ADVERTISEMENT

ಸ್ಪೇನ್‌ ಅಬ್ಬರಕ್ಕೆ ಬೆಚ್ಚಿದ ನೈಗರ್‌

ಏಜೆನ್ಸೀಸ್
Published 10 ಅಕ್ಟೋಬರ್ 2017, 19:44 IST
Last Updated 10 ಅಕ್ಟೋಬರ್ 2017, 19:44 IST
ಕೊಚ್ಚಿಯಲ್ಲಿ ಮಂಗಳವಾರ ನಡೆದ ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ ಫುಟ್‌ಬಾಲ್‌ ಪಂದ್ಯದಲ್ಲಿ ಸ್ಪೇನ್‌ ಮತ್ತು ನೈಗರ್‌ ತಂಡದ ಆಟಗಾರರು ಪೈಪೋಟಿ ನಡೆಸಿದರು –ಪಿಟಿಐ ಚಿತ್ರ
ಕೊಚ್ಚಿಯಲ್ಲಿ ಮಂಗಳವಾರ ನಡೆದ ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ ಫುಟ್‌ಬಾಲ್‌ ಪಂದ್ಯದಲ್ಲಿ ಸ್ಪೇನ್‌ ಮತ್ತು ನೈಗರ್‌ ತಂಡದ ಆಟಗಾರರು ಪೈಪೋಟಿ ನಡೆಸಿದರು –ಪಿಟಿಐ ಚಿತ್ರ   

ಕೊಚ್ಚಿ: ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ಯುರೋಪ್‌ನ ಫುಟ್‌ಬಾಲ್‌ ಶಕ್ತಿ ಕೇಂದ್ರ ಎಂದೇ ಗುರುತಿಸಿಕೊಂಡಿರುವ ಸ್ಪೇನ್‌ ತಂಡದ ಆಟದ ಸೊಬಗು ಅನಾವರಣಗೊಂಡಿತು.

ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ನ ‘ಡಿ’ ಗುಂಪಿನ ಪಂದ್ಯದಲ್ಲಿ ಈ ತಂಡ 4–0 ಗೋಲುಗಳಿಂದ ನೈಗರ್‌ ಸವಾಲು ಮೀರಿ ನಿಂತಿತು.

ಯುರೋಪಿಯನ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಸ್ಪೇನ್‌ ತಂಡ ಆರಂಭಿಕ ಪಂದ್ಯದಲ್ಲಿ 1–2 ಗೋಲುಗಳಿಂದ ಬ್ರೆಜಿಲ್‌ ವಿರುದ್ಧ ಸೋತಿತ್ತು.

ADVERTISEMENT

ನೈಗರ್‌ ವಿರುದ್ಧ ಗೆಲ್ಲಲೇಬೇಕಾದ ಒತ್ತಡದೊಂದಿಗೆ ಕಣಕ್ಕಿಳಿದಿದ್ದ ಈ ತಂಡ 20ನೇ ನಿಮಿಷದವರೆಗೂ ಎದುರಾಳಿಗಳಿಂದ ಪ್ರಬಲ ಪೈಪೋಟಿ ಎದುರಿಸಿತು.

21ನೇ ನಿಮಿಷದಲ್ಲಿ ಅಬೆಲ್‌ ರುಯಿಜ್‌ ಮೋಡಿ ಮಾಡಿದರು. ಚೆಂಡನ್ನು ಡ್ರಿಬಲ್‌ ಮಾಡುತ್ತಾ ಎದುರಾಳಿ ಆವರಣ ಪ್ರವೇಶಿಸಿದ ಅವರು ಅದನ್ನು ಕಣ್ಣೆವೆ ಮುಚ್ಚಿ ತೆರೆಯುವಷ್ಟರಲ್ಲಿ ಗುರಿ ಮುಟ್ಟಿಸಿ ಸಂಭ್ರಮಿಸಿದರು.

ಆ ನಂತರ ನೈಗರ್‌ ತಂಡದ ಆಟಗಾರರು ರಕ್ಷಣಾ ವಿಭಾಗದಲ್ಲಿ ಮಿಂಚಿದರು. ಜೊತೆಗೆ ಸಮಬಲದ ಗೋಲು ಗಳಿಸುವ ಪ್ರಯತ್ನವನ್ನೂ ಮುಂದುವರಿಸಿದರು. ಚೆಂಡಿನೊಂದಿಗೆ ಪದೇ ಪದೇ ಎದುರಾಳಿಗಳ ಆವರಣ ಪ್ರವೇಶಿಸಿದರೂ ಅದನ್ನು ಗುರಿ ಮುಟ್ಟಿಸಲು ಈ ತಂಡದವರಿಗೆ ಆಗಲಿಲ್ಲ. ಹೀಗಾಗಿ 40ನೇ ನಿಮಿಷದವರೆಗೂ ಸ್ಪೇನ್‌ ತಂಡ 1–0ರಿಂದ ಮುಂದಿತ್ತು. 41ನೇ ನಿಮಿಷದಲ್ಲಿ ಅಬೆಲ್‌ ಮತ್ತೊಮ್ಮೆ ಕಾಲ್ಚಳ ತೋರಿದರು. ಸಹ ಆಟಗಾರ ತಮ್ಮತ್ತ ಒದ್ದು ಕಳುಹಿಸಿದ ಚೆಂಡನ್ನು ಗುರಿ ಮುಟ್ಟಿಸಿದ ಅವರು ಭಾರತದ ಫುಟ್‌ಬಾಲ್‌ ಪ್ರೇಮಿಗಳ ಮನ ಗೆದ್ದರು.

