ADVERTISEMENT

ಹೊಸ ನಿಯಮಾವಳಿ: ಮತ್ತೆ ಅಂಗಳಕ್ಕಿಳಿದ ಸೆಮೆನ್ಯಾ

ಏಜೆನ್ಸೀಸ್
Published 3 ಮೇ 2018, 19:02 IST
Last Updated 3 ಮೇ 2018, 19:02 IST
ಕಾಸ್ಟರ್‌ ಸೆಮೆನ್ಯಾ
ಕಾಸ್ಟರ್‌ ಸೆಮೆನ್ಯಾ   

ದೋಹಾ (ಎಎಫ್‌ಪಿ): ಅಧಿಕ ಪುರುಷ ಹಾರ್ಮೋನ್‌ಗಳನ್ನು ಹೊಂದಿರುವ ಮಹಿಳಾ ಅಥ್ಲೀಟ್‌ಗಳು ಅಥ್ಲೆಟಿಕ್ಸ್‌ನಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸುವ ಅಂತರರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್‌ನ (ಐಎಎಎಫ್‌) ಹೊಸ ನಿಯಮಾವಳಿಗಳಿಂದಾಗಿ ದಕ್ಷಿಣ ಆಫ್ರಿಕಾದ ಕ್ರೀಡಾಪಟು ಕಾಸ್ಟರ್‌ ಸೆಮೆನ್ಯಾ ಅವರು ಇಲ್ಲಿ ನಡೆಯಲಿರುವ ಡೈಮಂಡ್‌ ಲೀಗ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ದೈಹಿಕವಾಗಿ ಬಲಿಷ್ಠರಾಗಿರುವ ಸೆಮೆನ್ಯಾ ಅವರು ಹೆಚ್ಚು ಪುರುಷ ಹಾರ್ಮೋನ್‌ಗಳನ್ನು ಹೊಂದಿದ್ದಾರೆ. ಇದರಿಂದಾಗಿ ಅವರು ಅನೇಕ ಬಾರಿ ಪರೀಕ್ಷೆಗೊಳಪಟ್ಟಿದ್ದರು. 

ಐಎಎಎಫ್‌ ತನ್ನ ನಿಯಮಾವಳಿಗಳಲ್ಲಿ ತಂದಿರುವ ತಿದ್ದುಪಡಿ ಪ್ರಕಾರ ನೈಸರ್ಗಿಕವಾಗಿ ಇಂತಹ ಹಾರ್ಮೋನ್‌ಗಳನ್ನು ಹೊಂದಿರುವ ಕ್ರೀಡಾಪಟುಗಳು ಇನ್ನೂ ಮುಂದೆ ಸ್ಪರ್ಧೆ ಮಾಡಬಹುದು. ಆದರೆ, ದೇಹದಲ್ಲಿ ಅಂತಹ ಹಾರ್ಮೋನ್‌ಗಳನ್ನು ಕಡಿಮೆ ಮಾಡುವ ವೈದ್ಯಕೀಯ ಚಿಕಿತ್ಸೆಗಳಿಗೆ ಅವರು ಒಳಪಡಬೇಕಾಗುತ್ತದೆ ಎಂದು ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ನ ಆಡಳಿತ ಮಂಡಳಿಯು ತಿಳಿಸಿದೆ. 

ADVERTISEMENT

ಇಂತಹ ಹಾರ್ಮೋನ್‌ಗಳನ್ನು ಹೊಂದಿರುವ ಅಥ್ಲೀಟ್‌ಗಳು 400 ಮೀಟರ್‌, 800 ಮೀಟರ್‌, 1500 ಹಾಗೂ ಹರ್ಡಲ್ಸ್‌ ಸ್ಪರ್ಧೆಗಳಲ್ಲಿ ಮಾತ್ರ ಸ್ಪರ್ಧಿಸಬಹುದು ಎಂದು ಅದು ತಿಳಿಸಿದೆ.

ಪುರುಷ ಹಾರ್ಮೋನ್‌ ಅಧಿಕವಾಗಿರುವ ಮಹಿಳೆಯರ ಸ್ಪರ್ಧೆಗೆ ಅಂತರರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್‌ನ ಈ ಹಿಂದೆ ತಡೆ ಒಡ್ಡಿತ್ತು.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸೆಮೆನ್ಯಾ, ‘ನೈಸರ್ಗಿಕವಾಗಿ ನನ್ನ ದೇಹ ಇರುವುದೇ ಹಾಗೆ. ಆದರೆ, ಈ ಬಗ್ಗೆ ನನಗೆ ಬೇಸರವಿಲ್ಲ’ ಎಂದು ಹೇಳಿದ್ದಾರೆ.

ಸೆಮೆನ್ಯಾ ಅವರು ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ 800 ಮೀಟರ್‌ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದರು. ಅವರು  ಶುಕ್ರವಾರದಿಂದ ಆರಂಭವಾಗಲಿರುವ ಡೈಮಂಡ್‌ ಲೀಗ್‌ನಲ್ಲಿ 1500 ಮೀಟರ್‌ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.