ADVERTISEMENT

ಭಾರತ–ಇಂಗ್ಲೆಂಡ್ ಮೊದಲ ಟಿ20 ಪಂದ್ಯ: ಚುಟುಕು ವಿಶ್ವಕಪ್‌ನತ್ತ ‘ವಿರಾಟ್’ ನೋಟ

ಕೊಹ್ಲಿ ಪಡೆಗೆ ಏಯಾನ್ ಮಾರ್ಗನ್ ಬಳಗದ ಸವಾಲು

ಪಿಟಿಐ
Published 11 ಮಾರ್ಚ್ 2021, 19:31 IST
Last Updated 11 ಮಾರ್ಚ್ 2021, 19:31 IST
ಫೀಲ್ಡಿಂಗ್ ಅಭ್ಯಾಸನಿರತ ವಿರಾಟ್ ಕೊಹ್ಲಿ ಮತ್ತು ಸಹ ಆಟಗಾರರು  –ಪಿಟಿಐ ಚಿತ್ರ
ಫೀಲ್ಡಿಂಗ್ ಅಭ್ಯಾಸನಿರತ ವಿರಾಟ್ ಕೊಹ್ಲಿ ಮತ್ತು ಸಹ ಆಟಗಾರರು  –ಪಿಟಿಐ ಚಿತ್ರ   

ಅಹಮದಾಬಾದ್: ಇದೇ ವರ್ಷ ನಡೆಯಲಿರುವ ಟ್ವೆಂಟಿ–20 ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿಯುವ ಭಾರತ ತಂಡವನ್ನು ಕಟ್ಟುವ ಅಭಿಯಾನ ಶುಕ್ರವಾರ ಆರಂಭವಾಗಲಿದೆ.

ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆಯು ಕಣಕ್ಕಿಳಿಯಲಿದೆ. ಐದು ಪಂದ್ಯಗಳ ಈ ಸರಣಿಯು ವಿಶ್ವಕಪ್ ಟೂರ್ನಿಯ ತಂಡ ರಚನೆಗೆ ಪ್ರಯೋಗದ ವೇದಿಕೆಯಾಗುವ ಸಾಧ್ಯತೆ ಇದೆ. ಮುಂದಿನ ತಿಂಗಳು ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿಯೂ ಪ್ರತಿಭಾ ಶೋಧ ಮುಂದುವರಿಯುವ ನಿರೀಕ್ಷೆ ಇದೆ.

ಹೋದ ವಾರ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ ಸರಣಿಯಲ್ಲಿ 3–1ರಿಂದ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಪ್ರವೇಶಿಸಿರುವ ಭಾರತ ತಂಡವು ಅಪಾರ ಆತ್ಮವಿಶ್ವಾಸದಲ್ಲಿದೆ. ಯುವ ಆಟಗಾರರಿಗೆ ಹೆಚ್ಚು ಅವಕಾಶ ಕೊಡುವತ್ತ ತಂಡದ ವ್ಯವಸ್ಥಾಪಕ ಮಂಡಳಿ ಚಿತ್ತ ನೆಟ್ಟಿದೆ. ಶ್ರೇಯಸ್ ಅಯ್ಯರ್, ಪದಾರ್ಪಣೆಯ ನಿರೀಕ್ಷೆಯಲ್ಲಿರುವ ಸೂರ್ಯಕುಮಾರ್ ಯಾದವ್, ಶಾರ್ದೂಲ್ ಠಾಕೂರ್ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ರೋಹಿತ್ ಶರ್ಮಾ ಜೊತೆಗೆ ಕನ್ನಡಿಗ ಕೆ.ಎಲ್. ರಾಹುಲ್ ಇನಿಂಗ್ಸ್‌ ಆರಂಭಿಸಿದರೆ, ಶಿಖರ್ ಧವನ್ ಬೆಂಚ್‌ ಕಾಯಬೇಕಾಗುವುದು.

ADVERTISEMENT

ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಟೇಲ್, ಟೆಸ್ಟ್ ಸರಣಿಯಲ್ಲಿ ಮಿಂಚಿದ್ದ ವಾಷಿಂಗ್ಟನ್ ಸುಂದರ್ ಮತ್ತು ಅಕ್ಷರ್ ಪಟೇಲ್ ಅವರ ನಡುವೆ ಸ್ಥಾನ ಪಡೆಯಲು ಪೈಪೋಟಿ ಇದೆ. ಇಲ್ಲಿಯ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಮೂವರು ಸ್ಪಿನ್ನರ್‌ಗಳಿಗೆ ಆದ್ಯತೆ ನೀಡಿದರೆ ಯಜುವೇಂದ್ರ ಚಾಹಲ್ ಜೊತೆಗೆ ಪಟೇಲ್ ಮತ್ತು ವಾಷಿಂಗ್ಟನ್ ಇಬ್ಬರೂ ಕಣಕ್ಕಿಳಿಯಬಹುದು. ಭುವನೇಶ್ವರ್ ಕುಮಾರ್ ಜೊತೆಗೆ ದೀಪಕ್ ಚಾಹಲ್ ವೇಗದ ವಿಭಾಗದ ಹೊಣೆ ಹಂಚಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ರಿಷಭ್ ಪಂತ್ ಅಮೋಘ ಲಯದಲ್ಲಿರುವುದರಿಂದ ಇಶಾನ್ ಕಿಶನ್ ಪದಾರ್ಪಣೆಯ ಕನಸು ಈಗಲೇ ಕೈಗೂಡುವುದು ಕಷ್ಟ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಗೆಲುವಿನ ಉತ್ತಮ ದಾಖಲೆ ಹೊಂದಿರುವ ಏಯಾನ್ ಮಾರ್ಗನ್ ಪಡೆಯು ಸಮತೋಲನದಿಂದ ಕೂಡಿದೆ. ಜಾಸ್ ಬಟ್ಲರ್, ಜೇಸನ್ ರಾಯ್, ಡೇವಿಡ್ ಮಲಾನ್ ಮತ್ತು ಬೆನ್ ಸ್ಟೋಕ್ಸ್ ಚುಟುಕು ಕ್ರಿಕೆಟ್‌ನಲ್ಲಿ ಪಂದ್ಯ ಗೆಲ್ಲಿಸಿಕೊಡಬಲ್ಲ ಸಮರ್ಥರು. ವೇಗಿ ಜೋಫ್ರಾ ಆರ್ಚರ್, ಮಾರ್ಕ್ ವುಡ್ ಮತ್ತು ಸ್ಯಾಮ್ ಕರನ್ ಭಾರತದ ಬ್ಯಾಟಿಂಗ್ ಕ್ರಮಾಂಕಕ್ಕೆ ಸವಾಲೊಡ್ಡಲು ಸಿದ್ಧರಾಗಿದ್ದಾರೆ.

