ADVERTISEMENT

12 ರನ್ ನೀಡಿ 10 ವಿಕೆಟ್: ಕುಂಬ್ಳೆ ಸಾಧನೆ ನೆನಪಿಸಿದ 16 ವರ್ಷದ ವೇಗಿ ಗೌತಮ್

19 ವರ್ಷದೊಳಗಿನವರ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ

ಏಜೆನ್ಸೀಸ್
Published 26 ಫೆಬ್ರುವರಿ 2020, 7:16 IST
Last Updated 26 ಫೆಬ್ರುವರಿ 2020, 7:16 IST
   

ಕಡಪ:19 ವರ್ಷದೊಳಗಿನವರ ಮಹಿಳಾ ಏಕದಿನ ಪಂದ್ಯದಲ್ಲಿ ಅರುಣಾಚಲ ಪ್ರದೇಶದ ಎಲ್ಲ 10 ವಿಕೆಟ್‌ಗಳನ್ನು ಉರುಳಿಸಿದ ಚಂಡೀಗಡ ತಂಡದ ನಾಯಕಿ ಕಾಶ್ವಿ ಗೌತಮ್‌, ಸೀಮಿತ ಓವರ್‌ಗಳ ಮಾದರಿಯಲ್ಲಿ ಅಪರೂಪದ ದಾಖಲೆ ಬರೆದರು.

ಆಂಧ್ರಪ್ರದೇಶದ ಕಡಪದಲ್ಲಿರುವ ಕೆಎಸ್‌ಆರ್‌ಎಂ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯದಲ್ಲಿ 4.5 ಓವರ್‌ ಬೌಲಿಂಗ್ ಮಾಡಿದ ಕಾಶ್ವಿ, ಕೇವಲ 12 ರನ್‌ ನೀಡಿ ಹ್ಯಾಟ್ರಿಕ್‌ ಸಹಿತ ಎಲ್ಲ ವಿಕೆಟ್‌ಗಳನ್ನೂ ಕಬಳಿಸಿದರು. ಕಾಶ್ವಿ ವೇಗಕ್ಕೆ ತತ್ತರಿಸಿದ ಅರುಣಾಚಲ ತಂಡ 8.5 ಓವರ್‌ಗಳಲ್ಲಿ ಕೇವಲ 25 ರನ್‌ ಗಳಿಸಿ ಆಲೌಟ್‌ ಆಯಿತು. ಹೀಗಾಗಿ ಚಂಡೀಗಡ 161ರನ್‌ ಅಂತರದ ಸುಲಭ ಗೆಲುವು ಸಾಧಿಸಿತು.

ಇದಕ್ಕೂ ಮೊದಲುಬ್ಯಾಟಿಂಗ್‌ನಲ್ಲೂ ಮಿಂಚಿದ್ದ ಕಾಶ್ವಿ, ತಮ್ಮ ತಂಡಕ್ಕೆ 49 ರನ್‌ಗಳ ಕೊಡುಗೆ ನೀಡಿದ್ದರು. ಇವರ ಬ್ಯಾಟಿಂಗ್‌ ನೆರವಿನಿಂದ ಚಂಡೀಗಡ ತಂಡವು ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 186ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತ್ತು.

ADVERTISEMENT

16 ವರ್ಷದ ಕಾಶ್ವಿ ಗೌಮತ್‌, ಪಂದ್ಯದಲ್ಲಿ ವಿಕೆಟ್‌ ಕಬಳಿಸಿದ ಸಂದರ್ಭದ ವಿಡಿಯೊವನ್ನು ಬಿಸಿಸಿಐ ಮತ್ತು ಐಸಿಸಿ ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿವೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ವಿಕೆಟ್‌ ಸಾಧನೆ
ಅಂತರರಾಷ್ಟ್ರೀಯ ಕ್ರಿಕೆಟ್‌ನ ಒಂದೇ ಇನಿಂಗ್ಸ್‌ನಲ್ಲಿ ಈವರೆಗೆ ಇಬ್ಬರು ಬೌಲರ್‌ಗಳು ಮಾತ್ರವೇ ಎಲ್ಲ 10 ವಿಕೆಟ್‌ ಕಬಳಿಸಿದ ಸಾಧನೆ ಮಾಡಿದ್ದಾರೆ.

ಇಂಗ್ಲೆಂಡ್‌ನ ಜಿಮ್‌ ಲೇಕರ್‌ 1956ರಲ್ಲಿ ಮೊದಲ ಸಲ ಈ ಸಾಧನೆ ಮಾಡಿದ್ದರು.ಆಸ್ಟ್ರೇಲಿಯಾ ವಿರುದ್ಧ ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮೂಡಿಬಂದಿತ್ತು. ಬರೋಬ್ಬರಿ51.2 ಓವರ್‌ ಬೌಲಿಂಗ್‌ ಮಾಡಿದ್ದ ಅವರು,56 ರನ್‌ ಬಿಟ್ಟುಕೊಟ್ಟು10 ವಿಕೆಟ್‌ ಉರುಳಿಸಿದ್ದರು.ಅದೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 16.4 ಓವರ್‌ ಎಸೆದು ಕೇವಲ 37 ರನ್‌ ನೀಡಿ 9 ವಿಕೆಟ್‌ ಕಬಳಿಸಿದ್ದರು. ಹೀಗಾಗಿ ಪಂದ್ಯವೊಂದರಲ್ಲಿ ಅತಿಹೆಚ್ಚು (19) ವಿಕೆಟ್‌ ಕಬಳಿಸಿದ ಶ್ರೇಯವೂ ಅವರದ್ದಾಗಿದೆ.

ಭಾರತದ ಲೆಗ್‌ ಸ್ಪಿನ್ನರ್‌ ಅನಿಲ್‌ ಕುಂಬ್ಳೆ 1999ರಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು. ದೆಹಲಿಯಲ್ಲಿ ನಡೆದಿದ್ದ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ 26.3 ಓವರ್‌ ಬೌಲಿಂಗ್‌ ಮಾಡಿದ್ದ ಅವರು, 74 ರನ್‌ ನೀಡಿ 10 ವಿಕೆಟ್ ಕಬಳಿಸಿದ್ದರು. ಇದು ಟೆಸ್ಟ್‌ ಕ್ರಿಕೆಟ್‌ನಲ್ಲಿ ದಾಖಲಾದ ಎರಡನೇ ಅತ್ಯುತ್ತಮ ಬೌಲಿಂಗ್‌ ನಿರ್ವಹಣೆ ಎನಿಸಿದೆ.

ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಇಂತಹ ಸಾಧನೆ ಮಾಡಲುಈವರೆಗೆ ಯಾರಿಗೂ ಸಾಧ್ಯವಾಗಿಲ್ಲ. ಏಕದಿನ ಮಾದರಿಯಲ್ಲಿ ಶ್ರೀಲಂಕಾ ವೇಗಿ ಚಮಿಂಡಾ ವಾಸ್‌, ನ್ಯೂಜಿಲೆಂಡ್‌ ವಿರುದ್ಧ 19 ರನ್ ನೀಡಿ 8 ವಿಕೆಟ್‌ ಉರುಳಿಸಿರುವುದು ಮತ್ತು ಟಿ20ಯಲ್ಲಿ ಭಾರತದ ದೀಪಕ್‌ ಚಾಹರ್‌, ಬಾಂಗ್ಲಾದೇಶ ವಿರುದ್ಧ 7 ರನ್‌ ನೀಡಿ 6 ವಿಕೆಟ್‌ ಕಬಳಿಸಿರುವುದು ಶ್ರೇಷ್ಠ ಸಾಧನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.