ತಡವನ್ನು ಮೀರಿ ನಿಂತು ಕೆಚ್ಚೆದೆಯಿಂದ ಹೋರಾಡಿದ ಸೌರಭ್‌ ಸತತ ಆರು ಪಾಯಿಂಟ್ಸ್‌ ಕಲೆಹಾಕಿ ಗೆಲುವಿನ ಮುದ್ರೆ ಒತ್ತಿದರು. ಮೂರನೇ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ಉಭಯ ಆಟಗಾರರು 3–3ರಲ್ಲಿ ಸಮಬಲ ಹೊಂದಿದ್ದರು. ಈ ಹಂತದಲ್ಲಿ  ಡರೆನ್‌ ಅಂಗಳ  ತೊರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT