ADVERTISEMENT

100ನೇ ಪಂದ್ಶದಲ್ಲಿ ಶಿಖರ್‌ ಶತಕ; ದಕ್ಷಿಣ ಆಫ್ರಿಕಾಗೆ ಗೆಲುವು

ಪಿಂಕ್‌ ಡೇ ಟೆಸ್ಟ್‌: ಕೊಹ್ಲಿ ಜೊತೆಗೆ 158 ರನ್‌ ಸೇರಿಸಿದ ಧವನ್

ಏಜೆನ್ಸೀಸ್
Published 10 ಫೆಬ್ರುವರಿ 2018, 20:54 IST
Last Updated 10 ಫೆಬ್ರುವರಿ 2018, 20:54 IST
100ನೇ ಪಂದ್ಶದಲ್ಲಿ ಶಿಖರ್‌ ಶತಕ; ದಕ್ಷಿಣ ಆಫ್ರಿಕಾಗೆ ಗೆಲುವು
100ನೇ ಪಂದ್ಶದಲ್ಲಿ ಶಿಖರ್‌ ಶತಕ; ದಕ್ಷಿಣ ಆಫ್ರಿಕಾಗೆ ಗೆಲುವು   

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದಲ್ಲಿ ಮೊದಲ ಸರಣಿ ಜಯದ ಕನಸು ನನಸಾಗಿಸುವತ್ತ ಹೆಜ್ಜೆ ಇರಿಸಿದ್ದ ಭಾರತ ತಂಡಕ್ಕೆ ಆತಿಥೇಯ ತಂಡದವರು ಅಡ್ಡಿಯಾದರು. ಹದಿನೈದು ಎಸೆತ ಬಾಕಿ ಇರುವಂತೆಯೇ ಅತಿಥೇಯ ತಂಡ ಗೆಲುವು ಸಾಧಿಸಿತು.  

ಇಲ್ಲಿನ ನ್ಯೂ ವಾಂಡರರ್ಸ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳಿಗೆ 289 ರನ್ ಗಳಿಸಿದೆ. ಗುರಿ ಬೆನ್ನತ್ತಿದ ಅತಿಥೇಯರ ಇನಿಂಗ್ಸ್‌ಗೆ ಮಳೆ ಅಡ್ಡಿಪಡಿಸಿದ ಕಾರಣ 28 ಓವರ್‌ಗಳಲ್ಲಿ 202 ರನ್‌ಗಳ ಗುರಿ ನೀಡಲಾಗಿತ್ತು. ಬಿರುಸಿನ ಆಟವಾಡಿದ ದ.ಆಫ್ರಿಕಾ ಬ್ಯಾಟ್ಸ್‌ಮನ್‌ಗಳು 25.3 ಓವರ್‌ಗಳಲ್ಲಿ ಗುರಿ ಮುಟ್ಟಿದರು. 5 ವಿಕೆಟ್‌ ಕಳೆದುಕೊಂಡ ತಂಡ 207 ರನ್‌ ಗಳಿಸಿತು.  (ಮಿಲ್ಲರ್‌– 39, ಕ್ಲಾಸೀನ್‌ 47)

ಧವನ್‌–ಕೊಹ್ಲಿ ಮಿಂಚಿನ ಆಟ

ADVERTISEMENT

ಶಿಖರ್ ಧವನ್‌ ಅವರ ಸ್ಫೋಟಕ ಶತಕ ಮತ್ತು ನಾಯಕ ವಿರಾಟ್ ಕೊಹ್ಲಿ (75; 83 ಎ, 1 ಸಿ, 7 ಬೌಂ) ಗಳಿಸಿದ ಅರ್ಧಶತಕ ಭಾರತ ತಂಡ ಉತ್ತಮ ಮೊತ್ತ ಗಳಿಸಲು ನೆರವಾಯಿತು.

ದಕ್ಷಿಣ ಆಫ್ರಿಕಾದಲ್ಲಿ ನಿರಂತರ ಬ್ಯಾಟಿಂಗ್ ವೈಫಲ್ಯ ಕಂಡಿರುವ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಈ ಪಂದ್ಯದಲ್ಲೂ ಮಿಂಚಲು ಸಾಧ್ಯವಾಗದೇ ವಾಪಸಾದರು. 13 ಎಸೆತ ಎದುರಿಸಿದ ಅವರು ಕೇವಲ ಐದು ರನ್ ಗಳಿಸಿ ಕಗಿಸೊ ರಬಾಡಗೆ ವಿಕೆಟ್ ಒಪ್ಪಿಸಿದರು.