ಮೊದಲರ್ಧದ ಹೆಚ್ಚುವರಿ ಅವಧಿಯಲ್ಲಿ (45+1) ಸ್ಪೇನ್‌  ತಂಡ  ಮಿಂಚಿತು. ಸೀಸರ್‌ ಗೋಲು ಗಳಿಸಿದ್ದರಿಂದ ತಂಡ 3–0ರ ಮುನ್ನಡೆ ಯೊಂದಿಗೆ ವಿರಾಮಕ್ಕೆ ಹೋಯಿತು.

ದ್ವಿತೀಯಾರ್ಧದಲ್ಲಿ ನೈಗರ್‌ ತಂಡ ತಪ್ಪುಗಳನ್ನು ತಿದ್ದಿಕೊಂಡು ಆಡಿತು. ಹೀಗಾಗಿ ಸ್ಪೇನ್‌ ತಂಡದ  ಗೋಲಿನ ಅಬ್ಬರ ತಗ್ಗಿತು. 82ನೇ ನಿಮಿಷದಲ್ಲಿ ಸರ್ಜಿಯೊ ಗೊಮೆಜ್‌ ಗೋಲು ಗಳಿಸಿ ಸ್ಪೇನ್‌ ತಂಡ ಏಕಪಕ್ಷೀಯವಾಗಿ ಗೆಲುವಿನ ತೋರಣ ಕಟ್ಟಲು ನೆರವಾದರು.

ಗೋವಾದ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ನಡೆದ ಕೋಸ್ಟರಿಕಾ ಮತ್ತು ಗಿನಿ ನಡುವಣ ‘ಸಿ’ ಗುಂಪಿನ ಪಂದ್ಯ 2–2 ಗೋಲುಗಳಿಂದ ಸಮಬಲವಾಯಿತು. ಕೋಸ್ಟರಿಕಾ ತಂಡದ ಜಾಕ್ಷೀನ್‌ 26ನೇ ನಿಮಿಷದಲ್ಲಿ ಖಾತೆ ತೆರೆದರು. 30ನೇ ನಿಮಿಷದಲ್ಲಿ ಫಾಂಡ್ಜೆ ಟೌರೆ ಗೋಲು ಬಾರಿಸಿ ಗಿನಿ ತಂಡ 1–1ರಲ್ಲಿ ಸಮಬಲ ಮಾಡಿಕೊಳ್ಳಲು ನೆರವಾದರು.

67ನೇ ನಿಮಿಷದಲ್ಲಿ ಗೊಮೆಜ್ ಗೋಲು ದಾಖಲಿಸಿದ್ದರಿಂದ ಕೋಸ್ಟಾರಿಕಾ 2–1ರ ಮುನ್ನಡೆ ಗಳಿಸಿ ಗೆಲುವಿನ ಕನಸು ಕಂಡಿತ್ತು. 80ನೇ ನಿಮಿಷದವರೆಗೂ ಈ ತಂಡ ಮುನ್ನಡೆ ಕಾಪಾಡಿಕೊಂಡಿತ್ತು. ಆದರೆ 81ನೇ ನಿಮಿಷದಲ್ಲಿ ಸೌಮಾಹ್‌ ಗೋಲು ಬಾರಿಸಿ ಪಂದ್ಯದ ಚಿತ್ರಣವನ್ನೇ ಬದಲಿಸಿಬಿಟ್ಟರು.

ಆ ನಂತರದ ಅವಧಿಯಲ್ಲಿ ಎರಡೂ ತಂಡಗಳು ಗೆಲುವಿನ ಗೋಲು ದಾಖಲಿಸಲು ನಡೆಸಿದ ಪ್ರಯತ್ನ ಫಲಿಸಲಿಲ್ಲ.

ಕೊಚ್ಚಿಯಲ್ಲಿ ನಡೆದ ದಿನದ ಇನ್ನೊಂದು ಪಂದ್ಯದಲ್ಲಿ ಬ್ರೆಜಿಲ್‌ ತಂಡ 2–0 ಗೋಲುಗಳಿಂದ ಉತ್ತರ ಕೊರಿಯಾವನ್ನು ಸೋಲಿಸಿತು. ಈ ಮೂಲಕ ತಂಡ ನಾಕೌಟ್‌ ಪ್ರವೇಶಿಸಿತು.

ಮೊದಲ ಪಂದ್ಯದಲ್ಲಿ ಸಾಂಬಾ ನಾಡಿನ ತಂಡ ಸ್ಪೇನ್‌ಗೆ ಆಘಾತ ನೀಡಿತ್ತು. ಬ್ರೆಜಿಲ್‌ ತಂಡ ವಿಶ್ವಕಪ್‌ನಲ್ಲಿ ಮೂರು ಬಾರಿ ಪ್ರಶಸ್ತಿ ಗೆದ್ದಿದೆ.

‘ಸಿ’ ಗುಂಪಿನ ಮತ್ತೊಂದು ಪಂದ್ಯದಲ್ಲಿ ಇರಾನ್‌ 4–0 ಗೋಲುಗಳಿಂದ ಜರ್ಮನಿ ತಂಡವನ್ನು ಸೋಲಿಸಿ ಸಂಭ್ರಮಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.