ನವೀಕೃತ ಕ್ರೀಡಾಂಗಣದಲ್ಲಿ ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಟಿ20 ಪಂದ್ಯ ನಡೆಯಲಿದೆ. ಕೊರೊನಾ ಕಾಲಘಟ್ಟದಲ್ಲಿ ಭಾರತದಲ್ಲಿ ಆಯೋಜನೆಯಾಗುತ್ತಿರುವ ಮೊದಲ ಚುಟುಕು ಸರಣಿ ಕೂಡ ಹೌದು. ಇದರಲ್ಲಿ ಜಯದ ಆರಂಭ ಮಾಡುವ ಛಲದಲ್ಲಿ ವಿರಾಟ್ ಪಡೆ ಇದೆ.

ದಾಖಲೆಯ ಹೊಸ್ತಿಲಲ್ಲಿ ಕೊಹ್ಲಿ: ಅಂತರರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್‌ ನಲ್ಲಿ ಮೂರು ಸಾವಿರ ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್‌ ಹೆಗ್ಗಳಿಕೆಗೆ ಪಾತ್ರರಾಗುವ ಅವಕಾಶ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಇದೆ.

ಅವರು ಇನ್ನು 72 ರನ್ ಗಳಿಸಿದರೆ, ಈ ಮೈಲುಗಲ್ಲು ಮುಟ್ಟುವ ಅವಕಾಶ ಇದೆ. ಅವರು ಇದುವರೆಗೆ 85 ಪಂದ್ಯಗಳಲ್ಲಿ ಆಡಿದ್ದು, 2928 ರನ್‌ ಗಳಿಸಿ, ಅತಿ ಹೆಚ್ಚು ರನ್ ಮಾಡಿದವರ ಪಟ್ಟಿಯ ಅಗ್ರಸ್ಥಾನದಲ್ಲಿದ್ದಾರೆ.

ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ 99 ಪಂದ್ಯಗಳಿಂದ 2839 ರನ್ ಮತ್ತು ಭಾರತದ ರೋಹಿತ್ ಶರ್ಮಾ 108 ಪಂದ್ಯಗಳಿಂದ 2773 ರನ್‌ ಗಳಿಸಿದ್ದಾರೆ. ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ವಿರಾಟ್ ಕೊಹ್ಲಿ ಇದುವರಗೆ ಅಂತರರಾಷ್ಟ್ರೀಯ ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಶತಕ ದಾಖಲಿಸಿಲ್ಲ. ಅಲ್ಲದೇ ಅವರು ಕಳೆದ 15 ತಿಂಗಳುಗಳಿಂದ ಯಾವುದೇ ಮಾದರಿಯಲ್ಲಿಯೂ ಶತಕ ಬಾರಿಸಿಲ್ಲ.

ತಂಡಗಳು: ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್. ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ದೀಪಕ್ ಚಾಹರ್, ರಾಹುಲ್ ತೆವಾಟಿಯಾ, ಇಶಾನ್ ಕಿಶನ್.

ಇಂಗ್ಲೆಂಡ್: ಏಯಾನ್ ಮಾರ್ಗನ್ (ನಾಯಕ), ಜಾಸ್ ಬಟ್ಲರ್, ಜೇಸನ್ ರಾಯ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲಾನ್, ಬೆನ್ ಸ್ಟೋಕ್ಸ್‌, ಮೋಯಿನ್ ಅಲಿ, ಆದಿಲ್ ರಶೀದ್, ರೀಚ್ ಟೊಪ್ಲಿ, ಕ್ರಿಸ್ ಜೋರ್ಡಾನ್, ಮಾರ್ಕ್ ವುಡ್, ಸ್ಯಾಮ್ ಕರನ್, ಟಾಮ್ ಕರನ್, ಸ್ಯಾಮ್ ಬಿಲಿಂಗ್ಸ್, ಜಾನಿ ಬೆಸ್ಟೊ, ಜೋಫ್ರಾ ಆರ್ಚರ್.

ಪಂದ್ಯ ಆರಂಭ: ರಾತ್ರಿ 7

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.