ನಂತರ ಜೊತೆಗೂಡಿದ ಶಿಖರ್ ಮತ್ತು ಕೊಹ್ಲಿ ಎರಡನೇ ವಿಕೆಟ್‌ಗೆ 149 ಎಸೆತಗಳಲ್ಲಿ 158 ರನ್‌ ಸೇರಿಸಿದರು. ಎದುರಾಳಿ ಬೌಲರ್‌ಗಳನ್ನು ನಿರಾಯಾಸವಾಗಿ ಎದುರಿಸಿದ ಇವರಿಬ್ಬರು ಬೌಂಡರಿಗಳ ಮಳೆಗರೆದರು. ಮಾರ್ಕೆಲ್ ಹಾಕಿದ ಮೊದಲ ಮೂರು ಓವರ್‌ಗಳಲ್ಲಿ ತಲಾ ಒಂದೊಂದು ಬೌಂಡರಿ ಗಳಿಸಿ ಧವನ್‌ ಸ್ಫೋಟಕ ಇನಿಂಗ್ಸ್‌ಗೆ ನಾಂದಿ ಹಾಡಿದರು.

ಎಂಟನೇ ಓವರ್‌ನಲ್ಲಿ ಕೊಹ್ಲಿ ಕೂಡ ಬೌಂಡರಿ ಗಳಿಸಿದರು. ರಬಾಡ ಹಾಕಿದ ಈ ಓವರ್‌ನಲ್ಲಿ ಅವರು ಎರಡು ಬಾರಿ ಚೆಂಡನ್ನು ಬೌಂಡರಿ ಗೆರೆಯಾಚೆ ಅಟ್ಟಿದರು. ಕ್ರಿಸ್ ಮಾರಿಸ್‌ ಮತ್ತು ಲುಂಗಿಸಾನಿ ಗಿಡಿ ಅವರನ್ನು ಕೂಡ ದಂಡಿಸಿದರು.

17ನೇ ಓವರ್‌ನಲ್ಲಿ ಗಿಡಿ ಅವರ ಎಸೆತವನ್ನು ಗ್ಯಾಲರಿಗೆ ಅಟ್ಟಿದ ಕೊಹ್ಲಿ ಇನಿಂಗ್ಸ್‌ನ ಮೊದಲ ಸಿಕ್ಸರ್ ಸಿಡಿಸಿದರು. 19ನೇ ಓವರ್‌ನಲ್ಲಿ ಪಿಶುವಾಯೊ ಎಸೆತವನ್ನು ಸ್ಕ್ವೇರ್‌ಲೆಗ್‌ ಮೇಲಿಂದ ಧವನ್ ಸಿಕ್ಸರ್‌ಗೆ ಅಟ್ಟಿದರು. ಮಾರ್ಕೆಲ್‌, ಪಿಶುವಾಯೊ ಮತ್ತು ಗಿಡಿ ವಿಫಲರಾದಾಗ ಜೆಪಿ ಡುಮಿನಿ ಅವರ ಕೈಗೆ ನಾಯಕ ಚೆಂಡು ನೀಡಿದರು.

ಆದರೆ ಮೋಹಕ ಕವರ್ ಡ್ರೈವ್ ಮೂಲಕ ಅವರನ್ನೂ ಕೊಹ್ಲಿ ಬೌಂಡರಿ ಗೆರೆ ದಾಟಿಸಿದದರು. 32ನೇ ಓವರ್‌ನಲ್ಲಿ ಕೊಹ್ಲಿ ವಿಕೆಟ್ ಪಡೆದು ಮಾರಿಸ್ ಮಿಂಚಿದರು.

ಆದರೂ ಧವನ್‌ ಅವರನ್ನು ನಿಯಂತ್ರಿಸಲು ಬೌಲರ್‌ಗಳಿಗೆ ಆಗಲಿಲ್ಲ. ರಬಾಡ ಎಸೆತದಲ್ಲಿ ಸಿಕ್ಸರ್ ಗಳಿಸಿದ ಅವರಿಗೆ ಅಜಿಂಕ್ಯ ರಹಾನೆ ಉತ್ತಮ ಸಹಕಾರ ನೀಡಿದರು.

ಮಾರಿಸ್ ಹಾಕಿದ 34ನೇ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಗಳಿಸಿ ಧವನ್‌ ಶತಕ ಪೂರೈಸಿದರು. ಈ ಮೂಲಕ 100ನೇ ಪಂದ್ಯದಲ್ಲಿ ಮೂರಂಕಿ ದಾಟಿದ ಅಪೂರ್ವ ಸಾಧನೆ ಮಾಡಿದರು. 35ನೇ ಓವರ್‌ನಲ್ಲಿ ತಂಡ 200 ರನ್‌ ಗಳಿಸಿದ್ದರು. ಮಳೆ ಬರುವ ವಾತಾವರಣ ಕಂಡುಬಂತು. ಪರಿಣಾಮ ಆಟ ಸ್ಥಗಿತಗೊಳಿಸಲಾಯಿತು.

ಆಟ ಮತ್ತೆ ಆರಂಭಗೊಂಡಾಗ ಧವನ್ ಮೊದಲು ವಿಕೆಟ್ ಒಪ್ಪಿಸಿದರು. ನಂತರ ಮಹೇಂದ್ರ ಸಿಂಗ್ ದೋನಿ ಅಮೋಘ ಬ್ಯಾಟಿಂಗ್ ಮೂಲಕ ತಂಡ 250ರ ಗಡಿ ದಾಟಲು ನೆರವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.