ADVERTISEMENT

ಹಾಕಿ: ಭಾರತ ತಂಡ ಪ್ರಕಟ

ಪಿಟಿಐ
Published 14 ಅಕ್ಟೋಬರ್ 2017, 19:30 IST
Last Updated 14 ಅಕ್ಟೋಬರ್ 2017, 19:30 IST

ನವದೆಹಲಿ: ಮಲೇಷ್ಯಾದ ಜೋಹರ್ ಬಹ್ರೂದಲ್ಲಿ ಅಕ್ಟೋಬರ್‌ 22ರಿಂದ ಆರಂಭವಾಗಲಿರುವ ಸುಲ್ತಾನ್‌ ಜೋಹರ್ ಕಪ್ ಹಾಕಿ ಟೂರ್ನಿಗಾಗಿ ಶನಿವಾರ ಭಾರತ ಪುರುಷರ ಜೂನಿಯರ್ ತಂಡವನ್ನು ಪ್ರಕಟಿಸಲಾಗಿದೆ.

18 ಆಟಗಾರರ ತಂಡಕ್ಕೆ ವಿವೇಕ್‌ ಸಾಗರ್ ಪ್ರಸಾದ್ ನಾಯಕತ್ವ ವಹಿಸಇದ್ದಾರೆ. ಪ್ರತಾಪ್ ಲಾಕ್ರ ಉಪನಾಯಕನ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಸೆಪ್ಟೆಂಬರ್‌ 11ರಿಂದ ಭಾರತ ತಂಡದ ಆಟಗಾರರು ಲಖನೌ ಎಸ್‌ಎಐ (ಸಾಯ್‌) ಕೇಂದ್ರದಲ್ಲಿ ನಡೆದ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಅಭ್ಯಾಸ ನಡೆಸಿದ್ದಾರೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಜಪಾನ್ ಎದುರು ಆಡಲಿದೆ.

ADVERTISEMENT

ಕೋಚ್ ಜೂಡ್ ಫೆಲಿಕ್ಸ್ ಮಾರ್ಗದರ್ಶನದಲ್ಲಿ ತಂಡ ಸಜ್ಜುಗೊಂಡಿದೆ. ಒಂದು ವರ್ಷದ ಬಳಿಕ ಜೂನಿಯರ್ ತಂಡ ಪ್ರಮುಖ ಟೂರ್ನಿಯಲ್ಲಿ ಆಡುತ್ತಿದೆ. 2015ರ 5ನೇ ಸುಲ್ತಾನ್‌ ಜೋಹರ್ ಕಪ್‌ನಲ್ಲಿ ಭಾರತ ತಂಡ ಎರಡನೇ ಸ್ಥಾನ ಗಳಿಸಿತ್ತು. ಫೈನಲ್‌ನಲ್ಲಿ ಬ್ರಿಟನ್ ಎದುರು ಸೋಲು ಕಂಡಿತ್ತು.

‘ಭಾರತ ತಂಡ ಸಮತೋಲನವಾಗಿದೆ. ಜೂನಿಯರ್ ತಂಡದಲ್ಲಿ ಆಟಗಾರರು ಫಿಟ್‌ನೆಸ್‌ಗಾಗಿ ಸಾಕಷ್ಟು ಶ್ರಮ ಹಾಕಿದ್ದಾರೆ. ಇದರಿಂದ ಬಲಿಷ್ಠ ತಂಡವನ್ನು ಕಟ್ಟಲು ಸಾಧ್ಯವಾಗಿದೆ. ಈ ಟೂರ್ನಿ ನಮ್ಮ ಸಾಮರ್ಥ್ಯಕ್ಕೆ ಕನ್ನಡಿ ಹಿಡಿಯುವ ಭರವಸೆ ಇದೆ’ ಎಂದು ಕೋಚ್‌ ಫಿಲಿಕ್ಸ್‌ ಹೇಳಿದ್ದಾರೆ.

ಭಾರತ ತಂಡವನ್ನು ಹೊರತುಪಡಿಸಿ ಟೂರ್ನಿಯಲ್ಲಿ ಜಪಾನ್‌, ಮಲೇಷ್ಯಾ, ಅಮೆರಿಕ, ಆಸ್ಟ್ರೇಲಿಯಾ ಹಾಗೂ ಬ್ರಿಟನ್ ತಂಡಗಳು ಆಡಲಿವೆ.

ತಂಡ ಇಂತಿದೆ: ಗೋಲ್‌ಕೀಪರ್: ಪಂಕಜ್ ಕಮಾರ್ ರಾಜಕ್‌, ಸೆಂತಮಿಜ್‌ ಅರಸು ಶಂಕರ್‌, ಡಿಫೆಂಡರ್: ಸುಮನ್ ಬೆಕ್‌, ಪ್ರತಾಪ್‌ ಲಾಕ್ರಾ (ಉಪ ನಾಯಕ), ಸುಖ್‌ಜೀತ್‌ ಸಿಂಗ್‌, ವರಿಂದರ್ ಸಿಂಗ್‌, ಮನ್‌ದೀಪ್ ಮೊರ್, ಸಂಜಯ್‌. ಮಿಡ್ ಫೀಲ್ಡರ್‌: ಹರ್ಮನ್‌ಜಿತ್ ಸಿಂಗ್‌, ರವಿಚಂದ್ರ ಸಿಂಗ್‌, ವಿವೇಕ್ ಸಾಗರ್ ಪ್ರಸಾದ್ (ನಾಯಕ), ವಿಶಾಲ್ ಸಿಂಗ್‌, ವಿಶಾಲ್‌ ಅಂಟಿಲ್‌. ಫಾರ್ವರ್ಡ್‌: ಶಿಲಾನಂದ ಲಾಕ್ರಾ, ರುಷನ್‌ ಕುಮಾರ್, ಅಭಿಷೇಕ್‌, ದಿಲ್ಪ್ರೀತ್ ಸಿಂಗ್‌, ಮಣಿಂದರ್ ಸಿಂಗ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.