ಮೀರ್‌ಪುರ: ನಾಯಕಿ ಹರ್ಮನ್‌ಪ್ರೀತ್ ಕೌರ್ ಅರ್ಧಶತಕದ ಬಲದಿಂದ ಭಾರತ ತಂಡವು ಭಾನುವಾರ ಬಾಂಗ್ಲಾದೇಶ ವಿರುದ್ಧ ನಡೆದ ಮಹಿಳಾ ಟಿ20 ಪಂದ್ಯದಲ್ಲಿ ಜಯಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತದ ಎದುರು ಆತಿಥೇಯ ಬಾಂಗ್ಲಾ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 114 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ ತಂಡವು ಹರ್ಮನ್ (ಔಟಾಗದೆ 54, 35ಎ, 4X6, 6X2) ಅವರ ಬಿರುಸಿನ ಬ್ಯಾಟಿಂಗ್ ಬಲದಿಂದ 16.2 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 118 ರನ್ ಗಳಿಸಿತು.
ಭಾರತ ತಂಡಕ್ಕೆ ಮೊದಲ ಓವರ್‌ನಲ್ಲಿಯೇ ಆಘಾತ ಎದುರಾಯಿತು. ಶಫಾಲಿ ವರ್ಮಾ ಅವರು ಖಾತೆ ತೆರೆಯುವ ಮುನ್ನವೇ ಮರೂಫಾ ಅಖ್ತರ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.
ಇನ್ನೊಂದು ಬದಿಯಲ್ಲಿದ್ದ ಸ್ಮೃತಿ ಮಂದಾನ (38; 34ಎ, 4X5) ಮತ್ತು ಜೆಮಿಮಾ ರಾಡ್ರಿಗಸ್ (11; 14ಎ) ಸ್ವಲ್ಪ ಹೊತ್ತು ಪ್ರತಿರೋಧ ಒಡ್ಡಿದರು. ಆದರೆ, ಸುಲ್ತಾನ ಖಾತೂನ್ ಬೌಲಿಂಗ್‌ನಲ್ಲಿ ಜೆಮಿಮಾ ರಾಡ್ರಿಗಸ್ ಕ್ಲೀನ್‌ಬೌಲ್ಡ್ ಆದರು.
ಕ್ರೀಸ್‌ಗೆ ಬಂದ ಹರ್ಮನ್ ಅವರು ಸ್ಮೃತಿಯೊಂದಿಗೆ ಸೇರಿ ಎದುರಾಳಿ ಬೌಲರ್‌ಗಳಿಗೆ ತಿರುಗೇಟು ನೀಡಿದರು. 154.29ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದ ಹರ್ಮನ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಸ್ಮೃತಿ ಜೊತೆಗೆ ಮೂರನೇ ವಿಕೆಟ್ ಜೊತೆಯಾಟದಲ್ಲಿ 70 ರನ್ ಸೇರಿಸಿದರು. ಇದು ತಂಡದ ಗೆಲುವಿಗೆ ಪ್ರಮುಖ ಮೆಟ್ಟಿಲಾಯಿತು. ಇದರಿಂದಾಗಿ ಭಾರತದ ಬೌಲರ್‌ಗಳ ಉತ್ತಮ ಬೌಲಿಂಗ್ ವ್ಯರ್ಥವಾಗುವುದೂ ತಪ್ಪಿತು.
ಮೊದಲ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡಕ್ಕೆ ಶತಿ ರಾಣಿ ಮತ್ತು ಶಮಿಮಾ ಸುಲ್ತಾನ ಉತ್ತಮ ಆರಂಭ ನೀಡಿದರು. ಶೋಭನಾ, ಶೋಮಾ ಅಖ್ತರ್ ಅವರು ಉತ್ತಮ ಕಾಣಿಕೆ ನೀಡಿದರು. ಆದರೆ ಉಳಿದ ಬ್ಯಾಟರ್‌ಗಳು ದೊಡ್ಡ ಇನಿಂಗ್ಸ್ ಆಡಲಿಲ್ಲ. ಭಾರತ ತಂಡದ ಬೌಲರ್‌ಗಳಾದ ಪೂಜಾ ವಸ್ತ್ರಕರ್, ಮಿನು ಮಣಿ ಮತ್ತು ಶಫಾಲಿ ವರ್ಮಾ ಅವರು ತಲಾ ಒಂದು ವಿಕೆಟ್ ಗಳಿಸಿದರು. ಜೊತೆಗೆ ಎದುರಾಳಿ ತಂಡದ ರನ್ ಗಳಿಕೆಗೂ ಕಡಿವಾಣ ಹಾಕಿದರು.
ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 114 (ಶತಿ ರಾಣಿ 22, ಶೋಭನಾ ಮೊಸ್ತಾರಿ 23, ಶೋಮಾ ಅಖ್ತರ್ ಔಟಾಗದೆ 28, ಪೂಜಾ ವಸ್ತ್ರಕರ್ 16ಕ್ಕೆ1, ಮಿನು ಮಣಿ 21ಕ್ಕೆ1, ಶಫಾಲಿ ವರ್ಮಾ 18ಕ್ಕೆ1) ಭಾರತ: 16.2 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 118 (ಸ್ಮೃತಿ ಮಂದಾನ 38, ಹರ್ಮನ್‌ಪ್ರೀತ್ ಕೌರ್ ಔಟಾಗದೆ 54, ಸುಲ್ತಾನ ಖಾತೂನ್ 25ಕ್ಕೆ2, ಮರೂಫಾ ಅಖ್ತರ್ 18ಕ್ಕೆ1) ಫಲಿತಾಂಶ: ಭಾರತ ತಂಡಕ್ಕೆ 7 ವಿಕೆಟ್‌ಗಳ ಜಯ. ಸರಣಿಯಲ್ಲಿ 1–0 ಮುನ್ನಡೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.