ADVERTISEMENT

ಹಾಕಿ: ಫ್ಲೈಯಿಂಗ್ ಕ್ಲಬ್‌ಗೆ ರೋಚಕ ಜಯ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 19:30 IST
Last Updated 7 ಜನವರಿ 2012, 19:30 IST
ಹಾಕಿ:  ಫ್ಲೈಯಿಂಗ್ ಕ್ಲಬ್‌ಗೆ ರೋಚಕ ಜಯ
ಹಾಕಿ: ಫ್ಲೈಯಿಂಗ್ ಕ್ಲಬ್‌ಗೆ ರೋಚಕ ಜಯ   

ಬೆಂಗಳೂರು: ಪೋಸ್ಟಲ್ ತಂಡದವರು ಇಲ್ಲಿ ನಡೆಯುತ್ತಿರುವ ಡಿ.ಎಸ್. ಮೂರ್ತಿ ಮತ್ತು ವಿ. ಕರುಣಾಕರನ್ ಸ್ಮಾರಕ ಹಾಕಿ ಟೂರ್ನಿಯ ಪಂದ್ಯದಲ್ಲಿ ಸುಲಭ ಗೆಲುವು ಪಡೆದರು.

ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಪೋಸ್ಟಲ್ 4-0 ಗೋಲುಗಳಿಂದ ರೇಂಜರ್ಸ್ ಹಾಕಿ ಕ್ಲಬ್ ತಂಡವನ್ನು ಮಣಿಸಿತು. ದಿನೇಶ್ (31ನೇ ನಿಮಿಷ), ಪ್ರಕಾಶ್ (36 ಮತ್ತು 51ನೇ ನಿ.) ಹಾಗೂ ನವೀನ್ ಶೇಖರ್ (52) ಗೋಲು ತಂದಿತ್ತು ಪೋಸ್ಟಲ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ರೇಂಜರ್ಸ್ ತಂಡ ಗೋಲಿನ ಖಾತೆ ತೆರೆಯುವಲ್ಲಿ ವಿಫಲವಾಯಿತು. ಪೋಸ್ಟಲ್ ತಂಡ ಆಕ್ರಮಣಕಾರಿ ಆಟದ ಜೊತೆ ರಕ್ಷಣಾ ವಿಭಾಗದಲ್ಲೂ ಚುರುಕಿನ ಪ್ರದರ್ಶನ ನೀಡಿತು. ಪ್ರಕಾಶ್ ಅವರಂತೂ ತಮ್ಮ ತಂಡಕ್ಕೆ ಎರಡು ಗೋಲುಗಳ ಕೊಡುಗೆ ನೀಡುವ ಮೂಲಕ ಈ ಪಂದ್ಯದಲ್ಲಿ ಗಮನ ಸೆಳೆದರು. ಅವರಿಗೆ ದಿನೇಶ್ ಹಾಗೂ ನವೀನ್ ಶೇಖರ್ ಅವರಿಂದ ಉತ್ತಮ ಬೆಂಬಲವೂ ದೊರೆಯಿತು. ಆದ್ದರಿಂದ ಪಂದ್ಯವನ್ನು ಪೋಸ್ಟಲ್ ಸುಲಭವಾಗಿ ತನ್ನದಾಗಿಸಿಕೊಂಡಿತು.

ದಿನದ ಮತ್ತೊಂದು ಪಂದ್ಯದಲ್ಲಿ ಫ್ಲೈಯಿಂಗ್ ಹಾಕಿ ಕ್ಲಬ್ 4-3 ರಲ್ಲಿ ಬಿಸಿವೈಎ ವಿರುದ್ಧ ರೋಚಕ ಜಯ ಪಡೆಯಿತು. ಮಹೇಶ್ವರನ್ (12), ವಿಜಯ್ (28 ಮತ್ತು 44) ಹಾಗೂ ರಿತೇಶ್ (47) ಫ್ಲೈಯಿಂಗ್ ಕ್ಲಬ್ ಪರ ಚೆಂಡನ್ನು ಗುರಿ ಸೇರಿಸಿದರು.

ಸಂತೋಷ್ (33), ಲಿತಿನ್ ಕಾವೇರಿಯಪ್ಪ (42) ಮತ್ತು ಸಿದ್ಧಾರ್ಥ್ (49) ಬಿಸಿವೈಎ ಪರ ಗೋಲು ಗಳಿಸಿ ಸೋಲಿನ ಅಂತರ ತಗ್ಗಿಸಿದರು. 2-0 ಗೋಲುಗಳಿಂದ ಮುನ್ನಡೆ ಪಡೆದ ಫ್ಲೈಯಿಂಗ್ ಸುಲಭ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ ಬಿಸಿವೈಎ ಮರುಹೋರಾಟ ನಡೆಸಿ 2-2 ರಲ್ಲಿ ಸಮಬಲ ಸಾಧಿಸಿತು.

ಈ ಹಂತದಲ್ಲಿ ಎಚ್ಚೆತ್ತುಕೊಂಡು ಫ್ಲೈಯಿಂಗ್ ತಂಡ ಎಂಟು ನಿಮಿಷಗಳ ಅಂತರದಲ್ಲಿ ಎರಡು ಗೋಲುಗಳನ್ನು ಗಳಿಸಿ ಮೇಲುಗೈ ಪಡೆಯಿತು. ವಿಜಯ್ ಹಾಗೂ ರಿತೇಶ್ ಅವರು ಒತ್ತಡದ ನಡುವೆಯೂ ಚೆಂಡಿನ ಮೇಲೆ ಉತ್ತಮ ನಿಯಂತ್ರಣ ಸಾಧಿಸಿದರು. ಎದುರಾಳಿ ತಂಡದ ಸಿದ್ಧಾರ್ಥ್ ಉತ್ತರಾರ್ಧದಲ್ಲಿ ಚುರುಕಿನ ಆಟವಾಡಿದರು. ಆದರೂ ಫ್ಲೈಯಿಂಗ್ ಕ್ಲಬ್ ಗೆಲುವಿನ ರೆಕ್ಕೆ ಕಟ್ಟಿಕೊಂಡು ಹಾರಲು ಸಾಧ್ಯವಾಗಲಿಲ್ಲ.

ಭಾನುವಾರದ ಪಂದ್ಯಗಳಲ್ಲಿ ಐಡಿಯಲ್ ಕ್ಲಬ್, ಕೆಜಿಎಫ್- ಫ್ಲೈಯಿಂಗ್ ಹಾಕಿ ಕ್ಲಬ್ ಮತ್ತು ನವೀನ್ ಹಾಕಿ ಕ್ಲಬ್- ಪೋಸ್ಟಲ್ ತಂಡಗಳು ಪೈಪೋಟಿ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.